Leviticus - Chapter 22
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದು ತಿಳಿಸಿದರು:
2 : “ಆರೋನನು ಮತ್ತು ಅವನ ಮಕ್ಕಳು ಅಶುದ್ಧರಾಗಿರುವಾಗ ಇಸ್ರಯೇಲರಿಂದ ನನಗೆ ಸಮರ್ಪಿತವಾದ ಪರಿಶುದ್ಧ ಪದಾರ್ಥಗಳನ್ನು ಮುಟ್ಟಬಾರದೆಂದು ಆಜ್ಞಾಪಿಸು. ಅವರು ನನ್ನ ಪವಿತ್ರ ನಾಮದ ಘನತೆಗೆ ಕುಂದು ತರಬಾರದು. ನಾನು ಸರ್ವೇಶ್ವರ.
3 : ಅವರಿಗೆ ಹೀಗೆಂದು ವಿಧಿಸು: ನಿಮ್ಮಲ್ಲಿಯಾಗಲಿ, ನಿಮ್ಮ ಸಂತತಿಯವರಲ್ಲಿಯಾಗಲಿ ಯಾವನಾದರು ಅಶುದ್ಧನಾಗಿರುವಾಗ, ಸರ್ವೇಶ್ವರಸ್ವಾಮಿಗೆ ವಿೂಸಲೆಂದು ಇಸ್ರಯೇಲರು ಸಮರ್ಪಿಸುವ ಕಾಣಿಕೆಗಳ ಬಳಿಗೆ ಬಂದರೆ, ಅವನನ್ನು ನನ್ನ ಸಾನ್ನಿಧ್ಯ ಸೇವೆಯಿಂದ ತೆಗೆದುಹಾಕಬೇಕು. ನಾನು ಸರ್ವೇಶ್ವರ.
4 : “ಆರೋನನ ಸಂತತಿಯವರಲ್ಲಿ ಯಾವನಿಗಾದರು ಕುಷ್ಠರೋಗವಾಗಲಿ, ಮೇಹವಾಗಲಿ ಇದ್ದರೆ ಅವನು ಶುದ್ಧನಾಗುವ ತನಕ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ತಿನ್ನಕೂಡದು. ಹೆಣದ ಸಂಪರ್ಕದಿಂದ ಅಶುದ್ಧವಾದುದನ್ನು ಮುಟ್ಟಿದವನು, ವೀರ್ಯಸ್ಖಲನ ಮಾಡಿಕೊಂಡವನು,
5 : ಅಶುದ್ಧವಾದ ಕ್ರಿಮಿಕೀಟಮೂಷಕಾದಿಗಳನ್ನು ಅಥವಾ ಅಶುದ್ಧನಾದ ಮನುಷ್ಯನನ್ನು ಮುಟ್ಟಿದವನು ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು.
6 : ಆದುದರಿಂದ ಸ್ನಾನಮಾಡುವ ತನಕ ನೈವೇದ್ಯ ಪದಾರ್ಥಗಳನ್ನು ತಿನ್ನಕೂಡದು.
7 : ಹೊತ್ತು ಮುಳುಗಿದ ನಂತರ ಅವನು ಶುದ್ಧನಾಗಿ ನೈವೇದ್ಯ ಪದಾರ್ಥಗಳನ್ನು ಊಟಮಾಡಬಹುದು. ಏಕೆಂದರೆ ಅದು ಅವನ ಜೀವನಾಂಶ.
8 : ತಾನಾಗಿ ಸತ್ತುಬಿದ್ದದ್ದನ್ನು ಅಥವಾ ಕಾಡುಮೃಗ ಕೊಂದದ್ದನ್ನು ಅವನು ತಿಂದು ಅಪವಿತ್ರಮಾಡಿಕೊಳ್ಳಬಾರದು. ನಾನು ಸರ್ವೇಶ್ವರ.
9 : “ಈ ನನ್ನ ಆಜ್ಞೆಗಳನ್ನು ಅವರು ಅನುಸರಿಸಿ ನಡೆಯಬೇಕು. ಇವುಗಳನ್ನು ವಿೂರಿ ನನ್ನ ನೈವೇದ್ಯವನ್ನು ಅಪವಿತ್ರಪಡಿಸಿದರೆ ಆ ದೋಷದ ಫಲವನ್ನು ಅನುಭವಿಸಿ ಸಾಯುವರು. ಅವರನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು.
10 : “ಯಾಜಕನಲ್ಲದವನು ನೈವೇದ್ಯ ಪದಾರ್ಥಗಳನ್ನು ಊಟಮಾಡಕೂಡದು. ಅಂತೆಯೇ ಯಾಜಕನ ಅತಿಥಿಯಾಗಲಿ, ಕೂಲಿಯಾಳಾಗಲಿ ಅದನ್ನು ಊಟ ಮಾಡಬಾರದು.
