Wisdom - Chapter 5
Holy Bible

1 : ತರುವಾಯ ಸಜ್ಜನನು ನಿಂತುಕೊಳ್ಳುವನು ಧೈರ್ಯದಿಂದ ತನ್ನ ಕಾಡಿದವರ ಮುನ್ನ, ತನ್ನ ಕಾರ್ಯಗಳ ತಿರಸ್ಕರಿಸಿದವರ ಮುನ್ನ.
2 : ಆ ದುರುಳರು ಇದನ್ನು ನೋಡಿ ಭಯಭ್ರಾಂತರಾಗುವರು ಅವನು ಪಡೆದ ಅಪ್ರತ್ಯಕ್ಷ ರಕ್ಷಣೆಯನ್ನು ಕಂಡು ಬೆರಗಾಗುವರು.
3 : ಪಶ್ಚಾತ್ತಾಪಪಟ್ಟು ಆಂತರ್ಯದಲ್ಲಿ ನೊಂದು ನರಳುತ್ತಾ ಹೀಗೆನ್ನುವರು: “ನಾವು ಗೇಲಿಮಾಡಿ, ಅಪಹಾಸ್ಯಕ್ಕೀಡು ಮಾಡಿದ ವ್ಯಕ್ತಿ ಇವನಲ್ಲವೆ?” ಎಂದು.
4 : “ಮತಿಹೀನರಾದ ನಾವು ಇವನ ಜೀವನ ಹುಚ್ಚುತನ ಎಂದೆವು ಇವನ ಅಂತ್ಯ ಗೌರವಹೀನವಾದುದೆಂದು ತಿಳಿದೆವು;
5 : ಆದರೆ ಇವನು ದೇವರ ಕುವರರಲ್ಲೆ ಗಣಿತನಾದುದು ಹೇಗೆ? ಸಂತರಲಿ ಒಬ್ಬನಾಗಿ ಪರಿಗಣಿತನಾದುದು ಹೇಗೆ?
6 : ನಿಜವಾಗಿಯೂ ಸತ್ಯದ ಮಾರ್ಗ ಬಿಟ್ಟು ಹೋದವರು ನಾವೇ ನೀತಿಯ ಜ್ತೋತಿ ಬೆಳಗಲಿಲ್ಲ, ಸೂರ್ಯೋದಯವಾಗಲಿಲ್ಲ ನಮಗೆ.
7 : ನಾವು ಸಂತುಷ್ಟರಾದುದು ಅಧರ್ಮದಲ್ಲಿ, ವಿನಾಶದ ಮಾರ್ಗದಲ್ಲಿ ದೇವರ ಮಾರ್ಗವನರಿಯದೆ ಅಲೆದೆವು ಹಾದಿಗಳಿಲ್ಲದ ಕಾಡಿನಲ್ಲಿ.
8 : ಅಹಂಕಾರದಿಂದ ನಮಗಾದ ಲಾಭವಾದರೂ ಏನು? ಸಿರಿಸಂಪತ್ತು, ಒಣಜಂಬ ತಂದ ಭಾಗ್ಯವಾದರೂ ಏನು?
9 : ಅವೆಲ್ಲವು ಸರಿದುಹೋದವು ನೆರಳಿನಂತೆ ಹಾದುಹೋಗಿಬಿಟ್ಟವು ಗಾಳಿ ಸುದ್ದಿಯಂತೆ.
10 : ಕಲ್ಲೋಲಕಡಲಿನಲಿ ತೇಲಿಹೋದ ಕಪ್ಪಲಂತೆ ಕಣ್ಮರೆಯಾಯಿತಲ್ಲಾ ಮುಂದೆ ಸಾಗಿಹೋದ ಮೇಲೆ ಅದರ ಹಾದಿಯ ಕುರುಹೂ ಸಿಕ್ಕಲಿಲ್ಲ ಅದರ ಅಡಿಮರದ ಗುರುತೂ ಆ ಅಲೆಗಳ ಮಧ್ಯೆ ಕಾಣಿಸಲಿಲ್ಲ;
11 : ಹಾರುವ ಹಕ್ಕಿಯ ರೆಕ್ಕೆ ಬಡಿತಕ್ಕೆ ಗಾಳಿ ಸೀಳಿಹೋಗುತ್ತದೆ ಗಾಳಿ ಮತ್ತೆ ಕೂಡಿಕೊಂಡು ಹಕ್ಕಿಹೋದ ಜಾಡೇ ಕಾಣದಂತಾಗುತ್ತದೆ;
12 : ಗುರಿಗೆ ಬಿಟ್ಟ ಬಾಣದಿಂದ ಗಾಳಿ ಇಬ್ಭಾಗವಾಗುತ್ತದೆ ಕೂಡಲೆ ಕೂಡಿಕೊಂಡು ಬಾಣಹೋದ ಹಾದಿ ಅಗೋಚರವಾಗುತ್ತದೆ;
13 : ಅಂತೆಯೇ, ಹುಟ್ಟಿದೊಡನೆಯೇ ನಾವು ಇಲ್ಲದಂತಾದೆವಲ್ಲಾ ತೋರಿಸಲು ಸದ್ಗುಣ ಯಾವುದರ ಚಿಹ್ನೆಯೂ ನಮ್ಮಲ್ಲಿಲ್ಲ ಅಧರ್ಮದಲ್ಲಿ ನಾವು ಕ್ಷೀಣಿಸಿಹೋದೆವಲ್ಲಾ!
