Wisdom - Chapter 6
Holy Bible

1 : ಆದುದರಿಂದ ಅರಸುಗಳೇ, ಕೇಳಿ ತಿಳಿದುಕೊಳ್ಳಿ ಜಗದ ನ್ಯಾಯಮೂರ್ತಿಗಳೇ, ಅರ್ಥಮಾಡಿಕೊಳ್ಳಿ;
2 : ಬಹುಜನಗಳ ಮೇಲೆ ದೊರೆತನ ಮಾಡುವವರೇ, ಆಲಿಸಿ ಅನೇಕ ರಾಷ್ಟ್ರಗಳ ಮೇಲೆ ಹೆಚ್ಚಳಪಡುವವರೇ, ಕಿವಿಗೊಡಿ:
3 : ನಿಮಗೆ ಒಡೆತನ ದೊರೆತದ್ದು ಸರ್ವೇಶ್ವರನಿಂದ ನಿಮ್ಮ ಪ್ರಭುತ್ವ ಬಂದುದು ಆ ಮಹೋನ್ನತನಿಂದ. ನಿಮ್ಮ ಕಾರ್ಯಗಳನ್ನು ಶೋಧಿಸುವವನು ಆತನೆ ನಿಮ್ಮ ಸಂಕಲ್ಪಗಳನ್ನು ಪರಿಶೀಲಿಸುವವನು ಆತನೆ.
4 : ಆತನ ರಾಜ್ಯದ ರಾಯಭಾರಿಗಳು ನೀವೆಲ್ಲ: ಸರಿಯಾಗಿ ನೀವು ನ್ಯಾಯತೀರಿಸಲಿಲ್ಲ ಆತನ ಆಜ್ಞೆಗಳನ್ನು ಪರಿಪಾಲಿಸಲಿಲ್ಲ ಆ ದೇವರ ಸಂಕಲ್ಪದಂತೆ ನಡೆದುಕೊಳ್ಳಲಿಲ್ಲ.
5 : ಆತ ನಿಮ್ಮ ಮೇಲೆರಗುವನು ತ್ವರೆಯಾಗಿ, ಭೀಕರವಾಗಿ ಉನ್ನತಸ್ಥಾನದಲ್ಲಿರುವ ನಿಮಗೆ ತೀರ್ಪಿಡುವನು ಕ್ರೂರವಾಗಿ.
6 : ದೀನರಿಗೆ ದಯಾಪೂರಿತ ಕ್ಷಮೆ ದೊರಕಬಹುದು ಬಲಾಢ್ಯರಿಗಾದರೋ ಕಠಿಣಪರೀಕ್ಷೆ ಕಾದಿರುವುದು.
7 : ಸರ್ವರಿಗೂ ದೊರೆಯಾದ ಸರ್ವೇಶ್ವರ ಮುಖದಾಕ್ಷಿಣ್ಯ ತೋರುವವನಲ್ಲ ದೊಡ್ಡಸ್ತಿಕೆಯನ್ನು ಗಮನಿಸುವವನಲ್ಲ. ಹಿರಿದುಕಿರಿದುಗಳೆರಡನ್ನು ಮಾಡಿದಾತ ಎಲ್ಲರನ್ನು ಸಮನಾಗಿ ನೋಡಿಕೊಳ್ಳಬಲ್ಲ.
8 : ಆದರೂ ಬಲವಂತರಿಗಾಗುವ ಪರೀಕ್ಷೆ ಇರುವುದು ಕಠಿಣತರವಾಗಿಯೇ.
9 : ಎಂದೇ ಅರಸುಕುವರರೇ, ನನ್ನೀ ಬೋಧನೆಗಳೆಲ್ಲ ನಿಮಗಾಗಿಯೇ; ಸುಜ್ಞಾನಿಗಳಾಗಿ, ನೀವು ಸನ್ಮಾರ್ಗ ಬಿಡಬಾರದೆಂದೇ ಇದ ನುಡಿದಿರುವೆ.
10 : ಶುದ್ಧಾಚಾರಗಳನ್ನು ಶ್ರದ್ಧೆಯಿಂದ ಪಾಲಿಸಿದರೆ ಪರಿಶುದ್ಧರಾಗುವರು ಅವುಗಳಲ್ಲಿ ಸುಶಿಕ್ಷಿತರಾದವರು ಸರಿಯಾಗಿ ಉತ್ತರಿಸಬಲ್ಲರು.
11 : ಆದುದರಿಂದ ನನ್ನೀ ನುಡಿಗಳನು ಬಯಸಿರಿ, ಅವುಗಳಿಗಾಗಿ ಹಂಬಲಿಸಿರಿ; ಆಗ ಸುರಕ್ಷಿತರಾಗುವಿರಿ. ಸುಜ್ಞಾನದ ಮೌಲ್ಯ
12 : ಸುಜ್ಞಾನವೆಂಬಾಕೆ ತೇಜೋ ಪುಂಜಳಾಗಿ ಇರುವಳು, ಅವಳ ಕಾಂತಿ ಕುಂದದು. ಪ್ರೀತಿಸುವವರಿಗೆ ಸಹಜವಾಗಿ ಗೋಚರ ಆಗುವಳು, ಅರಸುವವರಿಗೆ ಸಿಕ್ಕುವಳು.
