Leviticus - Chapter 5
Holy Bible

1 : “ಈ ಕೆಳಕಂಡ ಸಂದರ್ಭಗಳಲ್ಲಿ ಪಾಪ ಪರಿಹಾರಕ ಬಲಿಗಳನ್ನು ಒಪ್ಪಿಸಬೇಕಾಗುತ್ತದೆ: ಒಬ್ಬನು ತಾನು ಕಂಡು ಕೇಳಿದ್ದಕ್ಕೆ ನ್ಯಾಯಸ್ಥಾನದಲ್ಲಿ ಸಾಕ್ಷಿಹೇಳಬೇಕೆಂದು ಅಧಿಕೃತವಾದ ಕರೆಯಿದ್ದರೂ ಸಾಕ್ಷಿ ಹೇಳದೆ ಹೋದರೆ ಅವನು ಪಾಪಕ್ಕೆ ಗುರಿಯಾಗುವನು.
2 : “ಒಬ್ಬನಿಗೆ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವಾಗಲಿ, ಬೇರೆ ಯಾವ ಅಶುದ್ಧ ವಸ್ತುವಾಗಲಿ ತಗಲಿದರೆ, ಅವನಿಗೆ ತಿಳಿಯದೆ ಹೋದರೂ, ಅವನು ಅಶುದ್ಧನೂ ದೋಷಿಯೂ ಆಗುತ್ತಾನೆ.
3 : “ಮನುಷ್ಯ ದೇಹದಿಂದುಂಟಾದ ಯಾವುದಾದರು ಒಂದು ಅಶುದ್ಧ ವಸ್ತು ತಗುಲಿದ್ದು, ಅವನಿಗೆ ತಿಳಿಯದೆ ಹೋದರೂ, ತಿಳಿದು ಬಂದಾಗ ಅವನು ದೋಷಿಯಾಗುತ್ತಾನೆ.
4 : “ಯಾರಾದರು ಆಲೋಚಿಸದೆ ಒಳಿತಿಗಾಗಲಿ, ಕೇಡಿಗಾಗಲಿ ಏನಾದರು ಆಣೆಯಿಟ್ಟು ಕೊಂಡರೆ, ಅದು ಅವನಿಗೆ ತಿಳಿಯದೆ ಹೋದರೂ, ತಿಳಿದು ಬಂದಾಗ ಅವನು ಇದರಿಂದಲೂ ದೋಷಿಯಾಗುತ್ತಾನೆ.
5 : “ಈ ವಿಷಯಗಳಲ್ಲಿ ಯಾರಾದರು ದೋಷಿಯಾದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು.
6 : ಇಂಥ ದೋಷದ ಪ್ರಾಯಶ್ಚಿತ್ತಕ್ಕಾಗಿ ಒಂದು ಹೆಣ್ಣು ಕುರಿಯನ್ನಾಗಲಿ, ಒಂದು ಮೇಕೆಯನ್ನಾಗಲಿ ಸರ್ವೇಶ್ವರನಿಗೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.
7 : “ಆಡುಕುರಿಯನ್ನು ಕೊಡಲು ಅವನಿಂದ ಆಗದಿದ್ದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿಪಾರಿವಾಳಗಳನ್ನಾಗಲಿ ತೆಗೆದುಕೊಂಡು ಬಂದು ದಹನಬಲಿಯಾಗಿ ಒಂದನ್ನೂ ದೋಷಪರಿಹಾರಕ ಬಲಿಯಾಗಿ ಮತ್ತೊಂದನ್ನೂ ಸರ್ವೇಶ್ವರನಿಗೆ ಸಮರ್ಪಿಸಲಿ.
8 : ಅವನು ಅವುಗಳನ್ನು ಯಾಜಕನ ಬಳಿಗೆ ತಂದಾಗ ಯಾಜಕನು ಮೊದಲು ದೋಷಪರಿಹಾರಾರ್ಥಕ ಆದದ್ದನ್ನು ಸಮರ್ಪಿಸಬೇಕು. ಅವನು ಅದರ ಕುತ್ತಿಗೆ ಮುರಿಯಬೇಕು. ಅದರ ತಲೆಯನ್ನು ಪೂರಾ ತೆಗೆದುಬಿಡಬಾರದು.
9 : ಬಳಿಕ ದೋಷಪರಿಹಾರಾರ್ಥಕವಾದ ಆ ಹಕ್ಕಿಯ ರಕ್ತದಲ್ಲಿ ಸ್ವಲ್ಪವನ್ನು ಬಲಿಪೀಠದ ಬುಡದಲ್ಲಿ ಹಿಂಡಬೇಕು. ಅದು ದೋಷಪರಿಹಾರಕ ಬಲಿ.
10 : ಮತ್ತೊಂದನ್ನು ವಿಧಿಯಾನುಸಾರ ದಹನಬಲಿ ಮಾಡಬೇಕು. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ದೋಷ ಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮೆ ದೊರಕುವುದು.
