Ezekiel - Chapter 46
Holy Bible

1 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ವಾರದೊಳಗೆ ಕೆಲಸನಡೆಯುವ ಆರು ದಿವಸಗಳಲ್ಲಿ ಒಳಗಿನ ಪ್ರಾಕಾರದ ಪೂರ್ವ ಹೆಬ್ಬಾಗಿಲು ಮುಚ್ಚಿರಬೇಕು; ಆದರೆ ಸಬ್ಬತ್ ದಿನದಲ್ಲೂ ಅಮಾವಾಸ್ಯೆಯಲ್ಲೂ ತೆರೆದಿರಬೇಕು.
2 : ರಾಜನು ಹೊರಗಿನ ಕೈಸಾಲೆಯ ಮಾರ್ಗವಾಗಿ ಆ ಹೆಬ್ಬಾಗಿಲನ್ನು ಪ್ರವೇಶಿಸಿ ಬಾಗಿಲ ನಿಲವುಕಂಬದ ಪಕ್ಕದಲ್ಲಿ ನಿಂತುಕೊಂಡು, ತಾನು ಒಪ್ಪಿಸಿದ ದಹನಬಲಿ ಪ್ರಾಣಿಯನ್ನು ಶಾಂತಿಸಮಾಧಾನ ಬಲಿಪ್ರಾಣಿಗಳನ್ನೂ ಯಾಜಕರು ಅರ್ಪಿಸುತ್ತಿರುವಾಗ ಬಾಗಿಲ ಹೊಸ್ತಿಲಿನಲ್ಲಿ ಅಡ್ಡಬೀಳಲಿ; ಆಮೇಲೆ ಹೊರಟು ಹೋಗಲಿ; ಅಂದು ಸಂಜೆಯ ತನಕ ಬಾಗಿಲನ್ನು ಮುಚ್ಚಬಾರದು.
3 : ಸಬ್ಬತ್ ದಿನಗಳಲ್ಲೂ ಅಮಾವಾಸ್ಯೆಗಳಲ್ಲೂ ನಾಡಿನ ಜನರು ಆ ಹೆಬ್ಬಾಗಿಲ ದ್ವಾರದ ಮುಂದೆ ಸರ್ವೇಶ್ವರನ ಸಮ್ಮುಖವಾಗಿ ಅಡ್ಡಬೀಳಲಿ.
4 : “ಸಬ್ಬತ್‍ದಿನದಲ್ಲಿ ರಾಜನು ಸರ್ವೇಶ್ವರನಿಗೆ ಕಳಂಕರಹಿತವಾದ ಆರು ಕುರಿಗಳನ್ನೂ ಕಳಂಕರಹಿತವಾದ ಒಂದು ಟಗರನ್ನೂ ದಹನ ಬಲಿಗಾಗಿ ಅರ್ಪಿಸತಕ್ಕದ್ದು.
5 : . ಟಗರಿನೊಡನೆ ಮೂವತ್ತು ಸೇರು ಗೋದಿಹಿಟ್ಟನ್ನೂ ಕುರಿಗಳೊಡನೆ ಸಾಧ್ಯವಿದ್ದಷ್ಟು ಗೋದಿಹಿಟ್ಟನ್ನೂ ಮೂವತ್ತು ಮೂವತ್ತು ಸೇರು ಗೋದಿಹಿಟ್ಟಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯ ನೈವೇದ್ಯಕ್ಕಾಗಿ ಕೊಡಲಿ.
6 : ಅಮಾವಾಸ್ಯೆಯಲ್ಲಿ ಅವನು ಕಳಂಕರಹಿತವಾದ ಒಂದು ಹೋರಿಯನ್ನೂ ಆಡು ಕುರಿಗಳನ್ನೂ ಒಂದು ಟಗರನ್ನೂ ಒಪ್ಪಿಸತಕ್ಕದ್ದು; ಅವು ಕಳಂಕರಹಿತವಾಗಿಯೇ ಇರಬೇಕು.
7 : ಮತ್ತು ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಸಾಧ್ಯವಿದ್ದಷ್ಟು ಗೋದಿಹಿಟ್ಟನ್ನೂ ಮೂವತ್ತು ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
8 : “ರಾಜನು ಪ್ರವೇಶಮಾಡುವಾಗ ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಬಂದು ಅದೇ ಮಾರ್ಗವಾಗಿ ಹೊರಡಲಿ.
9 : ನಾಡಿನ ಜನರಾದರೋ ಹಬ್ಬಗಳಲ್ಲಿ ಸರ್ವೇಶ್ವರನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿಂದ ಆರಾಧಿಸುವುದಕ್ಕೆ ಪ್ರವೇಶಿಸಿದವರು ದಕ್ಷಿಣ ಬಾಗಿಲಿಂದ ಹೊರಡಲಿ; ದಕ್ಷಿಣ ಬಾಗಿಲಿಂದ ಪ್ರವೇಶಿಸಿದವನು ಉತ್ತರ ಬಾಗಿಲಿಂದ ಹೊರಡಲಿ; ತಾನು ಪ್ರವೇಶಿಸಿದ ಬಾಗಿಲಿಂದ ಹಿಂದಿರುಗದೆ ಬಂದ ಮುಖವಾಗಿಯೇ ಹೋಗಲಿ.
