Leviticus - Chapter 14
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದ್ದು ಏನೆಂದರೆ -
2 : ಕುಷ್ಠರೋಗಿ ಶುದ್ಧನಾಗುವ ದಿನದಲ್ಲಿ ಅವನ ವಿಷಯದಲ್ಲಿ ಅನುಸರಿಸಬೇಕಾದ ಕ್ರಮ ಇದು: ಅವನನ್ನು ಯಾಜಕನಿಗೆ ತೋರಿಸಬೇಕು.
3 : ಯಾಜಕನು ಪಾಳೆಯದ ಹೊರಕ್ಕೆ ಹೋಗಿ ಅವನನ್ನು ಪರೀಕ್ಷಿಸಬೇಕು. ಆಗ ಅವನಲ್ಲಿದ್ದ ಕುಷ್ಠವು ವಾಸಿಯಾಯಿತೆಂದು ಕಂಡರೆ
4 : ಶುದ್ಧಮಾಡಿಸಿಕೊಳ್ಳುವವನ ಪರವಾಗಿ ಸಜೀವವಾದ ಎರಡು ಶುದ್ಧಪಕ್ಷಿಗಳನ್ನು ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್ ಗಿಡದ ಬರಲನ್ನೂ ತರಬೇಕೆಂದು ಯಾಜಕನು ಆಜ್ಞಾಪಿಸಬೇಕು.
5 : ಆ ಪಕ್ಷಿಗಳಲ್ಲಿ ಒಂದನ್ನು ಒರತೆ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕೆಂದು ಯಾಜಕನು ಆಜ್ಞಾಪಿಸಿ, ಮತ್ತೊಂದು ಪಕ್ಷಿಯನ್ನೂ
6 : ಆ ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್‍ಗಿಡದ ಬರಲನ್ನೂ ತೆಗೆದುಕೊಂಡು ಒರತೆ ನೀರಿನ ಮೇಲೆ ವಧಿಸಿದ ಆ ಮೊದಲನೆಯ ಪಕ್ಷಿಯ ರಕ್ತದಲ್ಲಿ ಅವುಗಳನ್ನೆಲ್ಲಾ ಆ ಪಕ್ಷಿಯನ್ನು ಕೂಡ ಸಜೀವವಾಗಿಯೇ ಅದ್ದಿ
7 : ಕುಷ್ಠರೋಗದ ವಿಷಯದಲ್ಲಿ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಆ ರಕ್ತವನ್ನು ಚಿಮುಕಿಸಿ ಅವನನ್ನು ಶುದ್ಧನೆಂದು ನಿರ್ಣಯಿಸಿ ಆ ಜೀವವುಳ್ಳ ಪಕ್ಷಿಯನ್ನು ಅಡವಿಯ ಕಡೆಗೆ ಬಿಟ್ಟು ಬಿಡಬೇಕು.
8 : ಆಗ ಶುದ್ಧಮಾಡಿಸಿಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸರ್ವಾಂಗ ಕ್ಷೌರ ಮಾಡಿಸಿಕೊಂಡು ಸ್ನಾನಮಾಡಿದ ಮೇಲೆ ಶುದ್ಧನಾಗುವನು. ತರುವಾಯ ಅವನು ಪಾಳೆಯದೊಳಗೆ ಬರಬಹುದು; ಆದರೂ ಏಳು ದಿನಗಳ ತನಕ ತನ್ನ ಡೇರೆಯ ಹೊರಗೇ ಇರಬೇಕು.
9 : ಏಳನೆಯ ದಿನದಲ್ಲಿ ತನ್ನ ತಲೆಗೂದಲು, ಗಡ್ಡ, ಹುಬ್ಬು, ಮೈಗೂದಲು ಇವುಗಳನ್ನೆಲ್ಲಾ ಕ್ಷೌರ ಮಾಡಿಸಿಕೊಂಡು ತನ್ನ ಬಟ್ಟೆಗಳನ್ನು ಒಗೆದುಕೊಂಡು ಜಲಸ್ನಾನಮಾಡಬೇಕು. ಆಗಿನಿಂದ ಶುದ್ಧನಾಗುವನು.
