Leviticus - Chapter 25
Holy Bible

1 : ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಹೇಳಿದರು:
2 : “ಸರ್ವೇಶ್ವರ ನಿಮಗೆ ಕೊಡುವ ನಾಡಿಗೆ ನೀವು ಬಂದಾಗ ಆ ನಾಡು ಸರ್ವೇಶ್ವರನ ಗೌರವಾರ್ಥ ಸಬ್ಬತ್ ವಿಶ್ರಾಂತಿಯನ್ನು ಆಚರಿಸಬೇಕು.
3 : ಆರು ವರ್ಷಗಳು ನೀವು ಹೊಲದಲ್ಲಿ ಬಿತ್ತನೆ ಮಾಡಬಹುದು. ದ್ರಾಕ್ಷಿತೋಟದ ಕೆಲಸವನ್ನು ಮಾಡಬಹುದು. ಹೊಲ ತೋಟಗಳ ಬೆಳೆಗಳನ್ನು ಸಂಗ್ರಹಿಸಬಹುದು.
4 : ಆದರೆ ಏಳನೆಯ ವರ್ಷ ಯಾವ ವ್ಯವಸಾಯವನ್ನೂ ಮಾಡಬಾರದು. ಅದು ವಿಶ್ರಾಂತಿ ಕಾಲವಾಗಿಯೂ ಸರ್ವೇಶ್ವರನ ಗೌರವಾರ್ಥ ಸಬ್ಬತ್ ಕಾಲವಾಗಿಯೂ ಇರಬೇಕು. ಆ ವರ್ಷ ಹೊಲದಲ್ಲಿ ವ್ಯವಸಾಯ ಮಾಡಬಾರದು; ದ್ರಾಕ್ಷೀ ತೋಟದ ಕೆಲಸವನ್ನೂ ಕೈಬಿಡಬೇಕು.
5 : ಹೊಲದಲ್ಲಿ ತಾನಾಗಿ ಬೆಳೆದ ಫಸಲನ್ನು ನೀವು ಕೂಡಿಸಿಟ್ಟುಕೊಳ್ಳಬಾರದು; ತಾನಾಗಿಯೇ ಬೆಳೆದ ದ್ರಾಕ್ಷಿಹಣ್ಣನ್ನು ಶೇಖರಿಸಿಟ್ಟುಕೊಳ್ಳಬಾರದು. ಆ ವರ್ಷ ಪೂರ್ತಿ ಭೂಮಿಗೆ ಸಂಪೂರ್ಣ ವಿಶ್ರಾಂತಿಯಿರಬೇಕು.
6 : ಆದರೆ ಅಂಥ ಸಬ್ಬತ್ ಸಂವತ್ಸರದಲ್ಲಿ ಭೂಮಿ ತಾನಾಗಿಯೇ ಬೆಳೆದದ್ದು ನಿಮಗೆ, ನಿಮ್ಮ ದಾಸ ದಾಸಿಯರಿಗೆ, ಕೂಲಿಯವರಿಗೆ
7 : ಮತ್ತು ನಿಮ್ಮಲ್ಲಿ ತಂಗಿರುವ ಪರದೇಶೀಯರಿಗೆ ಹಾಗು ನಿಮ್ಮ ಪಶುಪ್ರಾಣಿಗಳಿಗೆ ಮತ್ತು ನಾಡಿನ ಕಾಡು ಮೃಗಗಳಿಗೆ ಆಹಾರವಾಗಬಹುದು.
8 : “ಅದಲ್ಲದೆ, ಏಳುವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ಸಂವತ್ಸರಗಳ ಕಾಲ, ಅಂದರೆ ನಾಲ್ವತ್ತೊಂಬತ್ತು ವರ್ಷಗಳು ಕಳೆದ ಮೇಲೆ
9 : ಏಳನೆಯ ತಿಂಗಳಿನ ಹತ್ತನೆಯ ದಿವಸ ನಿಮ್ಮ ನಾಡಿನಲ್ಲೆಲ್ಲಾ ಕೊಂಬೂದಿಸಬೇಕು.
