Wisdom - Chapter 18
Holy Bible

1 : ನಿಮ್ಮ ಪವಿತ್ರ ಜನರಿಗಾದರೋ ದೇವಾ, ಪ್ರಕಾಶಮಯ ಬೆಳಕಿತ್ತು. ಈಜಿಪ್ಟರು ಅವರ ಸ್ವರ ಕೇಳಿದ್ದರೂ ನೋಡಿರಲಿಲ್ಲ ಅವರ ರೂಪವನು ತಮ್ಮ ಹಾಗೆ ಸಂಕಟಕ್ಕೀಡಾಗದ ಅವರನು ಧನ್ಯರೆಂದು ಎಣಿಸಿದ್ದರು.
2 : ಹಿಂದೆ ನಿಮ್ಮಾ ಜನರಿಗೆ ಅವರು ಮಾಡಿದ ಅನ್ಯಾಯಕ್ಕೆ ಪ್ರತೀಕಾರ ಮಾಡಲಿಲ್ಲವೆಂದು ಸಲ್ಲಿಸಿದರು ಕೃತಜ್ಞತೆ.
3 : ಕತ್ತಲೆಗೆ ಪ್ರತಿಯಾಗಿ ಬೆಳಗಿಸಿದಿರಿ ನಿಮ್ಮ ಜನರಿಗೆ ಅಗ್ನಿಸ್ತಂಭವೊಂದನು. ಅಪರಿಚಿತಾ ಪ್ರಯಾಣದಲ್ಲಿ ಅವರನು ಅದು ಮುನ್ನಡೆಸಿತು ಕೈಗೊಂಡಿದ್ದಾ ಪ್ರವಾಸದಲಿ ಅದವರಿಗೆ ಪ್ರಭಾಕರನಂತಿತ್ತು.
4 : ಈಜಿಪ್ಟರಾದರೋ ಬಂಧಿತರಾಗಿದ್ದುದು ಉಚಿತವಾಗಿತ್ತು ಬೆಳಕಿಲ್ಲದಾ ಕತ್ತಲೆಯಲಿ. ಕಾರಣ-ಯಾರ ಮೂಲಕ ನಿಮ್ಮ ನಿಮಯದ ಬೆಳಕು ಜಗಕ್ಕೆ ಬರಬೇಕಾಗಿತ್ತೋ ಆ ನಿನ್ನ ಪುತ್ರ ಪುತ್ರಿಯರನು ಅವರು ಇಟ್ಟಿದ್ದರು ಬಂಧನದಲಿ. ಈಜಿಪ್ಟರ ಚೊಚ್ಚಲ ಮಕ್ಕಳು
5 : ದೇವಜನರ ಮಕ್ಕಳನು ಸಂಹರಿಸಲು ಅವರು ಯೋಚಿಸಿದರು ಬಿಸಾಡಲಾದ ಒಂದೇ ಒಂದು ಕೂಸು ಸುರಕ್ಷಿತವಾಯಿತು. ಅಂಥವರನ್ನು ದಂಡಿಸಲು ಅವರ ಅನೇಕ ಮಕ್ಕಳನು ದೇವಾ, ನೀವು ತೆಗೆದುಕೊಂಡಿರಿ. ಅದು ಮಾತ್ರವಲ್ಲ, ಅವರೆಲ್ಲರನು ಒಟ್ಟಿಗೆ ಮಹಾಸಾಗರದಲ್ಲಿ ಮುಳುಗಿಸಿದಿರಿ.
6 : ಆ ರಾತ್ರಿಯ ಘಟನೆಗಳನು ನಮ್ಮ ಪೂರ್ವಜರಿಗೆ ಮೊದಲೇ ತಿಳಿಸಲಾಗಿತ್ತು ಎಂದೇ ಅವರು ನಂಬಿದ್ದ ವಾಗ್ದಾನಗಳಿಂದ ಧೈರ್ಯತಂದುಕೊಂಡರು.
7 : ಹೀಗೆ ಶತ್ರುಗಳ ಅಳಿವನು, ಸಜ್ಜನರ ಉದ್ಧಾರವನು ನಿಮ್ಮ ಜನರು ನಿರೀಕ್ಷಿಸಿದ್ದರು.
8 : ಯಾವ ಸಾಧನಗಳಿಂದ ಶತ್ರುಗಳಿಗೆ ನೀವು ಮುಯ್ಯಿ ತೀರಿಸಿದಿರೋ ಅವುಗಳಿಂದಲೇ ನಮ್ಮನ್ನು ತಮ್ಮ ಬಳಿಗೆ ಕರೆದು ಗೌರವಿಸಿದಿರಿ.
