Wisdom - Chapter 10
Holy Bible

1 : ಕಾಪಾಡಿದಳು ಸುಜ್ಞಾನ ಒಂಟಿಯಾಗಿ ಸೃಷ್ಟಿಯಾದ ಜಗದಾದಿ ಪಿತನನು ಅವನ ತಪ್ಪಿನಿಂದ ಅವನನು ಉದ್ಧಾರಮಾಡಿದಳು.
2 : ಎಲ್ಲವುಗಳ ಮೇಲೆ ದೊರೆತನ ನಡೆಸಲು ಅವನಿಗೆ ಶಕ್ತಿ ನೀಡಿದಳು. ಕಾಯಿನ
3 : ಅಧರ್ಮಿಯೊಬ್ಬನು ಸಿಟ್ಟಿನಿಂದ ಆಕೆಯನು ಬಿಟ್ಟುಹೋದಾಗ ತನ್ನ ತಮ್ಮನನ್ನೆ ಕೊಂದಾ ಪಾಪದಲ್ಲಿ ತಾನೇ ಹಾಳಾಗಿ ಹೋದ. ನೋವ
4 : ಅವನ ಪ್ರಯುಕ್ತ ಜಲಪ್ರಳಯದೊಳು ಜಗವು ಮುಳುಗಿಹೋಗುತ್ತಿರಲು ಉಳಿಸಿದಳು ಜ್ಞಾನಪ್ರಭೆಯಾದವಳು ಮರತುಂಡಿನಾ ನಾವಿಗೆಯನು ಸೂಚಿಸಿ ನೀತಿವಂತನಾದವನಿಗೆ ಗತಿಯನು ತೋರಿಸಿ. ಅಬ್ರಹಾಮ
5 : ದುಷ್ಟತನದಲಿ ರಾಷ್ಟ್ರಗಳು ಒಂದಾಗಿ ಗಲಿಬಿಲಿಗೊಂಡಿದ್ದಾಗ ಸಜ್ಜನನೊಬ್ಬನಾಯ್ದು, ದೋಷರಹಿತನನ್ನಾಗಿಸಿತು ಆ ಸುಜ್ಞಾನ ಈ ಕಾರಣ ಪುತ್ರವಾತ್ಸಲ್ಯ ಮೀರಿ ದೇವಾಜ್ಞೆಗೆ ತಲೆಬಾಗಿದನಾತ. ಲೋಟ
6 : ದುರುಳ ಜನರು ಅಳಿದುಹೋಗುತ್ತಿದ್ದಾಗ ಸಜ್ಜನನೊಬ್ಬನನ್ನು ಉಳಿಸಿತು ಸುಜ್ಞಾನ. ಈ ಕಾರಣ, ಪಂಚಪಟ್ಟಣಗಳು ಆಕಾಶದಗ್ನಿಯಿಂದ ಉರಿವಾಗ ಅವನೊಬ್ಬನೇ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದ.
7 : ಆ ಊರುಗಳ ದುಷ್ಟತನವನು ತೋರಿಸಲು ಹೊಗೆಯಾಡುವ ಹಾಳುಭೂಮಿ ಸಾಕ್ಷಿಯಾಗಿ ನಿಂತಿದೆ ಇಂದಿಗೂ. ಅಲ್ಲಿಯ ಸಸಿಗಳು ಫಲಬಿಟ್ಟರೂ ಅವುಗಳ ಕಾಯಿ ಮಾಗವು; ನಂಬದೆ ಹೋದ ಜೀವಾತ್ಮಕೆ ಸ್ಮಾರಕವಾಗಿ ನಿಂತಿದೆ ಉಪ್ಪಿನ ಕಂಬವು.
8 : ಸುಜ್ಞಾನದ ಹಾದಿಯನ್ನು ಅವರು ಉಲ್ಲಂಘಿಸಿದರು. ಈ ಕಾರಣ ಅವರಿಂದಾಗಲಿಲ್ಲ ಒಳಿತನು ಗುರುತಿಸಲು; ಮಾತ್ರವಲ್ಲ, ತಮ್ಮ ಮೂರ್ಖತನದ ಗುರುತನು ಬಿಟ್ಟುಹೋದರು; ಆ ಪತನದ ಘಟನೆಯನ್ನು ಮರೆಮಾಚಲು ಅವರಿಂದಾಗದು.
9 : ಸುಜ್ಞಾನವೆಂಬಾಕೆ ಸಂರಕ್ಷಿಸಿದಳು ಕಷ್ಟದುಃಖಗಳಿಂದ ತನ್ನ ಶರಣರನು. ಯಕೋಬ
10 : ಅಣ್ಣನ ಕೋಪಕ್ಕೆ ಅಂಜಿ ಓಡುತ್ತಿದ್ದಾ ಸಜ್ಜನನನ್ನು ಸುಜ್ಞಾನಿ ನೆಟ್ಟನೆಯ ದಾರಿಯಲ್ಲಿ ನಡೆಸಿದಳು. ದೇವರ ರಾಜ್ಯವನು ಅವನಿಗೆ ತೋರಿಸಿಕೊಟ್ಟಳು. ಪರಮಾರ್ಥ ಜ್ಞಾನನೀಡಿ, ಪರಿಶ್ರಮೆಯನ್ನು ಸಫಲಗೊಳಿಸಿದಳು ಅವನ ದುಡಿಮೆಯ ಫಲ ಹೆಚ್ಚಾಗುವಂತೆ ಮಾಡಿದಳು.
