Leviticus - Chapter 2
Holy Bible

1 : “ಯಾರಾದರು ಸರ್ವೇಶ್ವರಸ್ವಾಮಿಗೆ ಧಾನ್ಯವನ್ನು ನೈವೇದ್ಯ ಮಾಡಬೇಕೆಂದಿದ್ದರೆ ಅದು ಗೋದಿ ಹಿಟ್ಟಾಗಿರಬೇಕು. ಅದರ ಮೇಲೆ ಎಣ್ಣೆ ಹೊಯ್ದು, ಸಾಂಬ್ರಾಣಿಯನ್ನಿಟ್ಟು, ಅದನ್ನು ಆರೋನನ ವಂಶಜರಾದ ಯಾಜಕರ ಬಳಿಗೆ ತರಬೇಕು.
2 : ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಯಾಜಕನು ಆ ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಹಾಗು ಇಡೀ ಸಾಂಬ್ರಾಣಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನಬಲಿ.
3 : ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶದವರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಯುವ ಹೋಮಶೇಷವು ಮಹಾಪರಿಶುದ್ಧವಾದುದು.
4 : “ನೀವು ಒಲೆಯಲ್ಲಿ ಅಡಿಗೆಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿಹಿಟ್ಟಿನ ಹೋಳಿಗೆಗಳಾಗಿರಲಿ ಅಥವಾ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳಾಗಿರಲಿ.
5 : ನೀವು ಅರ್ಪಿಸುವುದು ಕಬ್ಬಿಣದ ಹೆಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿಹಿಟ್ಟಿನದಾಗಿರಬೇಕು.
6 : ಅದನ್ನು ಚೂರುಚೂರಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ದು ಕಾಣಿಕೆಯಾಗಿ ಕೊಡಬೇಕು.
7 : ನೀವು ಅರ್ಪಿಸುವುದು ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿ ಹಿಟ್ಟಿನದಾಗಿರಬೇಕು.
8 : ನೀವು ಈ ಮೂರು ವಿಧವಾದ ನೈವೇದ್ಯವನ್ನು ಸಮರ್ಪಿಸುವುದಾದರೆ ಅವುಗಳನ್ನು ಯಾಜಕನಿಗೆ ಒಪ್ಪಿಸಬೇಕು. ಅವನೇ ಅದನ್ನು ಬಲಿಪೀಠದ ಬಳಿಗೆ ತರಲಿ.
9 : ಯಾಜಕನು ಅದು ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಅದರಲ್ಲಿ ಸ್ವಲ್ಪ ಭಾಗವನ್ನು ಪ್ರತ್ಯೇಕಿಸಿ ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನಬಲಿ.
10 : ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶಜರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಕೆಯಾದದ್ದು ಮಹಾ ಪರಿಶುದ್ಧವಾದುದು.
11 : “ನೀವು ಸರ್ವೇಶ್ವರನಿಗೆ ಕಾಣಿಕೆಯಾಗಿ ಸಮರ್ಪಿಸುವ ಯಾವ ಧಾನ್ಯದ ಪದಾರ್ಥವನ್ನಾಗಲಿ ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಸಿಹಿಪದಾರ್ಥವನ್ನಾಗಲಿ ಸರ್ವೇಶ್ವರನಿಗೆ ಹೋಮ ಮಾಡಕೂಡದು.
12 : ಅವುಗಳನ್ನು ಪ್ರಥಮ ಫಲವಾಗಿ ಸರ್ವೇಶ್ವರನಿಗೆ ಸಮರ್ಪಿಸಬಹುದೇ ಹೊರತು ಬಲಿಪೀಠದ ಮೇಲೆ ಸುವಾಸನೆಯನ್ನುಂಟು ಮಾಡುವುದಕ್ಕಾಗಿ ಹೋಮ ಮಾಡಕೂಡದು.
13 : ನೈವೇದ್ಯವಾಗಿ ಸಮರ್ಪಿಸುವ ಎಲ್ಲ ಆಹಾರ ಪದಾರ್ಥಗಳಿಗೂ ಉಪ್ಪು ಹಾಕಿಯೆ ಸಮರ್ಪಿಸಬೇಕು. ಉಪ್ಪು ಸರ್ವೇಶ್ವರನ ಸಂಗಡ ನಿಮಗಿರುವ ಒಡಂಬಡಿಕೆಯ ಸೂಚನೆ. ಆದ್ದರಿಂದ ಯಾವ ನೈವೇದ್ಯ ದ್ರವ್ಯವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲ ಪದಾರ್ಥಗಳಲ್ಲಿಯೂ ಉಪ್ಪು ಸೇರಿಸಿಯೇ ಇರಬೇಕು.
14 : “ನೀವು ಸರ್ವೇಶ್ವರನಿಗೆ ಪ್ರಥಮ ಧಾನ್ಯ ನೈವೇದ್ಯವನ್ನು ಮಾಡಬೇಕಾದರೆ ಅದು ಬೆಂಕಿಯಲ್ಲಿ ಸುಟ್ಟ ಗೋದಿಯ ಹಸಿ ತೆನೆಗಳಾಗಿರಬೇಕು.
15 : ಅದು ನೈವೇದ್ಯ ವಸ್ತುವಾದುದರಿಂದ ಅದರ ಮೇಲೆ ಎಣ್ಣೆ ಹೊಯ್ಯಬೇಕು; ಸಾಂಬ್ರಾಣಿ ಇಡಬೇಕು.
16 : ಯಾಜಕನು ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಆ ಗೋದಿ ತೆನೆಯಿಂದಲೂ ಎಣ್ಣೆಯಿಂದಲೂ ಸ್ವಲ್ಪ ಭಾಗವನ್ನು ತೆಗೆದುಕೊಂಡು ಸಾಂಬ್ರಾಣಿಯನ್ನೆಲ್ಲ ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಸರ್ವೇಶ್ವರನಿಗೆ ಹೋಮಮಾಡಲಿ.

Holydivine