Leviticus - Chapter 26
Holy Bible

1 : “ನೀವು ವಿಗ್ರಹಗಳನ್ನು ಮಾಡಿಸಿಕೊಳ್ಳಬೇಡಿ; ಕೆತ್ತಿದ ಪ್ರತಿಮೆಯನ್ನಾಗಲಿ, ಕಲ್ಲಿನ ಕಂಬವನ್ನಾಗಲಿ ನಿಲ್ಲಿಸಿಕೊಳ್ಳಬೇಡಿ; ಆರಾಧನೆಗಾಗಿ ವಿಚಿತ್ರವಾಗಿ ಕೆತ್ತಿದ ಸ್ತಂಭಗಳನ್ನು ನಿಮ್ಮ ನಾಡಿನಲ್ಲಿ ಇಡಬೇಡಿ. ನಾನೇ ನಿಮ್ಮ ಸರ್ವೇಶ್ವರನಾದ ದೇವರು.
2 : ನಾನು ನೇಮಿಸಿರುವ ಸಬ್ಬತ್‍ದಿನಗಳನ್ನು ನೀವು ಆಚರಿಸಬೇಕು. ನನ್ನ ದೇವಸ್ಥಾನದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಸರ್ವೇಶ್ವರ.
3 : “ನೀವು ನನ್ನ ನಿಯಮಗಳನ್ನು ಕೈಗೊಂಡು ನನ್ನ ಆಜ್ಞೆಗಳನ್ನು ಅನುಸರಿಸಿ ನಡೆದರೆ
4 : ನಾನು ಮುಂಗಾರು ಹಿಂಗಾರು ಮಳೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಬರಮಾಡುವೆನು. ನಿಮ್ಮ ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವುವು. ತೋಟದ ಮರಗಳು ಹೇರಳವಾದ ಫಲಕೊಡುವುವು.
5 : ಕಣ ತುಳಿಸುವ ಕೆಲಸ ದ್ರಾಕ್ಷಿ ಬೆಳೆಯ ಪರ್ಯಂತರವೂ ದ್ರಾಕ್ಷಿ ಬೆಳೆಯನ್ನು ಕೂಡಿಸುವ ಕೆಲಸ ಬಿತ್ತನೆಯ ಕಾಲದ ಪರ್ಯಂತರವೂ ನಡೆಯುವುವು. ಸಮೃದ್ಧಿ ಆಗಿ ಊಟಮಾಡುವಿರಿ, ನಾಡಿನಲ್ಲಿ ನಿರ್ಭಯವಾಗಿ ವಾಸಮಾಡುವಿರಿ.
6 : “ನಿಮ್ಮ ನಾಡಿಗೆ ಸುಕ್ಷೇಮವನ್ನು ಅನುಗ್ರಹಿಸುವೆನು. ಯಾರ ಭಯವೂ ಇಲ್ಲದೆ ನೀವು ನಿದ್ರಿಸುವಿರಿ; ದುಷ್ಟಮೃಗಗಳ ಕಾಟ ನಿಮ್ಮ ನಾಡಿಗಿರದು; ನಿಮ್ಮ ನಾಡು ಶತ್ರುಗಳ ಕತ್ತಿಗೆ ತುತ್ತಾಗದು.
7 : ನೀವೇ ನಿಮ್ಮ ವೈರಿಗಳನ್ನು ಓಡಿಸುವಿರಿ; ಕತ್ತಿಯಿಂದ ಸಂಹರಿಸುವಿರಿ.
8 : ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು, ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಓಡಿಸುವರು. ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು.
