Jeremiah - Chapter 42
Holy Bible

1 : ಇದಾದ ಬಳಿಕ ಎಲ್ಲ ಸೇನಾಪತಿಗಳು, ಕಾರೇಹನ ಮಗ ಯೋಹಾನಾನನು, ರೋಷಾಯನ ಮಗ ಯೆಜನ್ಯನು, ಹಾಗು ಚಿಕ್ಕವರು ಮೊದಲ್ಗೊಂಡು ದೊಡ್ಡವರ ತನಕ ಎಲ್ಲ ಜನರು ಪ್ರವಾದಿ ಯೆರೆಮೀಯನ ಬಳಿಗೆ ಬಂದರು.
2 : “ದಯಮಾಡಿ ನಮ್ಮ ಬಿನ್ನಹವನ್ನು ಆಲಿಸಬೇಕು.
3 : ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿ ನಾವು ನಡೆಯಬೇಕಾದ ಮಾರ್ಗವನ್ನೂ ಕೈಗೊಳ್ಳಬೇಕಾದ ಕಾರ್ಯವನ್ನೂ ತೋರಿಸುವಂತೆ ನಮಗಾಗಿ ಪ್ರಾರ್ಥಿಸಬೇಕು. ಅಳಿದುಳಿದಿರುವ ಈ ಎಲ್ಲ ಜನರಿಗಾಗಿ ನಿಮ್ಮ ದೇವರಾದ ಸರ್ವೇಶ್ವರನನ್ನು ನೀವು ಪ್ರಾರ್ಥಿಸಬೇಕು. ನಿಮ್ಮ ಕಣ್ಣಿಗೆ ಕಾಣುವಂತೆ ಹೇರಳವಾದ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ,” ಎಂದು ವಿಜ್ಞಾಪಿಸಿದರು.
4 : ಇದನ್ನು ಕೇಳಿ ಪ್ರವಾದಿ ಯೆರೆಮೀಯನು ಅವರಿಗೆ, “ನಿಮ್ಮ ಬಿನ್ನಹವನ್ನು ಕೇಳಿದ್ದೇನೆ. ಇಗೋ, ನಿಮ್ಮ ಕೋರಿಕೆಯ ಪ್ರಕಾರ ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸುವೆನು. ಸರ್ವೇಶ್ವರ ಯಾವ ಉತ್ತರವನ್ನು ದಯಪಾಲಿಸುವರೋ ಅದರಲ್ಲಿ ಒಂದನ್ನೂ ಮುಚ್ಚು ಮರೆಮಾಡದೆ ನಿಮಗೆ ತಿಳಿಸುವೆನು,” ಎಂದು ಹೇಳಿದನು.
5 : ಅದಕ್ಕೆ ಅವರು ಯೆರೆಮೀಯನಿಗೆ, “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮೂಲಕ ನಮಗೆ ಕಳಿಸುವ ಮಾತಿನಂತೆ ನಾವು ನಡೆಯದಿದ್ದರೆ, ಆ ಸರ್ವೇಶ್ವರನೇ ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಂತು, ನಮ್ಮನ್ನು ಖಂಡಿಸಲಿ.
6 : ನಮ್ಮ ದೇವರಾದ ಸರ್ವೇಶ್ವರನ ಮಾತು ಹಿತವಾಗಿರಲಿ, ಅಹಿತವಾಗಿರಲಿ ಅದನ್ನು ಕೈಗೊಳ್ಳುತ್ತೇವೆ. ಅವರ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ನಾವು ಕಳುಹಿಸಿದ್ದೇವೆ. ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಿದರೆ ನಮಗೇ ಶುಭವಾಗುವುದು,” ಎಂದು ಹೇಳಿದರು.
7 : ಹತ್ತು ದಿನಗಳಾದ ಮೇಲೆ ಸರ್ವೇಶ್ವರನ ವಾಣಿ ಯೆರೆಮೀಯನಿಗೆ ಕೇಳಿಬಂದಿತು.
