Jeremiah - Chapter 40
Holy Bible

1 : ಸರ್ವೇಶ್ವರನ ವಾಣಿ ಮತ್ತೊಮ್ಮೆ ಯೆರೆಮೀಯನಿಗೆ ಕೇಳಿಸಿತು. ಇಷ್ಟರೊಳಗೆ ರಕ್ಷಾದಳದ ನಾಯಕ ನೆಬೂಜರದಾನನು ಜೆರುಸಲೇಮಿನವರ ಮತ್ತು ಜುದೇಯರ ಗುಂಪನ್ನು ಬಾಬಿಲೋನಿಗೆ ಸೆರೆಯೊಯ್ಯುತ್ತಿದ್ದಾಗ ಅವರಲ್ಲಿ ಯೆರೆಮೀಯನು ಕೂಡ ಸಂಕೋಲೆಗಳಿಂದ ಬಂಧಿತನಾಗಿರುವುದನ್ನು ಕಂಡು ಅವನನ್ನು ರಾಮದ ಬಳಿ ಬಿಡುಗಡೆ ಮಾಡಿದನು.
2 : ಆಗ ರಕ್ಷಾದಳದ ಆ ನಾಯಕ ಯೆರೆಮೀಯನನ್ನು ಕರೆಯಿಸಿ, “ನಿನ್ನ ದೇವರಾದ ಸರ್ವೇಶ್ವರನು ಈ ನಾಡಿಗೆ ಇಂಥ ಕೇಡು ಬಂದೊದಗಲಿ ಎಂದು ಶಾಪಹಾಕಿದ್ದ.
3 : ಆ ಶಾಪ ಈಡೇರುವಂತೆ ಮಾಡಿದ್ದಾನೆ. ನೀವು ಆತನ ವಾಣಿಗೆ ಕಿವಿಗೊಡದೆ ಪಾಪಮಾಡಿದ್ದರಿಂದ ಇದು ನಿಮಗೆ ಸಂಭವಿಸಿದೆ.
4 : ನೋಡು, ನಿನ್ನ ಕೈಗೆ ಹಾಕಿದ್ದ ಬೇಡಿಗಳನ್ನು ಈ ದಿನ ತೆಗೆಸಿದ್ದೇನೆ. ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ಮನಸಿದ್ದರೆ ಬಾ. ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ಮನಸ್ಸಿಲ್ಲದಿದ್ದರೆ ಬರಬೇಕಾಗಿಲ್ಲ. ಇಗೋ ದೇಶವೆಲ್ಲ ನಿನ್ನ ಕಣ್ಣೆದುರಿಗಿದೆ. ನಿನಗೆ ಯಾವ ಕಡೆಗೆ ಹೋಗುವುದು ಸರಿಯೆಂದು, ಒಳ್ಳೆಯದೆಂದು ತೋರುತ್ತದೋ ಆ ಕಡೆಗೆ ಹೋಗು,” ಎಂದು ಹೇಳಿದನು.
5 : ಯೆರೆಮೀಯನು ಉತ್ತರಕೊಡದೆ ಇರಲು ನೆಬೂಜರದಾನನು ಅವನಿಗೆ, “ಬಾಬಿಲೋನಿಯದ ಅರಸನು, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಜುದೇಯದ ನಗರಗಳಿಗೆ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆ. ಅವನ ಬಳಿಗೆ ಹೋಗು, ಅವನ ಹತ್ತಿರ ಜನರ ನಡುವೆ ವಾಸಮಾಡು, ಇಲ್ಲವೆ ಎಲ್ಲಿಗೆ ಬೇಕಾದರೂ ಹೋಗು,” ಎಂದು ಹೇಳಿ ಬುತ್ತಿಯನ್ನೂ ಬಹುಮಾನವನ್ನೂ ಕೊಡಿಸಿ ಅವನನ್ನು ಕಳಿಸಿಬಿಟ್ಟನು.
6 : ಆಗ ಯೆರೆಮೀಯನು ಅಹೀಕಾಮನ ಮಗ ಗೆದಲ್ಯನು ಇದ್ದ ಮಿಚ್ಪಕ್ಕೆ ಹೋಗಿ ಅವನೊಡನೆ ಹಾಗು ನಾಡಿನ ಉಳಿದ ಜನರ ನಡುವೆ ವಾಸಮಾಡಿದನು.
7 : ಬಾಬಿಲೋನಿಯದ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ನಾಡಿನ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆಂಬ ಸುದ್ದಿ ಹಾಗು ಬಾಬಿಲೋನಿಗೆ ಸೆರೆಹೋಗದೆ ನಾಡಿಗರಲ್ಲಿ ಬಡವರಾದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿ ಹರಡಿತು. ಕಾಡುಮೇಡುಗಳಲ್ಲಿದ್ದ ಎಲ್ಲ ಯೆಹೂದ್ಯ ಸೈನಿಕರೂ ಸೇನಾಪತಿಗಳೂ ಇದನ್ನು ಕೇಳಿ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಹೋದರು.
8 : ಹೀಗೆ ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಯೋನಾಥಾನ, ತನ್ಹುಮೆತನ ಮಗನಾದ ಸೆರಾಯ, ಮಾಕಾ ಊರಿನವನ ಮಗನಾದ ಯೆಜನ್ಯ, ನೆಟೋಫದವನಾದ ಏಫಯನ ಮಕ್ಕಳು ಗೆದಲ್ಯನ ಬಳಿಗೆ ಹೋದರು.
