Wisdom - Chapter 8
Holy Bible

1 : ಸುಜ್ಞಾನವೆಂಬಾಕೆ ಸಂಪೂರ್ಣ ಶಕ್ತಿಯಿಂದ ಸರಿಯುವಳು ಜಗದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗು, ಅನುಕೂಲಕರವಾಗಿಯೆ ನಡೆಸುವಳು ಎಲ್ಲವನು.
2 : ಯೌವನಾರಭ್ಯ ಸುಜ್ಞಾನಿಯನ್ನೆ ಪ್ರೀತಿಸಿ ಅರಸಿದೆ ಅವಳನ್ನೇ ಸಹಧರ್ಮಿಣಿಯನ್ನಾಗಿಸಿಕೊಳ್ಳ ಬಯಸಿದೆ ಅವಳ ಚೆಲುವಿಗೆ ಮರುಳಾಗಿ ಮನಸೋತು ಹೋದೆ.
3 : ಆಕೆ ವಾಸಮಾಡುತ್ತಾಳೆ ದೇವರ ಸಂಗಡ ಎಂದೇ ತನ್ನ ಕುಲೀನತೆಯ ಬಗ್ಗೆ ಆಕೆಗೆ ಹೆಚ್ಚಳ ಸರ್ವಕ್ಕೂ ಒಡೆಯನಾದ ದೇವರಿಗೆ ಆಕೆಯ ಮೇಲೆ ಒಲವರ.
4 : ಆಕೆ ದೇವಜ್ಞಾನದಲ್ಲಿ ದೀಕ್ಷೆಹೊಂದಿದವಳು ಆತನ ಕಾರ್ಯಗಳನ್ನು ಆತನಿಗಾಗಿ ಆಯ್ಕೆ ಮಾಡುವಳು.
5 : ಜೀವನದಲ್ಲಿ ಸಿರಿಸಂಪತ್ತು ಇಷ್ಟಾರ್ಥವಾದುದಾದರೆ ಸರ್ವವನು ಮಾಡುವ ಸುಜ್ಞಾನಕ್ಕಿಂತ ಮಿಗಿಲಾದ ಸಿರಿ ಯಾವುದಿದೆ?
6 : ವಿವೇಕವು ಕಾರ್ಯಸಾಧಿಸಬಲ್ಲುದಾದರೆ ಸರ್ವನಿರ್ಮಾಣಿಕಳಾದ ಈಕೆಯಿಲ್ಲದೆ ವಿವೇಕವೆಲ್ಲಿದೆ?
7 : ಯಾವನಾದರು ನ್ಯಾಯನೀತಿಯನ್ನು ಪ್ರೀತಿಸುವುದಾದರೆ ಸದ್ಗುಣಗಳು ಸುಜ್ಞಾನದ ಪರಿಶ್ರಮದ ಫಲಗಳೇ ಅಲ್ಲವೆ? ಚಿತ್ತಸ್ವಾಸ್ಥ್ಯ, ವಿವೇಕ, ನೀತಿ, ಧೈರ್ಯ ಇವುಗಳನ್ನು ಕಲಿಸುತ್ತಾಳೆ ಬಾಳಿನಲ್ಲಿ ಇವಕ್ಕಿಂತ ಲಾಭಕರವಾದುದು ಯಾವುದಿದೆ ನರರಿಗೆ?
8 : ಮಾನವನು ಹೆಚ್ಚಿನ ಅನುಭವವನ್ನು ಬಯಸುವುದಾದರೆ ಸುಜ್ಞಾನ ಹಿಂದಿನ ವಿಷಯಗಳನ್ನು ಅರಿತವಳಾಗಿದ್ದಾಳೆ ಮುಂದಿನವುಗಳನ್ನು ಊಹಿಸಿ ಹೇಳಬಲ್ಲವಳಾಗಿದ್ದಾಳೆ ಮಾತಿನ ಚಮತ್ಕಾರ ಹಾಗು ಒಗಟಿನ ಒಳಾರ್ಥವನ್ನೂ ತಿಳಿದಿದ್ದಾಳೆ; ಪೂರ್ವಸಂಕೇತಗಳ, ಅದ್ಭುತಗಳ, ಕಾಲ ಋತುಗಳ ಮುನ್ನರಿವು ಅವಳಿಗಿದೆ.
9 : ಆದುದರಿಂದ ಆಕೆ ನನಗೆ ಸದಾಲೋಚನೆ ಕೊಡುವಳು ಚಿಂತೆವ್ಯಸನಗಳಲ್ಲಿ ಸಂತೈಸುವಳು ಎಂದು ತಿಳಿದು ನನ್ನ ಜೊತೆಯಲ್ಲೇ ವಾಸಿಸುವಂತೆ ಕರೆದುಕೊಳ್ಳಲು ನಿಶ್ಚಯಿಸಿದೆ.
