Leviticus - Chapter 13
Holy Bible

1 : ಸರ್ವೇಶ್ವರಸ್ವಾಮಿ ಮೋಶೆ ಆರೋನರಿಗೆ ಹೇಳಿದ್ದೇನೆಂದರೆ:
2 : ಒಬ್ಬ ವ್ಯಕ್ತಿಯ ಮೈಮೇಲೆ ಬಾವಾಗಲಿ, ಗುಳ್ಳೆಯಾಗಲಿ, ಹೊಳೆಯುವ ಮಚ್ಚೆಯಾಗಲಿ ಕಾಣಿಸಿಕೊಂಡು ಅದರಲ್ಲಿ ಕುಷ್ಠರೋಗದ ಲಕ್ಷಣಗಳು ತೋರಿದರೆ ಅವನನ್ನು ಮಹಾಯಾಜಕ ಆರೋನನ ಬಳಿಗೆ, ಇಲ್ಲವೆ ಆರೋನನ ಮಕ್ಕಳಾದ ಯಾಜಕರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು.
3 : ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ಪರೀಕ್ಷಿಸಬೇಕು. ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಮಚ್ಚೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಆ ವ್ಯಕ್ತಿಯನ್ನು ಅಶುದ್ಧನೆಂದು ನಿರ್ಣಯಿಸಬೇಕು.
4 : ಆ ಹೊಳೆಯುವ ಮಚ್ಚೆ ಬೆಳ್ಳಗಾಗಿದ್ದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿರದೆ ಹೋದರೆ ಮತ್ತು ಅಲ್ಲಿರುವ ರೋಮ ಬೆಳ್ಳಗಾಗದಿದ್ದರೆ ಯಾಜಕನು ಆ ಮಚ್ಚೆಯಿದ್ದವನನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
5 : ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊದಲು ಇದ್ದಂತೆಯೇ ತೋರಿದರೆ ಯಾಜಕನು ಇನ್ನೂ ಏಳು ದಿನಗಳವರೆಗೂ ಅವನನ್ನು ಪ್ರತ್ಯೇಕವಾಗಿ ಇರಿಸಬೇಕು.
6 : ಆ ಏಳು ದಿನಗಳಾದ ಮೇಲೆ ಯಾಜಕನು ಮತ್ತೆ ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊಬ್ಬಾಗಿದ್ದರೆ ಯಾಜಕನು ಅದು ಕೇವಲ ಗುಳ್ಳೆಯೆಂದು ತಿಳಿದು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು.
7 : ಆದರೆ ಅವನು ತನ್ನ ಶುದ್ಧಿಯ ವಿಷಯದಲ್ಲಿ ತನ್ನನ್ನು ಯಾಜಕನಿಗೆ ತೋರಿಸಿಕೊಂಡನಂತರ ಆ ಗುಳ್ಳೆ ದೇಹದ ಚರ್ಮದಲ್ಲಿ ಹರಡಿಕೊಂಡರೆ ಅವನು ಪುನಃ ಯಾಜಕನಿಗೆ ತೋರಿಸಿಕೊಳ್ಳಬೇಕು.
8 : ಯಾಜಕನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠವೆಂದು ತಿಳಿದು ಆ ವ್ಯಕ್ತಿಯನ್ನು ಅಶುದ್ಧನೆಂದು ನಿರ್ಣಯಿಸಬೇಕು.
9 : ಕುಷ್ಠರೋಗದ ಚಿಹ್ನೆಗಳು ಯಾವ ವ್ಯಕ್ತಿಯಲ್ಲಾದರೂ ಕಾಣಬಂದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
10 : ಯಾಜಕನು ಅವನನ್ನು ಪರೀಕ್ಷಿಸುವಾಗ ದೇಹದ ಚರ್ಮದಲ್ಲಿ ಬೆಳ್ಳಗಾದ ಬಾವು ಇದ್ದರೆ ಮತ್ತು ಬಾವಿನಲ್ಲಿ ಮಾಂಸ ಕಾಣಿಸಿದರೆ
11 : ಅದು ಹಳೇ ಕುಷ್ಠರೋಗದ ಗುರುತು. ಅವನು ಅಶುದ್ಧನಾದ್ದರಿಂದ ಯಾಜಕನು ಅವನನ್ನು ಪ್ರತ್ಯೇಕಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.