11 : ಸ್ವಾರ್ಥಿಗಳ ಹಿಡಿತದಲ್ಲಿ ಅವನು ಸಿಕ್ಕಿಬಿದ್ದಿರಲು ಸುಜ್ಞಾನಿ ಅವನಿಗೆ ಬೆಂಬಲವಿತ್ತು ಸಿರಿವಂತನನ್ನಾಗಿಸಿದಳು.
12 : ವೈರಿಗಳಿಂದ ತಪ್ಪಿಸಿ, ಬಲೆಯೊಡ್ಡಿದವರಿಂದ ರಕ್ಷಿಸಿದಳು; ದೇವಭಕ್ತಿಯೇ ಎಲ್ಲಕು ಪ್ರಬಲವಾದುದೆಂದು ಕಲಿಸಲು ಉಗ್ರ ಹೋರಾಟದಲಿ ಅವನನು ಜಯಶಾಲಿಯನ್ನಾಗಿಸಿದಳು. ಜೋಸೆಫ್
13 : ಸತ್ಪುರುಷನೊಬ್ಬನು ವಿಕ್ರಯಿಸಲ್ಪಟ್ಟಾಗ ಸುಜ್ಞಾನಿ ಅವನನು ಕೈಬಿಡದೆ ಕಾಪಾಡಿದಳು ಪಾಪದಿಂದ.
14 : ಬಂಧನದಲ್ಲಿದ್ದಾಗಲು ಬಿಡದೆ ಅವನೊಂದಿಗೆ ಸೆರೆಗೆ ಹೋದಳು. ರಾಜದಂಡ ಸಿಕ್ಕಿ, ಅಧಿಕಾರಿಗಳ ಮೇಲೆ ಅಧಿಕಾರ ನಡೆಸುವ ತನಕ ನೆರವಾದಳು. ಅವನ ಮೇಲೆ ತಪ್ಪು ಹೊರಿಸಿದವರೇ ಸುಳ್ಳುಗಾರರೆಂದು ತೋರ್ಪಡಿಸಿದಳು ಆತನಿಗೆ ಚಿರವಾದ ಕೀರ್ತಿಯನ್ನು ತಂದುಕೊಟ್ಟಳು. ವಿಮೋಚನೆ
15 : ಪವಿತ್ರ ಹಾಗು ನಿಷ್ಕಳಂಕ ಪ್ರಜೆಯನು ಪೀಡಿಸುತ್ತಿದ್ದ ಜನಾಂಗದಿಂದ ವಿಮೋಚಿಸಿದಳು.
16 : ಸರ್ವೇಶ್ವರನ ದಾಸನೊಬ್ಬನ ಅಂತರಾಳವನ್ನು ಹೊಕ್ಕು ಅದ್ಭುತ ಮಹತ್ಕಾರ್ಯಗಳಿಂದ ಭಯಾನಕ ರಾಜನನ್ನೆದುರಿಸಿದಳು.
17 : ದೇವಜನರು ಪಟ್ಟ ಪ್ರಯಾಸಕೆ ತಕ್ಕ ಪ್ರತಿಫಲವನ್ನಿತ್ತಳು ಅಗಾಧ ಮಾರ್ಗದಲ್ಲಿ ಅವರನು ಸಾಗಿಸಿಕೊಂಡು ಹೋದಳು ಅವರಿಗೆ ಬಿಸಿಲಲ್ಲಿ ನೆರಳಂತೆ, ಇರುಳಲ್ಲಿ ತಾರಾದೀಪದಂತೆ ಇದ್ದಳು.
18 : ಅವರನ್ನು ಕೆಂಪುಸಮುದ್ರ ದಾಟಿಸಿ ತಂದಳು ಜಲರಾಶಿಯಿಂದ ಸಾಗಿಸಿಕೊಂಡು ಹೋದಳು.
19 : ಅವರ ವೈರಿಗಳನು ನೀರಿನಲ್ಲಿ ಮುಳುಗಿಸಿದಳು ಉಕ್ಕುವ ಸಾಗರದಡಿಯಿಂದ ಅವರನು ಕಕ್ಕಿಬಿಟ್ಟಳು.
20 : ಸರ್ವೇಶ್ವರಾ, ಹೀಗೆ ಸಜ್ಜನರು ಸದೆಬಡಿದರು ದುರ್ಜನರನು ಸಂಕೀರ್ತಿಸಿದರು ನಿಮ್ಮ ಪರಮ ಪವಿತ್ರ ನಾಮವನು ಒಕ್ಕೊರಲಿನಿಂದ ಹೊಗಳಿದರು, ಅವರಪರ ಹೋರಾಡಿದ ನಿಮ್ಮ ಭುಜಬಲವನು.
21 : ಮೂಕರ ಬಾಯನು ತೆರೆದವಳು ಆ ಸುಜ್ಞಾನಿಯೇ ಹಸುಳೆಯರ ನಾಲಿಗೆಯನು ಚುರುಕುಗೊಳಿಸಿದವಳು ಆಕೆಯೇ. ಮೋಶೆ

Holydivine