10 : ನೀವು ಆ ಐವತ್ತನೆಯ ವರ್ಷವನ್ನು ದೇವರಿಗೆ ವಿೂಸಲಾದ ವರ್ಷವೆಂದು ಭಾವಿಸಬೇಕು. ಆ ವರ್ಷ ನಾಡಿನ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂದು ಸಾರಬೇಕು. ಅದು ‘ಜೂಬಿಲಿ’ ಸಂವತ್ಸರವಾದುದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಹಾಗು ಸ್ವಜನರ ಬಳಿಗೂ ಹೋಗಿ ಇರಬಹುದು.
11 : ಆ ಐವತ್ತನೆಯ ವರ್ಷದಲ್ಲಿ, ಅಂದರೆ ‘ಜೂಬಿಲಿ’ ಸಂವತ್ಸರದಲ್ಲಿ ನೀವು ಬಿತ್ತನೆ ಮಾಡಬಾರದು; ತಾನಾಗಿ ಬೆಳೆದ ಫಸಲನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ಕೃಷಿಮಾಡದೆ ಬಿಟ್ಟ ದ್ರಾಕ್ಷಿತೋಟದ ಹಣ್ಣನ್ನು ಸಂಗ್ರಹಿಸಬಾರದು.
12 : ಅದು ಜೂಬಿಲಿ ವರ್ಷವಾದುದರಿಂದ ನೀವು ಅದನ್ನು ವಿೂಸಲಾದದ್ದೆಂದು ಭಾವಿಸಬೇಕು. ಹೊಲದಲ್ಲಿ ತಾನಾಗಿ ಬೆಳೆದದ್ದನ್ನು ಊಟಮಾಡಬಹುದು.
13 : ಜೂಬಿಲಿ ವರ್ಷದಲ್ಲಿ ನಿಮ್ಮ ನಿಮ್ಮ ಸ್ವಂತ ಭೂಮಿಗಳು ಮರಳಿ ನಿಮ್ಮ ವಶಕ್ಕೆ ಬರುವುವು.
14 : ನೀವು ಸ್ಥಿರಸೊತ್ತನ್ನು ಸ್ವದೇಶದವರೊಡನೆ ಕ್ರಯ-ವಿಕ್ರಯ ಮಾಡುವಾಗ ಇದರ ವಿಷಯದಲ್ಲಿ ಅನ್ಯಾಯ ಮಾಡಬಾರದು.
15 : ಕಳೆದ ಜೂಬಿಲಿ ವರ್ಷದಿಂದ ಇಷ್ಟು ವರ್ಷ ಆಯಿತೆಂದು ಲೆಕ್ಕಿಸಿ ಸ್ವದೇಶದವನಿಂದ ಕ್ರಯಕ್ಕೆ ತೆಗೆದುಕೊಳ್ಳಬೇಕು; ಅಂತೆಯೇ ಮಾರುವವನು ಇಷ್ಟು ವರ್ಷಗಳ ಬೆಳೆಯಾಯಿತೆಂದು ಲೆಕ್ಕಿಸಿ ಕ್ರಯಕ್ಕೆ ಕೊಡಬೇಕು.
16 : ಮುಂದಣ ಜೂಬಿಲಿ ಸಂವತ್ಸರದ ತನಕ ಹೆಚ್ಚು ವರ್ಷಗಳಾದರೆ ಭೂಮಿಯ ಕ್ರಯವನ್ನು ಹೆಚ್ಚಿಸಬೇಕು; ಕಡಿಮೆಯಾದರೆ ತಗ್ಗಿಸಬೇಕು. ಏಕೆಂದರೆ ಮಾರುವವನು ಭೂಮಿಯನ್ನಲ್ಲ, ಬೆಳೆಗಳನ್ನು ಲೆಕ್ಕಿಸಿ ಮಾರುತ್ತಾನಷ್ಟೆ.
17 : ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡಬಾರದು. ನಿಮ್ಮ ದೇವರಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರ.
18 : “ನನ್ನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು. ಆಗ ನೀವು ನಾಡಿನಲ್ಲಿ ನಿರ್ಭಯವಾಗಿ ಬಾಳುವಿರಿ.
19 : ನಿಮ್ಮ ಭೂಮಿ ಫಲವತ್ತಾಗುವುದು; ನಿಮಗೆ ಸಮೃದ್ಧಿಯಾದ ಊಟ ದೊರಕುವುದು ಮತ್ತು ಆ ನಾಡಿನಲ್ಲಿ ನಿರ್ಭಯವಾಗಿ ವಾಸಮಾಡುವಿರಿ.