12 : ಆದರೆ ಒಬ್ಬ ವ್ಯಕ್ತಿಯ ಚರ್ಮದಲ್ಲಿ ತೊನ್ನು ಹತ್ತಿ ಯಾಜಕನು ನೋಡುವ ಎಲ್ಲಾ ಕಡೆಯಲ್ಲಿಯೂ ತಲೆ ಮೊದಲುಗೊಂಡು ಅಂಗಾಲಿನವರೆಗೂ ಹರಡಿಕೊಂಡಿದ್ದರೆ ಯಾಜಕನು ನೋಡುವಾಗ
13 : ಆ ತೊನ್ನು ದೇಹದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರೆ ಅಂಥವನನ್ನು ಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅವನ ಚರ್ಮವೆಲ್ಲಾ ಬೆಳ್ಳಗಾಗಿ ಹೋದುದರಿಂದ ಅವನು ಶುದ್ಧನು.
14 : ಆದರೆ ಅಂಥವನ ದೇಹದಲ್ಲಿ ಯಾವಾಗಲಾದರೂ ಮಾಂಸ ಕಾಣಬಂದರೆ ಅವನು ಅಶುದ್ಧನಾಗುವನು.
15 : ಯಾಜಕನು ಆ ಮಾಂಸವನ್ನು ನೋಡಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಅಂಥ ಮಾಂಸವು ಅಶುದ್ಧವೇ ಸರಿ: ಅದು ಕುಷ್ಠವು.
16 : ಆದರೆ ಆ ಮಾಂಸವು ಅದೇ ಪ್ರಕಾರವಾಗಿ ಇರದೆ ತಿರುಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
17 : ಯಾಜಕನು ಪರೀಕ್ಷಿಸುವಾಗ ಆ ಮಚ್ಚೆ ಬೆಳ್ಳಗಾಗಿ ಹೋಗಿದ್ದರೆ ಆ ವ್ಯಕ್ತಿಯನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ಶುದ್ಧನಾಗಿದ್ದಾನೆ.
18 : ಒಬ್ಬನ ದೇಹದ ಚರ್ಮದಲ್ಲಿ ಹುಣ್ಣು ಆಗಿದ್ದು
19 : ವಾಸಿಯಾದ ಮೇಲೆ ಅದು ಇದ್ದ ಸ್ಥಳದಲ್ಲಿ ಬಿಳೀ ಬಾವಾಗಲಿ; ಕೆಂಪು ಬಿಳುಪು ಮಿಶ್ರವಾಗಿ ಹೊಳೆಯುವ ಕಲೆಯಾಗಲಿ ಕಂಡು ಬಂದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.
20 : ಯಾಜಕನು ಪರೀಕ್ಷಿಸಿ ನೋಡುವಾಗ ಆ ಕಲೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠ ಹುಟ್ಟಿರುವುದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.
21 : ಆದರೆ ಯಾಜಕನು ಪರೀಕ್ಷಿಸಿ ನೋಡುವಾಗ ಅದರಲ್ಲಿ ಬಿಳೀ ರೋಮವಿಲ್ಲದೆ ಹೋದರೆ ಮತ್ತು ಆ ಕಲೆ ಮಿಕ್ಕ ಚರ್ಮಕ್ಕಿಂತ ತಗ್ಗಾಗದೆ ಮೊಬ್ಬಾಗಿದ್ದರೆ ಯಾಜಕನು ಅವನನ್ನು ಏಳುದಿನಗಳು ಪ್ರತ್ಯೇಕವಾಗಿ ಇರಿಸಬೇಕು.