8 : ಆಗ ಆತ ಕಾರೇಹನ ಮಗನಾದ ಯೋಹಾನನನ್ನು, ಅವನೊಂದಿಗಿದ್ದ ಸೇನಾಪತಿಗಳೆಲ್ಲರನ್ನು ಹಾಗು ಚಿಕ್ಕವರು ಮೊದಲ್ಗೊಂಡು ದೊಡ್ಡವರ ತನಕ ಎಲ್ಲ ಜನರನ್ನು ಕರೆದನು.
9 : “ನಿಮ್ಮ ವಿಜ್ಞಾಪನೆಯನ್ನು ಸರ್ವೇಶ್ವರನಿಗೆ ಅರಿಕೆ ಮಾಡುವುದಕ್ಕಾಗಿ ನನ್ನನ್ನು ನೀವು ಕಳುಹಿಸಿದ್ದಿರಲ್ಲವೆ? ಅದಕ್ಕೆ ಇಸ್ರಯೇಲಿನ ದೇವರಾದ ಸರ್ವೇಶ್ವರ ಹೀಗೆನ್ನುತ್ತಾರೆ:
10 : ‘ನೀವು ಈ ನಾಡಿನಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡುವುದಿಲ್ಲ, ನೆಡುವೆನು, ಕೀಳುವುದಿಲ್ಲ, ನಾನು ನಿಮಗೆ ಮಾಡಿದ ಕೇಡಿಗಾಗಿ ವಿಷಾದಿಸುತ್ತೇನೆ.
11 : ಬಾಬಿಲೋನಿಯದ ಅರಸನಿಗೆ ಹೆದರಬೇಡಿ, ಬೆದರಬೇಡಿ. ನಿಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಲಿಕ್ಕೆ ನಾನೇ ನಿಮ್ಮೊಂದಿಗೆ ಇರುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
12 : ನಾನು ನಿಮಗೆ ಕರುಣೆತೋರಿಸುವೆನು. ಅವನು ನಿಮ್ಮ ಮೇಲೆ ಮನಮರುಗಿ ಸ್ವಂತ ನಾಡಿಗೆ ಹೋಗಲು ಬಿಡುವಂತೆ ಮಾಡುವೆನು.
13 : “ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ಕಿವಿಗೊಡದೆ ‘ನಾವು ಈ ನಾಡಿನಲ್ಲಿ ನೆಲೆಸುವುದೇ ಇಲ್ಲ, ಇದು ನಮಗೆ ಬೇಡವೇಬೇಡ.
14 : ನಾವು ಈಜಿಪ್ಟಿನಲ್ಲೇ ವಾಸ ಮಾಡುತ್ತೇವೆ. ಅದು ಯುದ್ಧ ಕಾಣದ, ರಣಕಹಳೆ ಕೇಳದ, ಕೂಳಿನ ಕೊರತೆಯಿಲ್ಲದ ದೇಶ,’ ಎಂದುಕೊಳ್ಳಬೇಡಿ.
15 : ಯೆಹೂದ್ಯರಲ್ಲಿ ಅಳಿದು ಉಳಿದವರೇ, ಸರ್ವೇಶ್ವರನ ವಾಕ್ಯವನ್ನು ಈಗ ಕೇಳಿ: ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೇಳುವುದು ಇದು – ‘ನೀವು ಈಜಿಪ್ಟಿಗೆ ಹೋಗಬೇಕೆಂದು ಹಟಹಿಡಿದು ಅಲ್ಲಿಗೆ ಸೇರಿ ವಾಸಮಾಡುವುದಾದರೆ,
16 : ನೀವು ಹೆದರುತ್ತಿರುವ ಖಡ್ಗ, ಈಜಿಪ್ಟಿನಲ್ಲೂ ನಿಮ್ಮನ್ನು ಹಿಂದಟ್ಟಿ ಬಂದು ಹಿಡಿಯುವುದು. ನೀವು ಅಂಜುತ್ತಿರುವ ಕ್ಷಾಮ ಅಲ್ಲಿಯೂ ನಿಮ್ಮ ಬೆನ್ನು ಹತ್ತುವುದು. ನೀವು ಅಲ್ಲೇ ಸಾಯುವಿರಿ.