11 : ಆದರೆ ಯಾಜಕನು ಕೊಂಡುಕೊಂಡ ಗುಲಾಮರು, ಅವನ ಮನೆಯಲ್ಲಿ ಹುಟ್ಟಿದ ಗುಲಾಮರು ಅದನ್ನು ಊಟ ಮಾಡಬಹುದು.
12 : ಯಾಜಕನ ಮಗಳು ಯಾಜಕನಲ್ಲದವನಿಗೆ ಮದುವೆಯಾಗಿದ್ದರೆ ಅವಳು ಆ ನೈವೇದ್ಯ ಪದಾರ್ಥಗಳನ್ನು ತಿನ್ನಕೂಡದು.
13 : ಯಾಜಕನ ಮಗಳು ವಿಧವೆಯಾಗಿದ್ದರೆ, ಗಂಡ ಬಿಟ್ಟವಳಾಗಿದ್ದರೆ, ಮಕ್ಕಳಿಲ್ಲದೆ ಇದ್ದರೆ, ಬಾಲ್ಯದಲ್ಲಿ ತಂದೆಯ ಬಳಿ ಇದ್ದಂತೆಯೇ ಮತ್ತೆ ತಂದೆಯ ಮನೆಸೇರಿದ್ದರೆ ಆಕೆ ತಂದೆಯ ಆಹಾರದಲ್ಲಿ ಭಾಗಿಯಾಗಬಹುದು. ಯಾಜಕರಲ್ಲದ ಇತರರು ಅದನ್ನು ಊಟಮಾಡಲೇಬಾರದು.
14 : “ಯಾಜಕನಲ್ಲದವನು ತಿಳಿಯದೆ ನೈವೇದ್ಯವಾದುದ್ದನ್ನು ಊಟಮಾಡಿದರೆ ಅಷ್ಟನ್ನೂ ಹಾಗು ಅದರ ಐದನೆಯ ಒಂದು ಭಾಗವನ್ನೂ ಯಾಜಕನಿಗೆ ತೆರಬೇಕು.
15 : ಇಸ್ರಯೇಲರ ಸರ್ವೇಶ್ವರನಿಗೆ ವಿೂಸಲೆಂದು ಇಟ್ಟ ನೈವೇದ್ಯ ಪದಾರ್ಥಗಳನ್ನು ಸಾಧಾರಣವೆಂದು ಅಸಡ್ಡೆ ಮಾಡಬಾರದು.
16 : ಹಾಗೆ ಮಾಡಿದರೆ ತಾವು ಆ ನೈವೇದ್ಯಗಳನ್ನು ಊಟಮಾಡುವುದರಿಂದ ಪಾಪಕ್ಕೆ ಒಳಗಾಗಿ ಶಿಕ್ಷೆಗೆ ಗುರಿಯಾಗುವರು. ನನ್ನ ಸೇವೆಗೆ ಯಾಜಕರನ್ನು ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು.”
17 : ಆರೋನನಿಗೆ, ಅವನ ಮಕ್ಕಳಿಗೆ ಹಾಗು ಇಸ್ರಯೇಲರೆಲ್ಲರಿಗೆ ಈ ಕೆಳಕಂಡಂತೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಮೋಶೆಗೆ ಹೇಳಿದರು:
18 : “ಇಸ್ರಯೇಲರೇ ಆಗಲಿ, ಅವರ ನಡುವೆ ವಾಸಿಸುವವರೇ ಆಗಲಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ಸರ್ವೇಶ್ವರನಾದ ನನಗೆ ದಹನ ಬಲಿದಾನ ಮಾಡುವಾಗ
19 : ಅದು ಸ್ವೀಕೃತವಾಗಬೇಕಾದರೆ ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು; ಹೋರಿ, ಟಗರು ಅಥವಾ ಹೋತವೇ ಆಗಿರಬೇಕು.
20 : ಕುಂದುಕೊರತೆ ಇರುವಂಥದನ್ನು ಒಪ್ಪಿಸಬಾರದು; ಅದು ಸ್ವೀಕೃತವಾಗುವುದಿಲ್ಲ.
21 : ಹರಕೆಯಾಗಿ ಅಥವಾ ಕಾಣಿಕೆಯಾಗಿ ಯಾರಾದರು ಶಾಂತಿಸಮಾಧಾನದ ಬಲಿಯನ್ನರ್ಪಿಸಲು ಆಶಿಸಿದರೆ ಅವರು ತರುವ ದನಕರುಗಳು, ಆಡುಕುರಿಗಳು ಕಳಂಕರಹಿತವಾಗಿರಬೇಕು. ಯಾವುದಾದರೂ ಕುಂದುಕೊರತೆ ಇದ್ದರೆ ಆ ಬಲಿದಾನ ಸ್ವೀಕೃತವಾಗುವುದಿಲ್ಲ.
