Leviticus - Chapter 24
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆ ಎಂದು ತಿಳಿಸಿದರು:
2 : “ದೇವಸ್ಥಾನದಲ್ಲಿರುವ ದೀಪಗಳನ್ನು ಪ್ರತಿನಿತ್ಯವೂ ಉರಿಸಬೇಕು. ಇದಕ್ಕಾಗಿ ಇಸ್ರಯೇಲರು ಎಣ್ಣೇಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಅಪ್ಪಟ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.
3 : ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಮುಂದಿರುವ ತೆರೆಯ ಹೊರಗೆ ಆ ದೀಪಗಳು ಉರಿಯುತ್ತಿರಬೇಕು. ಅವು ಸರ್ವೇಶ್ವರನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೆ ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮ.
4 : ಆರೋನನು ಪ್ರತಿನಿತ್ಯವೂ ಸರ್ವೇಶ್ವರನ ಸನ್ನಿಧಿಯಲ್ಲಿ ಹಣತೆಗಳನ್ನು ಆ ಚೊಕ್ಕ ಬಂಗಾರದ ದೀಪವೃಕ್ಷದ ಮೇಲೆ ಸರಿಯಾಗಿ ಇಡಬೇಕು.
5 : “ನೀನು ಗೋದಿಯ ಹಿಟ್ಟಿನಿಂದ ಹನ್ನೆರಡು ರೊಟ್ಟಿಗಳನ್ನು ಮಾಡಬೇಕು. ಪ್ರತಿಯೊಂದು ರೊಟ್ಟಿ ಎರಡೆರಡು ಕಿಲೋಗ್ರಾಂ ಆಗಿರಬೇಕು.
6 : ಅವುಗಳನ್ನು ಆರಾರರ ಮೇರೆಗೆ ಎರಡು ರಾಶಿಗಳಾಗಿ ಚೊಕ್ಕ ಬಂಗಾರದ ಮೇಜಿನ ಮೇಲೆ ಸರ್ವೇಶ್ವರನ ಸಮ್ಮುಖದಲ್ಲಿ ಇಡಬೇಕು.
7 : ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಸಾಂಬ್ರಾಣಿಯನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸಲು ಆ ಸಾಂಬ್ರಾಣಿಯನ್ನು ಸರ್ವೇಶ್ವರನಿಗೆ ಹೋಮಮಾಡಬೇಕು.
8 : ಶಾಶ್ವತವಾದ ನಿಬಂಧನೆಯ ಮೇರೆಗೆ ಯಾಜಕನು ಯಾವಾಗಲು ಪ್ರತಿ ಸಬ್ಬತ್‍ದಿನದಲ್ಲಿ ರೊಟ್ಟಿಗಳನ್ನು ತಂದು ಸರ್ವೇಶ್ವರನ ಸನ್ನಿಧಿಯಲ್ಲಿ ಕ್ರಮಪಡಿಸಿ, ಅವುಗಳನ್ನು ಇಸ್ರಯೇಲರ ಪರವಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
9 : ಅವು ಆರೋನನಿಗೂ ಅವನ ಸಂತತಿಯವರಿಗೂ ಸಲ್ಲಬೇಕು. ಮಹಾ ಪರಿಶುದ್ಧವಾದ ಆ ರೊಟ್ಟಿಗಳನ್ನು ದೇವಸ್ಥಾನದ ಪ್ರಾಕಾರದಲ್ಲೇ ತಿನ್ನಬೇಕು. ಅವು ಸರ್ವೇಶ್ವರನಿಗೆ ಸಮರ್ಪಿತವಾದ ದಹನದ್ರವ್ಯಗಳಿಗೆ ಸೇರಿದವುಗಳಾದುದರಿಂದ ಶಾಶ್ವತ ನಿಯಮದ ಪ್ರಕಾರ ಯಾಜಕರಿಗೆ ಸಲ್ಲಬೇಕು.”
10 : ಇಸ್ರಯೇಲ್ ಮಹಿಳೆಯೊಬ್ಬಳಿಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಒಬ್ಬ ವ್ಯಕ್ತಿ ಇದ್ದನು. ಇವನು ಇಸ್ರಯೇಲರ ಪಾಳ್ಯಕ್ಕೆ ಬಂದು ಇಸ್ರಯೇಲನೊಬ್ಬನ ಸಂಗಡ ಜಗಳವಾಡಿ, ಬೈದ ಮಾತ್ರವಲ್ಲದೆ ಸರ್ವೇಶ್ವರಸ್ವಾಮಿಯನ್ನು ದೂಷಿಸಿ ಶಾಪ ಹಾಕಿದನು.