22 : ತರುವಾಯ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು; ಅದು ಕುಷ್ಠ ರೋಗವೇ ಸರಿ. 23ಆದರೆ ಆ ಹೊಳೆಯುವ ಕಲೆ ಹರಡಿಕೊಳ್ಳದೆ ಮೊದಲಿದ್ದಂತೆಯೇ ಇದ್ದರೆ ಅದು ಆ ಹುಣ್ಣಿನ ಕಲೆಯೆಂದು ತಿಳಿದುಕೊಂಡು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
23 ಆದರೆ ಆ ಹೊಳೆಯುವ ಕಲೆ ಹರಡಿಕೊಳ್ಳದೆ ಮೊದಲಿದ್ದಂತೆಯೇ ಇದ್ದರೆ ಅದು ಆ ಹುಣ್ಣಿನ ಕಲೆಯೆಂದು ತಿಳಿದುಕೊಂಡು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
24 : ಒಬ್ಬ ವ್ಯಕ್ತಿಯ ಚರ್ಮದಲ್ಲಿ ಬೆಂಕಿಯಿಂದುಂಟಾದ ಬೊಬ್ಬೆ ಇರಲಾಗಿ ಆ ಬೊಬ್ಬೆಯ ಸ್ಥಳವು ಹೊಳೆಯುವ ಕಲೆಯಾಗಿ
25 : ಬೆಳ್ಳಗಾಗಿಯಾಗಲಿ, ಕೆಂಪು ಬಿಳುಪು ಮಿಶ್ರವಾಗಿಯಾಗಲಿ ಇದ್ದರೆ ಯಾಜಕನು ಅದನ್ನು ಪರೀಕ್ಷಿಸಿ ನೋಡಬೇಕು. ಅವನು ನೋಡುವಾಗ ಆ ಹೊಳೆಯುವ ಕಲೆಯಲ್ಲಿರುವ ರೋಮವು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಕಲೆಯು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಅದು ಆ ಬೊಬ್ಬೆಯಲ್ಲಿ ಹುಟ್ಟಿದ ಕುಷ್ಠವೆಂದು ತಿಳಿದು ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
26 : ಆದರೆ ಯಾಜಕನು ಪರೀಕ್ಷಿಸುವಾಗ ಆ ಹೊಳೆಯುವ ಕಲೆಯಲ್ಲಿ ಬಿಳೀ ರೋಮವಿಲ್ಲದೆ ಹೋದರೆ ಮತ್ತು ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಮೊಬ್ಬಾಗಿ ಹೋಗಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.
27 : ಏಳನೆಯ ದಿನದಲ್ಲಿ ಯಾಜಕನು ಅವನನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠರೋಗವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
28 : ಆ ಹೊಳೆಯುವ ಕಲೆಯು ಚರ್ಮದಲ್ಲಿ ಹರಡಿಕೊಳ್ಳದೆ ಮೊದಲಿನಂತೆಯೇ ಇದ್ದು ಮೊಬ್ಬಾಗಿ ಹೋಗಿದ್ದರೆ ಅದು ಬೆಂಕಿಸುಟ್ಟ ಬೊಬ್ಬೆಯೆಂದು ತಿಳಿದು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
29 : ಹೆಂಗಸಿನ ತಲೆಯಲ್ಲಾಗಲಿ, ಗಂಡಸಿನ ತಲೆಯಲ್ಲಿ ಅಥವಾ ಗಡ್ಡದಲ್ಲಾಗಲಿ ಕಲೆ ಉಂಟಾದರೆ ಯಾಜಕನು ಅದನ್ನು ಪರೀಕ್ಷಿಸಿ ನೋಡಬೇಕು.
