Jeremiah - Chapter 38
Holy Bible

1 : ಯೆರೆಮೀಯನು ಜನರೆಲ್ಲರಿಗೆ, “ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: ನಗರದಲ್ಲಿ ನಿಲ್ಲುವವನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ಸಾಯುವನು. ನಗರವನ್ನು ಬಿಟ್ಟು ಹೋಗಿ ಬಾಬಿಲೋನಿಯರನ್ನು ಮರೆಹೋಗುವವನು ಬದುಕುವನು. ತನ್ನ ಪ್ರಾಣವೊಂದನ್ನಾದರೂ ಬಾಚಿಕೊಂಡು ಹೋಗಿ ಬದುಕುವನು.
2 : ಬಾಬಿಲೋನಿನ ಅರಸನು ಈ ನಗರವನ್ನು ಆಕ್ರಮಿಸುವನು. ಇದು ಅವನ ವಶವಾಗುವುದು ನಿಶ್ಚಯ” ಎಂದು ಸಾರುತ್ತಿದ್ದನು.
3 : ಮತ್ತಾನನ ಮಗ ಶೆಫತ್ಯ, ಷಷ್ಹೂರನ ಮಗ ಗೆದಲ್ಯ, ಸೆಲೆಮ್ಯನ ಮಗ ಯೂಕಲ, ಹಾಗೂ ಮಲ್ಕೀಯನ ಮಗ ಷಷ್ಹೂರ ಇವರು ಮೇಲೆ ಹೇಳಿದ ಮಾತುಗಳನ್ನು ಕೇಳಿದರು.
4 : ಈ ಪದಾಧಿಕಾರಿಗಳು ಅರಸನ ಬಳಿಗೆ ಬಂದು, “ಒಡೆಯಾ, ಈ ಯೆರೆಮೀಯನಿಗೆ ಮರಣ ದಂಡನೆಯಾಗಬೇಕು. ಇವನು ನಗರದಲ್ಲಿರುವ ಸೈನಿಕರಿಗೂ ಜನರೆಲ್ಲರಿಗೂ ಇಂಥ ಭವಿಷ್ಯವನ್ನು ನುಡಿಯುತ್ತಾ ಅವರು ಎದೆಗುಂದುವಂತೆ ಮಾಡುತ್ತಿದ್ದಾನೆ. ಅವನು ಹಾರೈಸುವುದು ಜನರ ಕ್ಷೇಮವನ್ನಲ್ಲ ಹಾನಿಯನ್ನೇ,” ಎಂದು ದೂರಿತ್ತರು.
5 : ಅದಕ್ಕೆ ಅರಸ ಚಿದ್ಕೀಯನು, “ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ. ಅರಸನು ನಿಮಗೆ ಅಡ್ಡಬಂದು ಏನೂ ಮಾಡಬಲ್ಲವನಲ್ಲ,” ಎಂದನು.
6 : ಅವರು ಯೆರೆಮೀಯನನ್ನು ಹಿಡಿದು ಕಾರಾಗೃಹದ ಅಂಗಳದಲ್ಲಿದ್ದ ರಾಜ ವಂಶೀಯನಾದ ಮಲ್ಕೀಯನ ಬಾವಿಯೊಳಗೆ ಹಗ್ಗಗಳಿಂದ ಇಳಿಸಿ ಅಲ್ಲೇ ಬಿಟ್ಟುಬಿಟ್ಟರು. ಆ ಬಾವಿಯಲ್ಲಿ ನೀರಿರಲಿಲ್ಲ, ಕೆಸರಿತ್ತು. ಯೆರೆಮೀಯನು ಅದರೊಳಗೆ ಹೂತುಕೊಂಡನು.
7 : ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನೆಂಬ ಸುಡಾನಿನವನು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದ್ದಾರೆಂದು ತಿಳಿದುಕೊಂಡನು.
