Wisdom - Chapter 15
Holy Bible

1 : ನಮ್ಮ ದೇವರೇ, ನೀವಾದರೋ, ದಯಾಳು, ಸತ್ಯವಂತರು ಸಹನಾಶೀಲರು, ಕರುಣೆಯಿಂದ ಎಲ್ಲವನ್ನು ಪರಿಪಾಲಿಸುವವರು.
2 : ನಾವು ಪಾಪಿಗಳಾದರೂ ನಿಮ್ಮವರೇ ಆಗಿದ್ದೇವೆ ನಿಮ್ಮ ಶಕ್ತಿಸಾಮಥ್ರ್ಯವನ್ನು ಅರಿತಿದ್ದೇವೆ ನಿಮ್ಮವರೆಂದು ತಿಳಿದು ಪಾಪದಿಂದ ದೂರವಿರುತ್ತೇವೆ.
3 : ನಿಮ್ಮನ್ನು ಅರಿವುದೇ ಸಂಪೂರ್ಣ ಸತ್ಯ ನಿಮ್ಮ ಶಕ್ತಿಯ ತಿಳಿವು ಅಮರತ್ವಕೆ ಮೂಲ.
4 : ಮನುಷ್ಯ ಜಾಣ್ಮೆಯಿಂದಾದ ಕಲಾಕೃತಿಯಿಂದಾಗಲಿ ಬಣ್ಣಗಾರನ ಬೆಡಗಿನ ದುಡಿಮೆಯಿಂದಾಗಲಿ ರಂಗುರಂಗಿನ ವಿಗ್ರಹಗಳಿಂದಾಗಲಿ ಹಿಡಿದಿಲ್ಲ ನಾವು ಅಡ್ಡಹಾದಿ.
5 : ಇವುಗಳ ನೋಟವೇ ಸಾಕು, ಮೂರ್ಖರಲ್ಲಿ ದುರಾಶೆ ಕೆರಳಿಸಲು ಉಸಿರಿಲ್ಲದ ರೂಪದತ್ತ ಅವರನು ಆಕರ್ಷಿಸಲು.
6 : ಇವುಗಳನು ಮಾಡುವವರು, ಬಯಸು ವವರು ಹಾಗೂ ಪೂಜಿಸುವವರು ಕೇಡನ್ನು ಪ್ರೀತಿಸುವಂಥವರು, ಅದರ ನಿರೀಕ್ಷೆಗೆ ಅವರು ಪಾತ್ರರು. ಕುಂಬಾರ ಮಾಡಿದ ಬೊಂಬೆ
7 : ಕುಂಬಾರ ಪ್ರಯಾಸದಿಂದ ನಾದುತ್ತಾನೆ ಜೇಡಿಮಣ್ಣನು ನಮ್ಮ ಪ್ರಯೋಜನಕ್ಕಾಗಿ ರೂಪಿಸುತ್ತಾನೆ ಮಡಕೆಯನು. ಉಚ್ಛ ಬಳಕೆಗೂ ನೀಚಬಳಕೆಗೂ ಅದೇ ಮಣ್ಣನು ಪ್ರಯೋಗಿಸುತ್ತಾನೆ ಯಾವ ಬಳಕೆಗೆ ಯಾವ ಮಡಕೆ ಎಂದು ನಿಶ್ಚಯಿಸುವವನು ಅವನೇ.
8 : ತುಸುಕಾಲಕ್ಕೆ ಹಿಂದೆ ತಾನೇ ಉಂಟಾದನು ಮಣ್ಣಿನಿಂದ ತನ್ನ ಪ್ರಾಣ ಋಣವನು ತೀರಿಸಬೇಕೆಂಬ ಕೇಳಿಕೆ ಬಂದಾಗ ಅದೇ ಮಣ್ಣಿಗೆ ಮರಳುತ್ತಾನೆ ತುಸು ಕಾಲದ ನಂತರ. ರೂಪಿಸುತ್ತಾನೆ ಸುಳ್ಳು ದೇವರನು ಅದೇ ಕುಂಬಾರ; ಅದೆಂಥ ನಿರರ್ಥಕ ಕೆಲಸ!
9 : ಸಾಯಲೇಬೇಕಾದರೂ ಜೀವನ ಕಿಂಚಿತ್ತು ಎಂಬ ಚಿಂತೆಯಿಲ್ಲ ಅವನಿಗೆ ಸ್ಪರ್ಧಿಸುತ್ತಾನೆ ಬೆಳ್ಳಿಬಂಗಾರದ ಅಕ್ಕ ಸಾಲಿಗರ, ಕಂಚುಗಾರರ ಜೊತೆಗೆ ತಾನೂ ಕೃತಕ ವಸ್ತುಗಳ ಮಾಡಬಲ್ಲೆ ಎಂಬುದೇ ಅವನ ಪೆರ್ಮೆ.
