Leviticus - Chapter 18
Holy Bible

1 : ಇಸ್ರಯೇಲರಿಗೆ ಈ ಆಜ್ಞೆಗಳನ್ನು ಕೊಡಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ತಿಳಿಸಿದರು:
2 : “ನಾನು ನಿಮ್ಮ ದೇವರಾಗಿರುವ ಸರ್ವೇಶ್ವರ.
3 : ನೀವು ವಾಸವಾಗಿದ್ದ ಈಜಿಪ್ಟಿನ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಕರೆದೊಯ್ಯುತ್ತಿರುವ ಕಾನಾನ್ ನಾಡಿನ ಆಚರಣೆಗಳನ್ನು ಕೂಡ ನೀವು ಅನುಸರಿಸಬಾರದು. ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಕೂಡದು.
4 : ಸರ್ವೇಶ್ವರನೆಂಬ ನಾನೇ ನಿಮ್ಮ ದೇವರಾಗಿರುವುದರಿಂದ ನನ್ನ ನಿರ್ಣಯಗಳ ಪ್ರಕಾರವೇ ನೀವು ನಡೆಯಬೇಕು; ನನ್ನ ವಿಧಿಗಳನ್ನೇ ಅನುಸರಿಸಬೇಕು.
5 : ನನ್ನ ಆಜ್ಞಾವಿಧಿಗಳ ಪ್ರಕಾರ ನಡೆದುಕೊಳ್ಳುವವರು ಆ ಆಜ್ಞಾವಿಧಿಗಳಿಂದ ಜೀವಿಸುವರು. ಆದುದರಿಂದ ನೀವು ಅವುಗಳನ್ನೇ ಅನುಸರಿಸಬೇಕು. ನಾನೇ ಸರ್ವೇಶ್ವರ.
6 : “ನಿಮ್ಮಲ್ಲಿ ಯಾರೂ ರಕ್ತಸಂಬಂಧವುಳ್ಳವರೊಡನೆ ಮೈಗೂಡಿಸಕೂಡದು; ನಾನೇ ಸರ್ವೇಶ್ವರ.
7 : ನಿನ್ನ ತಂದೆಯೊಡನೆ ಆಗಲಿ, ತಾಯಿಯೊಡನೆ ಆಗಲಿ ಸಂಭೋಗಿಸಕೂಡದು. ತಾಯಿಯೊಡನೆ ಎಷ್ಟು ಮಾತ್ರವೂ ಸಂಗಮಿಸಬಾರದು. ಆಕೆ ನಿನ್ನ ಹೆತ್ತ ತಾಯಿ
8 : “ಮಲತಾಯಿಯನ್ನು ಸಂಭೋಗಿಸಬಾರದು; ಹಾಗೆ ಮಾಡಿದರೆ ತಂದೆಗೆ ಮಾನಭಂಗವಾಗುವುದು. ಆಕೆ ನಿನ್ನ ತಂದೆಯ ಅರ್ಧಾಂಗಿ.
9 : “ತಂದೆಯ ಮಗಳನ್ನಾಗಲಿ, ತಾಯಿಯ ಮಗಳನ್ನಾಗಲಿ ಸಂಭೋಗಿಸಬಾರದು; ಅವರು ಒಡಹುಟ್ಟಿದವರು; ಪರಸ್ತ್ರೀಯರಲ್ಲಿ ಹುಟ್ಟಿದವರಾದರೂ ಅವರು ನಿಮಗೆ ಅಕ್ಕತಂಗಿಯರು.
10 : “ಮಗನ ಮಗಳನ್ನಾಗಲಿ ಮಗಳ ಮಗಳನ್ನಾಗಲಿ ಸಂಭೋಗಿಸಬಾರದು; ಅವರು ನಿಮಗೆ ಮಕ್ಕಳಂಥವರು.
11 : “ತಂದೆಯ ಮತ್ತೊಬ್ಬ ಹೆಂಡತಿಯಲ್ಲಿ ಹುಟ್ಟಿದವಳನ್ನು ಸಂಭೋಗಿಸಬಾರದು; ಆಕೆ ಸಹೋದರಿ.
12 : “ತಂದೆಯ ಒಡಹುಟ್ಟಿದವಳೊಡನೆ ಸಂಭೋಗ ಮಾಡಬಾರದು; ಆಕೆ ತಂದೆಯ ರಕ್ತಸಂಬಂಧಿ.
13 : “ತಾಯಿಯ ಒಡಹುಟ್ಟಿದವಳೊಡನೆ ಸಂಭೋಗ ಮಾಡಬಾರದು; ಆಕೆ ತಾಯಿಯ ರಕ್ತಸಂಬಂಧಿ.
14 : “ತಂದೆಯ ಅಣ್ಣತಮ್ಮಂದಿರ ಹೆಂಡತಿಯನ್ನು ಸಂಭೋಗಿಸಬಾರದು; ಅವರು ದೊಡ್ಡಮ್ಮ, ಚಿಕ್ಕಮ್ಮ ನಿಮಗೆ.
15 : “ಸೊಸೆಯನ್ನು ಸಂಗಮಿಸಬಾರದು; ಆಕೆ ಮಗನ ಹೆಂಡತಿ.
16 : “ಅತ್ತಿಗೆ ನಾದಿನಿಯರನ್ನು ಸಂಭೋಗಿಸಬಾರದು; ಅವರು ಅಣ್ಣತಮ್ಮಂದಿರ ಹೆಂಡತಿಯರು.