8 : ಅವನು ಅರಮನೆಯಿಂದ ಹೊರಟು, ಬೆನ್ಯಾಮೀನಿನ ಬಾಗಿಲಿನಲ್ಲಿ ಕುಳಿತುಕೊಂಡಿದ್ದ ಅರಸನ ಬಳಿಗೆ ಬಂದು,
9 : “ನನ್ನೊಡೆಯಾ, ಅರಸರೇ, ಈ ಜನರು ಪ್ರವಾದಿ ಯೆರೆಮೀಯನಿಗೆ ಮಾಡಿರುವುದೆಲ್ಲ ದುಷ್ಟಕಾರ್ಯವೇ ಸರಿ. ಅವನನ್ನು ಬಾವಿಯಲ್ಲಿ ಹಾಕಿದ್ದಾರೆ. ಆಹಾರವಿಲ್ಲದೆ ಅವನು ಬಿದ್ದಲ್ಲೇ ಸಾಯುವುದು ಖಚಿತ. ಏಕೆಂದರೆ ನಗರದಲ್ಲಿ ರೊಟ್ಟಿಯೆಲ್ಲಾ ತೀರಿಹೋಗಿದೆ,” ಎಂದು ಅರಿಕೆ ಮಾಡಿದನು.
10 : ಇದನ್ನು ಕೇಳಿದ ಅರಸನು ಸುಡಾನಿನ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿ ಆಳುಗಳನ್ನು ಕರೆದುಕೊಂಡು ಹೋಗಿ ಪ್ರವಾದಿ ಯೆರೆಮೀಯನು ಸಾಯುವ ಮೊದಲೇ, ಅವನನ್ನು ಬಾವಿಯಿಂದ ಎತ್ತಿಸು,” ಎಂದು ಅಪ್ಪಣೆಕೊಟ್ಟನು.
11 : ಕೂಡಲೇ ಸುಡಾನಿನ ಎಬೆದ್ಮೆಲೆಕನು ಆಳುಗಳನ್ನು ಕರೆದುಕೊಂಡು ಹೋಗಿ, ಅರಮನೆಯನ್ನು ಹೊಕ್ಕು, ಖಜಾನೆಯ ಕೆಳಗಣ ಕೋಣೆಯಿಂದ ಹಳೆಯ ಹರಕು ಚಿಂದಿಪಂದಿಗಳನ್ನು ತೆಗೆದುಕೊಂಡು, ಹಗ್ಗಕ್ಕೆ ಕಟ್ಟಿ ಬಾವಿಯೊಳಗಿದ್ದ ಯೆರೆಮೀಯನಿಗೆ ಮುಟ್ಟಿಸಿದನು.
12 : “ಹಳೆಯ ಈ ಹರಕು ಚಿಂದಿಗಳನ್ನು ಹಗ್ಗಕ್ಕೆ ಸುತ್ತಿ ಕಂಕುಳಲ್ಲಿ ಇಟ್ಟುಕೋ” ಎನ್ನಲು ಯೆರೆಮೀಯನು ಅದರಂತೆಯೇ ಮಾಡಿದನು.
13 : ಈ ಪ್ರಕಾರ ಯೆರೆಮೀಯನನ್ನು ಹಗ್ಗಗಳ ಮೂಲಕ ಸೇದಿಕೊಂಡು ಬಾವಿಯಿಂದ ಮೇಲಕ್ಕೆ ಎತ್ತಿದರು. ಬಳಿಕ ಯೆರೆಮೀಯನು ಹಿಂದಿನಂತೆ ಕಾರಾಗೃಹದ ಅಂಗಳದಲ್ಲಿ ವಾಸಿಸುತ್ತಿದ್ದನು.
14 : ಅರಸ ಚಿದ್ಕೀಯನು ಪ್ರವಾದಿ ಯೆರೆಮೀಯನನ್ನು ಸರ್ವೇಶ್ವರನ ಆಲಯದ ಮೂರನೆಯ ಬಾಗಿಲ ಬಳಿಗೆ ಕರೆತರಿಸಿ, “ನಾನು ನಿನ್ನಲ್ಲಿ ಒಂದು ವಿಷಯವನ್ನು ಕೇಳುತ್ತೇನೆ, ನನಗೆ ಏನನ್ನೂ ಮರೆಮಾಡಬೇಡ,” ಎಂದನು.
15 : ಯೆರೆಮೀಯನು ಚಿದ್ಕೀಯನಿಗೆ, “ನಾನು ತಮಗೆ ಇದ್ದದ್ದನ್ನು ಇದ್ದಹಾಗೆ ಹೇಳಿದರೆ ತಾವು ನನ್ನನ್ನು ಕೊಂದುಹಾಕುವುದು ನಿಶ್ಚಯವಲ್ಲವೆ? ನಾನು ತಮಗೆ ಬುದ್ಧಿವಾದ ಹೇಳಿದರೆ ತಾವು ಕೇಳುವುದಿಲ್ಲ,” ಎಂದು ಉತ್ತರಕೊಟ್ಟನು.