9 : ನಾನು ನಿಮ್ಮ ಮೇಲೆ ಕರುಣೆಯಿಟ್ಟು, ಹೆಚ್ಚು ಸಂತಾನಪ್ರಾಪ್ತಿಯನ್ನು ಕೊಟ್ಟು ಅಭಿವೃದ್ಧಿಗೊಳಿಸಿ, ನಿಮಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
10 : ನೀವು ಬಹುದಿನದಿಂದ ಕೂಡಿಸಿಟ್ಟುಕೊಂಡಿರುವ ಹಳೆಯ ಧಾನ್ಯವನ್ನು ಊಟಮಾಡುವಿರಿ. ಹೊಸ ದವಸಧಾನ್ಯಗಳಿಗೆ ಕಣಜ ಸಾಲದೆ ಹಳೆಯದನ್ನು ತೆಗೆದುಬಿಡುವಿರಿ.
11 : ನಾನು ನಿಮ್ಮ ಮಧ್ಯೆ ನಿವಾಸಿಸುವೆನು. ನಿಮ್ಮನ್ನು ಕೈಬಿಡೆನು.
12 : ನಿಮ್ಮ ನಡುವೆ ಸಂಚರಿಸುತ್ತಾ ನಿಮಗೆ ದೇವರಾಗಿರುವೆನು. ನೀವು ನನಗೆ ಪ್ರಜೆಗಳಾಗಿ ಇರುವಿರಿ.
13 : ನೀವು ಈಜಿಪ್ಟಿನವರಿಗೆ ಗುಲಾಮರಾಗಿ ಇರಬಾರದೆಂದು ನಿಮ್ಮನ್ನು ಅವರ ದೇಶದಿಂದ ಬರಮಾಡಿದ ನಿಮ್ಮ ದೇವರಾದ ಸರ್ವೇಶ್ವರನು ನಾನೇ. ನಿಮ್ಮ ನೊಗವನ್ನು ಮುರಿದು ನೀವು ನೆಟ್ಟಗೆ ನಿಂತು ನಡೆಯುವಂತೆ ಮಾಡಿದವನು ನಾನಲ್ಲವೆ?
14 : “ಆದರೆ ನೀವು ನನ್ನ ಮಾತನ್ನು ಕೇಳದೆ, ಈ ಆಜ್ಞೆಗಳನ್ನೆಲ್ಲಾ ಅನುಸರಿಸದೆ,
15 : ನನ್ನ ನಿಯಮಗಳನ್ನು ಅಲ್ಲಗಳೆದು, ನನ್ನ ವಿಧಿಗಳನ್ನು ತಳ್ಳಿಬಿಟ್ಟು, ನನ್ನ ಆಜ್ಞೆಗಳಿಗೆ ವಿಧೇಯರಾಗದೆ ನಿಬಂಧನೆಗಳನ್ನೂ ವಿೂರಿನಡೆದರೆ
16 : ನೀವು ಈ ದಂಡನೆಗಳಿಗೆ ಗುರಿಯಾಗುವಿರಿ: ನಿಮಗೆ ಕ್ಷಯರೋಗ, ಚಳಿಜ್ವರ ಮುಂತಾದ ಭೀಕರ ವ್ಯಾಧಿಗಳು ಬರುವಂತೆ ಮಾಡುವೆನು. ಇವುಗಳ ನಿಮಿತ್ತ ನೀವು ಕಂಗೆಡುವಿರಿ. ಮನಗುಂದಿಹೋಗುವಿರಿ. ನಿಮ್ಮ ಬಿತ್ತನೆಯ ಫಲ ನಿಮಗೆ ಸಿಗದೆ ಹೋಗುವುದು. ಅದು ಶತ್ರುಗಳ ಪಾಲಾಗುವುದು.
17 : ನೀವು ಈ ದಂಡನೆಗಳಿಗೆ ಗುರಿಯಾಗುವಿರಿ: ನಿಮಗೆ ಕ್ಷಯರೋಗ, ಚಳಿಜ್ವರ ಮುಂತಾದ ಭೀಕರ ವ್ಯಾಧಿಗಳು ಬರುವಂತೆ ಮಾಡುವೆನು. ಇವುಗಳ ನಿಮಿತ್ತ ನೀವು ಕಂಗೆಡುವಿರಿ. ಮನಗುಂದಿಹೋಗುವಿರಿ. ನಿಮ್ಮ ಬಿತ್ತನೆಯ ಫಲ ನಿಮಗೆ ಸಿಗದೆ ಹೋಗುವುದು. ಅದು ಶತ್ರುಗಳ ಪಾಲಾಗುವುದು.