11 : “ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿಪಾರಿವಾಳಗಳನ್ನಾಗಲಿ ಕೊಡಲು ಅವನಿಂದ ಆಗದೆ ಹೋದಲ್ಲಿ ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿಹಿಟ್ಟನ್ನು ತರಬೇಕು. ಆ ಹೋಮದ್ರವ್ಯವು ದೋಷಪರಿಹಾರಾರ್ಥ ಆದ್ದರಿಂದ ಅದರ ಮೇಲೆ ಎಣ್ಣೆ ಹೊಯ್ಯಕೂಡದು. ಸಾಂಬ್ರಾಣಿಯನ್ನು ಇಡಕೂಡದು.
12 : ಅವನು ಯಾಜಕನ ಬಳಿಗೆ ಅದನ್ನು ತಂದ ನಂತರ ಅದು ದೇವಾರ್ಪಿತವೆಂದು ಸೂಚಿಸುವುದಕ್ಕಾಗಿ ಯಾಜಕನು ಅದರಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಸರ್ವೇಶ್ವರನಿಗೆ ಸಮರ್ಪಿಸಿದ ಹೋಮ ದ್ರವ್ಯಗಳ ಮೇಲೆ ಬಲಿಪೀಠದಲ್ಲಿ ಹೋಮಮಾಡಬೇಕು. ಅದು ದೋಷಪರಿಹಾರಕ ಬಲಿ.
13 : ಮೇಲೆ ಕಂಡ ವಿಷಯಗಳಲ್ಲಿ ಯಾವ ವಿಧವಾಗಿ ಅವನು ದೋಷಿಯಾದರೂ ಯಾಜಕನು ಅವನಿಗೋಸ್ಕರ ಹೀಗೆ ದೋಷಪರಿಹಾರವನ್ನು ಮಾಡಿದ ನಂತರ ಅವನಿಗೆ ಕ್ಷಮೆ ದೊರಕುವುದು. ನೈವೇದ್ಯ ದ್ರವ್ಯಗಳಲ್ಲಿ ಮಿಕ್ಕದ್ದು ಹೇಗೆ ಯಾಜಕನಿಗೆ ಸೇರತಕ್ಕದ್ದೋ ಹಾಗೆಯೆ ಇದರಲ್ಲಿಯೂ ಮಿಕ್ಕದ್ದು ಯಾಜಕನಿಗೆ ಸೇರತಕ್ಕದ್ದು.”
14 : ಮೋಶೆಗೆ ಸರ್ವೇಶ್ವರ ಹೀಗೆಂದರು:
15 : “ಯಾರಾದರು ಸರ್ವೇಶ್ವರನಿಗೆ ಸಲ್ಲಿಸಬೇಕಾದ ಪವಿತ್ರ ವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ, ಅಂಥವರು ಆ ಅಪರಾಧಕ್ಕೆ ಪರಿಹಾರ ಮಾಡಬೇಕು; ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಎರಡು ಅಥವಾ ಹೆಚ್ಚು ನಾಣ್ಯ ಬೆಲೆಬಾಳುವುದೆಂದು ತೋರುವ ಕಳಂಕರಹಿತವಾದ ಒಂದು ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಸರ್ವೇಶ್ವರನಿಗೆ ಸಮರ್ಪಿಸಬೇಕು.
16 : ತಾವು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವವಸ್ತುಗಳನ್ನು ಮಾತ್ರವಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪರಿಹಾರಾರ್ಥವಾಗಿ ತಂದ ಟಗರಿನಿಂದ ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮೆ ದೊರಕುವುದು.
17 : “ನಿಮ್ಮಲ್ಲಿ ಯಾರಾದರು ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರು ಮಾಡಿ ದೋಷಕ್ಕೆ ಒಳಗಾದರೆ, ಅದು ಅವರಿಗೆ ತಿಳಿಯದೆ ಹೋದರೂ, ಅವರು ಅದರಿಂದ ಅಪರಾಧಿಯಾಗಿ ತಮ್ಮ ಪಾಪಫಲವನ್ನು ಅನುಭವಿಸಬೇಕು.
18 : ಅಂಥವರು ಪರಿಹಾರಕ್ಕಾಗಿ ಹಿಂಡಿನಿಂದ ಕಳಂಕರಹಿತವಾದ ಟಗರೊಂದನ್ನು ಅಥವಾ ಅದಕ್ಕೆ ಸರಿಸಮಾನವಾದುದನ್ನು ಯಾಜಕನ ಬಳಿಗೆ ತೆಗೆದುಕೊಂಡು ಬರಬೇಕು. ಅವರು ತಿಳಿಯದೆ ಮಾಡಿದ ತಪ್ಪನ್ನು ಪರಿಹರಿಸುವುದಕ್ಕಾಗಿ ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಬೇಕು; ಆಗ ಅವರಿಗೆ ಕ್ಷಮೆದೊರಕುವುದು.
19 : ಅವರು ಅಪರಾಧಿಗಳಾದುದರಿಂದ ಸರ್ವೇಶ್ವರನ ಸನ್ನಿಧಿಯಲ್ಲಿ ಈ ಪರಿಹಾರ ಬಲಿಯನ್ನು ಅರ್ಪಿಸಬೇಕು.”

Holydivine