10 : ಎಂಟನೆಯ ದಿನದಲ್ಲಿ ಅವನು ಪೂರ್ಣಾಂಗವಾದ ಎರಡು ಟಗರುಗಳನ್ನೂ ಪೂರ್ಣಾಂಗವಾದ ಒಂದು ವರುಷದ ಕುರಿಯನ್ನೂ ನೈವೇದ್ಯಕ್ಕಾಗಿ ಎಣ್ಣೆ ಕಲಸಿದ ಒಂಬತ್ತು ಸೇರು ಗೋದಿ ಹಿಟ್ಟನ್ನೂ ಒಂದು ಸೇರು ಎಣ್ಣೆಯನ್ನೂ ತೆಗೆದುಕೊಂಡು ಬರಬೇಕು.
11 : ಶುದ್ಧಿಮಾಡುವ ಯಾಜಕನು ಶುದ್ಧ ಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನದ ಗುಡಾರದ ಬಾಗಿಲಲ್ಲಿ
12 : ಸರ್ವೇಶ್ವರನ ಸನ್ನಿಧಿಯಲ್ಲಿ ನಿಲ್ಲಿಸಿ ಆ ಟಗರುಗಳಲ್ಲಿ ಒಂದನ್ನೂ ಆ ಒಂದು ಸೇರು ಎಣ್ಣೆಯನ್ನೂ ಪ್ರಾಯಶ್ಚಿತ್ತ ಬಲಿಯಾಗಿ ಸಮರ್ಪಿಸಬೇಕು; ಅವುಗಳನ್ನು ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿ ಎತ್ತಬೇಕು.
13 : ದೋಷಪರಿಹಾರಕ ಬಲಿಪ್ರಾಣಿಯನ್ನೂ ದಹನ ಬಲಿಪ್ರಾಣಿಯನ್ನೂ ವಧಿಸುವ ಸ್ಥಳದಲ್ಲೇ, ಅಂದರೆ ದೇವಸ್ಥಾನದ ಪ್ರಕಾರದೊಳಗೆ ಆ ಟಗರನ್ನು ವಧಿಸಬೇಕು. ಏಕೆಂದರೆ ದೋಷಪರಿಹಾರಕ ಬಲಿ ದ್ರವ್ಯದಂತೆಯೇ ಪ್ರಾಯಶ್ಚಿತ್ತ ಬಲಿದ್ರವ್ಯವೂ ಯಾಜಕನಿಗೆ ಸಲ್ಲತಕ್ಕದ್ದು; ಅದು ಮಹಾ ಪರಿಶುದ್ಧವಾದದ್ದು;
14 : ಆಗ ಯಾಜಕನು ಆ ಪ್ರಾಯಶ್ಚಿತ್ತ ಬಲಿಪ್ರಾಣಿಯ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
15 : ಆಗ ಯಾಜಕನು ಆ ಸೇರು ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು
16 : ತನ್ನ ಬಲಗೈಯ ಬೆರಳನ್ನು ಅದರಲ್ಲಿ ಅದ್ದಿ ಸರ್ವೇಶ್ವರನ ಸನ್ನಿಧಿಯಲ್ಲಿ ಏಳು ಸಾರಿ ಬೆರಳಿನಿಂದ ಚಿಮುಕಿಸಬೇಕು.
17 : ಅವನು ತನ್ನ ಕೈಯಲ್ಲಿರುವ ಮಿಕ್ಕ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಪ್ರಾಯಶ್ಚಿತ್ತ ಬಲಿಪ್ರಾಣಿಯ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಿ
18 : ಕೈಯಲ್ಲಿರುವ ಮಿಕ್ಕ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದುಬಿಡಬೇಕು. ಹೀಗೆ ಯಾಜಕನು ಸರ್ವೇಶ್ವರನ ಸನ್ನಿಧಿಯಲ್ಲಿ ಅವನ ದೋಷವನ್ನು ಪರಿಹರಿಸುವನು.
19 : ಅದಲ್ಲದೆ, ಯಾಜಕನು ಶುದ್ಧಮಾಡಿಸಿಕೊಳ್ಳುವವನ ಅಪವಿತ್ರತೆಯನ್ನು ಹೋಗಲಾಡಿಸು ವುದಕ್ಕೆ ಆ ಕುರಿಯನ್ನು ದೋಷಪರಿಹಾರಕ ಬಲಿಯಾಗಿ ಸಮರ್ಪಿಸಿ ಅವನ ದೋಷವನ್ನು ಪರಿಹರಿಸುವನು. ಆಮೇಲೆ ಯಾಜಕನು ಆ ಎರಡನೆಯ ಟಗರುಮರಿಯನ್ನು ದಹನಬಲಿ ಆಗಿ ವಧಿಸಬೇಕು.