9 : ಸಜ್ಜನರ ಸ್ವಂತ ಕುವರರು ಬಲಿಯನ್ನರ್ಪಿಸಿದರು ರಹಸ್ಯವಾಗಿ ದೇವನಿಯಮದ ನಿಬಂಧನೆಗಳನು ಅಂಗೀಕರಿಸಿದರು ಒಮ್ಮನಸ್ಸಾಗಿ. ಅಂತೆಯೇ ಹೆತ್ತವರು ತಾವು ದೇವಜನರೆಂದು ಒಪ್ಪಿಕೊಂಡರು ಸುಖ-ಸಂಕಟಗಳಲ್ಲಿ ಭಾಗಿಗಳೆಂದು ಹಾಡಿದರು ಪೂರ್ವಜರ ಸ್ತುತಿಗೀತೆಯನು.
10 : ಅತ್ತ ಶತ್ರುಗಳ ಕರ್ಕಶ ಧ್ವನಿ ಕೇಳಲಾಗಿ ಗೋಳಿಡುವ ರೋದನ ಹಬ್ಬಿತು ಬೆತ್ತಲಾಗಿ.
11 : ದಾಸನಿಗೂ ದಣಿಗೂ ಒಂದೇ ದಂಡನೆಯಾಗಿತ್ತು ಅರಸನಿಗೂ ಜನಸಾಮಾನ್ಯನಿಗೂ ಒಂದೇ ವಿಪತ್ತು ಬಂದಿತ್ತು.
12 : ಅವರೆಲ್ಲರು ಒಂದೇ ವಿಧವಾದ ಸಾವಿಗೆ ತುತ್ತಾಗಿದ್ದರು ಎಣಿಸಲಾಗದಷ್ಟು ಶವಗಳು ರಾಶಿ ಬಿದ್ದಿದ್ದವು. ಹೂಣಿಡುವುದಕ್ಕೂ ಸಾಕಷ್ಟು ಜನ ಬದುಕಿರಲಿಲ್ಲ ಒಂದೇ ಪೆಟ್ಟಿಗೆ ಅವರ ಜೇಷ್ಠರೆಲ್ಲಾ ಮಡಿದಿದ್ದರಲ್ಲಾ !
13 : ಮಂತ್ರ ತಂತ್ರಗಳಿಗೆ ಮಾರುಹೋಗಿ ನಂಬಲಿಲ್ಲ ಅವರು ಯಾವುದನು ತಮ್ಮ ಚೊಚ್ಚಲು ಮಕ್ಕಳಿಗೆ ಬಂದೊದಗಿದ ನಾಶನ ಮುಂದಿಟ್ಟು ಒಪ್ಪಿಕೊಂಡರು, ಈ ಜನ ದೇವರ ಸಂತಾನ ಎಂದು.
14 : ಸೌಮ್ಯವಾದ ಮೌನ ಸಮಸ್ತವನು ಆವರಿಸಲು ನಟ್ಟಿರಳು ವೇಗವಾಗಿ ಚಲಿಸಿ ಬಂದಿರಲು,
15 : ನಿಮ್ಮ ಸರ್ವಶಕ್ತ ವಾಣಿ ತನ್ನ ರಾಜ ಸಿಂಹಾಸನ ಬಿಟ್ಟು ಪ್ರಬಲ ಯುದ್ಧವೀರನಂತೆ ಸ್ವರ್ಗದಿಂದ ಜಿಗಿದು ನಾಶನಕ್ಕೆ ಗುರಿಯಾದ ನಾಡಿನೊಳಕ್ಕೆ ಬಂದಿತು.
16 : ಕಟ್ಟುನಿಟ್ಟಾದ ನಿನ್ನಾಜ್ಞೆಯೆಂಬ ಹದವಾದ ಕತ್ತಿಯನು ಅದು ಹಿಡಿದುನಿಂತಿತ್ತು ಎಲ್ಲವನು ಸಾವಿನಿಂದ ತುಂಬಿಸಿ, ನೆಲದ ಮೇಲೆ ನಿಂತಿತ್ತು; ಆದರೂ ಆಗಸವನ್ನೇ ಮುಟ್ಟುತ್ತಿತ್ತು.
17 : ಥಟ್ಟನೆ ಭೀಕರ ಸ್ವಪ್ನಗಳಿಂದ ಆ ಜನರು ದಂಗುಬಡಿದಂತಾದರು ಅನಿರೀಕ್ಷಿತ ಭಯಭೀತಿಯು ಅವರನು ಆವರಿಸಿತು.