11 : ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. ಆ ವ್ಯಕ್ತಿಯ ತಾಯಿ ದಾನ್ ಕುಲದ ದಿಬ್ರೀಯ ಮಗಳು; ‘ಶೆಲೋವಿೂತ್’ ಎಂದು ಅವಳ ಹೆಸರು.
12 : ಅವನ ವಿಷಯವಾಗಿ ಸರ್ವೇಶ್ವರನ ತೀರ್ಪನ್ನು ತಿಳಿದುಕೊಳ್ಳುವಷ್ಟು ಕಾಲ ಅವನನ್ನು ಕಾವಲಲ್ಲಿ ಇರಿಸಲಾಯಿತು.
13 : ಆಗ ಮೋಶೆಗೆ ಸರ್ವೇಶ್ವರ ಹೀಗೆಂದು ತಿಳಿಸಿದರು:
14 : “ಆ ದೇವದೂಷಕನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನಾಡಿದ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರು ಅವನ ತಲೆಯ ಮೇಲೆ ಕೈಚಾಚಬೇಕು. ಅನಂತರ ಸಮಾಜದವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು.
15 : ಮತ್ತು ಇಸ್ರಯೇಲರಿಗೆ ನೀನು ಹೀಗೆ ಹೇಳಬೇಕು: ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು.
16 : ಸರ್ವೇಶ್ವರನ ಹೆಸರನ್ನು ನಿಂದಿಸಿದವನಿಗೆ ಮರಣಶಿಕ್ಷೆ ಯಾಗಬೇಕು; ಸಮಾಜದವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶೀಯನಾಗಿರಲಿ, ಸ್ವದೇಶೀಯನಾಗಿರಲಿ ಸರ್ವೇಶ್ವರನ ಹೆಸರನ್ನು ನಿಂದಿಸಿದವನಿಗೆ ಮರಣಶಿಕ್ಷೆ ಆಗಬೇಕು.
17 : “ಕೊಲೆ ಮಾಡಿದವನಿಗೆ ಮರಣದಂಡನೆ ಆಗಬೇಕು.
18 : ಪಶುಪ್ರಾಣಿಯನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು; ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು.
19 : ಯಾವನಾದರು ಮತ್ತೊಬ್ಬನನ್ನು ಅಂಗಹೀನನನ್ನಾಗಿ ಮಾಡಿದರೆ ಅವನು ಮಾಡಿದಂತೆಯೆ ಅವನಿಗೆ ಮಾಡಿಸಬೇಕು.
20 : ಅವಯವವನ್ನು ಮುರಿಯುವುದೇ ಶಿಕ್ಷೆ. ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು ಕೀಳಿಸಬೇಕು. ಮತ್ತೊಬ್ಬನನ್ನು ಅಂಗವಿಕಲನನ್ನಾಗಿ ಮಾಡಿದವನಿಗೆ ಅದೇ ರೀತಿ ಪ್ರತೀಕಾರ ಮಾಡಿಸಬೇಕು.
21 : ಪಶುಪ್ರಾಣಿಯನ್ನು ಕೊಂದವನು ಅದಕ್ಕೆ ಬದಲಾಗಿ ಈಡುಕೊಡಬೇಕು; ಮನುಷ್ಯನನ್ನು ಕೊಂದವನಿಗೆ ಮರಣಶಿಕ್ಷೆಯಾಗಬೇಕು.
22 : ಅನ್ಯರಿಗಾಗಲಿ ಸ್ವಜನರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ನಿಯಮವಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರ.”
23 : ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಅವರು ಆ ದೂಷಕನನ್ನು ಪಾಳೆಯದ ಹೊರಕ್ಕೆ ತೆಗೆದುಕೊಂಡು ಹೋಗಿ ಕಲ್ಲೆಸೆದು ಕೊಂದರು. ಸರ್ವೇಶ್ವರಸ್ವಾಮಿ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು.

Holydivine