Jeremiah - Chapter 27
Holy Bible

1 : ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಸರ್ವೇಶ್ವರನಿಂದ ಯೆರೆಮೀಯನಿಗೆ ಈ ವಾಣಿಯಾಯಿತು:
2 : “ಇದು ಸರ್ವೇಶ್ವರನ ನುಡಿ - ನೊಗವನ್ನೂ ಕಣ್ಣಿಗಳನ್ನೂ ಮಾಡಿ ನಿನ್ನ ಹೆಗಲಿಗೆ ಹಾಕಿಕೊ.
3 : ಜುದೇಯದ ಅರಸ ಚಿದ್ಕೀಯನನ್ನು ನೋಡಲು ಜೆರುಸಲೇಮಿಗೆ ಬಂದಿರುವ ರಾಯಭಾರಿಗಳ ಮೂಲಕ ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನ್ಯ ರಾಜ, ಟೈರಿನ ರಾಜ, ಸಿದೋನಿನ ರಾಜ ಇವರುಗಳಿಗೆ ಒಂದು ಸಮಾಚಾರವನ್ನು ಕಳಿಸು.
4 : ಅವರು ತಮ್ಮ ತಮ್ಮ ರಾಜರುಗಳಿಗೆ ಅದನ್ನು ತಿಳಿಸುವಂತೆ ಆಜ್ಞಾಪಿಸು. ಆ ಸಮಾಚಾರವೇನೆಂದರೆ – ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ಮಾತುಗಳಿವು; ನಿಮ್ಮ ರಾಜರುಗಳು ಅರಿಯಬೇಕಾದ ವಿಷಯವಿದು:
5 : ನನ್ನ ಮಹಾಶಕ್ತಿಯಿಂದಲೂ ನೀಡುಗೈಯಿಂದಲೂ ಲೋಕವನ್ನೂ ಭೂಮಿಯನ್ನೂ ಅದರ ಮಾನವರನ್ನು ಮತ್ತು ಪ್ರಾಣಿಗಳನ್ನೂ ಸೃಷ್ಟಿಸಿದವನೂ ನಾನೇ. ಈ ನನ್ನ ಸೃಷ್ಟಿಯನ್ನು ನನಗೆ ಸರಿ ತೋಚಿದವನಿಗೆ ಕೊಡಬಲ್ಲೆ.
6 : ಈಗ ಈ ನಾಡುಗಳನ್ನೆಲ್ಲ ಬಾಬಿಲೋನಿಯದ ಅರಸ ಹಾಗೂ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈವಶಮಾಡಿದ್ದೇನೆ. ಅವನ ಸೇವೆಗಾಗಿ ಕಾಡು ಮೃಗಗಳನ್ನೂ ಕೊಟ್ಟಿದ್ದೇನೆ.
7 : ಅವನ ದೇಶಕ್ಕೆ ನಿಯಮಿತ ಕಾಲ ಬರುವತನಕ ಎಲ್ಲ ರಾಷ್ಟ್ರಗಳು ಅವನಿಗೂ ಅವನ ಮಗನಿಗೂ ಮೊಮ್ಮಗನಿಗೂ ಅಡಿಯಾಳಾಗಿ ಇರಬೇಕು. ಆಮೇಲೆ ಅನೇಕ ರಾಷ್ಟ್ರಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು.”
8 : “ಆದರೆ ಯಾವುದಾದರು ರಾಷ್ಟ್ರ ಅಥವಾ ರಾಜ್ಯ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಅಡಿಯಾಳಾಗಲು, ಅದರ ಅರಸನ ನೊಗಕ್ಕೆ ಹೆಗಲುಕೊಡಲು ಒಪ್ಪದೆ ಹೋದರೆ, ಆ ರಾಷ್ಟ್ರವನ್ನು ನಾನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ದಂಡಿಸುತ್ತಾ ಬರುವೆನು. ಕೊನೆಗೆ ಆ ಅರಸನ ಕೈಯಿಂದಲೆ ಅದನ್ನು ನಿರ್ಮೂಲಮಾಡಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
9 : “ನೀವು ಬಾಬಿಲೋನಿನ ಅರಸನಿಗೆ ಅಡಿಯಾಳುಗಳು ಆಗುವುದಿಲ್ಲ’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು ಶಕುನದವರು, ಕನಸಿಗರು, ಕಣಿಯವರು, ಮಾಟಗಾರರು. ಅವರಿಗೆ ಕಿವಿಗೊಡಲೇಬೇಡಿ.
10 : ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು; ನೀವು ದೇಶಭ್ರಷ್ಟರಾಗಿ ನಾಶವಾಗುವಿರಿ.
11 : ಯಾವ ರಾಷ್ಟ್ರ ಬಾಬಿಲೋನಿಯದ ಅರಸನ ನೊಗಕ್ಕೆ ಹೆಗಲು ಕೊಟ್ಟು ಅವನ ಅಡಿಯಾಳಾಗುವುದೋ ಆ ರಾಷ್ಟ್ರದವರನ್ನು ನಾನು ಅವರ ಸ್ವಂತ ನಾಡಿನಲ್ಲೆ ನೆಲೆಗೊಳಿಸುವೆನು; ಅವರು ಅಲ್ಲೆ ಉತ್ತು, ಬಿತ್ತು ವಾಸಮಾಡುವರು. ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ.”
12 : ಜುದೇಯದ ಅರಸನಾದ ಚಿದ್ಕೀಯನಿಗೂ ನಾನು ಅದೇ ಮಾತುಗಳನ್ನು ಹೇಳಿದೆ: “ನೀವು ಬಾಬಿಲೋನಿಯದ ಅರಸನ ನೊಗಕ್ಕೆ ಹೆಗಲು ಕೊಟ್ಟು ಅವನಿಗೂ ಅವನ ಜನರಿಗೂ ಅಡಿಯಾಳಾಗಬೇಕು. ಆಗ ಬದುಕುವಿರಿ.