14 : ಗಾಳಿಗೆ ತೂರಿಹೋಗುವ ಹೊಟ್ಟಿನಂತೆ ಬಿರುಗಾಳಿಗೆ ಬಡಿದುಹೋದ ನೊರೆಯಂತೆ ಗಾಳಿಗೆ ಚದರಿಹೋದ ಹೊಗೆಯಂತೆ ಒಂದೇ ದಿನ ತಂಗಿಹೋದ ಅತಿಥಿಯಂತೆ ಮಾಯವಾಗುವುದು ದುರ್ಜನರ ನಿರೀಕ್ಷೆ.
15 : ಸಜ್ಜನರಾದರೋ ಬಾಳುವರು ಸದಾಕಾಲ ದೇವರೇ ಅವರ ಬಹುಮಾನ, ಮಹೋನ್ನತನೇ ಅವರ ಪಾಲಕ.
16 : ರಾಜಭೂಷಣವಾದ ಕಿರೀಟವನು, ಅಂದವಾದ ಮುಕುಟವನು ಪಡೆವರವರು ಸರ್ವೇಶ್ವರನ ಕೈಯಿಂದ ಆತ ರಕ್ಷಿಸುವನವರನು ತನ್ನ ಭುಜಬಲದಿಂದ ಕಾಪಾಡುವನವರನು ತನ್ನ ಬಲಹಸ್ತದಿಂದ.
17 : ಸರ್ವೇಶ್ವರ, ಆಯುಧವಾಗಿಸಿಕೊಳ್ಳುವನು ತನ್ನ ಆಗ್ರಹವನೆ ವೈರಿಗೆ ಮುಯ್ಯಿ ತೀರಿಸಲು ತನ್ನ ಸೃಷ್ಟಿಸಮಸ್ತವನೆ.
18 : ಧರಿಸಿಕೊಳ್ಳುವನು ನ್ಯಾಯನೀತಿಯನ್ನು ತನ್ನ ಕವಚವನ್ನಾಗಿ ಯಥಾರ್ಥ ನ್ಯಾಯ ವಿವೇಚನೆಯನ್ನು ತನ್ನ ಶಿರಸ್ತ್ರಾಣವನ್ನಾಗಿ.
19 : ತೆಗೆದುಕೊಳ್ಳುವನು ಪವಿತ್ರತೆಯನ್ನು ಅಜೇಯ ಗುರಾಣಿಯನ್ನಾಗಿ.
20 : ಮಸೆಯುವನು ತೀಕ್ಷ್ಣವಾದ ಕೋಪವನು ಖಡ್ಗವನ್ನಾಗಿ ಮತಿಹೀನರೊಡನೆ ಹೋರಾಡುವುದು ಸೃಷ್ಟಿ, ಆತನ ಪಕ್ಷ ವಹಿಸಿ.
21 : ಸಿಡಿಲೆಂಬ ಬಾಣಗಳು ಗುರಿಹಿಡಿದು ನೇರವಾಗಿ ತೆರಳುವುವು ಮೋಡವೆಂಬ ಗಡುಸಾದ ಬಿಲ್ಲಿನಿಂದ ಗುರಿಯೆಡೆಗೆ ಹಾರುವುವು
22 : ಆಲಿಕಲ್ಲುಗಳು ಬೀಳುವುವು ಕವಣೆಯ ಕಲ್ಲುಗಳಂತೆ ರಭಸವಾಗಿ ಸಮುದ್ರದಲೆಗಳು ಕೋಪದಿಂದ ಅಪ್ಪಳಿಸುವುವು ಅವರಿಗೆ ವಿರುದ್ಧವಾಗಿ ಹುಚ್ಚುಹೊಳೆಗಳು ಅವರನ್ನು ಕೊಚ್ಚಿ ಕೊಂಡು ಹೋಗುವುವು ಬಲವಾಗಿ.
23 : ಬಿರುಗಾಳಿ ಬೀಸುವುದು ಅವರಿಗೆದುರಾಗಿ ಹೊಟ್ಟಿನಂತೆ ತೂರಿಬಿಡುವುದವರನು ತುಫಾನಾಗಿ. ಈ ಪರಿ ಅಧರ್ಮ ಹಾಳುಮಾಡುವುದು, ಧರೆಯನ್ನೆಲ್ಲಾ ದುಷ್ಟತನ ಉರುಳಿಸುವುದು, ರಾಜಸಿಂಹಾಸನಗಳನ್ನೆಲ್ಲಾ. ಸುಜ್ಞಾನಿಗಳಾಗಿರಲು ರಾಜರುಗಳಿಗೆ ಕರೆ

Holydivine