20 : ಆದರೆ ಆ ಏಳನೆಯ ವರ್ಷದಲ್ಲಿ ಬಿತ್ತನೆ ಮಾಡುವುದಕ್ಕಾಗಲಿ, ಬೆಳೆದದ್ದನ್ನು ಕೂಡಿಸಿಟ್ಟು ಕೊಳ್ಳುವುದಕ್ಕಾಗಲಿ ಅಪ್ಪಣೆಯಿರುವುದಿಲ್ಲ. ಹಾಗಾದರೆ ಆ ವರ್ಷ ಏನು ತಿನ್ನಬೇಕೆಂದು ವಿಚಾರಿಸುತ್ತಿರೋ? ನಾನು ಹೇಳುವುದನ್ನು ಕೇಳಿ:
21 : ಆರನೆಯ ವರ್ಷದ ಬೆಳೆ ನನ್ನ ಪೂರ್ಣಾನು ಗ್ರಹದಿಂದ ಮೂರು ವರ್ಷಗಳ ಬೆಳೆಯಷ್ಟಾಗುವುದು.
22 : ಎಂಟನೆಯ ವರ್ಷದಲ್ಲಿ ಬಿತ್ತನೆ ಮಾಡಿ ಅದರ ಬೆಳೆ ದೊರೆಯುವ ತನಕ, ಅಂದರೆ ಒಂಬತ್ತನೆಯ ವರ್ಷದವರೆಗೆ ಹಿಂದಿನ ಬೆಳೆಯಿಂದಲೇ ಜೀವನ ಮಾಡುವಿರಿ.
23 : “ಭೂಮಿಯನ್ನು ಶಾಶ್ವತವಾಗಿ ವಿಕ್ರಯಿಸಿ ಬಿಡಬಾರದು. ಏಕೆಂದರೆ ಭೂಮಿ ನನ್ನದು. ನೀವಾದರೋ ಪರವಾಸಿಗಳು, ನನ್ನ ಆಶ್ರಯದಲ್ಲಿ ತಂಗಿರುವವರು.
24 : “ನಿಮ್ಮಲ್ಲಿ ಮತ್ತೊಬ್ಬನ ಸೊತ್ತು ನಿಮ್ಮ ವಶಕ್ಕೆ ಬಂದರೆ ಅದನ್ನು ಈಡುಕೊಟ್ಟು ಬಿಡಿಸಿಕೊಳ್ಳುವ ಹಕ್ಕು, ಕೊಟ್ಟವನಿಗೆ ಇರಬೇಕು.
25 : ನಿಮ್ಮ ಸ್ವಜನರಲ್ಲಿ ಒಬ್ಬನು ಬಡವನಾಗಿ ತನ್ನ ಭೂಮಿಯನ್ನು ಏನಾದರು ಮಾರಿಕೊಂಡರೆ ಅವನ ಸವಿೂಪ ನೆಂಟನು ಇದನ್ನು ಬಿಡಿಸಿಕೊಳ್ಳಬೇಕು.
26 : ಬಿಡಿಸಬಲ್ಲ ನೆಂಟನು ಇಲ್ಲದೆ ಹೋದರೆ, ಮಾರಿದವನೇ ಮತ್ತೆ ಬಿಡಿಸಿಕೊಳ್ಳುವಷ್ಟು ಉತ್ತಮ ಸ್ಥಿತಿಗೆ ಬಂದರೆ,
27 : ಆ ಭೂಮಿಯನ್ನು ಮಾರಿದಂದಿನಿಂದ ಕಳೆದ ವರ್ಷಗಳನ್ನು ಬಿಟ್ಟು, ಉಳಿದ ಅವಧಿಗೆ ಕ್ರಯ ಕೊಟ್ಟು ತನ್ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು.
28 : ಅವನು ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗದೆ ಹೋದರೆ ಅದು ಜೂಬಿಲಿ ಸಂವತ್ಸರದ ತನಕ ಕೊಂಡುಕೊಂಡವನ ವಶದಲ್ಲೇ ಇರಬೇಕು. ಜೂಬಿಲಿ ವರ್ಷದಲ್ಲಿ ಅದು ಬಿಡುಗಡೆಯಾಗುವುದು. ಆಗ ಆ ಭೂಮಿ ಮರಳಿ ಅವನ ವಶಕ್ಕೆ ಬರುವುದು.