16 : ಅದಕ್ಕೆ ಅರಸ ಚಿದ್ಕೀಯನು, “ನಮಗೆ ಈ ಪ್ರಾಣವನ್ನು ದಯಪಾಲಿಸಿದ ಸರ್ವೇಶ್ವರನ ಜೀವ ದಾಣೆ, ನಾನು ನಿನ್ನನ್ನು ಕೊಂದುಹಾಕುವುದಿಲ್ಲ. ನಿನ್ನ ಪ್ರಾಣವನ್ನು ಹುಡುಕುವ ಈ ಜನರ ಕೈಗೂ ನಿನ್ನನ್ನು ಸಿಕ್ಕಿಸುವುದಿಲ್ಲ,” ಎಂದು ಗುಟ್ಟಾಗಿ ಪ್ರಮಾಣಮಾಡಿ ಹೇಳಿದನು.
17 : ಆಗ ಯೆರೆಮೀಯನು, “ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲರ ದೇವರೂ ಆದ ಸ್ವಾಮಿ ಹೀಗೆನ್ನುತ್ತಾರೆ: ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳ ಮೊರೆಹೊಕ್ಕರೆ ತಮ್ಮ ಪ್ರಾಣ ಉಳಿಯುವುದು. ಈ ನಗರ ಬೆಂಕಿಯಿಂದ ಸುಟ್ಟುಹೋಗದು, ತಾವೂ ತಮ್ಮ ಮನೆಯವರೂ ಮನೆತನದವರೂ ಬದುಕುವಿರಿ.
18 : ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳಿಗೆ ಮೊರೆಹೋಗದಿದ್ದರೆ ಈ ನಗರವು ಬಾಬಿಲೋನಿನವರ ಕೈವಶವಾಗುವುದು. ಅವರು ಇದನ್ನು ಬೆಂಕಿ ಇಂದ ಸುಟ್ಟುಬಿಡುವರು. ತಾವು ಅವರ ಕೈಯಿಂದ ತಪ್ಪಿಸಿಕೊಳ್ಳಲಾರಿರಿ,” ಎಂದು ಹೇಳಿದನು.
19 : ಇದನ್ನು ಕೇಳಿದ ಅರಸ ಚಿದ್ಕೀಯನು ಯೆರೆಮೀಯನಿಗೆ, “ಬಾಬಿಲೋನಿಯದವರು ತಮ್ಮನ್ನು ಮರೆಹೊಕ್ಕಿರುವ ಯೆಹೂದ್ಯರಿಗೆ ನನ್ನನ್ನು ಒಪ್ಪಿಸಬಹುದು. ಅವರು ನನ್ನನ್ನು ಹಿಂಸಿಸಬಹುದು ಎಂಬ ಸಂಶಯ ನನಗಿದೆ,” ಎಂದು ಉತ್ತರಕೊಟ್ಟನು.
20 : ಇದನ್ನು ಕೇಳಿದ ಯೆರೆಮೀಯನು, “ಇಲ್ಲ, ತಮ್ಮನ್ನು ಅವರ ಕೈಗೆ ಒಪ್ಪಿಸುವುದಿಲ್ಲ. ದಯವಿಟ್ಟು ನಾನು ತಮಗೆ ಹೇಳಿರುವ ಸರ್ವೇಶ್ವರನ ವಾಕ್ಯದಂತೆ ನಡೆದುಕೊಳ್ಳಿ. ನಡೆದುಕೊಂಡರೆ ತಮ್ಮ ಪ್ರಾಣ ಉಳಿಯುವುದು, ಒಳ್ಳೆಯದಾಗುವುದು.
21 : ತಾವು ಶತ್ರುವನ್ನು ಮರೆಹೋಗೆನು ಎನ್ನುವುದಾದರೆ ಸರ್ವೇಶ್ವರ ತಮ್ಮ ಮುಂದಿನ ಗತಿಯನ್ನು ನನಗೆ ಹೀಗೆ ತೋರ್ಪಡಿಸಿದ್ದಾರೆ.
