Leviticus - Chapter 12
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದು ಹೇಳಿದರು:
2 : “ನೀನು ಇಸ್ರಯೇಲರಿಗೆ ಇಂತೆಂದು ಆಜ್ಞಾಪಿಸು - ‘ಒಬ್ಬ ಮಹಿಳೆ ಗಂಡುಮಗುವನ್ನು ಹೆತ್ತರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುತ್ತಾಳೋ ಹಾಗೆಯೇ ಏಳು ದಿನಗಳ ತನಕ ಅಶುದ್ಧಳಾಗಿರಬೇಕು.
3 : ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸಬೇಕು.
4 : ಆಮೇಲೆ ಆಕೆ ಪೂರ್ಣ ಶುದ್ಧಳಾಗಲು ಮೂವತ್ತುಮೂರು ದಿನಗಳವರೆಗೆ ಕಾದಿರಬೇಕು. ಅದು ಮುಗಿಯುವ ತನಕ ಆಕೆ ದೇವರ ವಸ್ತುಗಳನ್ನು ಮುಟ್ಟಕೂಡದು, ದೇವಸ್ಥಾನಕ್ಕೆ ಬರಕೂಡದು.
5 : ಹೆಣ್ಣುಮಗುವನ್ನು ಹೆತ್ತರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುತ್ತಾಳೋ ಹಾಗೆಯೇ ಎರಡು ವಾರಗಳು ಅಶುದ್ಧಳಾಗಿರಬೇಕು; ಮತ್ತು ಪೂರ್ಣಶುದ್ದಳಾಗಲು ಅರವತ್ತಾರು ದಿನಗಳು ಕಾದಿರಬೇಕು.
6 : “ಗಂಡುಮಗುವನ್ನು ಹೆತ್ತರೂ ಹೆಣ್ಣು ಮಗುವನ್ನು ಹೆತ್ತರೂ ಆಕೆಯ ಶುದ್ಧೀಕರಣ ದಿನಗಳು ಮುಗಿದಾಗ ಆಕೆ ದಹನಬಲಿಗಾಗಿ ಒಂದು ವರ್ಷದ ಕುರಿಯನ್ನು, ದೋಷಪರಿಹಾರಕ್ಕಾಗಿ ಒಂದು ಮರಿಪಾರಿವಾಳವನ್ನು, ಇಲ್ಲವೆ ಬೆಳವಕ್ಕಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.
7 : ಯಾಜಕನು ಅವುಗಳನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಸಮರ್ಪಿಸಿ ಅವಳ ಪರವಾಗಿ ದೋಷಪರಿಹಾರಮಾಡಿದಾಗ ಅವಳಿಗೆ ರಕ್ತಸ್ರಾವದಿಂದ ಆದ ಅಪರಿಶುದ್ಧತೆ ನಿವಾರಣೆಯಾಗಿ ಶುದ್ಧಳಾಗುವಳು. ಗಂಡು ಮಗು ಹೆತ್ತಾಗಲು, ಹೆಣ್ಣು ಮಗು ಹೆತ್ತಾಗಲು ಅನುಸರಿಸಬೇಕಾದ ವಿಧಿ ಒಂದೇ.
8 : “ಬಡತನದ ನಿಮಿತ್ತ ಕುರಿಯನ್ನು ಕೊಡುವುದಕ್ಕೆ ಆಗದಿದ್ದರೆ ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿಪಾರಿವಾಳಗಳನ್ನಾಗಲಿ ತಂದು ದಹನಬಲಿಗಾಗಿ ಒಂದನ್ನು, ದೋಷಪರಿಹಾರಕ್ಕಾಗಿ ಇನ್ನೊಂದನ್ನು ಸಮರ್ಪಿಸಬೇಕು. ಯಾಜಕನು ಅವಳ ಪರವಾಗಿ ದೋಷಪರಿಹಾರವನ್ನು ಮಾಡಿದಾಗ ಆಕೆ ಶುದ್ಧಳಾಗುವಳು.”

Holydivine