18 : “ಇಷ್ಟಾದರೂ ನೀವು ನನ್ನ ಮಾತಿಗೆ ಲಕ್ಷ್ಯಗೊಡದೆ ಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ದಂಡಿಸುವೆನು; ನಿಮ್ಮ ಗರ್ವವನ್ನು ಅಡಗಿಸುವೆನು.
19 : ನಿಮ್ಮ ಮೇಲಿರುವ ಆಕಾಶವನ್ನು ಕಬ್ಬಿಣವಾಗಿಸುವೆನು, ನೀವು ಸಾಗುವಳಿ ಮಾಡುವ ಭೂಮಿಯನ್ನು ತಾಮ್ರವಾಗಿಸುವೆನು.
20 : ನೀವು ದುಡಿದದ್ದೆಲ್ಲಾ ವ್ಯರ್ಥವಾಗುವುದು. ನಿಮ್ಮ ಹೊಲಗದ್ದೆಗಳಲ್ಲಿ ಬೆಳೆಯಾಗದು; ನಿಮ್ಮ ತೋಟತೋಪುಗಳ ಮರಗಳು ಫಲಿಸವು.
21 : “ನೀವು ನನ್ನ ಮಾತನ್ನು ಕೇಳಲೊಲ್ಲ ದೆ ನನಗೆ ವಿರೋಧವಾಗಿ ನಡೆದರೆ ನಿಮ್ಮ ಪಾಪದ ನಿಮಿತ್ತ ಇನ್ನೂ ಏಳುಪಟ್ಟು ಹೆಚ್ಚಾಗಿ ಬಾಧಿಸುವೆನು.
22 : ನಿಮ್ಮ ಮೇಲೆ ಕ್ರೂರಪ್ರಾಣಿಗಳನ್ನು ಬರಮಾಡುವೆನು. ಅವು ನಿಮ್ಮ ಮಕ್ಕಳನ್ನು ಕೊಂದುಹಾಕುವುವು; ನಿಮ್ಮ ಪಶುಪ್ರಾಣಿಗಳನ್ನು ನಾಶಮಾಡುವುವು; ನಿಮ್ಮನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವುವು. ನಿಮ್ಮ ದಾರಿಗಳು ಪಾಳು ಬೀಳುವುವು.
23 : “ಇಷ್ಟು ಶಿಕ್ಷೆಗಳಿಂದಲೂ ನೀವು ನನ್ನ ಆಜ್ಞೆಗೆ ತಲೆಬಾಗದೆ ನನಗೆ ವಿರೋಧವಾಗಿ ನಡೆದರೆ
24 : ನಾನೇ ನಿಮಗೆ ವಿರೋಧವಾಗಿ ನಡೆಯುವೆನು. ನಿಮ್ಮ ಪಾಪಗಳ ಕಾರಣ ನಾನೇ ನಿಮ್ಮನ್ನು ಏಳರಷ್ಟು ದಂಡಿಸುವೆನು.
25 : ಶತ್ರುಗಳ ಕತ್ತಿಯ ಮೂಲಕ ನಿಮ್ಮನ್ನು ಸಂಹರಿಸುವೆನು. ನೀವು ನನ್ನ ನಿಬಂಧನವನ್ನು ವಿೂರಿದುದರಿಂದ ಆ ಕತ್ತಿ ಪ್ರತಿ ದಂಡನೆ ಮಾಡುವುದು. ನೀವು ನಿಮ್ಮ ಪಟ್ಟಣ ಗಳಲ್ಲಿ ಕೂಡಿರುವಾಗ ಅಂಟುರೋಗ ಉಂಟಾಗುವಂತೆ ಮಾಡುವೆನು. ಹೀಗೆ ನೀವು ಶತ್ರುಗಳಿಗೆ ಶರಣಾಗುವಿರಿ.
