Wisdom - Chapter 7
Holy Bible

1 : ಎಲ್ಲರಂತೆ ನಾನೂ ಸಾಯುವಂಥವನು, ಮತ್ರ್ಯನು, ಮಣ್ಣಿನಿಂದ ರೂಪಿತನಾಗಿ ಮಾನವಕುಲಕ್ಕೆ ಸೇರಿದವನು.
2 : ಮನುಷ್ಯನ ವೀರ್ಯದ ಹಾಗು ದಾಂಪತ್ಯ ಭೋಗದ ಪರಿಣಾಮ ನಾನು ಹತ್ತು ತಿಂಗಳ ಅವಧಿಯಲಿ, ತಾಯಿಯ ಉದರದಲಿ, ನನ್ನೀ ದೇಹರೂಪಿತವಾಯಿತು.
3 : ಹುಟ್ಟಿದಾಗ ಇತರರಂತೆ ಗಾಳಿಯನೆ ಉಸಿರಾಡಿದೆ ಭೂತಾಯಿಯ ಮಡಿಲಿನಲಿ ಬೆಳೆದುಬಂದೆ ನನ್ನ ಮೊದಲ ಧ್ವನಿ ಅಳುವಾಗಿತ್ತು ಇತರ ಮಕ್ಕಳಂತೆ.
4 : ಬಟ್ಟೆ ಸುತ್ತಿ ನನ್ನ ಆರೈಕೆ ಮಾಡಿದರು ಎಚ್ಚರಿಕೆಯಿಂದ.
5 : ಇನ್ನಾವ ಅರಸನ ಹುಟ್ಟೂ ಬೇರೆಯಾಗಿರಲಿಲ್ಲ ಇದಕ್ಕಿಂತ.
6 : ಜೀವನದಲಿ, ಬರುವುದಕ್ಕೂ ತೆರಳುವುದಕ್ಕೂ ಇರುವುದು ಒಂದೇ ದಾರಿ ಎಲ್ಲರಿಗೂ. ಸುಜ್ಞಾನಕ್ಕೆ ಸಲ್ಲತಕ್ಕ ಮರ್ಯಾದೆ
7 : ಇಂತಿರಲು ನಾನು ಮಾಡಿದೆ ಪ್ರಾರ್ಥನೆ ಕೊಡಲಾಯಿತು ನನಗೆ ತಿಳುವಳಿಕೆ ನಾನು ಮೊರೆಯಿಟ್ಟೆ ದೇವರಿಗೆ ಸುಜ್ಞಾನವೆಂಬ ಚೈತನ್ಯೆ ಬಂದಳು ನನ್ನ ಬಳಿಗೆ.
8 : ರಾಜದಂಡ, ಸಿಂಹಾಸನಕ್ಕೂ ಮಿಗಿಲಾಗಿ ಅವಳನ್ನು ಇಷ್ಟಪಟ್ಟೆ ಅವಳ ಮುಂದೆ ಸಿರಿಸಂಪತ್ತು ಶೂನ್ಯವೆಂದು ಅರಿತುಕೊಂಡೆ.
9 : ಅವಳ ಮುಂದೆ, ಭೂಮಿಯ ಚಿನ್ನವೆಲ್ಲ ಉಸುಬಿನ ಕಣದಂತೆ, ಅಮೂಲ್ಯ ರತ್ನವು ಸಾಟಿಯಲ್ಲ, ಬೆಳ್ಳಿಯೂ ಮಣ್ಣಿನ ಮುದ್ದೆಯಂತೆ.
10 : ಆರೋಗ್ಯ ಸೌಂದರ್ಯಗಳಿಗಿಂತ ಹೆಚ್ಚಾಗಿ ಅವಳನ್ನು ಪ್ರೀತಿಸಿದೆ ಬೆಳಕಿಗಿಂತ ಅವಳ ಕುಂದದ ಕಾಂತಿಯನ್ನೇ ಆಯ್ದುಕೊಂಡೆ.
11 : ಅವಳೊಂದಿಗೆ ಉತ್ತಮ ವಸ್ತುಗಳೆಲ್ಲವೂ ಬಂದವು ಅವಳ ಕೈಯಲ್ಲಿತ್ತು ಅಗಣಿತವಾದ ಐಶ್ವರ್ಯವು.