30 : ಆಗ ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿ ಹಳದಿ ಬಣ್ಣವುಳ್ಳ ಸಣ್ಣ ಕೂದಲು ಇದ್ದರೆ ಅದು ತಲೆಯಲ್ಲಾಗಲಿ ಗಡ್ಡದಲ್ಲಾಗಲಿ ಉಂಟಾದ ಕುಷ್ಠವನ್ನು ಸೂಚಿಸುವಂಥಾದ್ದು ಆಗಿರುವುದರಿಂದ ಯಾಜಕನು ಅಂಥವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
31 : ಯಾಜಕನು ಆ ಇಸಬನ್ನು ನೋಡುವಾಗ ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದಾಗ್ಯೂ ಅದು ಇರುವ ಕಡೆ ಕರೇ ಕೂದಲು ಇಲ್ಲದಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.
32 : ಏಳನೆಯ ದಿನದಲ್ಲಿ ಯಾಜಕನು ನೋಡುವಾಗ ಆ ಇಸುಬು ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಕಡೆ ಹಳದಿಬಣ್ಣದ ಕೂದಲು ಇಲ್ಲದಿದ್ದರೆ ಮತ್ತು ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದರೆ
33 : ಅವನು ಕ್ಷೌರಮಾಡಿಸಿಕೊಳ್ಳಬೇಕು. ಆ ಇಸುಬು ಇರುವ ಭಾಗವನ್ನು ಮಾತ್ರ ಕ್ಷೌರಮಾಡಿಸಿಕೊಳ್ಳಬಾರದು. ಯಾಜಕನು ಅವನನ್ನು ಇನ್ನೂ ಏಳು ದಿನಗಳವರೆಗೂ ಪ್ರತ್ಯೇಕಿಸಬೇಕು.
34 : ಏಳನೆಯ ದಿನದಲ್ಲಿ ಯಾಜಕನು ಪುನಃ ಆ ಇಸಬನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಳ್ಳದೆ ಹೋಗಿದ್ದರೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡಾಗ ಶುದ್ಧನಾಗುವನು.
35 : ಆದರೆ ಅವನು ಶುದ್ಧನೆಂದು ನಿರ್ಣಯಿಸಲ್ಪಟ್ಟ ಮೇಲೆ ಆ ಇಸಬು ಚರ್ಮದಲ್ಲಿ ಹರಡಿಕೊಂಡರೆ
36 : ಯಾಜಕನು ಅವನನ್ನು ಪರೀಕ್ಷಿಸಬೇಕು; ಆದರೆ ಹಳದಿಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ; ಅವನು ಅಶುದ್ದನೇ.
37 : ಇಸಬು ಮೊದಲು ಇದ್ದಂತೆಯೇ ಇದ್ದುದರಲ್ಲಿ ಕರಿಕೂದಲು ಹುಟ್ಟಿದ್ದರೆ ಅದು ವಾಸಿಯಾಗಿದೆ. ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
38 : ಗಂಡಸಿಗಾಗಲಿ ಹೆಂಗಸಿಗಾಗಲಿ ಚರ್ಮದಲ್ಲಿ ಹೊಳೆಯುವ ಬಿಳುಪಾದ ಕಲೆಗಳು ಅಲ್ಲಲ್ಲಿ ಹುಟ್ಟಿದ್ದರೆ
39 : ಯಾಜಕನು ಅವುಗಳನ್ನು ಪರೀಕ್ಷಿಸಬೇಕು. ಆ ಹೊಳೆಯುವ ಕಲೆಗಳು ಮೊಬ್ಬಾದ ಬಿಳೀ ಬಣ್ಣದಾಗಿದ್ದರೆ ಅದು ದೇಹದ ಚರ್ಮದಲ್ಲಿ ಹುಟ್ಟಿದ ಚಿಬ್ಬು, ಅವನು ಶುದ್ಧನು.
40 : ಒಬ್ಬ ವ್ಯಕ್ತಿಯ ತಲೆಯ ಕೂದಲು ಉದುರಿ ಹೋದುದರಿಂದ ಬೋಳು ತಲೆಯವನಾದರೂ ಅವನು ಶುದ್ಧನೇ.
41 : ಮುಂದಲೆಯ ಕೂದಲು ಉದುರಿದರೆ ಅವನು ಪಟ್ಟೆತಲೆಯವನಾದರೂ ಶುದ್ಧನೇ.