29 : “ಯಾವನಾದರು ಕೋಟೆಯಿರುವ ಪಟ್ಟಣದ ಮನೆಯನ್ನು ಮಾರಿದರೆ ಅದನ್ನು ಮಾರಿದ ದಿನದಿಂದ ಒಂದು ವರ್ಷಪೂರ್ತಿ ಆಗುವುದರೊಳಗೆ ಈಡುಕೊಟ್ಟು ಬಿಡಿಸಬಹುದು. ಒಂದು ವರ್ಷಪೂರ್ತಿ ಅದನ್ನು ಬಿಡಿಸುವ ಹಕ್ಕು ಅವನಿಗೆ ಇರುವುದು.
30 : ಕೋಟೆಯಿರುವ ಪಟ್ಟಣದ ಆ ಮನೆಯನ್ನು ಒಂದು ವರ್ಷದೊಳಗೆ ಬಿಡಿಸಲು ಆಗದೆ ಹೋದರೆ ಅದು ಜೂಬಿಲಿ ಸಂವತ್ಸರದಲ್ಲೂ ಬಿಡುಗಡೆ ಆಗದೆ ಕ್ರಯಕೊಟ್ಟವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ಉಳಿಯುವುದು.
31 : ಕೋಟೆಯಿಲ್ಲದ ಊರುಗಳಲ್ಲಿರುವ ಮನೆಗಳಲ್ಲಿ ಬಯಲಿನ ಹೊಲಗಳಂತೆ ಎಣಿಸಬೇಕು. ಅವುಗಳನ್ನು ಬಿಡಿಸಿಕೊಳ್ಳುವ ಹಕ್ಕು ಇರುವುದು. ಜೂಬಿಲಿ ಸಂವತ್ಸರದಲ್ಲಿ ಅವು ಬಿಡುಗಡೆಯಾಗುವುವು.
32 : ಆದರೆ ಲೇವಿಯರ ಸೊತ್ತಾಗಿ ಇರುವ ಪೇಟೆಗಳಲ್ಲಿನ ಮನೆಗಳು ಮಾರಲ್ಪಟ್ಟರೆ ಅವುಗಳನ್ನು ಬಿಡಿಸಿಕೊಳ್ಳುವ ಹಕ್ಕು ಲೇವಿಯರಿಗೆ ಯಾವಾಗಲು ಇರುವುದು.
33 : ಲೇವಿಯರಲ್ಲಿ ಯಾರೂ ಅದನ್ನು ಬಿಡಿಸದೆ ಹೋದರೆ ಲೇವಿಯರ ಸೊತ್ತಾದ ಅಂಥ ಪೇಟೆಮನೆ ಮಾರಾಟವಾಗಿ ಇದ್ದರೂ ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆ ಆಗುವುದು. ಏಕೆಂದರೆ ಇಸ್ರಯೇಲರ ಮಧ್ಯೆ ಇರುವ ಲೇವಿಯರ ಪೇಟೆಮನೆಗಳು ಅವರ ಶಾಶ್ವತ ಸೊತ್ತು.
34 : ವರು ತಮ್ಮ ಪೇಟೆಗಳಿಗೆ ಸೇರಿರುವ ಹುಲ್ಲುಗಾವಲನ್ನು ಮಾರಲೇಕೂಡದು. ಅದು ಅವರಿಗೆ ಶಾಶ್ವತವಾದ ಸೊತ್ತು.
35 : “ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ ನೀವು ಅವನನ್ನು ನಿಮ್ಮ ನಡುವೆ ತಂಗಿರುವ ಆಗಂತುಕನೆಂದು ಭಾವಿಸಿ ಸಹಾಯಮಾಡಬೇಕು.
36 : ಅವನಿಂದ ಬಡ್ಡಿಯನ್ನಾಗಲಿ, ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ನೀವು ದೇವರಲ್ಲಿ ಭಯಭಕ್ತಿಯಿಟ್ಟು, ಅವನು ನಿಮ್ಮ ಬಳಿಯಲ್ಲಿ ಬದುಕುವಂತೆ ನೋಡಿಕೊಳ್ಳಬೇಕು.
