Wisdom - Chapter 13
Holy Bible

1 : ದೇವರನ್ನು ಅರಿಯದ ಮನುಜರೆಲ್ಲರು ಮಂದಮತಿಗಳೆಂಬುದು ಸಹಜ. ಕಣ್ಣಿಗೆ ಕಾಣುವ ಚೆಲುವಾದವುಗಳಿಂದ, ಇರುವಾತನನು ಅವರರಿಯಲಿಲ್ಲ. ಸೃಷ್ಟಿಯಾದ ವಸ್ತುಗಳನು ಗಮನಿಸಿ ಸೃಷ್ಟಿಕರ್ತನನು ಗುರುತಿಸಲಿಲ್ಲ.
2 : ಬದಲಿಗೆ ಅಗ್ನಿ, ಆವಿ, ವೇಗವಾಯು, ತಾರಾಗಣ, ಭೋರ್ಗರೆವ ಸಾಗರ, ಗಗನದ ಜ್ಯೋತಿರ್ಮಂಡಲ ಇವುಗಳೇ ಜಗವನ್ನಾಳುವ ದೇವರೆಂದುಕೊಂಡರಲ್ಲಾ !
3 : ಇವುಗಳಲ್ಲಿನ ಚೆಲುವಿಗೆ ಮಣಿದು ಇವುಗಳನೇ ದೇವರೆಂದುಕೊಂಡರು. ಗ್ರಹಿಸದೆ ಹೋದರು ಇವುಗಳ ಒಡೆಯ ಇನ್ನೆಷ್ಟು ಮಿಗಿಲಾಗಿರಬೇಕೆಂದು! ಸೌಂದರ್ಯಕೆ ಮೂಲವಾದ ಸರ್ವೇಶ್ವರನೇ ನಿರ್ಮಿಸಿದನು ಇವುಗಳನು.
4 : ಇವುಗಳಲ್ಲಿನ ಗುಣಶಕ್ತಿಗೆ ಅಚ್ಚರಿಗೊಂಡು ಹಾಗೆ ನುಡಿದಿದ್ದರೆ ಇವುಗಳನು ರೂಪಿಸಿದವನೆಷ್ಟು ಶಕ್ತನೆಂದು ತಿಳಿಯಲಿ ಅವುಗಳಿಂದಲೇ.
5 : ಸೃಷ್ಟಿವಸ್ತುಗಳ ಸೌಂದರ್ಯ ಮಹತ್ವಗಳಿಂದ ಅವುಗಳ ಸೃಷ್ಟಿಕರ್ತನ ಸಾದೃಶ್ಯ ಸಾಧ್ಯ.
6 : ಇಂಥವರ ಮೇಲೆ ಬರುವ ಅಪರಾಧ ಅಂಥ ದೊಡ್ಡದೇನೂ ಅಲ್ಲ ದೇವರನ್ನು ಹುಡುಕುವ ಆಶೆಯಿಂದಲೆ, ತಪ್ಪುಹಾದಿ ಹಿಡಿದಿರಬಹುದಲ್ಲಾ.
7 : ಸೃಷ್ಟಿಕಾರ್ಯಗಳ ನಡುವೆ ಬಾಳುತ್ತಾ ವಿಚಾರಿಸುತ್ತಾರೆ ಮನಃಪೂರ್ವಕವಾಗಿ ಭ್ರಮೆಗೊಳ್ಳುತ್ತಾರೆ ಅವುಗಳ ಸಹಜವಾದ ಚೆಲುವಿಗೆ ಬೆರಗಾಗಿ.
8 : ಹೀಗಿದ್ದರೂ ಇಂಥವರನೆ ದೋಷಮುಕ್ತರೆನ್ನಲಾದೀತೆ?
9 : ಪ್ರಪಂಚವನ್ನೇ ಶೋಧಿಸಿನೋಡುವ ಶಕ್ತಿ ಇವರಲ್ಲಿದ್ದ ಮೇಲೆ ಸೃಷ್ಟಿಗೇ ಒಡೆಯನಾದವನನು ಅರಿತುಕೊಳ್ಳಲು ತಡವಾದುದೇಕೆ? ವಿಗ್ರಹಾರಾಧನೆ
10 : ಬೆಳ್ಳಿಬಂಗಾರಗಳಿಂದ ತಯಾರಿಸಿದ ಕರಕುಶಲ ಪ್ರಾಣಿಗಳು ಪುರಾತನ ಕಾಲದ ಕೆತ್ತನೆಯ ಕೇವಲ ಕಲ್ಲಿನ ರೂಪಗಳು. ಈ ಮುಂತಾದ ಕೈಕೆಲಸಗಳನ್ನು ದೇವರುಗಳು ಎಂದುಕೊಂಡವರು, ಹೀಗೆ ನಿರ್ಜೀವ ವಸ್ತುಗಳಲಿ ನಿರೀಕ್ಷೆ ಇಟ್ಟವರು, ನಿರ್ಭಾಗ್ಯಸ್ತರು.
