Wisdom - Chapter 9
Holy Bible

1 : ನಮ್ಮ ಪಿತೃಗಳ ದೇವರೇ, ದಯಾಳು ಪ್ರಭುವೇ, ನೀವೆಲ್ಲವನ್ನು ಸೃಷ್ಟಿಸಿರುವಿರಿ ನಿಮ್ಮ ವಾಕ್ಯದಿಂದಲೇ.
2 : ನಿಮ್ಮ ಜ್ಞಾನದಿಂದ ರೂಪಿಸಿದಿರಿ ಮನುಷ್ಯನನು ನಿಮ್ಮ ಸೃಷ್ಟಿ ಮೇಲೆಲ್ಲಾ ಅವನಿಗಿತ್ತಿರಿ ಒಡೆತನವನು.
3 : ಅವನನ್ನು ನೇಮಿಸಿದಿರಿ ಜಗವನ್ನಾಳಲು ನೀತಿಯಿಂದ, ನಿರ್ಮಲಚಿತ್ತದಿಂದ ನ್ಯಾಯತೀರಿಸಲು ಆತ್ಮಸಾಕ್ಷಿಯಿಂದ, ನಿಷ್ಠೆಯಿಂದ.
4 : ನಿಮ್ಮ ಸಿಂಹಾಸನದ ಬಳಿ ಕುಳಿತಿರುವ ಸುಜ್ಞಾನವನ್ನು ದಯಪಾಲಿಸಿ ನಿಮ್ಮ ದಾಸರ ಪಂಕ್ತಿಯಿಂದ ನನ್ನನ್ನು ತಳ್ಳಿಬಿಡಬೇಡಿ.
5 : ನಾನು ನಿಮ್ಮ ಗುಲಾಮನು, ನಿಮ್ಮ ದಾಸಿಯ ಮಗನು ಬಲಹೀನನು, ಅಲ್ಪಕಾಲ ಮಾತ್ರ ಬದುಕುವವನು ನ್ಯಾಯ ವಿಧಿನಿಯಮಗಳನ್ನು ಗ್ರಹಿಸಲಶಕ್ತನು.
6 : ಮಾನವರೊಳು ಉತ್ತಮೋತ್ತಮನೆನಿಸಿ ಕೊಂಡವನು ನಿಮ್ಮಿಂದ ಲಭಿಸುವ ಸುಜ್ಞಾನ ರಹಿತನಾಗಿರಲು ಅವನು ಯಾವ ಗಣನೆಗೂ ಬಾರದವನಾಗಿರುವನು.
7 : ನೀವೆನ್ನ ಆಯ್ದುಕೊಂಡಿರಿ ನಿಮ್ಮ ಜನಕ್ಕೆಲ್ಲ ರಾಜನಾಗಲು ನಿಮ್ಮ ಪುತ್ರಪುತ್ರಯರಿಗೆ ನ್ಯಾಯಾಧಿಪತಿಯಾಗಿರಲು.
8 : ನಿಮ್ಮ ಪವಿತ್ರ ಪರ್ವತದಲ್ಲಿ ನಿಮಗೊಂದು ದೇವಾಲಯ ನಿರ್ಮಿಸಲು ನಿಮ್ಮ ನಿವಾಸ ನಗರದಲ್ಲಿ ನಿಮಗೊಂದು ಬಲಿಪೀಠ ಕಟ್ಟಿಸಲು; ಅದು ನೀವು ಆದಿಯಲ್ಲಿ ಸಿದ್ಧಮಾಡಿದ ಗುಡಾರದ ನಕ್ಷೆಯಾಗಿರಬೇಕೆಂತಲು ನೀವಿತ್ತಿರಿ ನನಗೆ ಆಜ್ಞೆಯನು.
9 : ನಿಮ್ಮ ಕಾರ್ಯಗಳನ್ನೆಲ್ಲ ತಿಳಿದ ಸುಜ್ಞಾನ ಎಂಬಾಕೆ ಇರುವಳು ನಿಮ್ಮಲ್ಲೇ ನೀವು ಲೋಕವನ್ನು ಸೃಷ್ಟಿಸಿದಾಗ ಅವಳಿದ್ದಳು ನಿಮ್ಮ ಹತ್ತಿರವೇ. ನಿಮಗೆ ಪ್ರಿಯವಾದುದನು, ನಿಮ್ಮ ವಿಧಿಗಳಿಗೆ ಅನುಗುಣವಾದುದನು ಅರಿತವಳು ಆಕೆ.
