Jeremiah - Chapter 16
Holy Bible

1 : ಸರ್ವೇಶ್ವರಸ್ವಾಮಿ ನನಗೆ ಈ ಸಂದೇಶವನ್ನು ದಯಪಾಲಿಸಿದರು:
2 : “ನೀನು ಮದುವೆಯಾಗಬೇಡ. ಗಂಡು ಅಥವಾ ಹೆಣ್ಣು ಮಕ್ಕಳು ನಿನಗೆ ಈ ಸ್ಥಳದಲ್ಲಿ ಹುಟ್ಟದಿರಲಿ.
3 : ಏಕೆಂದರೆ ಇಲ್ಲಿ ಆ ಗಂಡುಹೆಣ್ಣು ಮಕ್ಕಳಿಗೆ, ಅವರನ್ನು ಹೆತ್ತ ತಾಯಿಯರಿಗೆ ಅವರನ್ನು ಈ ನಾಡಿನಲ್ಲಿ ಪಡೆದ ತಂದೆಯರಿಗೆ ಸಂಭವಿಸಲು ಇರುವುದನ್ನು ಸರ್ವೇಶ್ವರನಾದ ನಾನು ಹೇಳುತ್ತಾನೆ, ಕೇಳು:
4 : ಅವರು ಘೋರ ಮರಣಕ್ಕೆ ಗುರಿಯಾಗುವರು. ಅವರಿಗಾಗಿ ಯಾರೂ ದುಃಖಿಸುವುದಿಲ್ಲ. ಅವರನ್ನು ಯಾರೂ ಹೂಣುವುದಿಲ್ಲ. ಅವರು ಗೊಬ್ಬರವಾಗಿ ಭೂಮಿಯ ಮೇಲೆ ಬಿದ್ದಿರುವರು. ಖಡ್ಗದಿಂದ ಹಾಗು ಕ್ಷಾಮದಿಂದ ಅವರು ನಾಶವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಜಂತುಗಳಿಗೂ ಆಹಾರವಾಗುವುವು.”
5 : ಸರ್ವೇಶ್ವರ ಮತ್ತೆ ನನಗೆ ಹೀಗೆಂದರು: “ನೀನು ಸಾವು ಜರುಗಿದ ಮನೆಗಳಿಗೆ ಹೋಗಬೇಡ. ಅಲ್ಲಿ ನಡೆಯುವ ಗೋಳಾಟದಲ್ಲಿ ಸೇರಬೇಡ. ಎದೆಬಡಿದುಕೊಂಡು ಸಂತಾಪ ಸೂಚಿಸಬೇಕಾಗಿಲ್ಲ. ಏಕೆಂದರೆ, ನಾನು ದಯಪಾಲಿಸಿದ ಶಾಂತಿಯನ್ನೂ ಪ್ರೀತಿಯನ್ನೂ ಕೃಪೆಯನ್ನೂ ಆ ಜನರಿಂದ ತೆಗೆದುಬಿಟ್ಟಿದ್ದೇನೆ.
6 : ಈ ನಾಡಿನಲ್ಲಿ ದೊಡ್ಡವರು ಹಾಗು ಚಿಕ್ಕವರು ಸಾಯುವರು. ಅವರನ್ನು ಯಾರು ಹೂಣಿಸುವುದಿಲ್ಲ. ಅವರಿಗಾಗಿ ಯಾರೂ ಗೋಳಾಡುವುದಿಲ್ಲ. ದೇಹವನ್ನು ಹುಣ್ಣಾಗಿಸಿಕೊಳ್ಳುವುದಿಲ್ಲ. ತಲೆಬೋಳಿಸಿಕೊಳ್ಳುವುದಿಲ್ಲ.
7 : ಸತ್ತವನಿಗಾಗಿ ದುಃಖಪಡುವವರನ್ನು ಸಂತೈಸುವುದಕ್ಕೋಸ್ಕರ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ, ತಾಯಿಯನ್ನಾಗಲಿ ಕಳೆದುಕೊಂಡವರಿಗು ಕೂಡ ಯಾರೂ ಸಾಂತ್ವನದ ಪಾನಪಾತ್ರೆಯನ್ನು ನೀಡುವುದಿಲ್ಲ.