13 : ತನ್ನನ್ನು ತಿಳಿಯಲಪೇಕ್ಷಿಸುವವರ ಹತ್ತಿರಕೆ ತಾನೇ ಬಂದು ತಿಳಿಯಪಡಿಸಿಕೊಳ್ಳುತ್ತಾಳೆ.
14 : ಅವಳನ್ನು ಹುಡುಕಲು ನಸುಕಿನಲೇ ಏಳುವ ಪರಿಶ್ರಮ ಬೇಡ; ಕಾರಣ – ತನ್ನ ಬಾಗಿಲಲೇ ಅವಳು ಕುಳಿತಿರುವುದನ್ನು ಕಾಣುವನಾತ.
15 : ಅವಳ ಮೇಲೇ ನಿಗವಿಟ್ಟಿರುವವನು ಬುದ್ಧಿಸಂಪನ್ನನಾಗುವನು ಅವಳನ್ನೇ ಕಾಯ್ದಿರುವವನು ಚಿಂತೆಯಿಂದ ಬೇಗ ಮುಕ್ತನಾಗುವನು.
16 : ಸುಜ್ಞಾನ ತನಗೆ ಯೋಗ್ಯರಾದವರನು ಅರಸುತ್ತಾ ಸಂಚರಿಸುತ್ತಾಳೆ ಹಾದಿಯಲ್ಲೇ ಅವರಿಗೆ ಪ್ರಸನ್ನಳಾಗಿ ಕಾಣಿಸಿಕೊಳ್ಳುತ್ತಾಳೆ ಅವರ ಪ್ರತಿಯೊಂದು ಆಲೋಚನೆಯಲ್ಲೂ ಅವರೊಂದಿಗಿರುತ್ತಾಳೆ.
17 : ಕಲಿಯಬೇಕೆಂಬ ನೈಜ ಆಕಾಂಕ್ಷೆಯೇ ಸುಜ್ಞಾನದ ಉಗಮ ಕಲಿಕೆಯ ಬಗ್ಗೆ ಇರುವ ಆಸಕ್ತಿಯೆ ಸುಜ್ಞಾನದ ಪ್ರೇಮ.
18 : ಸುಜ್ಞಾನದ ಪ್ರೇಮ, ಅದರ ನಿಯಮಗಳ ಅನುಸರಣ, ಆ ನಿಯಮಗಳ ಪರಿಪಾಲನ – ಇವುಗಳಿಂದ ಅಮರತ್ವವು ಪ್ರಾಪ್ತ.
19 : ಅಮರತ್ವವು ಮಾನವನನ್ನು ದೇವರ ಸಾಮಿಪ್ಯಕ್ಕೊಯ್ಯುತ್ತದೆ.
20 : ಹೀಗೆ ಜ್ಞಾನಾಭಿರುಚಿ ಅರಸೊತ್ತಿಗೆಗೆ ಏರಿಸುತ್ತದೆ.
21 : ಆದುದರಿಂದ ಜನಾಧಿಪತಿಗಳೇ, ಸಿಂಹಾಸನದಲಿ, ರಾಜದಂಡದಲಿ ಆನಂದಿಸಬೇಕಾದರೆ ಸುಜ್ಞಾನ ಪ್ರಭೆಯನು ಸನ್ಮಾನಿಸಿರಿ; ಆಗ ನೀವು ಚಿರಕಾಲ ಆಳುವಿರಿ. ಸುಜ್ಞಾನದ ವಿವರಣೆ
22 : ಸುಜ್ಞಾನವೆಂದರೇನು? ಅದು ಉಗಮವಾದುದು ಹೇಗೆ? ಹೇಳುತ್ತೇನೆ ಕೇಳಿ: ನಿಮ್ಮಿಂದ ರಹಸ್ಯಗಳನ್ನು ಮರೆಯಾಗಿಸಲಾರೆ” ಸೃಷ್ಟಿಯ ಆದಿಯಿಂದ ಆಕೆಯ ಮಾರ್ಗವನ್ನು ವ್ಯಕ್ತಪಡಿಸುವೆ ಸತ್ಯವನ್ನು ಉಪೇಕ್ಷಿಸದೆ, ತಿಳಿದಷ್ಟು ಮಟ್ಟಿಗೆ ವಿವರಿಸುವೆ.
23 : ಇದರಿಂದ ಅಸೂಯೆಪಡಬೇಕೆಂಬ ಉದ್ದೇಶವೇನೂ ನನಗಿಲ್ಲ ಅಸೂಯೆಯೂ ಜ್ಞಾನವೂ ಬೆರೆಯುವುದಿಲ್ಲ.
24 : ಸುಜ್ಞಾನಿಗಳ ಸಂಖ್ಯೆ ಹೆಚ್ಚಿದಷ್ಟೂ ವಿಶ್ವಕ್ಕೆ ಹೆಚ್ಚು ಸಂರಕ್ಷಣೆ ವಿವೇಕಿಯಾದ ಅರಸ ಶಾಂತಿಪ್ರದ ನಾಗುವನು ತನ್ನ ಪ್ರಜೆಗಳಿಗೆ. ಎಂದೇ ಶಿಕ್ಷಣ ಪಡೆ ನನ್ನ ನುಡಿಗಳಿಂದ ನಿನಗೆ ಪ್ರಯೋಜನವಿದೆ ಅವುಗಳಿಂದ. ರಾಜನಾದರೂ ತಾಯಿಗೆ ಮಗ

Holydivine