20 : ಅವನು ಆ ದಹನಬಲಿಯನ್ನೂ ನೈವೇದ್ಯವನ್ನೂ ಬಲಿಪೀಠದ ಮೇಲೆ ಸಮರ್ಪಿಸಬೇಕು. ಯಾಜಕನು ಅವನ ಪರವಾಗಿ ಹೀಗೆ ದೋಷಪರಿಹಾರ ಮಾಡಿದಾಗ ಅವನು ಶುದ್ಧನಾಗುವನು.
21 : ಅವನು ಬಡವನಾಗಿದ್ದು ಅಷ್ಟನ್ನು ಸಮರ್ಪಿಸುವುದಕ್ಕೆ ಅಶಕ್ತನಾಗಿದ್ದರೆ ಪ್ರಾಯಶ್ಚಿತ್ತ ಬಲಿಗಾಗಿ ಒಂದು ಟಗರು ಮರಿಯನ್ನು ತಂದು ದೋಷಪರಿಹಾರ ಮಾಡಿಸಿಕೊಳ್ಳಲು (ಯಾಜಕನ ಕೈಯಿಂದ) ನೈವೇದ್ಯವಾಗಿ ಆರತಿಯೆತ್ತಿಸಬೇಕು; ಮತ್ತು ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಕಲಸಿದ ಒಂದು ಕಿಲೋಗ್ರಾಂ ಗೋದಿಹಿಟ್ಟನ್ನೂ ಸುಮಾರು ಕಾಲು ಲೀಟರ್ ಎಣ್ಣೆಯನ್ನೂ ತರಬೇಕು.
22 : ಅದಲ್ಲದೆ ತನ್ನ ಸ್ಥಿತಿಗೆ ತಕ್ಕಂತೆ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ದೋಷಪರಿಹಾರಕ ಬಲಿಯಾಗಿ ಒಂದನ್ನೂ ದಹನ ಬಲಿಯಾಗಿ ಮತ್ತೊಂದನ್ನೂ ಸಮರ್ಪಿಸಬೇಕು.
23 : ಅವನು ತನ್ನ ಶುದ್ಧೀಕರಣಕ್ಕಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಸರ್ವೇಶ್ವರನ ಸನ್ನಿಧಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.
24 : ಯಾಜಕನು ಪ್ರಾಯಶ್ಚಿತ್ತ ಬಲಿಯ ಕುರಿಯನ್ನೂ ಆ ಸೇರು ಎಣ್ಣೆಯನ್ನೂ ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿಯೆತ್ತಬೇಕು.
25 : ಪ್ರಾಯಶ್ಚಿತ್ತ ಬಲಿಯ ಕುರಿಯನ್ನು ವಧಿಸಿದ ನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
26 : ಮತ್ತು ಯಾಜಕನು ಆ ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು
27 : ಅದರಲ್ಲಿ ಸ್ವಲ್ಪವನ್ನು ಬಲಗೈಯ ಬೆರಳಿನಿಂದ ಏಳು ಸಾರಿ ಸರ್ವೇಶ್ವರನ ಸನ್ನಿಧಿಯಲ್ಲಿ ಚಿಮುಕಿಸಬೇಕು.
28 : ಮತ್ತು ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧಿಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತ ಬಲಿಪ್ರಾಣಿಯ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
29 : ಶುದ್ಧಮಾಡಿಸಿಕೊಳ್ಳುವವನ ಪರವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವುದಕ್ಕಾಗಿ ಯಾಜಕನು ತನ್ನ ಕೈಯಲ್ಲಿರುವ ಮಿಕ್ಕ ಎಣ್ಣೆಯನ್ನೆಲ್ಲಾ ಅವನ ತಲೆಯ ಮೇಲೆ ಹೊಯ್ಯಬೇಕು.
30 : ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳಲ್ಲಾಗಲಿ
31 : ಪಾರಿವಾಳದ ಮರಿಗಳಲ್ಲಾಗಲಿ ದೋಷಪರಿಹಾರಕ ಬಲಿಯಾಗಿ ಒಂದನ್ನೂ ಹಾಗು ದಹನಬಲಿಯಾಗಿ ಒಂದನ್ನೂ ನೈವೇದ್ಯದ್ರವ್ಯವನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧಿಮಾಡಿಸಿಕೊಳ್ಳುವವನ ಪರವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.