10 : ಆಕೆಯ ನಿಮಿತ್ತ ನಾ ಹೊಂದಿದೆ ಗೌರವವನು ಜನಸಮುದಾಯದಲಿ ಕಿರಿಯವನಾಗಿದ್ದರೂ ಪಡೆದೆ ಸನ್ಮಾನ ಹಿರಿಯರ ದೃಷ್ಟಿಯಲಿ.
11 : ತೀರ್ಪುಕೊಡುವಾಗ ಚುರುಕು ಬುದ್ಧಿಯುಳ್ಳವನಾಗಿರುವೆ ಅಧಿಪತಿಗಳ ಮುಂದೆ ಶ್ಲಾಘನೆ ಪಡೆದುಕೊಳ್ಳುವೆ.
12 : ನಾ ಮೌನದಿಂದಿರುವಾಗ ಅವರು ನನಗಾಗಿ ಕಾದಿರುವರು ನಾ ಮಾತಾಡುವಾಗ ನನ್ನ ಕಡೆಗೆ ಗಮನ ಕೊಡುವರು ಮಾತು ಮುಂದುವರಿಸಿದಾಗ ಬಾಯಮೇಲೆ ಕೈಯಿಟ್ಟುಕೊಳ್ಳುವರು!
13 : ಆಕೆಯ ನಿಮಿತ್ತವೇ ನನಗೆ ಪ್ರಾಪ್ತವಾಗುವುದು ಅಮರತ್ವ ನನ್ನ ಹಿಂದೆ ಬರುವವರಿಗೆ ನಾ ಬಿಟ್ಟು ಹೋಗುವೆನು ಚಿರಸ್ಮಾರಕ.
14 : ನಾನಾಳುವೆನು ಜನಗಳನ್ನು ನನಗೊಳಗಾಗುವರು ಜನಾಂಗಗಳು.
15 : ಭೀಕರ ಅರಸುಗಳೂ ನನಗಂಜುವರು ನನ್ನ ವಿಷಯ ಕೇಳಿ ನಾ ಕಾಣಿಸಿಕೊಳ್ಳುವೆ ಒಳ್ಳೆಯವನಾಗಿ, ಯುದ್ಧಪರಾಕ್ರಮಿಯಾಗಿ.
16 : ನಾನು ವಿಶ್ರಮಿಸಿಕೊಳ್ಳುವೆ ಆಕೆಯೊಂದಿಗೆ ಮನೆ ಸೇರಿ ಬಿರುಸುತನವಿಲ್ಲ ಅವಳ ಒಡನಾಟದಲ್ಲಿ, ನೋವಿಲ್ಲ ಸಹವಾಸದಲ್ಲಿ ಆನಂದವಿದೆ, ಸಂತೋಷವಿದೆ ಅವಳ ಜೊತೆಯಲ್ಲಿ.
17 : ಸುಜ್ಞಾನ ಸಂಬಂಧದಲ್ಲಿ ಅಮರತ್ವ, ಆಕೆಯ ಸ್ನೇಹದಲ್ಲಿ ಆನಂದ ಅವಳ ಕೈಕೆಲಸಗಳಿಂದ ಎಂದೂ ಅಳಿಯದ ಸಿರಿತನ ಅವಳ ಸಂಭಾಷಣಾ ಶಕ್ತಿಯಿಂದ ಜ್ಞಾನವಿವೇಕ ಅವಳ ನುಡಿಬಳಕೆಯಿಂದ ಸುಕೀರ್ತಿ ಗೌರವ.
18 : ಇವುಗಳನ್ನೆಲ್ಲಾ ಮನಸ್ಸಿನಲ್ಲಿ ಆಲೋಚಿಸಿಕೊಂಡು ತಿರುಗಿದೆ ಆಕೆಯನು ಸಂಪಾದಿಸುವ ಮಾರ್ಗಹುಡುಕಿಕೊಂಡು.
19 : ಮಗುವಾಗಿದ್ದಾಗ ನಾನು ಚೆಲುವಾಗಿದ್ದೆ ನನ್ನ ಆತ್ಮವೂ ಚೆನ್ನಾಗಿತ್ತು ನನ್ನ ಅದೃಷ್ಟಕ್ಕೆ.
20 : ನಾನು ಸದ್ಗುಣಿಯಾಗಿದ್ದುದರಿಂದ ನನಗೆ ದೊರಕಿತು ನಿಷ್ಕಳಂಕ ದೇಹ.
21 : ದೇವರು ಕೊಟ್ಟ ಹೊರತು ಸುಜ್ಞಾನ ದೊರಕದೆಂದು ಮನಗಂಡೆ ಅದು ಯಾರ ಕೊಡುಗೆಯೆಂದು ತಿಳಿವುದೇ ಜ್ಞಾನವಿವೇಕವಲ್ಲವೆ? ಎಂದೇ ದೇವರನ್ನು ಬೇಡಿಕೊಂಡೆ, ಮನಸಾರೆ ಹೀಗೆಂದುಕೊಂಡೆ: ಸುಜ್ಞಾನಕ್ಕಾಗಿ ಪ್ರಾರ್ಥನೆ

Holydivine