10 : ಜನರು ಪ್ರವೇಶಿಸುವಾಗ ರಾಜನು ಅವರ ಮಧ್ಯೆ ಪ್ರವೇಶಿಸಲಿ ಅವರು ಹೊರಡುವಾಗ ಅವನೂ ಹೊರಡಲಿ.
11 : ರಾಜನು ಉತ್ಸವಗಳಲ್ಲೂ ಹಬ್ಬಗಳಲ್ಲೂ ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಸಾಧ್ಯವಿದ್ದಷ್ಟು ಸೇರು ಗೋದಿಹಿಟ್ಟನ್ನೂ ಮೂವತ್ತು ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
12 : “ರಾಜರು ಸ್ವಂತ ಇಚ್ಛೆಯಿಂದ ಕಾಣಿಕೆಯನ್ನಾಗಲಿ, ದಹನಬಲಿಯನ್ನಾಗಲಿ, ಶಾಂತಿ ಸಮಾಧಾನ ಬಲಿಗಳನ್ನಾಗಲಿ ಸರ್ವೇಶ್ವರನಿಗೆ ಸಮರ್ಪಿಸಬೇಕೆಂದಿರುವಾಗ ಅವನಿಗಾಗಿ ಪೂರ್ವ ಹೆಬ್ಬಾಗಿಲನ್ನು ತೆರೆಯಬೇಕು; ಅವನು ಸಬ್ಬತ್ ದಿನದಲ್ಲಿ ಸಮರ್ಪಿಸುವಂತೆ ದಹನಬಲಿಪ್ರಾಣಿಯನ್ನೂ ಶಾಂತಿಸಮಾಧಾನ ಬಲಿಪ್ರಾಣಿಗಳನ್ನೂ ಸಮರ್ಪಿಸಿ ಹೊರಡಲಿ; ಹೊರಟ ಮೇಲ ಬಾಗಿಲನ್ನು ಮುಚ್ಚಬೇಕು.
13 : “ನೀನು ಕಳಂಕರಹಿತವಾದ ಒಂದು ವರ್ಷದ ಕುರಿಯನ್ನು ಸರ್ವೇಶ್ವರನಿಗೆ ದಹನ ಬಲಿಯಾಗಿ ದಿನಂಪ್ರತಿ ಅರ್ಪಿಸಬೇಕು; ಪ್ರತಿದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.
14 : ಅದರೊಂದಿಗೆ ಪ್ರತಿದಿನ ಬೆಳಿಗ್ಗೆ ಧಾನ್ಯನೈವೇದ್ಯವಾಗಿ ಐದು ಸೆರು ಗೋದಿಹಿಟ್ಟನ್ನೂ ಅದನ್ನು ನೆನೆಯಿಸುವುದಕ್ಕೆ ಎರಡು ಸೇರು ಎಣ್ಣೆಯನ್ನೂ ನೀನು ಸಮರ್ಪಿಸಬೇಕು; ಇವುಗಳನ್ನು ಪ್ರತಿನಿತ್ಯವೂ ಸರ್ವೇಶ್ವರನಿಗೆ ಧಾನ್ಯನೈವೇದ್ಯವಾಗಿ ಅರ್ಪಿಸತಕ್ಕದ್ದು; ಇದು ಶಾಶ್ವತ ನಿಯಮ.
15 : ಯಾಜಕರು ಕುರಿಯನ್ನೂ ಧಾನ್ಯನೈವೇದ್ಯವನ್ನೂ ಎಣ್ಣೆಯನ್ನೂ ನಿತ್ಯದಹನ ಬಲಿಯಾಗಿ ಪ್ರತಿದಿನ ಬೆಳಿಗ್ಗೆ ಸಮರ್ಪಿಸಬೇಕು.”
16 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ರಾಜನು ತನ್ನ ಮಕ್ಕಳಲ್ಲಿ ಒಬ್ಬನಿಗೆ ಭೂದಾನ ಮಾಡಿದರೆ ಅದು ತಂದೆಯ ಸೊತ್ತಾದ ಕಾರಣ ಮಕ್ಕಳಿಗೆ ಹಕ್ಕು ಬರುವುದು, ಅದು ಬಾಧ್ಯವಾಗಿ ಸಿಕ್ಕಿದ ಸೊತ್ತೇ.
17 : ಆದರೆ ರಾಜನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ಸೇವಕರಲ್ಲಿ ಒಬ್ಬನಿಗೆ ದಾನಮಾಡಿದರೆ, ಬಿಡುಗಡೆಯ ವರ್ಷದವರೆಗೆ ಅದು ಅವನ ಅಧೀನವಾಗಿರುವುದು; ಆಮೇಲೆ ಅದು ಪುನಃ ರಾಜನ ವಶವಾಗುವುದು. ಆದರೆ ರಾಜನು ತನ್ನ ಮಕ್ಕಳಿಗೆ ಕೊಟ್ಟ ಸೊತ್ತು ಅವರಿಗೇ ಸೇರಿಬಿಡುವುದು.