8 : “ಔತಣದ ಮನೆಗೂ ಹೋಗಬೇಡ. ಅಲ್ಲಿಯವರೊಡನೆ ಕುಳಿತು ತಿಂದು, ಕುಡಿಯಬೇಡ,
9 : ಏಕೆಂದರೆ ಇಸ್ರಯೇಲಿನ ದೇವರೂ ಸರ್ವಶಕ್ತ ಸರ್ವೇಶ್ವರನೂ ಆದ ನಾನು ಹೇಳುತ್ತೇನೆ, ಕೇಳು: ನಿಮ್ಮ ಕಾಲದಲ್ಲೆ, ನಿಮ್ಮ ಕಣ್ಣೆದುರಿಗೆ, ಸಂತೋಷ ಸಂಭ್ರಮದ ಧ್ವನಿಯನ್ನು ನಿಲ್ಲಿಸಿಬಿಡುವೆನು. ವಧೂವರರ ಸದ್ದೂ ಇಲ್ಲವಾಗುವುದು.
10 : “ಇದನ್ನೆಲ್ಲ ನೀನು ಆ ಜನರಿಗೆ ತಿಳಿಸುವಾಗ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಸರ್ವೇಶ್ವರ ವಿಧಿಸಿದ್ದೇಕೆ? ನಾವು ಮಾಡಿದ ಅಪರಾಧವಾದರೂ ಏನು? ನಮ್ಮ ದೇವರಾದ ಸರ್ವೇಶ್ವರನಿಗೆ ವಿರುದ್ಧ ನಾವು ಕಟ್ಟಿಕೊಂಡ ಪಾಪವೇನು?’ ಎಂದು ಕೇಳುವರು.
11 : ಆಗ ನೀನು ಅವರಿಗೆ ಹೀಗೆಂದು ಹೇಳಬೇಕು: ‘ನಿಮ್ಮ ಪೂರ್ವಜರು ನನ್ನನ್ನು ತೊರೆದು ಬಿಟ್ಟರು. ಅನ್ಯ ದೇವತೆಗಳನ್ನು ಹಿಂಬಾಲಿಸಿದರು. ಅವುಗಳಿಗೆ ಸೇವೆಸಲ್ಲಿಸಿ ಪೂಜಿಸಿದರು, ನನ್ನನ್ನು ಬಿಟ್ಟುದಲ್ಲದೆ ನನ್ನ ಧರ್ಮವಿಧಿಗಳನ್ನು ಮೀರಿದರು.
12 : ನೀವಾದರೊ ನಿಮ್ಮ ಪೂರ್ವಜರಿಗಿಂತ ಹೆಚ್ಚು ಕೇಡನ್ನು ಮಾಡಿದ್ದೀರಿ. ನೀವೆಲ್ಲರು ನನ್ನ ಮಾತನ್ನು ಕೇಳದೆ ದುಷ್ಟ ಹೃದಯವುಳ್ಳ ಹಟಮಾರಿಗಳಂತೆ ನಡೆಯುತ್ತಾ ಬಂದಿದ್ದೀರಿ.
13 : ಈ ಕಾರಣಗಳ ನಿಮಿತ್ತ ನೀವಾಗಲಿ ನಿಮ್ಮ ಪೂರ್ವಜರಾಗಲಿ ನೋಡದ ನಾಡಿಗೆ ನಿಮ್ಮನ್ನು ಇಲ್ಲಿಂದ ಎಸೆದುಬಿಡುವೆನು. ಅಲ್ಲಿ ಹಗಲಿರುಳೂ ಅನ್ಯ ದೇವತೆಗಳಿಗೆ ಸೇವೆಮಾಡುವಿರಿ, ನನ್ನ ದಯೆ ದಾಕ್ಷಿಣ್ಯ ಮಾತ್ರ ನಿಮಗೆ ದೊರಕದು”.
14 : ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ ಕೇಳು, ಕಾಲಬರಲಿದೆ. ಆಗ ಜನರು, ‘ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವುದನ್ನು ಬಿಟ್ಟುಬಿಡುವರು.