11 : ಚತುರ ಬಡಗಿಯೊಬ್ಬನು ಕಡಿಯುತ್ತಾನೆ ಸೂಕ್ತವಾದ ಮರವೊಂದನು ಜಾಣತನದಿಂದ ಸುಲಿಯುತ್ತಾನೆ ಅದರ ತೊಗಟೆಯನು ಅಂದಚೆಂದವಾದ ರೂಪಕೊಟ್ಟು, ಅದರಿಂದ ಮಾಡುತ್ತಾನೆ ಪ್ರಯೋಜನಕರ ಪಾತ್ರೆಯನು.
12 : ಕೆಲಸಮಾಡಿ ಮಿಕ್ಕ ತುಂಡುಗಳನ್ನು ಹಾಕುತ್ತಾನೆ ಒಲೆಗೆ ಹೊಟ್ಟೆ ತುಂಬಿಸಿಕೊಳ್ಳಲು ಅದರಿಂದ ಮಾಡುತ್ತಾನೆ ಅಡಿಗೆ.
13 : ಕೆಲಸಕ್ಕೆ ಬಾರದ ಈ ಚೆಕ್ಕೆಗಳಿಂದ ಸುಟ್ಟ ತುಂಡೊಂದನ್ನು ತೆಗೆದುಕೊಳ್ಳುತ್ತಾನೆ. ವಿರಾಮವೇಳೆಯಲ್ಲಿ ಶ್ರಮದಿಂದದನು ಕೆತ್ತಿ ಅದಕೆ ಮನುಷ್ಯರೂಪ ಕೊಡುತ್ತಾನೆ.
14 : ಇಲ್ಲವೆ, ಅದನ್ನು ಕ್ಷುಲ್ಲಕ ಪ್ರಾಣಿಯನ್ನಾಗಿ ಕೆತ್ತಿ, ಬಳಿಯುತ್ತಾನೆ ಬಣ್ಣ ಅದರ ಕರೆಗಳನ್ನೆಲ್ಲಾ ಮುಚ್ಚಿಬಿಡುತ್ತಾನೆ ಹಚ್ಚಿ ಕೆಂಬಣ್ಣ.
15 : ಅದಕ್ಕಾಗಿ ತಕ್ಕ ಗೂಡನು ನಿರ್ಮಿಸುತ್ತಾನೆ ಗೋಡೆಯೊಳು ಅದನು ಭದ್ರಪಡಿಸುತ್ತಾನೆ ಕಬ್ಬಿಣದ ಮೊಳೆ ಹೊಡೆದು.
16 : ಅವನಿಗೆ ಗೊತ್ತು ಅದು ತನ್ನಷ್ಟಕ್ಕೆ ಸಹಾಯಮಾಡಿಕೊಳ್ಳಲಾರದೆಂದು (ಪರರ ಸಹಾಯದ ಅವಶ್ಯಕತೆಯಿರುವ ಅದು ವಿಗ್ರಹವಲ್ಲದೆ ಮತ್ತೇನು?) ಎಂದೇ, ನೋಡಿಕೊಳ್ಳುತ್ತಾನೆ ಅದು ಕೆಳಕ್ಕೆ ಬೀಳಬಾರದೆಂದು.
17 : ತರುವಾಯ ನಾಚಿಕೊಳ್ಳದೆ ಬರುತ್ತಾನೆ ಅದರೊಡನೆ ಮಾತಾಡುವುದಕ್ಕಾಗಿ ಬೇಡಿಕೊಳ್ಳುತ್ತಾನೆ ಆಸ್ತಿಪಾಸ್ತಿಗಾಗಿ, ಮಡದಿ ಮಕ್ಕಳಿಗಾಗಿ.
18 : ಬಲಹೀನವಾದ ಅದಕ್ಕೆ ಮೊರೆಯಿಡುತ್ತಾನೆ ಆರೋಗ್ಯಭಾಗ್ಯಕ್ಕಾಗಿ ಪ್ರಾಣವಿಲ್ಲದದರ ಬಳಿ ಪ್ರಾರ್ಥಿಸುತ್ತಾನೆ ಪ್ರಾಣದಾನಕ್ಕಾಗಿ ನೆರವಿನ ಅನುಭವವೇ ಇಲ್ಲದುದನ್ನು ಕೋರುತ್ತಾನೆ ಸಹಾಯಕ್ಕಾಗಿ ಒಂದು ಹೆಜ್ಜೆ ಮುಂದಿಡಲಾರದುದನ್ನು ಕೇಳಿಕೊಳ್ಳುತ್ತಾನೆ ಸುಖಪ್ರಯಾಣಕ್ಕಾಗಿ, ಲಾಭಕ್ಕಾಗಿ, ಸಂಪಾದನೆಗಾಗಿ, ಕಸಬಿನ ಯಶಸ್ವಿಗಾಗಿ ಕೈಗಳಿದ್ದೂ ಅಶಕ್ತವಾಗಿರುವುದನ್ನು ಅಂಗಲಾಚಿಕೊಳ್ಳುತ್ತಾನೆ ಶಕ್ತಿಗಾಗಿ.

Holydivine