17 : “ಮದುವೆ ಮಾಡಿಕೊಂಡವಳ ಮಗಳನ್ನು ಆಗಲಿ ಮೊಮ್ಮಗಳನ್ನಾಗಲಿ ಸಂಗಮಿಸಬಾರದು. ಅವರು ರಕ್ತಸಂಬಂಧಿಗಳು, ಅದು ಅಧರ್ಮ.
18 : “ಹೆಂಡತಿ ಜೀವಂದಿದಿರುವಾಗಲೆ ಆಕೆಯ ಒಡಹುಟ್ಟಿದವಳನ್ನು ಮದುವೆಮಾಡಿಕೊಂಡು ಹೆಂಡತಿಗೆ ಮನಸ್ತಾಪವನ್ನುಂಟು ಮಾಡಬಾರದು.
19 : “ಮುಟ್ಟಿನಿಂದ ಅಶುದ್ಧಳಾದ ಮಹಿಳೆಯನ್ನು ಸಂಗಮಿಸಬಾರದು
20 : ಪರಸ್ತ್ರೀ ಸಂಭೋಗದಿಂದ ಅಶುದ್ಧರಾಗಬಾರದು.
21 : ನಿಮ್ಮ ಮಕ್ಕಳಲ್ಲಿ ಯಾರನ್ನೂ ಮೋಲೆಕ ದೇವತೆಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ಸರ್ವೇಶ್ವರ ನಾನೇ.
22 : ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಹೇಸಿಗೆಯಾದುದು.
23 : ಪ್ರಾಣಿ ಸಂಗಮವನ್ನು ಮಾಡಿ ಅಶುದ್ಧರಾಗಬಾರದು; ಯಾವ ಸ್ತ್ರೀಯೂ ಸಂಗಮಕ್ಕಾಗಿ ಪ್ರಾಣಿಯನ್ನು ಸಂಪರ್ಕಿಸಬಾರದು; ಅದು ವ್ಯತಿರಿಕ್ತವಾದುದು.
24 : “ಇಂಥ ದುರಾಚಾರಗಳಾವುದರಿಂದಲೂ ನೀವು ಅಶುದ್ಧರಾಗಬಾರದು. ಏಕೆಂದರೆ ನಾನು ನಿಮಗೆ ಮುಂಚಿತವಾಗಿ ಹೊರಡಿಸುವ ಜನಾಂಗಗಳವರು ಇಂಥ ಅನಾಚಾರಗಳಿಂದಲೇ ಅಶುದ್ಧರಾದರು.
25 : ಹೀಗೆ ಅವರ ನಾಡು ಅಶುದ್ಧವಾಗಿ ಹೋದುದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ. ಆ ನಾಡು ತನ್ನಲ್ಲಿ ವಾಸಿಸಿದವರನ್ನು ಕಕ್ಕಿಬಿಟ್ಟಿತು.
26 : ಆದುದರಿಂದ ಸ್ವದೇಶದವರಾದ ನಿಮ್ಮಲ್ಲಾಗಲಿ, ನಿಮ್ಮ ನಡುವೆ ವಾಸಿಸುವ ಅನ್ಯದೇಶೀಯರಲ್ಲಾಗಲಿ ಯಾರೂ ಇಂಥ ಹೇಸಿಗೆಯಾದ ಕಾರ್ಯಗಳಲ್ಲಿ ಒಂದನ್ನೂ ಮಾಡದೆ ಎಲ್ಲರೂ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು.
27 : ನಿಮಗಿಂತ ಮುಂಚೆ ನಾಡಿನಲ್ಲಿ ಇದ್ದವರು ಇಂಥ ಅಸಹ್ಯವಾದ ಕೆಲಸಗಳನ್ನು ಮಾಡಿದ್ದರಿಂದ ಆ ನಾಡು ಕೆಟ್ಟುಹೋಯಿತು.
28 : ನಿಮಗಿಂತ ಮುಂಚೆಯಿದ್ದ ಜನಾಂಗಗಳನ್ನು ಆ ನಾಡು ಕಕ್ಕಿಬಿಟ್ಟ ಪ್ರಕಾರವೇ ಅದು ನಿಮ್ಮಿಂದ ಮಲಿನವಾದರೆ ನಿಮ್ಮನ್ನೂ ಅಂತೆಯೇ ಕಕ್ಕಿಬಿಡುವುದು.
29 : ಯಾರಾದರು ಈ ಅಸಹ್ಯವಾದ ಕಾರ್ಯಗಳಲ್ಲಿ ಒಂದನ್ನು ಮಾಡಿದ್ದೇ ಆದರೆ ಅವನನ್ನು ಕುಲದಿಂದ ತೆಗೆದುಬಿಡಬೇಕು.
30 : ಆದುದರಿಂದ ನಿಮಗಿಂತ ಮುಂಚೆ ನಡೆಯುತ್ತಿದ್ದ ಅಸಹ್ಯವಾದ ಆಚರಣೆಗಳನ್ನು ನಡೆಸಿ ನಿಮ್ಮನ್ನೇ ಅಶುದ್ಧಮಾಡಿಕೊಳ್ಳದೆ ನನ್ನ ವಿಧಿಗಳನ್ನು ಅನುಸರಿಸಿ ನಡೆಯಬೇಕು. ನಾನೇ ನಿಮ್ಮ ದೇವರಾದ ಸರ್ವೇಶ್ವರ.”

Holydivine