Leviticus - Chapter 17
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆ ಎಂದರು:
2 : “ನೀನು ಆರೋನನಿಗೂ ಅವನ ಮಕ್ಕಳಿಗೂ ಹಾಗು ಇಸ್ರಯೇಲರಿಗೂ ಹೇಳಬೇಕಾದುದು ಇದು:
3 : ಇಸ್ರಯೇಲರಲ್ಲಿ ಯಾರಾದರು ಹೋರಿಯನ್ನಾಗಲಿ, ಕುರಿಯನ್ನಾಗಲಿ, ಆಡನ್ನಾಗಲಿ ಬಲಿಕೊಡುವಾಗ ಅದನ್ನು ಸರ್ವೇಶ್ವರನಿಗೆ ಸಮರ್ಪಿಸಲು ದೇವ ಗುಡಾರದ ಬಾಗಿಲಿಗೆ ತರದೆ
4 : ಪಾಳೆಯದ ಒಳಗಾಗಲಿ, ಹೊರಗಾಗಲಿ ಕೊಯ್ದರೆ ಅಂಥವನನ್ನು ಕೊಲೆಪಾತ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದ್ದರಿಂದ ಕುಲದಿಂದ ಬಹಿಷ್ಕøತನಾಗಬೇಕು.
5 : ಏಕೆಂದರೆ ಬಲಿಪ್ರಾಣಿಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ, ಯಾಜಕನ ಬಳಿಗೆ ತಂದು ಸರ್ವೇಶ್ವರನ ಮುಂದೆ ಶಾಂತಿ ಸಮಾಧಾನದ ಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
6 : ಯಾಜಕನು ಅವುಗಳ ರಕ್ತವನ್ನು ದೇವದರ್ಶನದ ಗುಡಾರದ ಬಾಗಿಲಿನ ಮುಂದಿರುವ ಬಲಿಪೀಠಕ್ಕೆ ಚಿಮುಕಿಸಿ, ಅವುಗಳ ಕೊಬ್ಬನ್ನು ಹೋಮಮಾಡಿ, ಸರ್ವೇಶ್ವರನಿಗೆ ಸುವಾಸನೆಯನ್ನುಂಟು ಮಾಡಬೇಕು.
7 : ಅವರು ಇದುವರೆಗೆ ಪೂಜಿಸುತ್ತಿದ್ದ ಅಜ ದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಅವರ ಸಂತತಿಯವರಿಗೂ ಇದು ಶಾಶ್ವತ ನಿಯಮ.
8 : “ಇದಲ್ಲದೆ ನೀನು ಅವರಿಗೆ ಹೀಗೆಂದು ಆಜ್ಞಾಪಿಸು: ಇಸ್ರಯೇಲರಲ್ಲಿ ಆಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಿ ಆಗಲಿ ಯಾವನಾದರು ದಹನಬಲಿಯನ್ನು ಅಥವಾ ಬೇರೆ ವಿಧವಾದ ಬಲಿದಾನವನ್ನು ಮಾಡುವಾಗ
9 : ಆ ಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲಿಗೆ ತರದಿದ್ದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.
10 : “ಅಷ್ಟು ಮಾತ್ರವಲ್ಲ, ಇಸ್ರಯೇಲರಲ್ಲಾಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಾಗಲಿ ಯಾರಾದರು ರಕ್ತಭೋಜನ ಮಾಡಿದರೆ ಸರ್ವೇಶ್ವರ ಅಂಥ ವ್ಯಕ್ತಿಯ ವಿರುದ್ಧ ಉಗ್ರಕೋಪಗೊಳ್ಳುವರು; ಅವನನ್ನು ತನ್ನ ಪ್ರಜೆಯಿಂದ ತೆಗೆದುಹಾಕುವರು.
11 ಏಕೆಂದರೆ ದೇಹಕ್ಕೆ ರಕ್ತವೇ ಪ್ರಾಣಾಧಾರ. ಆ ರಕ್ತವನ್ನು ನೀವು ಬಲಿಪೀಠಕ್ಕೆ ಪ್ರೋಕ್ಷಿಸಿ ನಿಮ್ಮ ನಿಮ್ಮ ದೋಷ ಪರಿಹಾರ ಮಾಡಿಕೊಳ್ಳಬೇಕೆಂದು ಸರ್ವೇಶ್ವರ ಅನುಗ್ರಹಿಸಿದ್ದಾರೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದೆ.
12 : ಎಂದೇ ನಿಮ್ಮಲ್ಲಿಯಾಗಲಿ, ನಿಮ್ಮ ನಡುವೆ ವಾಸಮಾಡುವ ಅನ್ಯದೇಶೀಯವರಲ್ಲಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಸರ್ವೇಶ್ವರ ಇಸ್ರಯೇಲರಿಗೆ ಆಜ್ಞಾಪಿಸಿದ್ದಾರೆ.
13 “ಇಸ್ರಯೇಲರಲ್ಲಾಗಲಿ ಅವರ ನಡುವೆ ವಾಸಮಾಡುವ ಅನ್ಯದೇಶೀಯರಲ್ಲಾಗಲಿ ಯಾರಾದರು ಬೇಟೆಮಾಡಿ ತಿನ್ನಬಹುದಾದ ಪ್ರಾಣಿಯನ್ನು ಅಥವಾ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿದು ಮಣ್ಣಿನಿಂದ ಮುಚ್ಚಿಡಬೇಕು.
14 : ಏಕೆಂದರೆ ಪ್ರತಿ ದೇಹಕ್ಕೂ ರಕ್ತವೇ ಪ್ರಾಣಾಧಾರ. ಆದಕಾರಣ ಸರ್ವೇಶ್ವರ ಇಸ್ರಯೇಲರಿಗೆ, ‘ಪ್ರತಿ ಪ್ರಾಣಿಗೂ ರಕ್ತವೇ ಪ್ರಾಣಾಧಾರವಾದ್ದರಿಂದ ನೀವು ಯಾವಾ ವಿಧವಾದ ಪ್ರಾಣಿಯ ರಕ್ತವನ್ನೂ ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರ ಹಾಕಬೇಕು,’ ಎಂದು ಆಜ್ಞಾಪಿಸಿದ್ದಾರೆ.
15 : “ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗ ಕೊಂದದ್ದನ್ನಾಗಲಿ ತಿಂದವನು ಸ್ವದೇಶದವನಾಗಿರಲಿ, ಅಥವಾ ಅನ್ಯದೇಶೀಯನಾಗಿರಲಿ ಅಂಥವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಆ ದಿನದ ಸಂಜೆಯವರೆಗೆ ಅಶುದ್ಧನಾಗಿದ್ದು ಬಳಿಕ ಶುದ್ಧನಾಗುವನು.
16 : ಅವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳದೆ ಹಾಗು ಸ್ನಾನಮಾಡಿಕೊಳ್ಳದೆ ಹೋದರೆ ತನ್ನ ಪಾಪದ ಫಲವನ್ನು ಅನುಭವಿಸಬೇಕು.”

Holydivine