10 : ಬೂದಿಯಂತೆ ಅವನ ಹೃದಯ ಅವನ ನಿರೀಕ್ಷೆ ಕಸಕ್ಕೆ ಸಮಾನ ಜೇಡಿಗಿಂತ ಹೀನ ಅವನ ಜೀವನ.
11 : ಕಾರಣ-ಅವನು ಅರಿತಿಲ್ಲ ತನ್ನ ರೂಪಿಸಿದಾತನನು ಪ್ರಾಣ ಊದಿ ತನ್ನನು ಸಚೇತನ ಗೊಳಿಸಿದವನನು ತನಗೆ ಜೀವಾತ್ಮವನು ದಯಪಾಲಿಸಿದವನನು.
12 : ಅವನ ಪಾಲಿಗೆ ನಮ್ಮೀ ಬಾಳು ಆಟದ ಸಾಮಾನು ಹಣ ಸಂಪಾದನೆಗಾಗಿರುವ ಸಂತೆಬಜಾರು ಏನೇ ಆಗಲಿ, ರೀತಿ ಎಂತದೇ ಇರಲಿ, ಲಾಭವೇ ಅವನ ಗೀಳು.
13 : ಒಡೆಯನಿಗೆ ಮಡಕೆಗಳನು, ಮೂರ್ತಿಗಳನು ಮಾಡುತ್ತಾನೆ ಸುಲಭವಾಗಿ ವಿಗ್ರಹ ಮಾಡುವುದು ಪಾಪವೆಂದು ಇತರರಿಗಿಂತಲು ಬಲ್ಲನು ಚೆನ್ನಾಗಿ. ಈಜಿಪ್ಟರಲ್ಲಿ ವಿಗ್ರಹಾರಾಧನೆ
14 : ಆದರೆ ನಿಮ್ಮ ಪ್ರಜೆಯನು ಪೀಡಿಸಿದ ಶತ್ರುಗಳು ಎಲ್ಲರಿಗಿಂತ ನಿರ್ಭಾಗ್ಯರು, ಮಕ್ಕಳಿಗಿಂತ ಬುದ್ಧಿಹೀನರು.
15 : ದೇವರೆಂದೆಣಿಸಿದರವರು ಜನಾಂಗಗಳ ಸಕಲ ಪ್ರತಿಮೆಗಳನು ನೋಡಲು ಅವಕ್ಕೆ ಕಣ್ಣಿಲ್ಲ, ಉಸಿರಾಡಲು ಮೂಗಿಲ್ಲ, ಕೇಳಲು ಕಿವಿಯಿಲ್ಲ, ಮುಟ್ಟಲು ಬೆರಳಿಲ್ಲ, ನಡೆಯಲು ಕಾಲಿಗೆ ಬಲವಿಲ್ಲ.
16 : ಅವುಗಳನ್ನು ಮಾಡಿದವನು ಮನುಷ್ಯ ಮಾತ್ರದವನು ತನ್ನ ಪ್ರಾಣವನ್ನೇ ಸಾಲವಾಗಿ ಪಡೆದಿರುವ ಇವನು ತನ್ನಂತೆ ದೇವರನು ರೂಪಿಸಲು ಅಸಮರ್ಥನು.
17 : ನಿರ್ಜೀವವಾದುವು ಮತ್ರ್ಯಮಾನವನ ದುರ್ಬಲ ಕೈಗಳಿಂದ ಆದವು. ಅವನು ಪೂಜಿಸುವ ವಸ್ತುಗಳಿಗಿಂತ ಅವನೇ ಮೇಲಾದವನು. ಏಕೆಂದರೆ ಅವುಗಳಲ್ಲಿಲ್ಲದ ಪ್ರಾಣ ಅವನಲ್ಲಿರುವುದು.
18 : ಅಸಹ್ಯವಾದ ಪ್ರಾಣಿಗಳನು ಪೂಜಿಸುತ್ತಾರೆ ಆ ಶತ್ರುಗಳು ಬುದ್ಧಿಹೀನತೆಯಲಿ ಇತರ ಪ್ರಾಣಿಗಳಿ ಗಿಂತಲೂ ಬೀಳು ಅವುಗಳು.
19 : ಅವೇನೂ ಅಷ್ಟು ಸುಂದರವಾಗಿಲ್ಲ ಬೇರೆ ಪ್ರಾಣಿಗಳಿಗಿಂತ ದೇವರ ಹೊಗಳಿಕೆಗೂ ಆಶೀರ್ವಾದಕೂ ಅವು ಬಾಹಿರ.

Holydivine