18 : ಒಬ್ಬನು ಇಲ್ಲಿ, ಇನ್ನೊಬ್ಬನು ಅಲ್ಲಿ ಅರೆಜೀವಿಯಾಗಿ ಬಿದ್ದುಕೊಂಡನು ತನ್ನ ಮರಣದ ಕಾರಣವನು ರುಜು ಪಡಿಸುತ್ತಿದ್ದನು.
19 : ತಮ್ಮ ಸಂಕಟಕೆ ಕಾರಣವನು ತಿಳಿಯದೆ ಅವರು ನಾಶವಾಗಬಾರದೆಂದು ಅವರನು ಗಾಬರಿಗೊಳಿಸಿದ ಸ್ವಪ್ನಗಳೇ ಅದನು ಮುನ್ಸೂಚಿಸಿದ್ದವು. ಆರೋನನ ಪ್ರಾರ್ಥನೆ-ಇಸ್ರಯೇಲರ ರಕ್ಷಣೆ
20 : ದೇವಜನರಿಗೂ ಬಂದಿತು ಸಾವಿನ ಬವಣೆ ಅನೇಕರು ಮಡಿದರು ಮರುಭೂಮಿಯಲೆ ಆದರೆ ಬಹುಕಾಲ ಉಳಿಯಲಿಲ್ಲ ನಿನ್ನಾ ಕೋಪಾವೇಶನೆ.
21 : ಕಾರಣ, ನಿರ್ದೋಷಿ ಮನುಷ್ಯನೊಬ್ಬನು ಮುಂದೆ ಬಂದನು ತ್ವರೆಯಾಗಿ ಪ್ರಾರ್ಥನೆಯನು, ದೋಷಪರಿಹಾರಕ ಧೂಪವನು ಮಾಡಿಕೊಂಡನು ತನ್ನ ಸೇವಾಯುಧಗಳನ್ನಾಗಿ. ನಿಮ್ಮ ಕೋಪದೆದುರು ನಿಂತು, ಆ ವಿಪತ್ತನ್ನು ಶಮನ ಮಾಡಿದನು ತಾನು ನಿಮ್ಮ ಪರಿಚಾರಕನೆಂದು ತೋರಿಸಿಕೊಂಡನು.
22 : ಅವನು ಆ ಉಪದ್ರವವನು ಶಮನ ಮಾಡಿದ್ದು ತನ್ನಿಂದಲ್ಲ, ತನ್ನ ದೇಹಬಲದಿಂದಲ್ಲ, ಶಸ್ತ್ರ ಪ್ರಯೋಗ ದಿಂದಲೂ ಅಲ್ಲ; ಪಿತೃಗಳಿಗೆ ಮಾಡಿದ ವಾಗ್ದಾನ ಒಡಂಬಡಿಕೆಗಳನು ನೆನಪಿಗೆ ತಂದುಕೊಟ್ಟನು ವಾಕ್ಯದ ಮೂಲಕವೇ ಸಂಹಾರಕ ದೂತನನು ಶಮನಮಾಡಿದನು.
23 : ಸತ್ತವರ ಶವಗಳು ಒಂದರ ಮೇಲೊಂದು ರಾಶಿಯಾಗಿ ಬಿದ್ದಿರುವಾಗ ಅವನು ನಡುವೆ ನಿಂತು ತಡೆಹಿಡಿದನು ಕೋಪವನು ಬದುಕಿರುವವರ ಕಡೆಗೆ ಅದು ಹರಿಯದಂತೆ ಹಾದಿಯನು ಕಟ್ಟಿದನು.
24 : ಅವನು ಧರಿಸಿದ್ದ ನಿಲುವಂಗಿಯ ಮೇಲೆ ಇಡೀ ವಿಶ್ವ ಚಿತ್ರಿತವಾಗಿತ್ತು ರತ್ನಗಳ ನಾಲ್ಕು ಸಾಲುಗಳಲಿ ಪಿತೃಗಳ ಗೌರವ ನಾಮವನು ಕೆತ್ತಲಾಗಿತ್ತು ಅವನ ತಲೆಯ ಮೇಲಿದ್ದ ಪೇಟದಲಿ ನಿಮ್ಮ ಮಹತ್ವವೇ ಬಿಂಬಿಸಿತ್ತು.
25 : ಇದನ್ನು ಕಂಡ ಹಿಮ್ಮೆಟ್ಟಿದನು ಸಂಹಾರಕನು ಭಯಪಟ್ಟು ನಿಮ್ಮ ಕೋಪದ ಬಿಸಿ ಅವನಿಗೆ ತಟ್ಟಿದ್ದೇ ಸಾಕಾಗಿತ್ತು. ಕೆಂಪು ಸಮುದ್ರ

Holydivine