22 : ಜುದೇಯದ ಅರಸನ ಮನೆಯಲ್ಲಿ ಉಳಿದಿರುವ ಎಲ್ಲ ಮಹಿಳೆಯರನ್ನು ಬಾಬಿಲೋನಿಯದ ಅರಸನ ದಳಪತಿಗಳ ಬಳಿಗೆ ತರಲಾಗುವುದು. ಆ ಮಹಿಳೆಯರೇ: ‘ಆಪ್ತ ಮಿತ್ರರು ನಿನ್ನನ್ನು ವಂಚಿಸಿ ಒಳಪಡಿಸಿಕೊಂಡರು; ನಿನ್ನ ಕಾಲುಗಳು ಬದಿಯಲ್ಲಿ ಹೂತಿರುವುದನ್ನು ನೋಡಿಯೂ ನಿನ್ನಿಂದ ದೂರವಾದರು’ ಎಂದು ತಮ್ಮನ್ನು ನಿಂದಿಸುವರು.
23 : ತಮ್ಮ ಎಲ್ಲ ಮಡದಿಯರನ್ನೂ ಮಕ್ಕಳನ್ನೂ ಬಾಬಿಲೋನಿಯರ ಬಳಿಗೆ ತರಲಾಗುವುದು. ತಾವು ತಪ್ಪಿಸಿಕೊಳ್ಳಲಾಗದೆ ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಕೊಳ್ಳುವಿರಿ. ಈ ನಗರವು ತಮ್ಮ ನಿಮಿತ್ತ ಬೆಂಕಿಯಿಂದ ಸುಟ್ಟುಹೋಗುವುದು,” ಎಂದು ಹೇಳಿದನು.
24 : ಆಗ ಚಿದ್ಕೀಯನು ಯೆರೆಮೀಯನಿಗೆ, “ಈ ಮಾತುಗಳು ಯಾರಿಗೂ ತಿಳಿಯದಿರಲಿ, ಜೋಕೆ! ತಿಳಿಯದಿದ್ದರೆ ನೀನು ಸಾಯುವುದಿಲ್ಲ.
25 : ನಾನು ನಿನ್ನ ಸಂಗಡ ಮಾತಾಡಿದ ಸುದ್ದಿಯನ್ನು ಪದಾಧಿಕಾರಿಗಳು ಕೇಳಿ ನಿನ್ನ ಬಳಿಗೆ ಬಂದು, ‘ಅರಸನಿಗೆ ಏನು ಹೇಳಿದೆ? ನಮಗೆ ತಿಳಿಸು, ನಮಗೆ ಮರೆಮಾಡದೆ ತಿಳಿಸಿದರೆ ನಿನ್ನನ್ನು ಕೊಲ್ಲುವುದಿಲ್ಲ. ಅರಸನಿಗೆ ಏನು ಹೇಳಿದೆ? ತಿಳಿಸು, ಎಂದು ಪ್ರಶ್ನೆ ಹಾಕಿದರೆ
26 : ನೀನು ಅವರಿಗೆ, ‘ಯೆಹೋನಾಥಾನನ ಮನೆಗೆ ನನ್ನನ್ನು ಮರಳಿ ಸೇರಿಸಬೇಡ. ಅಲ್ಲೇ ಸತ್ತೇನು ಎಂದು ಅರಸನಲ್ಲಿ ಬಿನ್ನಹ ಮಾಡಿಕೊಂಡೆ’ ಎಂಬುದಾಗಿ ಹೇಳು,” ಎಂದು ಅಪ್ಪಣೆ ಮಾಡಿದನು.
27 : ಕೆಲವು ದಿನಗಳಾದ ಮೇಲೆ ಎಲ್ಲ ಪದಾಧಿಕಾರಿಗಳು ಯೆರೆಮೀಯನ ಬಳಿಗೆ ಬಂದು ಹಾಗೆಯೇ ಪ್ರಶ್ನೆ ಮಾಡಿದರು. ಅವನು ಅರಸನ ಅಪ್ಪಣೆಯಂತೆಯೇ ಉತ್ತರಕೊಟ್ಟನು. ಅಷ್ಟಕ್ಕೆ ಮಾತು ಮುಗಿದು ಅವನಿಂದ ಏನೂ ತಿಳಿದುಕೊಳ್ಳಲಾಗಲಿಲ್ಲ.
28 : ಜೆರುಸಲೇಮ್ ಶತ್ರುವಶವಾಗುವ ತನಕ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.

Holydivine