Ezekiel - Chapter 26
Holy Bible

1 : ಟೈರ್ ನಗರದ ವಿರುದ್ಧ ದೈವೋಕ್ತಿ ಹನ್ನೊಂದನೆಯ ವರ್ಷದ ಒಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ದಯಪಾಲಿಸಿದರು:
2 : “ನರಪುತ್ರನೇ, ಜೆರುಸಲೇಮಿನ ವಿಷಯವಾಗಿ ಟೈರ್ ನಗರವು ‘ಅಹಹ, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು ಮುರಿದುಹೋಗಿದೆ, ನನ್ನ ಕಡೆಗೆ ತೆರೆದುಬಿದ್ದಿದೆ; ಜೆರುಸಲೇಮ್ ಹಾಳಾದ ಕಾರಣ ನಾನು ವೃದ್ಧಿಗೊಳ್ಳುವೆನು’ ಎಂದುಕೊಂಡಿತು.”
3 : ಆದುದರಿಂದ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಟೈರೇ, ಇಗೋ ನಿನಗೆ ವಿರುದ್ಧವಾಗಿದ್ದೇನೆ; ಸಮುದ್ರವು ತೆರೆಗಳನ್ನು ಎಬ್ಬಿಸುವಂತೆ ನಾನು ಬಹುಜನಾಂಗಗಳನ್ನು ನಿನ್ನ ವಿರುದ್ಧ ಎಬ್ಬಿಸುವೆನು.
4 : ಅವು ಟೈರಿನ ಪೌಳಿಗೋಡೆಯನ್ನು ಉರುಳಿಸಿ, ಅದರ ಕೊತ್ತಲಗಳನ್ನು ಕೆಡವಿ ಹಾಕುವುವು; ನಾನು ಅದರ ಮಣ್ಣನ್ನು ಕೆರೆದು, ಅದನ್ನು ಬೋಳುಬಂಡೆಯಾಗಿ ಮಾಡುವೆನು;
5 : ಅದು ಸಮುದ್ರದ ನಡುವೆ ಬಲೆಗಳಿಗೆ ಹಾಸುಬಂಡೆಯಾಗುವುದು; ನಾನೇ ಇದನ್ನು ನುಡಿದಿದ್ದೇನೆ; ಎಂದು ಸರ್ವೇಶ್ವರನಾದ ದೇವರು ಎನ್ನುತ್ತಾರೆ; ಅದು ಜನಾಂಗಗಳಿಗೆ ಸೂರೆಯಾಗುವುದು;
6 : ಬಯಲು ಭೂಮಿಯಲ್ಲಿನ ಅವರ ಕುವರಿಯರು ಖಡ್ಗದಿಂದ ಹತರಾಗುವರು; ನಾನೇ ಸರ್ವೇಶ್ವರ ಎಂದು ಎಲ್ಲರಿಗೂ ಗೊತ್ತಾಗುವುದು.”
7 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಇಗೋ, ರಾಜಾಧಿರಾಜನೂ ಬಾಬಿಲೋನಿನ ಅರಸನೂ ಆದ ನೆಬೂಕದ್ನೆಚ್ಚರನನ್ನು, ಅಶ್ವ, ರಥ, ರಾಹುತ, ಬಹುಸೈನ್ಯ ಪರಿವಾರ ಇವುಗಳಿಂದ ಕೂಡಿದವನಾಗಿ, ನಾನು ಉತ್ತರದಿಂದ ಟೈರಿನ ಮೇಲೆ ಬರಮಾಡುವೆನು.
8 : ಅವನು ಬಯಲು ಭೂಮಿಯಲ್ಲಿ ನಿನ್ನ ಕುವರಿಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧ ಒಡ್ಡು ಕಟ್ಟಿ, ದಿಬ್ಬ ಹಾಕಿ, ಗುರಾಣಿಯೆತ್ತಿರುವವರನ್ನು ಕಳುಹಿಸಿ,
9 : ತನ್ನ ಭಿತ್ತಿಭೇದಕ ಯಂತ್ರಗಳಿಂದ ನಿನ್ನ ಪೌಳಿಗೋಡೆಯನ್ನು ಹೊಡೆಯಿಸಿ, ತನ್ನ ಆಯುಧಗಳಿಂದ ನಿನ್ನ ಕೊತ್ತಲಗಳನ್ನು ಒಡೆದುಬಿಡುವನು.
10 : ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ಧೂಳು ನಿನ್ನನ್ನು ಮುಸುಕುವುದು; ಒಡಕು ಬಿದ್ದ ಕೋಟೆಯೊಳಗೆ ಶತ್ರು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಸರಕುಗಾಡಿ, ರಥ, ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಅದರುವುವು.
11 : ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ, ನಿನ್ನ ಬಲವಾದ ಕಲ್ಲು ಕಂಬಗಳನ್ನು ಕೆಡಹುವನು.
12 : ಅವನ ಸಐನಿಕರು ನಿನ್ನ ಆಸ್ತಿಯನ್ನು ಸುಲಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಉರುಳಿಸಿ, ನಿನ್ನ ವಿನೋದ ಭವನಗಳನ್ನು ಕೆಡವಿ, ನಿನ್ನ ಕಲ್ಲುಮರಮಣ್ಣುಗಳನ್ನು ಸಮುದ್ರದ ಪಾಲು ಮಾಡುವರು.