26 : ನಿಮ್ಮ ನಿಮ್ಮ ಜೀವನಾಧಾರವನ್ನು ನಾನು ತೆಗೆದುಬಿಟ್ಟಾಗ ಹತ್ತು ಮಂದಿ ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿ ಸುಟ್ಟು, ಅದನ್ನು ಪಡಿ ಪ್ರಕಾರ ಹಂಚಿಕೊಡುವರು. ನೀವು ಅದನ್ನು ತಿಂದರೂ ತೃಪ್ತಿಯಾಗದು.
27 : “ಇದನ್ನೆಲ್ಲಾ ನೀವು ಅನುಭವಿಸಿದ ಮೇಲೂ ನನ್ನ ಮಾತಿಗೆ ಕಿವಿಗೊಡದೆ ನನಗೆ ವಿರೋಧವಾಗಿ ನಡೆದರೆ,
28 : ನಾನು ನಿಮಗೆ ವಿರುದ್ಧ ಕೋಪದಿಂದ ವರ್ತಿಸುವೆನು. ನಿಮ್ಮ ಪಾಪಗಳ ಕಾರಣ ಏಳ್ಮಡಿಯಾಗಿ ಶಿಕ್ಷಿಸುವೆನು.
29 : ನೀವು ನಿಮ್ಮ ಗಂಡುಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.
30 : ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು. ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದು ಆಕುವೆನು. ನಿಮ್ಮ ಬೊಂಬೆಗಳ ಬುರುಡೆಗಳ ಮೇಲೆ ನಿಮ್ಮ ಬುರುಡೆಗಳನ್ನು ಬಿಸಾಡುವೆನು; ನಿಮ್ಮ ಬಗ್ಗೆ ಅಸಹ್ಯ ಪಡುವೆನು.
31 : ನಿಮ್ಮ ಪಟ್ಟಣಗಳನ್ನು ಹಾಳು ಮಾಡುವೆನು; ನಿಮ್ಮ ದೇವಸ್ಥಾನಗಳನ್ನು ನೆಲ ಸಮಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಸುವಾಸನೆಯನ್ನು ನಾನು ಮೂಸಿಯೂ ನೋಡುವುದಿಲ್ಲ.
32 : ನಾನು ನಿಮ್ಮ ನಾಡನ್ನು ಸಂಪೂರ್ಣವಾಗಿ ಹಾಳುಮಾಡಿದಾಗ ಅದರಲ್ಲಿ ನೆಲಸುವ ಶತ್ರುಗಳು ಅದನ್ನು ನೋಡಿ ಚಕಿತರಾಗುವರು.
33 : ನಿಮ್ಮನ್ನು ಅನ್ಯಜನಗಳ ನಡುವೆ ಚದರಿಸಿ ನಿಮ್ಮ ಹಿಂದೆ ಕತ್ತಿಬೀಸುವೆನು. ನಿಮ್ಮ ನಾಡು ನಾಶವಾಗುವುದು, ಪಟ್ಟಣಗಳು ಪಾಳುಬೀಳುವುವು.
34 : ನೀವು ನಿಮ್ಮ ಶತ್ರುಗಳ ದೇಶದಲ್ಲಿ ಸೆರೆಸೇರಿಸುವಾಗಲೆಲ್ಲಾ ನಿಮ್ಮ ನಾಡು ಹಾಳುಬಿದ್ದು, ತನಗೆ ಸಲ್ಲಬೇಕಾಗಿದ್ದ ಸಬ್ಬತ್ ಕಾಲವನ್ನು ಅನುಭವಿಸುವುದು. ಅದು ವಿಶ್ರಾಂತಿಯನ್ನು ಹೊಂದಿ ಸಬ್ಬತ್ ಕಾಲವನ್ನು ಸವಿಯುವುದು.