9 : ಇವರಿಗೂ ಇವರ ಜನರಿಗೂ ಆಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನು, “ಬಾಬಿಲೋನಿಯರಿಗೆ ಅಧೀನರಾಗಿರಲು ಹೆದರಬೇಡಿ, ಬಾಬಿಲೋನಿನ ಅರಸನಿಗೆ ಅಧೀನರಾಗಿ ಅಲ್ಲಿಯೇ ವಾಸಮಾಡಿ. ಆಗ ನಿಮಗೆ ಒಳ್ಳೆಯದಾಗುವುದು.
10 : ನಾನಂತು ಮಿಚ್ಪದಲ್ಲಿ ವಾಸವಾಗಿರುವೆನು. ನಮ್ಮ ಬಳಿಗೆ ಬರುವ ಬಾಬಿಲೋನಿಯರ ಮುಂದೆ ನಿಮ್ಮ ಪ್ರತಿನಿಧಿಯಾಗಿರುವೆನು. ನೀವು ಹೋಗಿ ದ್ರಾಕ್ಷಾರಸ, ಹಣ್ಣು, ಎಣ್ಣೆ ಮುಂತಾದವುಗಳನ್ನು ಸಂಗ್ರಹಿಸಿ ನಿಮ್ಮ ಉಗ್ರಾಣಗಳಲ್ಲಿ ತುಂಬಿಸಿಡಿ. ನೀವು ಹಿಡಿದಿರುವ ಪಟ್ಟಣಗಳಲ್ಲೆ ವಾಸವಾಗಿರಿ,” ಎಂದು ಶಪಥಮಾಡಿ ಹೇಳಿದನು.
11 : ಇದಲ್ಲದೆ, ಅಮ್ಮೋನ್, ಮೋವಾಬ್, ಎದೋಮ್ ಮೊದಲಾದ ನಾಡುಗಳಲ್ಲಿ ಚದರಿಹೋಗಿದ್ದ ಯೆಹೂದ್ಯರೆಲ್ಲರು, ಬಾಬಿಲೋನಿನ ಅರಸನು ಯೆಹೂದ್ಯರಲ್ಲಿ ಕೆಲವರನ್ನು ಉಳಿಸಿ, ಅವರಿಗೆ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆಂಬ ಸುದ್ದಿಯನ್ನು ಕೇಳಿದರು.
12 : ತಾವು ಹೊರದೂಡಲ್ಪಟ್ಟು ವಾಸಮಾಡುತ್ತಿದ್ದ ಎಲ್ಲಾ ಊರುಗಳಿಂದ ಜುದೇಯಕ್ಕೆ ಹಿಂದಿರುಗಿದರು. ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಬಂದು ಸೇರಿಕೊಂಡರು. ದ್ರಾಕ್ಷಾರಸವನ್ನೂ ಹಣ್ಣುಹಂಪಲುಗಳನ್ನೂ ಹೇರಳವಾಗಿ ಕೂಡಿಸಿಕೊಂಡರು.
13 : ತರುವಾಯ ಕಾರೇಹನ ಮಗ ಯೋಹಾನಾನನು ಹಾಗು ಕಾಡುಮೇಡುಗಳಲ್ಲಿ ವಾಸ ಮಾಡುತ್ತಿದ್ದ ಎಲ್ಲ ಸೇನಾಪತಿಗಳು ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಹೋದರು.
14 : ಅಮ್ಮೋನ್ಯರ ಅರಸ ಬಾಲೀಸನು ನಿಮ್ಮನ್ನು ಕೊಲ್ಲುವುದಕ್ಕಾಗಿ ನೆತನ್ಯನ ಮಗ ಇಷ್ಮಾಯೇಲನನ್ನು ಕಳಿಸಿದ್ದಾನೆ ಎಂಬುದು ನಿಮಗೆ ಗೊತ್ತಿದೆಯೇ?” ಎಂದು ಕೇಳಿದರು. ಆದರೆ ಆಹೀಕಾಮನ ಮಗ ಗೆದಲ್ಯನು ಅವರನ್ನು ನಂಬಲಿಲ್ಲ.
15 : ಆಗ ಕಾರೇಹನ ಮಗ ಯೋಹಾನಾನನು ಮಿಚ್ಪದಲ್ಲಿದ್ದ ಗೆದಲ್ಯನಿಗೆ, “ನಾನು ಹೋಗಿ ನೆತನ್ಯನ ಮಗ ಇಷ್ಮಾಯೇಲನನ್ನು ಕೊಲ್ಲಲು ಅಪ್ಪಣೆಯಾಗಬೇಕು. ಇದು ನಿಮ್ಮ ಅಪ್ಪಣೆಯೆಂದು ಯಾರಿಗೂ ತಿಳಿದುಬರುವುದಿಲ್ಲ. ಅವನು ನಿಮ್ಮನ್ನು ಕೊಂದರೆ ನಿಮ್ಮ ಆಶ್ರಯದ ಯೆಹೂದ್ಯರೆಲ್ಲರು ದಿಕ್ಕಾಪಾಲಾಗಿ ಜುದೇಯದ ಶೇಷವೂ ನಿಶ್ಯೇಷವಾಗುವುದು. ಹೀಗೆ ಆಗುವುದು ಸರಿಯೇ?” ಎಂದು ಗುಟ್ಟಾಗಿ ವಿನಂತಿಸಿದನು.
16 : ಅದಕ್ಕೆ ಆಹೀಕಾಮನ ಮಗ ಗೆದಲ್ಯನು, “ನೀನು ಹಾಗೆ ಮಾಡಲೆಕೂಡದು. ನೀನು ಇಷ್ಮಾಯೇಲನ ವಿಷಯವಾಗಿ ಹೇಳಿದ್ದು ಸುಳ್ಳು,” ಎಂದು ಉತ್ತರಿಸಿದನು.

Holydivine