15 : ಬದಲಿಗೆ, ‘ಇಸ್ರಯೇಲರನ್ನು ಉತ್ತರ ದೇಶದಿಂದ ಹಾಗು ಅವರನ್ನು ತಾನು ತಳ್ಳಿಬಿಟ್ಟಿದ್ದ ಎಲ್ಲ ಸೀಮೆಗಳಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ,’ ಎಂದು ಪ್ರಮಾಣ ಮಾಡುವರು. ನಾನು ಅವರ ಪೂರ್ವಜರಿಗೆ ದಯಪಾಲಿಸಿದ ನಾಡಿಗೆ ಅವರನ್ನು ಮರಳಿ ಬರಮಾಡುವೆನು.
16 : ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ, ನಾನು ಬಹುಮಂದಿ ಬೆಸ್ತರನ್ನು ಕಳಿಸುವೆನು, ಅವರು ನನ್ನ ಜನರನ್ನು ಹಿಡಿಯುವರು, ಬಳಿಕ ಬಹುಜನ ಬೇಡರನ್ನು ಕಳಿಸುವೆನು. ಅವರು ಎಲ್ಲ ಬೆಟ್ಟಗುಡ್ಡಗಳಿಂದಲೂ ಬಂಡೆಗಳ ಸಂದುಗೊಂದುಗಳಿಂದಲೂ ನನ್ನ ಜನರನ್ನು ಹೊರಡಿಸಿ ಬೇಟೆಯಾಡುವರು.
17 : ಈ ಜನರ ನಡತೆ ನನ್ನ ಮುಖಕ್ಕೆ ಮರೆಯಾಗಿಲ್ಲ, ಎಲ್ಲವು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅವರ ಅಕ್ರಮ ನನಗೆ ಗುಟ್ಟೇನೂ ಅಲ್ಲ, ಎಲ್ಲವು ಬಟ್ಟಬಯಲಾಗಿದೆ.
18 : ಮೊತ್ತ ಮೊದಲು ಅವರ ಅಕ್ರಮಕ್ಕೂ ಪಾಪಕ್ಕೂ ಇಮ್ಮಡಿ ಶಿಕ್ಷೆಯನ್ನು ಕೊಡುವೆನು. ಏಕೆಂದರೆ ಹೆಣಗಳಂತಿರುವ ತಮ್ಮ ಹೇಯ ವಿಗ್ರಹಗಳಿಂದ ನನ್ನ ನಾಡನ್ನು ಹೊಲಸು ಮಾಡಿದ್ದಾರೆ. ಅಸಹ್ಯವಾದ ವಸ್ತುಗಳಿಂದ ಆ ನನ್ನ ಸ್ವಂತ ನಾಡನ್ನು ತುಂಬಿಸಿ ಬಿಟ್ಟಿದ್ದಾರೆ.”
19 : “ಹೇ ಸರ್ವೇಶ್ವರಾ, ನನ್ನ ಶಕ್ತಿಯೇ, ನನ್ನ ಕೋಟೆಯೇ, ಆಪತ್ತು ಕಾಲದಲ್ಲಿ ನನ್ನ ಆಶ್ರಯವೇ, ಜಗದ ಕಟ್ಟಕಡೆಯಿಂದ ಜನಾಂಗಗಳು ನಿಮ್ಮ ಸಮ್ಮುಖಕ್ಕೆ ಬರುವುವು. ‘ನಮ್ಮ ಪೂರ್ವಜರು ಪಾರಂಪರ್ಯವಾಗಿ ಪಡೆದವುಗಳು ನಿಶ್ಚಯವಾಗಿ ಅಬದ್ಧವಾದವುಗಳು, ಮಾಯರೂಪವಾದವುಗಳು ಹಾಗು ನಿಷ್ಪ್ರಯೋಜನವಾದವುಗಳು.
20 : .ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೆ? ಕಲ್ಪಿಸಿಕೊಂಡರೆ ಅವು ದೇವರುಗಳೇ ಅಲ್ಲ,’ ಎಂದು ನಿವೇದಿಸುವುವು.”
21 : ಸರ್ವೇಶ್ವರ: “ಆದುದರಿಂದ ಇಗೋ, ಇಂದೊಮ್ಮೆ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು. ಚೆನ್ನಾಗಿ ಗ್ರಹಿಸುವಂತೆ ಮಾಡುವೆನು. ನನ್ನ ನಾಮಧೇಯ ಸರ್ವೇಶ್ವರ ಎಂದೇ ಅವರು ಗುರುತು ಹಚ್ಚುವರು.”

Holydivine