12 : ಇವುಗಳನ್ನೆಲ್ಲಾ ಅವಳು ತಂದುದರಿಂದ ಆನಂದವಾಯಿತೆನಗೆ ಆಕೆಯೇ ಇವುಗಳ ಜನನಿಯೆಂದು ತಿಳಿದಿರಲಿಲ್ಲ ನನಗೆ.
13 : ಕಪಟವಿಲ್ಲದೆ ನಾ ಕಲಿತುಕೊಂಡೆ ಮತ್ಸರವಿಲ್ಲದೆ ನಾ ಕಲಿಸಿಕೊಡುವೆ ಅವಳ ಸಿರಿಯನು ನಾ ಮರೆಯಾಗಿಸೆ.
14 : ಆಕೆ ಎಂದೂ ತೀರಿಹೋಗದ ನಿಧಿ ಮಾನವನಿಗೆ ಗಿಟ್ಟುವುದು ದೇವರ ಪ್ರೀತಿ ಆಕೆಯನ್ನು ಬಳಸುವವರಿಗೆ ದೇವರ ಅನುಮತಿಯಿದೆ ಆಕೆಯಿಂದ ಕಲಿಯುವವರಿಗೆ.
15 : ದೇವರು ನೀಡಲೆನಗೆ ಶಕ್ತಿ ನ್ಯಾಯವಾದುದನೆ ನುಡಿಯಲಿಕೆ ನನಗಿತ್ತ ಕೊಡುಗೆಗಳಿಗೆ ಅನುಗುಣವಾಗಿ ಆಲೋಚಿಸಲಿಕೆ. ಸುಜ್ಞಾನಿಯ ಮಾರ್ಗದರ್ಶಕ, ಜ್ಞಾನಿಗಳ ನಿರ್ದೇಶಕ ಆತನೇ.
16 : ನಾವು, ನಮ್ಮ ನುಡಿಗಳು, ಎಲ್ಲ ವಿವೇಕವು, ಕಲಾಕೌಶಲ್ಯವು, ಜ್ಞಾನಸರ್ವವು ಆತನಿಗೆ ಅಧೀನವು.
17 : ಸಕಲ ವಸ್ತುಗಳ ನೈಜ ಜ್ಞಾನವನು ನನಗಿತ್ತವನು ದೇವರೇ ವಿಶ್ವದ ರಚನೆ, ಪಂಚಭೂತಗಳ ವ್ಯವಹಾರ, ತಿಳಿಸಿದವ ಆತನೆ.
18 : ಕಾಲಗಳ ಆದಿಮಧ್ಯಾಂತರಗಳನು, ಋತುಗಳ ಬದಲಾವಣೆಗಳನು, ಉತ್ತರಾಯಣ, ದಕ್ಷಿಣಾಯಣಗಳನು,
19 : ತಾರಾಗಣಗಳ ವಿನ್ಯಾಸವನು, ವರ್ಷಗಳ ಚಲಾವಣೆಗಳನು,
20 : ಪ್ರಾಣಿಗಳ ಲಕ್ಷಣಗಳನು, ಕಾಡುಮೃಗಗಳ ಉಗ್ರತೆಗಳನು, ಗಾಳಿಗಳ ಭೀಕರತೆಯನು, ಮಾನವನ ವೈಚಾರಿಕತೆಗಳನು, ಗಿಡಬೇರುಗಳ ಗುಣಗಳನು, ಸಸ್ಯಾದಿಗಳ ವೈವಿಧ್ಯತೆಗಳನು, ಇವುಗಳನ್ನೆಲ್ಲ ನನಗೆ ತಿಳಿಯಪಡಿಸಿದವನು ಆತನೆ.