10 : ಕಳಿಸಿಕೊಡಿ ಆಕೆಯನು ಪರಮ ಪವಿತ್ರ ಸ್ವರ್ಗನಿವಾಸದಿಂದ ಬರಮಾಡಿ ಅವಳನ್ನು ನಿಮ್ಮ ಮಹಿಮಾ ಸಿಂಹಾಸನದಿಂದ ಅವಳೆನ್ನೊಡನೆ ದುಡಿದು ಕಲಿಸಲಿ ನಿಮಗೆ ಪ್ರಿಯವಾದುದ.
11 : ಆಕೆ ಎಲ್ಲವನ್ನು ಬಲ್ಲವಳು, ಆಕೆಗಿದೆ ತಿಳುವಳಿಕೆ ಕಾರ್ಯಸಾಧನೆಯಲ್ಲಿ ನನ್ನ ನಡೆಸುವಳು ವಿವೇಕಪಥದಲ್ಲೆ ನನ್ನ ಕಾಯುವಳು ತನ್ನ ಮಹಿಮೆ ಪ್ರಭಾವದಲ್ಲೆ.
12 : ಹೀಗೆ ನನ್ನ ಕೆಲಸಗಳೆಲ್ಲ ಸಮ್ಮತವಾಗುವುವು ನಿಮಗೆ ನಾ ನೀತಿಯಿಂದ ನ್ಯಾಯ ತೀರಿಸುವೆನು ನಿಮ್ಮ ಜನಕ್ಕೆ ಯೋಗ್ಯನಾಗುವೆನಾಗ ನನ್ನ ತಂದೆಯ ಸಿಂಹಾಸನಕ್ಕೆ.
13 : ದೇವರ ಸಂಕಲ್ಪವನ್ನು ಅರಿಯಬಲ್ಲವನಾರು? ಸರ್ವೇಶ್ವರನ ಚಿತ್ತವೇನೆಂದು ಗ್ರಹಿಸಬಲ್ಲವನಾರು?
14 : ಮತ್ರ್ಯ ಮಾನವರ ವಿವೇಚನೆ ಅಸಮರ್ಪಕವಾದುದೇ ನಮ್ಮ ಯೋಜನೆಗಳೆಲ್ಲ ಕೈಗೂಡದೆ ಹೋಗುವಂಥವೇ.
15 : ಈ ನಶ್ವರ ದೇಹ ಅಂತರಾತ್ಮವನ್ನು ಕುಗ್ಗಿಸುತ್ತದೆ ಈ ಮಣ್ಣಿನ ಗುಡಾರ, ಚಿಂತಾಭರಿತ ಮನಕ್ಕೊಂದು ಭಾರವೆ.
16 : ಧರೆಯ ಮೇಲಿನ ವಿಷಯಗಳನ್ನು ತಿಳಿಯುವುದೆಷ್ಟೋ ಕಷ್ಟಕರ ಕೈಗೆಟಕುವುಗಳನ್ನೇ ಕಂಡರಿತುಕೊಳ್ಳುವುದು ಎಷ್ಟೋ ಪ್ರಯಾಸಕರ. ಇಂತಿರಲು, ಸ್ವರ್ಗದಲ್ಲಿರುವುದನು ಬಯಲಿಗೆ ತರಲು ಯಾರು ಸಮರ್ಥ?
17 : ನೀವು ನಿಮ್ಮ ಸುಜ್ಞಾನವನ್ನು ಅನುಗ್ರಹಿಸದೆ ಹೋಗಿದ್ದರೆ ನಿಮ್ಮ ಪವಿತ್ರಾತ್ಮನನ್ನು ಸ್ವರ್ಗದಿಂದ ಕಳುಹಿಸದೆ ಹೋಗಿದ್ದರೆ ನಿಮ್ಮ ಸಂಕಲ್ಪವನ್ನು ಯಾರಾದರು ಅರಿಯುತ್ತಿದ್ದರೆ?
18 : ಹೀಗೆ ಲೋಕದ ಮಾರ್ಗಗಳನ್ನು ತಿದ್ದಲಾಯಿತು, ನಿಮಗೆ ಮೆಚ್ಚುಗೆಯಾದುದನು ಜನರಿಗೆ ಕಲಿಸಲಾಯಿತು, ಸುಜ್ಞಾನದಿಂದಲೇ ಅವರಿಗೆ ರಕ್ಷಣೆ ಲಭಿಸುವಂತಾಯಿತು. ಇತಿಹಾಸದಲ್ಲಿ ಸುಜ್ಞಾನದ ಪಾತ್ರ ಆದಾಮನಿಂದ ಮೋಶೆಯವರೆಗೆ: ಆದಾಮ

Holydivine