Wisdom - Chapter 4
Holy Bible

1 : ಮಕ್ಕಳಿಲ್ಲದ ಸದ್ಗುಣಿಯ ಬಾಳು ಲೇಸು ಸದ್ಗುಣ ಸ್ಮರಣೆಯಲೆ ಅಮರತ್ವ ಅಡಗಿರುವುದು ದೇವಮಾನವರ ಮುಂದೆ ಅದು ಮನ್ನಣೆ ಪಡೆವುದು.
2 : ಸದ್ಗುಣವು ಸಮೀಪವಿರುವಾಗ ಜನರು ಅದನ್ನು ಅನುಸರಿಸುತ್ತಾರೆ. ಅದು ದೂರಹೋಗಿಬಿಟ್ಟಾಗ ಅದನ್ನು ಬಯಸುತ್ತಾರೆ. ಅಮರ ಬಹುಮಾನಕ್ಕಾಗಿ ನಡೆವ ಸ್ಪರ್ಧೆಯಲ್ಲಿ ಅದು ಜಯಗಳಿಸುತ್ತದೆ ಎಲ್ಲ ಕಾಲದೊಳು ಅದು ಜಯಮಾಲೆ ಹೊಂದಿ ಮೆರೆಯುತ್ತದೆ.
3 : ದುರುಳರ ಬಹುಸಂಖ್ಯೆಯಲ್ಲಿ ಲಾಭವೇನೂ ಇಲ್ಲ ಆ ಕಳ್ಳ ಸಸಿಗಳು ಆಳವಾಗಿ ಬೇರೂರುವುದಿಲ್ಲ ಸ್ಥಿರವಾದ ನೆಲೆಯನ್ನು ಅವು ಮಾಡಿಕೊಳ್ಳುವುದಿಲ್ಲ.
4 : ಕೊಂಬೆಬಿಟ್ಟು ಕೆಲಕಾಲ ಚೆಂದವಾಗಿ ಅವು ಬೆಳೆದರೂ ನೆಲೆಯಿಲ್ಲದ ಕಾರಣ ಗಾಳಿಗೆ ಹೊಯ್ದಾಡುವುವು ರಭಸಗಾಳಿಗೆ ಬೇರುಸಹಿತ ಕಿತ್ತುಬೀಳುವುವು.
5 : ಬಲಿಯುವುದಕ್ಕೆ ಮುಂಚೆಯೇ ಮುರಿಯುತ್ತವೆ ಆ ರೆಂಬೆಗಳು ಯಾವ ಪ್ರಯೋಜನಕ್ಕೂ ಬಾರವು ಅದರ ಹಣ್ಣಾಗದ ಕಾಯಿಗಳು.
6 : ಹೆತ್ತವರ ತಪ್ಪನ್ನು ಪರಿಶೋಧಿಸುವ ಕಾಲದಲಿ ವ್ಯಭಿಚಾರಕ್ಕೆ ಹುಟ್ಟಿದ ಮಕ್ಕಳೇ ನೀಡುವರು ಸಾಕ್ಷಿ. ಸಜ್ಜನರ ಅಕಾಲ ಮರಣ
7 : ಸಜ್ಜನನು ಕಾಲಕ್ಕೆ ಮುಂಚೆ ಸತ್ತರೂ ವಿಶ್ರಾಂತಿಯನ್ನು ಕಳೆದುಕೊಳ್ಳನು.
8 : ವರ್ಷಗಳು ಹೆಚ್ಚಾದಷ್ಟೂ ಘನತೆ ಹೆಚ್ಚಾಗದು ಕೇವಲ ದೀರ್ಘಾಯುಸ್ಸು ಮುಪ್ಪಿಗೆ ಮಾನ್ಯತೆ ತರದು.
9 : ಜ್ಞಾನಾರ್ಜನೆಯೇ ಮನುಷ್ಯನ ನರೆಗೂದಲು ನಿರ್ಮಲ ಜೀವನವೇ ವೃದ್ಧಾಪ್ಯದ ಗುರುತು. ಹನೋಕನ ಆದರ್ಶ
10 : ದೇವರ ಮೆಚ್ಚಿಗೆಗೂ ಪ್ರೀತಿಗೂ ಪಾತ್ರನಾದವನೊಬ್ಬನಿದ್ದನು. ಪಾಪಿಗಳ ಮಧ್ಯೆ ವಾಸಿಸುವಾಗಲೆ ಮೇಲಕ್ಕೊಯ್ಯಲ್ಪಟ್ಟನು.