35 : ನೀವು ಅದರಲ್ಲಿ ವಾಸವಾಗಿದ್ದಾಗ ಅದಕ್ಕೆ ದೊರಕದ ಸಕಾಲದ ವಿಶ್ರಾಂತಿಯನ್ನು ಅದು ಹಾಳು ಬಿದ್ದಿರುವ ದಿನಗಳಲ್ಲಿ ಸುದೀರ್ಘವಾಗಿ ಅನುಭವಿಸುವುದು.
36 : “ನಿಮ್ಮಲ್ಲಿ ಯಾರ್ಯಾರು ಶತ್ರುದೇಶಗಳಲ್ಲಿ ಅಳಿದುಳಿದಿರುವಿರೋ ಅವರ ಅಂತರಾಳದಲ್ಲಿ ಭಯಭೀತಿಯನ್ನು ಹುಟ್ಟಿಸುವೆನು. ಗಾಳಿಗೆ ತೂರಾಡುವ ತರಗೆಲೆಯ ಸಪ್ಪಳವೂ ಅವರಲ್ಲಿ ದಿಗಿಲು ಹುಟ್ಟಿಸುವುದು. ಆ ಸಪ್ಪಳ ಕೇಳಿ, ಖಡ್ಗಕ್ಕೆ ಹೆದರಿ ಓಡಿಹೋಗುವವರಂತೆ ಫೇರಿಕೀಳುವರು. ಯಾರೂ ಬೆನ್ನಟ್ಟಿಬಾರದಿದ್ದರೂ ಅವರು ಎದ್ದು ಬಿದ್ದು ಓಡುವರು.
37 : ಯಾರೂ ಓಡಿಸದಿದ್ದರೂ ಕತ್ತಿಗೆ ಹೆದರಿ ಓಡುವವರಂತೆ ಒಬ್ಬರ ಮೇಲೊಬ್ಬರು ಬೀಳುವರು. ಶತ್ರುಗಳ ಮುಂದೆ ನಿಲ್ಲಲಾರಿರಿ.
38 : ಅನ್ಯಜನಗಳಲ್ಲಿ ಚದರಿಹೋಗಿ ಕಣ್ಮರೆ ಆಗುವಿರಿ. ಶತ್ರುಗಳ ದೇಶ ನಿಮ್ಮನ್ನು ಕಬಳಿಸಿ ಬಿಡುವುದು.
39 : ನಿಮ್ಮಲ್ಲಿ ಅಳಿದುಳಿದವರು ತಮ್ಮ ಪಾಪದ ಪ್ರಯುಕ್ತ ಹಾಗು ತಮ್ಮ ಪಿತೃಗಳ ಪಾಪದ ಪ್ರಯುಕ್ತ ಅವರಂತೆಯೇ ಶತ್ರುಗಳ ನಾಡುಗಳಲ್ಲಿ ಕ್ಷೀಣವಾಗಿ ಹೋಗುವರು.