17 : ಈಜಿಪ್ಟಿಗೆ ಹೋಗಿ ಅಲ್ಲೆ ವಾಸಿಸಲು ಹಟಹಿಡಿಯುವ ಎಲ್ಲ ಜನರಿಗೂ ಇದೇ ಗತಿಯಾಗುವುದು. ಖಡ್ಗ-ಕ್ಷಾಮ-ವ್ಯಾಧಿಯಿಂದ ಅವರು ಸಾಯುವರು. ನಾನು ಬರಮಾಡುವ ವಿಪತ್ತಿನಿಂದ ಅವರಾರೂ ತಪ್ಪಿಸಿಕೊಳ್ಳರು, ಯಾರೂ ಉಳಿಯರು’.”
18 : “ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಜೆರುಸಲೇಮಿನ ಮೇಲೆ ಹೇಗೆ ಸುರಿಯಿತೋ ಹಾಗೆಯೆ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೆ ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ನಾಡನ್ನು ನೀವು ಮತ್ತೆ ನೋಡಲಾರಿರಿ.’
19 : “ಯೆಹೂದ್ಯರಲ್ಲಿ ಅಳಿದುಳಿದವರೇ, ಸರ್ವೇಶ್ವರ ನಿಮಗೆ ‘ಈಜಿಪ್ಟಿಗೆ ಹೋಗಬೇಡಿ’ ಎಂದು ಆಜ್ಞೆ ಮಾಡಿದ್ದಾರೆ. ನಾನು ಆ ಮಾತನ್ನು ಇಂದೇ ನಿಮಗೆ ಪ್ರಕಟಿಸಿದ್ದೇನೆ. ಇದು ನಿಮಗೆ ಚೆನ್ನಾಗಿ ತಿಳಿದಿರಲಿ.
20 : ನಿಮ್ಮನ್ನು ನೀವೇ ಮೋಸ ಮಾಡಿಕೊಳ್ಳುತ್ತಿದ್ದೀರಿ. ನೀವೇ ನನ್ನ ಬಳಿಗೆ ಬಂದು ‘ನಮ್ಮ ದೇವರಾದ ಸರ್ವೇಶ್ವರನನ್ನು ನಮಗಾಗಿ ಪ್ರಾರ್ಥಿಸು. ನಮ್ಮ ದೇವರಾದ ಸರ್ವೇಶ್ವರ ಯಾವ ಅಪ್ಪಣೆ ಕೊಡುತ್ತಾರೋ ಅದನ್ನು ನಮಗೆ ತಿಳಿಸು. ಅದರಂತೆ ನಾವು ನಡೆಯುತ್ತೇವೆ,’ ಎಂಬುದಾಗಿ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನನ್ನನ್ನು ನೀವೇ ಕಳುಹಿಸಿದಿರಿ.
21 : ನಾನು ಸರ್ವೇಶ್ವರನ ಅಪ್ಪಣೆಯನ್ನು ಈ ದಿನ ನಿಮಗೆ ತಿಳಿಸಿದ್ದೇನೆ. ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರ ನನ್ನ ಮುಖಾಂತರ ನಿಮಗೆ ಹೇಳಿ ಕಳುಹಿಸಿದ ಯಾವ ಮಾತನ್ನು ಕೇಳುತ್ತಿಲ್ಲ.
22 : ನೀವು ಯಾವ ನಾಡಿನಲ್ಲಿ ವಾಸಮಾಡಲು ಬಯಸಿ ಹೋಗುತ್ತಿರೋ ಆ ನಾಡಿನಲ್ಲಿ ಖಡ್ಗ-ಕ್ಷಾಮ-ವ್ಯಾಧಿಗಳಿಂದ ಸಾಯುವಿರಿ. ಇದು ನಿಶ್ಚಯ ಎಂದು ತಿಳಿಯಿರಿ,” ಎಂದನು.

Holydivine