13 : ಬಾಬಿಲೋನಿಯದ ಅರಸನ ಅಡಿಯಾಳಾಗಲು ನಿರಾಕರಿಸಿದ ರಾಷ್ಟ್ರವು ಖಡ್ಗಕ್ಷಾಮವ್ಯಾದಿಗಳಿಂದ ಸಾಯಬೇಕಾಗುವುದೆಂದು ಸರ್ವೇಶ್ವರನೇ ನುಡಿದಿದ್ದಾರೆ. ಅಂಥ ಗತಿ ನಿಮಗೂ ನಿಮ್ಮ ಪ್ರಜೆಗೂ ಏಕೆ ಬರಬೇಕು?
14 : ನೀವು ಬಾಬಿಲೋನಿಯದ ಅರಸನ ಅಡಿಯಾಳಾಗುವುದಿಲ್ಲ’ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ; ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.
15 : ಅವರನ್ನು ನಾನು ಕಳಿಸಲಿಲ್ಲ; ನನ್ನ ಹೆಸರೆತ್ತಿ ಸುಳ್ಳನ್ನು ಸಾರುತ್ತ ಇದ್ದಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು, ನೀವು ನಾಶವಾಗುವಿರಿ, ಎಂದು ಸರ್ವೇಶ್ವರನೇ ನುಡಿದಿದ್ದಾರೆ.”
16 : ಬಳಿಕ ನಾನು ಯಾಜಕರಿಗೂ ಈ ಜನರೆಲ್ಲರಿಗೂ ಹೀಗೆಂದು ಸಾರಿದೆ: “ಇಗೋ, ಕೇಳಿ ಸರ್ವೇಶ್ವರನ ನುಡಿ: ‘ದೇವಾಲಯದ ಉಪಕರಣಗಳನ್ನು ಬೇಗನೆ ಬಾಬಿಲೋನಿನಿಂದ ಹಿಂದಕ್ಕೆ ತರಲಾಗುವುದು’ ಎಂಬುದಾಗಿ ನಿಮಗೆ ಪ್ರವಾದಿಸುವವರ ಮಾತುಗಳನ್ನು ಕೇಳಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.
17 : ‘ದೇವಾಲಯದ ಉಪಕರಣಗಳನ್ನು ಬೇಗನೆ ಬಾಬಿಲೋನಿನಿಂದ ಹಿಂದಕ್ಕೆ ತರಲಾಗುವುದು’ ಎಂಬುದಾಗಿ ನಿಮಗೆ ಪ್ರವಾದಿಸುವವರ ಮಾತುಗಳನ್ನು ಕೇಳಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. ಅವರಿಗೆ ನೀವು ಕಿವಿಗೊಡಲೇಬಾರದು. ಬಾಬಿಲೋನಿಯದ ಅರಸನಿಗೆ ಅಡಿಯಾಳಾಗಿರಿ. ಆಗ ಬದುಕುವಿರಿ. ಈ ನಗರವೇಕೆ ನಾಶವಾಗಬೇಕು?
18 : ಅವರು ನಿಜವಾದ ಪ್ರವಾದಿಗಳಾಗಿದ್ದರೆ, ಸರ್ವೇಶ್ವರನ ವಾಕ್ಯ ಅವರಲ್ಲಿ ನೆಲೆಸಿದ್ದರೆ, ದೇವಾಲಯದಲ್ಲೂ ಜುದೇಯದ ಅರಸನ ಮನೆಯಲ್ಲೂ ಜೆರುಸಲೇಮಿನಲ್ಲೂ ಇನ್ನು ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಸರ್ವಶಕ್ತ ಸರ್ವೇಶ್ವರನಿಗೆ ವಿಜ್ಞಾಪನೆಮಾಡಿ ಬೇಡಿಕೊಳ್ಳಲಿ.”
19 : (ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಯೆಕೊನ್ಯನನ್ನು ಮತ್ತು ಜುದೇಯದ ಹಾಗು ಜೆರುಸಲೇಮಿನ ಬಾಬಿಲೋನಿಗೆ ಸೆರೆ ಒಯ್ದಾಗ ಕೆಲವು ಸಾಮಾನುಗಳನ್ನು,
20 : ಅಂದರೆ ಕಂಬಗಳು, ಕಂಚಿನ ಕಡಲು, ಪೀಠಗಳು, ನಗರದಲ್ಲಿ ಉಳಿದಿರುವ ಮತ್ತಿತರ ಉಪಕರಣಗಳು ಇವನ್ನು ತೆಗೆದುಕೊಂಡು ಹೋಗಲಿಲ್ಲ.)
21 : ದೇವಾಲಯದಲ್ಲೂ ಜುದೇಯದ ಅರಸನ ಮನೆಯಲ್ಲೂ ಜೆರುಸಲೇಮಿನಲ್ಲೂ ಉಳಿದಿರುವ ಈ ಉಪಕರಣಗಳ ವಿಷಯವಾಗಿ ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ:
22 : “ಅವುಗಳನ್ನು ಬಾಬಿಲೋನಿಗೆ ಒಯ್ಯಲಾಗುವುದು. ನಾನು ಬಿಡಿಸುವ ತನಕ ಅವು ಅಲ್ಲೇ ಇರುವುವು. ಬಳಿಕ ನಾನು ಅವುಗಳನ್ನು ತಂದು ಈ ಸ್ಥಳಕ್ಕೆ ಸೇರಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”

Holydivine