32 : ಶುದ್ಧೀಕರಣ ಬಲಿಗಳನ್ನು ಅರ್ಪಿಸುವುದಕ್ಕೆ ಗತಿಯಿಲ್ಲದ ಕುಷ್ಠರೋಗಿಯ ವಿಷಯದಲ್ಲಿ ಇದೇ ವಿಧಿಯನ್ನು ಅನುಸರಿಸಬೇಕು. ಕುಷ್ಠ ಹತ್ತಿದ ಮನೆ
33 : ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ -
34 : “ನಿಮಗೆ ಸ್ವದೇಶವಾಗಿ ನಾನು ಕೊಡುವ ಕಾನಾನ್ ನಾಡಿಗೆ ನೀವು ಬಂದ ನಂತರ ಆ ನಾಡಿನ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಸೂಚಿಸುತ್ತೇನೋ
35 : ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು - ‘ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಇರುವಂತೆ ತೋರುತ್ತದೆ’, ಎಂದು ಅವನಿಗೆ ತಿಳಿಸಬೇಕು.
36 : ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವುದಕ್ಕೆ ಮುಂಚೆ ಆ ಮನೆಯನ್ನು ಬರಿದು ಮಾಡಲು ಆಜ್ಞಾಪಿಸಬೇಕು. ಹಾಗೆ ಬರಿದು ಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾಗುವುವು. ಬರಿದುಮಾಡಿದ ಮೇಲೆ ಯಾಜಕನು ಆ ಮನೆಯನ್ನು ಪರೀಕ್ಷಿಸುವುದಕ್ಕೆ ಒಳಗೆ ಹೋಗಬೇಕು.
37 : ಅವನು ಮನೆಯ ಗೋಡೆಗಳಲ್ಲಿರುವ ರೋಗದ ಗುರುತುಗಳನ್ನು ನೋಡುವಾಗ ಆ ಗುರುತುಗಳು ಹಸುರಾಗಿ ಅಥವಾ ಕೆಂಪಾಗಿ ಇದ್ದು ಗೋಡೆಯ ಮಟ್ಟಕ್ಕಿಂತ ತಗ್ಗಾಗಿ ತೋರಿದರೆ ಯಾಜಕನು ಹೊರಗೆ ಬಂದು
38 : ಆ ಮನೆಯನ್ನು ಏಳು ದಿನಗಳವರೆಗೂ ಮುಚ್ಚಿಸಿ ಬಿಡಬೇಕು.
39 : ಏಳನೆಯ ದಿನದಲ್ಲಿ ಯಾಜಕನು ಬಂದು ನೋಡುವಾಗ ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ
40 : ಆ ಗುರುತುಗಳು ಇರುವ ಕಲ್ಲುಗಳನ್ನು ತೆಗಿಸಿಬಿಟ್ಟು ಊರಿನ ಹೊರಗೆ ಅಪವಿತ್ರವಾದ ಸ್ಥಳದಲ್ಲಿ ಹಾಕಿಸಬೇಕು.
41 : ಅದಲ್ಲದೆ ಅವನು ಆ ಮನೆಯ ಗೋಡೆಗಳ ಒಳಗಡೆಯನ್ನೆಲ್ಲಾ ಗೀಚಿಸಿ, ಗೀಚಿದ ಮಣ್ಣನ್ನು ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.
42 : ಆಗ ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ ಹೊಸ ಮಣ್ಣನ್ನು ತರಿಸಿ ಆ ಗೋಡೆಗಳಿಗೆ ಮೆತ್ತಬೇಕು.
43 : ಅವನು ಆ ಕಲ್ಲುಗಳನ್ನು ತೆಗೆಸಿ ಮನೆಯ ಗೋಡೆಗಳನ್ನು ಗೀಚಿಸಿ ಮಣ್ಣು ಮೆತ್ತಿದ ಮೇಲೆ ಆ ರೋಗದ ಗುರುತು ತಿರಿಗಿ ಕಾಣಬಂದರೆ ಯಾಜಕನು ಬಂದು ಪರೀಕ್ಷಿಸಬೇಕು.
44 : ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ ಅದು ಪ್ರಾಣಹಾನಿಕರವಾದ ಕುಷ್ಠವೇ ಸರಿ; ಆ ಮನೆ ಅಶುದ್ಧವಾಗಿರುವುದು.
45 : ಅವನು ಆ ಮನೆಯನ್ನು ಕೆಡವಿ ಅದರ ಎಲ್ಲಾ ಕಲ್ಲುಗಳನ್ನೂ ತೊಲೆಗಳನ್ನೂ ಮಣ್ಣನ್ನೂ ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.