21 : ವಿಶ್ವದ ಶಿಲ್ಪಿಯಾದ ಸುಜ್ಞಾನಿಯೇ ನನಗೆ ಬೋಧಿಸಿದ್ದರಿಂದ ನಾನು ತಿಳಿದುಕೊಂಡೆ ಗೋಚರ, ಅಗೋಚರ ಸಂಗತಿಗಳನ್ನೆಲ್ಲಾ. ಸುಜ್ಞಾನದ ಮಹತ್ವ
22 : ಸುಜ್ಞಾನದಲ್ಲಿ ಚುರುಕಾಗಿ ಅರಿಯುವ ಹಾಗೂ ಪವಿತ್ರವಾದ ಚೈತನ್ಯವಿರುವುದು; ಅದು ಅದ್ವಿತೀಯ, ನಾನಾವಿಧ, ಅತಿಸೂಕ್ಷ್ಮ ಹಾಗು ಚಲಿಸುವಂಥದ್ದು; ಅದು ಸ್ಪಷ್ಟೋಕ್ತಿಯುಳ್ಳದು, ನಿಷ್ಕಳಂಕವಾದುದು, ಸುರಕ್ಷಿತವಾದುದು, ನಿಚ್ಚಳವಾದುದು, ಸತ್ಪರವಾದುದು, ಹದವಾದುದು;
23 : ನಿರಾತಂಕವಾದುದು, ಕರುಣಾಮಯಿ, ಮಾನವಪ್ರಿಯವಾದುದು; ಸುಸ್ಥಿರ, ನಿಶ್ಚಿತ, ನಿಶ್ಚಿಂತೆಯುಳ್ಳದ್ದು, ಸರ್ವಶಕ್ತಿಯುಳ್ಳದ್ದು, ಚುರುಕು, ನಿರ್ಮಲ, ಸೂಕ್ಷ್ಮ, ಎಲ್ಲ ಜೀವಾತ್ಮಗಳಲ್ಲಿ ಸೇರಿಕೊಳ್ಳುವಂಥದ್ದು.
24 : ಸುಜ್ಞಾನ ಎಲ್ಲಾ ಚಲನೆಗಿಂತಲು ಚುರುಕು ಇಡೀ ವಿಶ್ವದಲ್ಲಿ ವ್ಯಾಪಿಸಿಕೊಳ್ಳುವಷ್ಟು ಸ್ವಚ್ಛವಾದುದು.
25 : ಆಕೆ ದೇವರ ಶಕ್ತಿಯ ಉಸಿರು, ಸರ್ವಶಕ್ತನ ನಿರ್ಮಲ ಪ್ರವಾಹ. ಎಂದೇ ಆಕೆಯಲ್ಲಿ ಅಶುದ್ಧವಾದುದು ಯಾವುದೂ ಪ್ರವೇಶಿಸುವಂತಿಲ್ಲ.
26 : ಸುಜ್ಞಾನವು ಅನಾದಿ, ಪರಂಜ್ಯೋತಿಯ ಪ್ರಕಾಶ ದೈವಪ್ರವೃತ್ತಿಯ ನಿಷ್ಕಳಂಕ ದರ್ಪಣ ದೇವರ ಶ್ರೇಷ್ಟತೆಯ ಪ್ರತಿರೂಪ.
27 : ಒಂಟಿಯಾಗಿದ್ದುಕೊಂಡು ಎಲ್ಲವನ್ನು ಆಕೆ ಮಾಡಬಲ್ಲಳು ತನ್ನತನವನ್ನು ಕಳೆದುಕೊಳ್ಳದೆ ಎಲ್ಲವನ್ನು ಹೊಸದಾಗಿಸುವಳು. ಪ್ರತಿಯೊಂದು ಪೀಳಿಗೆಯಲ್ಲೂ ಸಂಚರಿಸಿ, ಸಂತಾತ್ಮಗಳನ್ನು ಹೊಕ್ಕು, ಮಾನವರನ್ನು ದೇವರ ಗೆಳೆಯರನ್ನಾಗಿ, ಪ್ರವಾದಿಗಳನ್ನಾಗಿ ಮಾಡುವಳು.
28 : ಸುಜ್ಞಾನಿಯೊಂದಿಗಿರುವಾತನನ್ನೇ ಹೊರತು ಇನ್ನಾರನ್ನೂ ಪ್ರೀತಿಸುವುದಿಲ್ಲ ದೇವರು.
29 : ಸುಜ್ಞಾನ ಸೂರ್ಯನಿಗಿಂತ ಸುಂದರಳು ಯಾವ ತಾರಾಮಂಡಲಕ್ಕೂ ಮಿಗಿಲಾದವಳು ಬೆಳಕಿಗೆ ಹೋಲಿಸಿದರೆ ಅದನ್ನೂ ಮೀರುವಳು.
30 : ಹಗಲು ಹೋಗಿ ಇರುಳಾಗುವುದು ಸುಜ್ಞಾನಿಯ ಮುಂದೆ ಕೆಡುಕು ನಿಲ್ಲದು. ಸುಜ್ಞಾನದ ಬಯಕೆ

Holydivine