37 : ನೀವು ಅವನಿಗೆ ಸಾಲಕೊಟ್ಟರೆ ಲಾಭ ಕೇಳಬೇಡಿ
38 : ನಾನು ನಿಮ್ಮ ದೇವರಾದ ಸರ್ವೇಶ್ವರ. ನಿಮಗೆ ದೇವರಾಗಿರಲು, ನಿಮಗೆ ಕಾನಾನ್ ನಾಡನ್ನು ನೀಡಲು, ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದವನು ನಾನೇ.
39 : “ನಿಮ್ಮಲ್ಲಿ ಒಬ್ಬ ಸಹೋದರನು ಬಡವನಾಗಿ ತನ್ನನ್ನೇ ಮಾರಿಕೊಂಡರೆ ಅವನನ್ನು ಗುಲಾಮನಂತೆ ನಡೆಸಿಕೊಳ್ಳಬಾರದು.
40 : ಅವನು ಕಾರ್ಮಿಕನಂತೆ, ಆಗಂತುಕನಂತೆ ನಿಮ್ಮ ಬಳಿಯಲ್ಲೆ ಇದ್ದು, ಜೂಬಿಲಿ ಸಂವತ್ಸರದ ತನಕ ನಿಮ್ಮ ಸೇವೆ ಮಾಡಲಿ.
41 : ಆಗ ಅವನನ್ನೂ ಅವನ ಮಕ್ಕಳನ್ನೂ ಬಿಡುಗಡೆಮಾಡಬೇಕು; ಆಗ ಅವನು ಸ್ವಜನರ ಬಳಿಗೂ ಪಿತ್ರಾರ್ಜಿತ ಸೊತ್ತಿಗೂ ಹಿಂದಿರುಗಬಹುದು.
42 : ಅಂಥವರು ನನಗೇ ದಾಸರು. ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದೆ. ಗುಲಾಮರನ್ನು ಮಾರುವಂತೆ ನೀವು ಅವರನ್ನು ವಿಕ್ರಯಿಸಬಾರದು.
43 : ಅವರಿಂದ ಕಠಿಣವಾದ ಸೇವೆಮಾಡಿಸಿ ಕೊಳ್ಳಬಾರದು. ನಿಮ್ಮ ದೇವರಲ್ಲಿ ಭಯ ಭಕ್ತಿ ಇರಲಿ.
44 : ಗುಲಾಮಗಿರಿಗಾಗಿ ನಿಮಗೆ ಸ್ತ್ರೀ ಪುರುಷರು ಬೇಕಾದರೆ ಸುತ್ತಮುತ್ತಲಿರುವ ಅನ್ಯರನ್ನು ಕೊಂಡುಕೊಳ್ಳಬಹುದು;
45 : ನಿಮ್ಮ ನಡುವೆ ಇರುವ ಪರವಾಸಿಗಳನ್ನೂ ನಿಮ್ಮ ನಾಡಿನಲ್ಲೇ ಅವರಿಂದ ಹುಟ್ಟಿದವರನ್ನೂ ಕೊಂಡುಕೊಳ್ಳಬಹುದು. ಅಂಥವರು ನಿಮಗೆ ಸೊತ್ತಾಗಬಹುದು.
46 : ಅಂಥವರನ್ನು ಸ್ವಾಧೀನಪಡಿಸಿಕೊಂಡು ನಿಮ್ಮ ತರುವಾಯ ನಿಮ್ಮ ಸಂತತಿಯವರಿಗೆ ಶಾಶ್ವತ ಸೊತ್ತಾಗಿ ಕೊಟ್ಟುಬಿಡಬಹುದು. ಅವರನ್ನು ಜೀತದಾರರನ್ನಾಗಿ ಮಾಡಿಕೊಳ್ಳಬಹುದು. ಆದರೆ ಇಸ್ರಯೇಲರಾದ ನೀವೆಲ್ಲರು ಸಹೋದರರು. ಆದುದರಿಂದ ಒಬ್ಬರಿಂದೊಬ್ಬರು ಕ್ರೂರವಾಗಿ ಸೇವೆ ಮಾಡಿಸಿಕೊಳ್ಳಬಾರದು.