22 : ಕುರುಡಾದುದು, ಕುಂಟಾದುದು, ಗಾಯಗೊಂಡದ್ದು, ಹುಣ್ಣು, ಕಜ್ಜಿ, ತುರಿಉಳ್ಳದ್ದು ಇಂಥ ಪ್ರಾಣಿಗಳನ್ನು ಸರ್ವೇಶ್ವರನಿಗೆ ಸಮರ್ಪಿಸಬಾರದು; ಬಲಿಪೀಠದ ಮೇಲೆ ಹೋಮ ಮಾಡಕೂಡದು.
23 : ಹೋರಿಯ ಇಲ್ಲವೆ ಕುರಿಯ ಅವಯವಗಳಲ್ಲಿ ಏನಾದರೂ ಹೆಚ್ಚುಕಡಿಮೆ ಇದ್ದರೆ ಅದನ್ನು ಕಾಣಿಕೆಯಾಗಿ ಸಮರ್ಪಿಸಬಹುದೇ ಹೊರತು ಹರಕೆಯಾಗಿ ಒಪ್ಪಿಸಿದರೆ ಅದು ಸ್ವೀಕೃತವಾಗುವುದಿಲ್ಲ.
24 : ಬೀಜ ಹೊಡೆದ, ಕುಟ್ಟಿದ, ಒಡೆದ, ಕೊಯ್ದ ಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸಕೂಡದು. ನಿಮ್ಮ ನಾಡಿನಲ್ಲಿ ಪ್ರಾಣಿಗಳಿಗೆ ಹೀಗೆ ಮಾಡಲೇಬಾರದು.
25 : ಅನ್ಯ ದೇಶದವನಿಂದ ತೆಗೆದುಕೊಂಡ ಅಂಥ ಪ್ರಾಣಿಯನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು. ಅದು ಕುಂದುಳ್ಳದ್ದು, ಕಳಂಕಿತವಾದದ್ದು, ಆದಕಾರಣ ಸ್ವೀಕೃತವಾಗದು.”
26 : ಮೋಶೆಗೆ ಸರ್ವೇಶ್ವರ ಹೀಗೆಂದರು,
27 : “ಕರುವಾಗಲಿ, ಕುರಿಮರಿಯಾಗಲಿ, ಆಡುಮರಿಯಾಗಲಿ ಹುಟ್ಟಿ ಏಳು ದಿವಸ ಆದ ಬಳಿಕ ಅದನ್ನು ಸರ್ವೇಶ್ವರನಿಗೆ ಹೋಮವಾಗಿ ಸಮರ್ಪಿಸಿದರೆ ಅಂಗೀಕೃತವಾಗುವುದು.
28 : ಈದ ಹಸುವನ್ನೂ ಅದರ ಎಳೇಕರುವನ್ನೂ ಅಂತೆಯೆ ಈದ ಆಡುಕುರಿಗಳನ್ನೂ ಅವುಗಳ ಎಳೇ ಮರಿಗಳನ್ನೂ ಒಂದೇ ದಿನದಲ್ಲಿ ವಧಿಸಬಾರದು.
29 : “ನೀವು ಧನ್ಯವಾದ ಸಲ್ಲಿಸಲು ಸರ್ವೇಶ್ವರನಿಗೆ ಮಾಡುವ ಬಲಿದಾನವನ್ನು ಮೆಚ್ಚುಗೆಯಾದ ರೀತಿಯಲ್ಲಿ ಸಮರ್ಪಿಸಬೇಕು. 30ಅದೇ ದಿವಸದಲ್ಲಿ ಅದನ್ನು ಊಟ ಮಾಡಬೇಕು. ಮರುದಿನದವರೆಗೆ ಕಿಂಚಿತ್ತನ್ನೂ ಮಿಗಿಸಬಾರದು. ನಾನು ಸರ್ವೇಶ್ವರ.
30 ಅದೇ ದಿವಸದಲ್ಲಿ ಅದನ್ನು ಊಟಮಾಡಬೇಕು. ಮರುದಿನದವರೆಗೆ
31 : “ಈ ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು. ನಾನು ಸರ್ವೇಶ್ವರ
32 : ನನ್ನ ಪವಿತ್ರ ನಾಮದ ಘನತೆಗೆ ಕುಂದು ತರಬಾರದು. ಇಸ್ರಯೇಲರೆಲ್ಲರು ನನ್ನನ್ನು ಪರಿಶುದ್ಧನೆಂದು ಪರಿಗಣಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರನು ನಾನು.
33 : ನಿಮಗೆ ದೇವರಾಗಿರಬೇಕೆಂದು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದೆ. ನಾನು ಸರ್ವೇಶ್ವರ.”

Holydivine