46 : ಆ ಮನೆಯು ಮುಚ್ಚಿರುವ ದಿನಗಳಲ್ಲಿ ಯಾವನಾದರೂ ಒಳಕ್ಕೆ ಹೋದರೆ ಅವನು ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು.
47 : ಆ ಮನೆಯಲ್ಲಿ ಮಲಗಿಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅಲ್ಲಿ ಊಟ ಮಾಡಿದವನೂ ಬಟ್ಟೆಗಳನ್ನು ಒಗೆದುಕೊಳ್ಳಬೇಕು.
48 : ಆದರೆ ತಾನು ಆ ಮನೆಗೆ ಹೊಸದಾಗಿ ಮಣ್ಣು ಮೆತ್ತಿಸಿದ ಮೇಲೆ ಯಾಜಕನು ಬಂದು ನೋಡುವಾಗ ಆ ರೋಗದ ಗುರುತು ಕಾಣಿಸದೆ ಹೋದರೆ ರೋಗಪರಿಹಾರವಾಗಿ ಆ ಮನೆ ಶುದ್ಧವಾಯಿತೆಂದು ನಿರ್ಣಯಿಸಬೇಕು.
49 : ಆ ಮನೆಯ ಶುದ್ಧೀಕರಣಕ್ಕಾಗಿ ಅವನು ಎರಡು ಪಕ್ಷಿಗಳನ್ನೂ ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್‍ಗಿಡದ ಬರಲನ್ನೂ ತೆಗೆದುಕೊಂಡು, ಒಂದು ಪಕ್ಷಿಯನ್ನು
50 : ಒರತೆ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಿ
51 : ಆ ದೇವದಾರಿನ ಕಟ್ಟಿಗೆಯನ್ನೂ ಹಿಸ್ಸೋಪಿನ ಬರಲನ್ನೂ ರಕ್ತವರ್ಣವುಳ್ಳ ದಾರವನ್ನೂ ಸಜೀವವಾದ ಮತ್ತೊಂದು ಪಕ್ಷಿಯನ್ನೂ ತೆಗೆದುಕೊಂಡು ತಾನು ವಧಿಸಿದ ಪಕ್ಷಿಯ ರಕ್ತದಲ್ಲಿಯೂ ಒರತೆಯ ನೀರಿನಲ್ಲಿಯೂ ಅದ್ದಿ ಏಳು ಸಾರಿ ಆ ಮನೆಯ ಗೋಡೆಗಳಿಗೆ ಪ್ರೋಕ್ಷಿಸಬೇಕು.
52 : ಹಾಗೆ ಆ ಪಕ್ಷಿಯ ರಕ್ತ, ಒರತೆ ನೀರು, ಸಜೀವಪಕ್ಷಿ, ದೇವದಾರಿನ ಆ ಕಟ್ಟಿಗೆ, ಹಿಸ್ಸೋಪು, ರಕ್ತವರ್ಣದ ದಾರ ಇವುಗಳಿಂದ ಆ ಮನೆಯನ್ನು ಶುದ್ಧಿಮಾಡುವನು.
53 : ಅವನು ಆ ಜೀವವುಳ್ಳ ಪಕ್ಷಿಯನ್ನು ಊರ ಹೊರಕ್ಕೆ ಅಡವಿಯ ಕಡೆಗೆ ಬಿಟ್ಟುಬಿಡಬೇಕು. ಹೀಗೆ ಅವನು ಆ ಮನೆಗಾಗಿ ದೋಷಪರಿಹಾರ ಮಾಡಿದಾಗ ಅದು ಶುದ್ಧವಾಗಿರುವುದು.
54 : ನಾನಾ ವಿಧವಾದ ಕುಷ್ಠರೋಗದ ಗುರುತುಗಳು, ಅಂದರೆ ಕೂದಲು ಬೆಳೆಯದ ಇಸಬು,
55 : ಬಟ್ಟೆಯಲ್ಲಿ ಅಥವಾ ಮನೆಯ ಗೋಡೆಯಲ್ಲಿ ಕಾಣಿಸುವ ಕುಷ್ಠರೋಗದ ಗುರುತು,
56 : ಶರೀರದ ಚರ್ಮದ ಮೇಲೆ ಉಂಟಾಗುವ ಬಾವು, ಗುಳ್ಳೆ, ಹೊಳೆಯುವ ಕಲೆ
57 : ಇವುಗಳಲ್ಲಿ ಶುದ್ಧಾಶುದ್ಧ ಬೇಧವನ್ನು ನಿರ್ಣಯಿಸುವ ನಿಯಮಗಳು ಇವು.

Holydivine