11 : ಕಾರಣ – ಕೇಡಿನಿಂದ ಅವನ ಬುದ್ಧಿ ಮಾರ್ಪಡಬಾರದೆಂದು; ಮೋಸದಿಂದ ಅವನ ಮನಸ್ಸು ವಂಚಿತವಾಗಬಾರದೆಂದು.
12 : ಕೆಟ್ಟತನದ ಮೋಹ ಒಳ್ಳೆಯವುಗಳನ್ನು ಮಂಕಾಗಿಸುತ್ತದೆ ದುರಾಶೆಯ ಭ್ರಮೆ ನಿರ್ಮಲ ಮನಸ್ಸನ್ನು ಕೆಡಿಸುತ್ತದೆ.
13 : ಅಲ್ಪಾವಧಿಯಲ್ಲೇ ಅವನು ಸಿದ್ಧಿಯನು ಗಳಿಸಿದನು ಸುದೀರ್ಘ ಜೀವನದ ಪುಣ್ಯವನು ಸಂಪಾದಿಸಿದನು.
14 : ಅವನ ಆತ್ಮ ಸರ್ವೇಶ್ವರನಿಗೆ ಮೆಚ್ಚುಗೆಯಾಗಿತ್ತು ಎಂತಲೆ ದುಷ್ಟರ ಮಧ್ಯೆಯಿಂದ ಅದನ್ನು ಬೇಗನೆ ತೆಗೆಯಲಾಯಿತು.
15 : ದೇವರ ಕೃಪಾಕರುಣೆ ಅವರಿಂದ ಆಯ್ಕೆಯಾದವರಿಗೆ ಅವರ ಪರಾಂಬರಿಕೆ ಅವರ ಭಕ್ತಾದಿಗಳ ಮೇಲೆ. ಇದನ್ನು ಕಂಡರೂ ಜನರು ತಿಳಿದುಕೊಳ್ಳುವುದಿಲ್ಲ ಅಂತರಾಳದಲ್ಲಿ ಅವರು ಇಟ್ಟುಕೊಳ್ಳುವುದಿಲ್ಲ.
16 : ಸತ್ತ ಸಜ್ಜನನು ಖಂಡಿಸುತ್ತಾನೆ ಜೀವಿಸುವ ದುರ್ಜನರನು ಅಂತೆಯೇ, ಅಲ್ಪಾವಧಿಯಲ್ಲೆ ಸಿದ್ಧಿಸಾಧಿಸಿದಾ ಯುವಕನು ಖಂಡಿಸುತ್ತಾನೆ ದೀರ್ಘಾಯುಸ್ಸಿನ ದುಷ್ಟ ಮುದುಕನನು.
17 : ಸಜ್ಜನನು ಯೌವನದಲ್ಲೇ ಸಾಯುವುದನು ನೋಡುತ್ತಾರೆ ದುರುಳರು. ಆದರೆ ಅವನ ಬಗ್ಗೆ ದೇವರ ಚಿತ್ತವೇನೆಂಬುದನು ಅವರರಿಯರು. ಅವನನ್ನು ಹೇಗೆ ಸುರಕ್ಷಿತನಾಗಿ ಇರಿಸಿದ್ದರೆಂಬುದನೂ ಅರಿಯರು.
18 : ಅವನ ಮರಣವನ್ನು ನೋಡಿ ಇವರು ಜರೆಯುತ್ತಾರೆ ಆದರೆ ದೇವರಿವರನ್ನು ಪರಿಹಾಸ್ಯ ಮಾಡುತ್ತಾರೆ. ದುರುಳರು ತಿರಸ್ಕøತ ಶವಗಳಾಗುತ್ತಾರೆ ಸತ್ತು ನಿತ್ಯದಂಡನೆಗೆ ಗುರಿಯಾಗುತ್ತಾರೆ.
19 : ನೆಲಕ್ಕಪ್ಪಳಿಸಿ ಮೌನವಾಗಿಸುವನು ದೇವರು ಅವರನು ಬುಡದಿಂದಲೆ ಅವರನು ಅಲ್ಲಾಡಿಸುವನು. ಸರ್ವನಾಶದ ದುಃಖ ಅವರದಾಗುವುದು ಅವರ ಸ್ಮರಣೆಯೂ ಇಲ್ಲದಾಗುವುದು.
20 : ದುರುಳರ ಪಾಪಗಳನ್ನು ಲೆಕ್ಕಿಸುವ ಕಾಲದಲಿ ಬರುವರವರು ಅಂಜುಬುರುಕರಾಗಿ ಅವರ ದುಷ್ಕøತ್ಯಗಳೇ ಸಾಕ್ಷಿನೀಡುವುವು ಅವರಿಗಿದಿರಾಗಿ.

Holydivine