13 : ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿ ಇನ್ನು ಕೇಳಿಸದು.
14 : ನಾನು ನಿನ್ನನ್ನು ಬೋಳುಬಂಡೆ ಮಾಡುವೆನು; ನೀನು ಬಲೆಗಳಿಗೆ ಹಾಸುಬಂಡೆಯಾಗುವೆ; ಇನ್ನು ನೀನು ಪುನಃ ನಿರ್ಮಾಣ ಹೊಂದಲಾರೆ; ಸರ್ವೇಶ್ವರನಾದ ನಾನು ಅಪ್ಪಣೆ ಕೊಟ್ಟಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.”
15 : ಸರ್ವೇಶ್ವರನಾದ ದೇವರು ಟೈರ್ ನಗರಕ್ಕೆ ಹೀಗೆ ಹೇಳುತ್ತಾರೆ-“ನಿನ್ನ ಮಧ್ಯದಲ್ಲಿ ಕಗ್ಗೊಲೆಯುಂಟಾಗಿ, ಗಾಯಗೊಂಡವರು ನರಳುತ್ತಿರಲು, ನೀನು ಧಡಮ್ಮನೆ ಬೀಳುವ ಶಬ್ದಕ್ಕೆ ದ್ವೀಪಗಳು ಅದರುವವಲ್ಲವೆ?
16 : ಆಗ ಸಮುದ್ರದ ಸುತ್ತುಮುತ್ತಲಿನ ಎಲ್ಲ ಒಡೆಯರು ತಮ್ಮ ಸಿಂಹಾಸನಗಳಿಂದಿಳಿದು, ನಿಲುವಂಗಿಗಳನ್ನು ತೆಗೆದುಹಾಕಿ, ಕಸೂತಿ ವಸ್ತ್ರಗಳನ್ನು ಕಿತ್ತೆಸೆದು, ತತ್ತರವನ್ನೇ ಹೊದ್ದುಕೊಂಡು, ನೆಲದ ಮೇಲೆ ಕುಕ್ಕರಿಸಿ, ಕ್ಷಣ ಕ್ಷಣವೂ ನಡುಗುತ್ತಾ ನಿನಗೆ ಬೆಚ್ಚಿಬೆರಗಾಗುವರು.
17 : “ಇವರು ನಿನ್ನ ಕುರಿತು, ‘ನಾವಿಕರ ನಿವಾಸವೇ, ಹೆಸರುವಾಸಿಯ ನಗರಿಯೇ, ಸಮುದ್ರದಿಂದ ಬಲಗೊಂಡ ಪಟ್ಟಣವೇ, ನೀನು ತೀರಾ ಹಾಳಾಗಿರುವೆ. ಸಮುದ್ರಸಂಚಾರಿಗಳಿಗೆಲ್ಲಾ ಭಯಾಸ್ಪದರಾಗಿದ್ದ ನಿನ್ನ ನಿವಾಸಿಗಳು ತೀರಾ ಹಾಳಾದರು.
18 : ಆ ನಿನ್ನ ಪತನ ದಿನದಲ್ಲಿ ಕರಾವಳಿಯು ನಡುಗುತ್ತದೆ; ನೀನು ಅಳಿದು ಹೋದುದಕ್ಕೆ ಸಮುದ್ರದ್ವೀಪಗಳು ತತ್ತರಿಸುತ್ತವೆ’ ಎಂಬ ಶೋಕಗೀತೆಯನ್ನೆತ್ತುವರು.”
19 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ:- “ನಾನು ನಿನ್ನನ್ನು ಹಾಳೂರು ಮಾಡಿ, ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಣುಗಿ ಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಉಕ್ಕಿಸುವೆನು.
20 : ಆಗ ಪುರಾತನ ಕಾಲದಲ್ಲಿ ಹಾಳಾದ ಪಟ್ಟಣಗಳಂತೆ, ನಿನ್ನನ್ನು ಅಧೋಲೋಕಕ್ಕೆ ತಳ್ಳಿ, ಪಾತಾಳಕ್ಕೆ ಇಳಿದ ಪೂರ್ವಕಾಲದವರೊಂದಿಗೆ ವಾಸಿಸಮಾಡುವೆನು; ಹೌದು, ನೀನು ನಿನ್ನ ಮಹಿಮೆಯನ್ನು ಜೀವಲೋಕದಲ್ಲಿ ನೆಲೆಗೊಳಿಸದೆ, ನಿರ್ನಿವಾಸಿಯಾಗುವಂತೆ, ನಿನ್ನನ್ನು ಪಾತಾಳಕ್ಕೆ ಇಳಿದವರ ಸಹವಾಸದಲ್ಲೇ ಸೇರಿಸುವೆನು.
21 : ನಿನ್ನನ್ನು ಪೂರ್ತಿಯಾಗಿ ಧ್ವಂಸಮಾಡುವೆನು; ನೀನು ಇಲ್ಲವಾಗುವೆ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವುದಿಲ್ಲ; ಇದು ಸರ್ವೇಶ್ವರನಾದ ದೇವರ ನುಡಿ.”

Holydivine