18 : ಇದಲ್ಲದೆ ರಾಜನು ಪ್ರಜೆಗಳ ಪಿತ್ರಾರ್ಜಿತ ಭೂಮಿಯನ್ನು ಸ್ವಾಧೀನಮಾಡಿಕೊಂಡು ಅವರ ಬಾಧ್ಯತೆಯನ್ನು ತಪ್ಪಿಸಬಾರದು. ಸ್ವಂತ ಭೂಮಿಯನ್ನೇ ವಿಭಾಗಿಸಿ ತನ್ನ ಮಕ್ಕಳಿಗೆ ಪಾಲುಕೊಡಲಿ; ಇಲ್ಲವಾದರೆ ನನ್ನ ಪ್ರಜೆಯಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಭೂಸ್ಥಿತಿಯನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗಬೇಕಾಗುವುದು.”
19 : ಬಳಿಕ ಆ ಪುರುಷ ನನ್ನನ್ನು ಹೆಬ್ಬಾಗಿಲ ಪಕ್ಕದಲ್ಲಿನ ಪ್ರವೇಶದ ಮಾರ್ಗವಾಗಿ ಉತ್ತರಕ್ಕೆ ಅಭಿಮುಖನಾಗಿ ಹಾಗು ಯಾಜಕರಿಗೆ ನೇಮಕವಾಗಿ ಇರುವ ಪರಿಶುದ್ಧವಾದ ಕೋಣೆಗಳಿಗೆ ಬರಮಾಡಿದನು. ಇಗೋ, ಅವುಗಳ ಹಿಂದೆ ಪಶ್ಚಿಮದಲ್ಲಿ ಒಂದು ಸ್ಥಳವಿತ್ತು.
20 : ಆಗ ಅವನು ನನಗೆ, “ಯಾಜಕರು ಹವಿಸ್ಸನ್ನು ಹೊರಗಣ ಪ್ರಾಕಾರಕ್ಕೆ ಒಯ್ದು ಜನರನ್ನು ಶುದ್ಧಿಮಾಡದ ಹಾಗೆ, ಪ್ರಾಯಶ್ಚಿತ್ತ ಬಲಿಪಶುವಿನ ಮತ್ತು ದೋಷಪರಿಹಾರಕ ಬಲಿಪಶುವಿನ ಮಾಂಸವನ್ನು ಬೇಯಿಸುವುದಕ್ಕೂ ಈ ಸ್ಥಳ ಏರ್ಪಟ್ಟಿದೆ,” ಎಂದು ಹೇಳಿದನು.
21 : ತರುವಾಯ ಅವನು ನನ್ನನ್ನು ಹೊರಗಿನ ಪ್ರಾಕಾರಕ್ಕೆ ಬರಮಾಡಿ ಅಲ್ಲಿನ ನಾಲ್ಕು ಮೂಲೆಗಳ ಮಾರ್ಗವಾಗಿ ಕರೆದುಕೊಂಡು ಹೋದನು. ಇಗೋ, ಪ್ರಾಕಾರದ ಒಂದೊಂದು ಮೂಲೆಯಲ್ಲಿ ಒಂದೊಂದು ಒಳ ಅಂಗಳವು ಕಾಣಿಸಿತು.
22 : ಹೌದು, ಪ್ರಾಕಾರದ ನಾಲ್ಕು ಮೂಲೆಗಳಲ್ಲೂ ಇಪ್ಪತ್ತು ಮೀಟರ್ ಉದ್ದದ, ಹದಿನೈದು ಮೀಟರ್ ಅಗಲದ ಪ್ರತ್ಯೇಕವಾದ ಅಂಗಳಗಳು ಇದ್ದವು; ಮೂಲೆಗಳಲ್ಲಿನ ಆ ನಾಲ್ಕು ಅಂಗಳಗಳು ಒಂದೇ ಅಳತೆಯಾಗಿದ್ದವು.
23 : ಅವುಗಳೊಳಗೆ ಸುತ್ತಲು, ಅಂದರೆ ಆ ನಾಲ್ಕು ಅಂಗಳಗಳ ಸುತ್ತುಮುತ್ತಲು ಕಲ್ಲಿನ ವರಸೆಯು ಚಾಚಿಕೊಂಡಿತ್ತು; ಆ ವರಸೆಗಳ ಕೆಳಗೆ ಒಲೆಗಳು ಸುತ್ತಲೂ ಕಟ್ಟಿದ್ದವು.
24 : ಆಗ ಅವನು ನನಗೆ, “ಇವು ದೇವಾಲಯದ ಸೇವಕರು ಬಲಿಪ್ರಾಣಿಗಳನ್ನು ತಂದ ಜನರಿಗಾಗಿ ಅವುಗಳ ಮಾಂಸವನ್ನು ಬೇಯಿಸುವ ಪಾಕಶಾಲೆಗಳು,” ಎಂದು ಹೇಳಿದನು.

Holydivine