40 : “ಆದರೆ ಅವರು, ತಾವೂ ತಮ್ಮ ಪಿತೃಗಳೂ ನನಗೆ ದ್ರೋಹಿಗಳಾಗಿ ಪಾಪ ಮಾಡಿದವರೆಂದು ಒಪ್ಪಿಕೊಂಡು, ನನಗೆ ವಿರೋಧವಾಗಿ ನಡೆದದ್ದರಿಂದಲೇ
41 : ನಾನು ಅವರಿಗೆ ವಿರುದ್ಧವಾಗಿ ವರ್ತಿಸಿ ಶತ್ರುದೇಶದಲ್ಲಿ ಸೆರೆ ಸೇರಿಸಬೇಕಾಯಿತೆಂದು ಅರಿತುಕೊಂಡು, ತಮ್ಮ ಮೊಂಡುತನವನ್ನು ಬಿಟ್ಟು, ನನ್ನ ಆಜ್ಞೆಗೆ ತಲೆಬಾಗಿ, ತಮ್ಮ ಪಾಪಪರಿಣಾಮದ ಶಿಕ್ಷೆಯನ್ನು ಸ್ವೀಕರಿಸಿದ್ದೇ ಆದರೆ,
42 : ಯಕೋಬ್, ಇಸಾಕ್ ಹಾಗು ಅಬ್ರಹಾಮ್ ಇವರಿಗೆ ಮಾಡಿದ ವಾಗ್ದಾನಗಳನ್ನು ನೆನಪಿಗೆ ತಂದುಕೊಳ್ಳುವೆನು. ಅವುಗಳನ್ನು ನೆರವೇರಿಸುವೆನು. ಅವರ ಸ್ವಂತ ನಾಡನ್ನು ಕರುಣೆಯಿಂದ ಜ್ಞಾಪಿಸಿಕೊಳ್ಳುವೆನು.
43 : ಆದರೆ ಅವರು ಬಿಟ್ಟುಹೋದ ಸ್ವಂತ ನಾಡು ಮೊಟ್ಟಮೊದಲು ನಿರ್ಜನವಾಗಬೇಕು; ಅದು ತನಗೆ ಸಲ್ಲಬೇಕಾದ ಸಬ್ಬತ್ ವಿಶ್ರಾಂತಿಯನ್ನು ಅನುಭವಿಸಬೇಕು; ಅವರು ಸರ್ವೇಶ್ವರನ ಆಜ್ಞೆ ಬೇಡವೆಂದು ಆತನ ವಿಧಿಗಳನ್ನು ತಾತ್ಸಾರ ಮಾಡಿದ ಕಾರಣ ತಮ್ಮ ಪಾಪದ ಫಲವನ್ನು ಸವಿಯಬೇಕು.
44 : ಅವರು ಶತ್ರುಗಳ ದೇಶದಲ್ಲಿರುವಾಗಲೂ ನಾನು ಅವರನ್ನು ಬೇಡವೆನ್ನುವುದಿಲ್ಲ, ತಾತ್ಸಾರ ಮಾಡುವುದಿಲ್ಲ, ನಾನು ಅವರಿಗೆ ಮಾಡಿದ ವಾಗ್ದಾನವನ್ನು ವಿೂರುವುದಿಲ್ಲ. ನಾನು ಅವರ ದೇವರಾದ ಸರ್ವೇಶ್ವರನಲ್ಲವೆ?
45 : ಅವರ ಪೂರ್ವಜರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ಅವರಿಗೆ ಹಿತವನ್ನೇ ಮಾಡುವೆನು. ನಾನು ಅವರಿಗೆ ದೇವರಾಗಿರಬೇಕೆಂದೇ ಅವರ ಪೂರ್ವಜರನ್ನು ಎಲ್ಲ ಜನಾಂಗಗಳ ಕಣ್ಮುಂದೆಯೇ ಈಜಿಪ್ಟಿನಿಂದ ಬರಮಾಡಿದೆನು. ನಾನು ಸರ್ವೇಶ್ವರ.”
46 : ಸರ್ವೇಶ್ವರಸ್ವಾಮಿ ಸೀನಾಯಿ ಬೆಟ್ಟದಲ್ಲಿ ಮೋಶೆಯ ಮುಖಾಂತರ ಇಸ್ರಯೇಲರ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ ಕೊಟ್ಟ ಆಜ್ಞಾವಿಧಿಗಳು ಇವುಗಳೇ. ಹರಕೆಗಳಿಂದ ಬಿಡುಗಡೆಯಾಗಲು ತೆರಬೇಕಾದ ಈಡು

Holydivine