47 : “ನಿಮ್ಮ ಸಹೋದರರಲ್ಲಿ ಒಬ್ಬನು ಬಡವನಾಗಿ ನಿಮ್ಮ ನಡುವೆ ಮನೆಮಾಡಿಕೊಂಡ ಧನವಂತನಾದ ಅನ್ಯದೇಶದವನಿಗಾಗಲಿ, ಅವನಿಗೆ ಸೇರಿದವನಿಗಾಗಲಿ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ಬಿಡುಗಡೆಯಾಗಬಹುದು.
48 : ಅವನ ಬಂಧುಗಳಲ್ಲಿ ಯಾರಾದರೂ ಈಡುಕೊಟ್ಟು ಅವನನ್ನು ಬಿಡಿಸಬಹುದು.
49 : ಅವನ ದೊಡ್ಡಪ್ಪ ಚಿಕ್ಕಪ್ಪಂದಿರಾಗಲಿ, ಇವರ ಮಕ್ಕಳಾಗಲಿ ಅಥವಾ ಸವಿೂಪ ಬಂಧುಗಳಲ್ಲಿ ಯಾರೇ ಆಗಲಿ ಈಡುಕೊಟ್ಟು ಅವನನ್ನು ಬಿಡಿಸಬಹುದು. ಬೇಕಾದಷ್ಟು ಹಣವು ದೊರೆತರೆ ತನ್ನನ್ನು ತಾನೇ ಬಿಡಿಸಿಕೊಳ್ಳಬಹುದು.
50 : ಅವನು ತನ್ನನ್ನು ಮಾರಿಕೊಂಡ ವರ್ಷ ಮೊದಲುಗೊಂಡು ಮುಂದೆ ಜೂಬಿಲಿ ಸಂವತ್ಸರದ ತನಕ ದಣಿಯ ಸಂಗಡ ವರ್ಷಗಳ ಲೆಕ್ಕವನ್ನು ಮಾಡಿ ಆ ಲೆಕ್ಕದ ಮೇರೆಗೆ ಬಿಡುಗಡೆಯ ಕ್ರಯವನ್ನು ಕೊಡಬೇಕು. ಕೂಲಿಯವನ ವಿಷಯದಲ್ಲಿ ಲೆಕ್ಕಿಸುವಂತೆ ಅವನ ವಿಷಯದಲ್ಲಿ ಲೆಕ್ಕಿಸಬೇಕು.
51 : ಜೂಬಿಲಿ ಸಂವತ್ಸರವು ಬರುವುದಕ್ಕೆ ಇನ್ನು ಅನೇಕ ವರ್ಷಗಳಿದ್ದರೆ ಹೆಚ್ಚು ಭಾಗವನ್ನೂ
52 : ಕೆಲವು ವರ್ಷಗಳು ಮಾತ್ರ ಉಳಿದರೆ ಸ್ವಲ್ಪ ಭಾಗವನ್ನೂ ದಣಿಗೆ ಕೊಟ್ಟು ತನ್ನನ್ನು ಬಿಡಿಸಿಕೊಳ್ಳಬೇಕು.
53 : ಅವನು ವರುಷ ವರುಷಕ್ಕೆ ಗೊತ್ತುಮಾಡಿಕೊಂಡ ಕೂಲಿಯವನಂತೆಯೇ ದಣಿಯ ಬಳಿಯಲ್ಲಿರಬೇಕು. ಆ ದಣಿ ಅವನಿಂದ ಕಠಿಣವಾಗಿ ಸೇವೆ ಮಾಡಿಸಿ ಕೊಳ್ಳುವುದನ್ನು ನೀವು ನೋಡಿ ಸುಮ್ಮನೆ ಇರಬಾರದು.
54 : ಮೇಲೆ ಹೇಳಿದ ರೀತಿಯಲ್ಲಿ ಅವನು ಬಿಡಿಸಿಕೊಳ್ಳದೆ ಹೋದರೆ ಜೂಬಿಲಿ ಸಂವತ್ಸರದಲ್ಲಿ ಅವನೂ ಅವನ ಮಕ್ಕಳೂ ಬಿಡುಗಡೆಯಾಗಬೇಕು.
55 : ಕೆಂದರೆ ಇಸ್ರಯೇಲರು ನನ್ನ ದಾಸರೇ; ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದೆನಲ್ಲವೇ? ನಾನು ನಿಮ್ಮ ದೇವರಾದ ಸರ್ವೇಶ್ವರ.

Holydivine