42 : ಆದರೆ ಬೋಳುತಲೆಯಲ್ಲಾಗಲಿ, ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪು ಮಿಶ್ರವಾದ ಮಚ್ಚೆ ಹುಟ್ಟಿದರೆ ಅದು ಕುಷ್ಠವೇ.
43 : ಯಾಜಕನು ಅವನನ್ನು ಪರೀಕ್ಷಿಸಬೇಕು. ಆಗ ಅದರಿಂದುಂಟಾದ ಬಾವು ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿನ ಕುಷ್ಠದಂತೆ ತೋರಿದರೆ ಅವನು ಕುಷ್ಠರೋಗಿ; ಅಶುದ್ಧನು.
44 : ಅವನ ತಲೆಯ ಮೇಲೆ ಕುಷ್ಠದ ಗುರುತು ಕಾಣಿಸಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.
45 : ಯಾರಲ್ಲಿ ಕುಷ್ಠದ ಗುರುತು ಕಾಣಬಂತೋ ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯನ್ನು ಕೆದರಿಕೊಂಡು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು - ’ನಾನು ಅಶುದ್ಧನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು.
46 : ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು. ಅವನ ನಿವಾಸ ಪಾಳೆಯದ ಹೊರಗೆ ಇರಬೇಕು.
47 : ಕುಷ್ಠರೋಗದ ಗುರುತು ಬಟ್ಟೆಯಲ್ಲಿ ಕಂಡು ಬಂದಾಗ ಅದು ಉಣ್ಣೆಯ ಬಟ್ಟೆಯಾಗಲಿ, ನಾರಿನ ಬಟ್ಟೆಯಾಗಲಿ,
48 : ನಾರಿನ ಅಥವಾ ಉಣ್ಣೆಯ ನೆಯಿಗೆಯಲ್ಲಾಗಲಿ, ಹೆಣಿಗೆಯಲ್ಲೆ ಆಗಲಿ, ಇಲ್ಲವೆ ತೊಗಲಿನಲ್ಲಾಗಲಿ, ತೊಗಲಿನಿಂದ ಮಾಡಲ್ಪಟ್ಟ ವಸ್ತುವಿನಲ್ಲಾಗಲಿ,
49 : ಆ ಬಟ್ಟೆ, ತೊಗಲು, ಹಾಸು, ಹೊಕ್ಕು, ತೊಗಲಿನ ಸಾಮಾನುಗಳಲ್ಲಿ ಹಸುರಾಗಿ ಇಲ್ಲವೆ ಕೆಂಪಾಗಿ ಮಚ್ಚೆಕಾಣಿಸಿದರೆ ಅದು ಕುಷ್ಠದ ಗುರುತು; ಅದನ್ನು ಯಾಜಕನಿಗೆ ತೋರಿಸಬೇಕು.
50 : ಯಾಜಕನು ಅದನ್ನು ನೋಡಿ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇಡಿಸಬೇಕು.
51 : ಏಳನೆಯ ದಿನದಲ್ಲಿ ಅವನು ಅದನ್ನು ನೋಡುವಾಗ ಆ ಬಟ್ಟೆಯ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ಇಲ್ಲವೇ ಯಾವುದಾದರೂ ಒಂದು ಕೆಲಸಕ್ಕೆ ಉಪಯೋಗ ಆಗಿರುವ ಆ ತೊಗಲಿನಲ್ಲಿ ಆ ಮಚ್ಚೆ ಹರಡಿಕೊಂಡಿದ್ದರೆ ಅದು ಪ್ರಾಣಕ್ಕೆ ಅಪಾಯಕರವಾದ ಕುಷ್ಠವೇ; ಆ ವಸ್ತು ಅಶುದ್ಧ.
52 : ಆ ವಸ್ತುವು ಬಟ್ಟೆಯಾದರೂ ನೆಯಿಗೆಯಾದರೂ ಹೆಣಿಗೆಯಾದರೂ ಉಣ್ಣೆಯದಾದರೂ ನಾರಿನದಾದರೂ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವುದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು.
53 : ಆದರೆ ಯಾಜಕನು ಪರೀಕ್ಷಿಸುವಾಗ ಆ ವಸ್ತುವಿನಲ್ಲಿ ಅಂದರೆ ಆ ಬಟ್ಟೆ, ನೆಯಿಗೆ, ಹೆಣಿಗೆ, ತೊಗಲಿನ ಸಾಮಾನು ಇವುಗಳಲ್ಲಿ ಆ ಮಚ್ಚೆ ಹರಡಿಕೊಳ್ಳದಿದ್ದರೆ
54 : ಅದನ್ನು ನೀರಿನಿಂದ ತೊಳೆಯಬೇಕೆಂದು ಯಾಜಕನು ಅಪ್ಪಣೆಕೊಟ್ಟು ಇನ್ನೂ ಏಳು ದಿನಗಳ ತನಕ ಅದನ್ನು ಪ್ರತ್ಯೇಕವಾಗಿ ಇಡಿಸಬೇಕು.
55 : ಆ ಮಚ್ಚೆ ಇದ್ದ ವಸ್ತುವನ್ನು ತೊಳೆಸಿದ ಮೇಲೆ ಯಾಜಕನು ನೋಡುವಾಗ ಆ ಮಚ್ಚೆಯು ಹರಡಿಕೊಳ್ಳದೆ ಇದ್ದಾಗ್ಯೂ ಅದರ ಬಣ್ಣ ಮೊದಲಿದ್ದಂತೆಯೇ ಇದ್ದರೆ ಆ ವಸ್ತು ಅಶುದ್ಧ. ಕುಷ್ಠ ರೋಗದ ಗುರುತು ಅದರ ಮೇಲಿನ ಕಡೆಯಿಂದ ಆಗಲಿ ಕೆಳಗಿನ ಕಡೆಯಿಂದಾಗಲಿ ಆ ವಸ್ತುವಿನೊಳಗೆ ವ್ಯಾಪಿಸಿದ್ದರಿಂದ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
56 : ಆದರೆ ತೊಳೆದ ಬಟ್ಟೆಯನ್ನು ಯಾಜಕನು ನೋಡುವಾಗ ಅದರಲ್ಲಿದ್ದ ಮಚ್ಚೆ ಮೊಬ್ಬಾಗಿ ಹೋಗಿದ್ದರೆ ಅವನು ಆ ಮಚ್ಚೆ ಇರುವ ಭಾಗವನ್ನು ಬಟ್ಟೆಯಿಂದಾಗಲಿ ತೊಗಲಿನಿಂದಾಗಲಿ ನೆಯಿಗೆಯಿಂದಾಗಲಿ ಹೆಣಿಗೆಯಿಂದಾಗಲಿ ಕತ್ತರಿಸಿ ಬಿಡಬೇಕು.
57 : ಆಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ಕಂಡುಬಂದರೆ ಕುಷ್ಠರೋಗವು ಇನ್ನೂ ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು.
58 : ಆ ಬಟ್ಟೆಯಲ್ಲಾಗಲಿ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ತೊಳೆದ ನಂತರ ಆ ಮಚ್ಚೆ ಕಾಣದೆ ಹೋದರೆ ಅದನ್ನು ಎರಡನೆಯ ಸಾರಿ ತೊಳೆಯಬೇಕು; ಆಗ ಅದು ಶುದ್ಧವಾಗುವುದು.
59 : ಉಣ್ಣೇ ಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ಕಾಣಬಂದ ಕುಷ್ಠರೋಗದ ಗುರುತಿನ ವಿಷಯವಾದ ವಿಧಿ ಇದೇ. ಅದು ಶುದ್ಧವೆಂದು ನಿರ್ಣಯಿಸಬೇಕೋ ಅಶುದ್ಧವೆಂದು ನಿರ್ಣಯಿಸಬೇಕೋ ಎಂಬುದು ಇದರಿಂದ ತಿಳಿಯುವುದು.

Holydivine