Ezekiel - Chapter 25
Holy Bible

1 : ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು –
2 : “ನರಪುತ್ರನೇ, ನೀನು ಅಮ್ಮೋನಿಗೆ ಅಭಿಮುಖವಾಗಿ ಅದನ್ನು ಕುರಿತ ದೈವಸಂಕಲ್ಪವನ್ನು ಪ್ರಕಟಿಸುತ್ತಾ ಅದಕ್ಕೆ ಹೀಗೆ ನುಡಿ:
3 : ಸರ್ವೇಶ್ವರನಾದ ದೇವರ ವಾಕ್ಯವನ್ನು ಕೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅಮ್ಮೋನೇ, ನನ್ನ ಪವಿತ್ರಾಲಯವು ಅಪವಿತ್ರವಾದುದ್ದನ್ನು, ಇಸ್ರಯೇಲ್ ನಾಡು ಪಾಳುಬಿದ್ದುದನ್ನು, ಯೆಹೂದ್ಯ ವಂಶದವರು ಗಡೀಪಾರಾದುದನ್ನು ನೋಡಿ ನೀನು ಹಿರಿಹಿರಿ ಹಿಗ್ಗಿಹೋದೆ.
4 : ಆದುದರಿಂದ ಇಗೋ, ನಾನು ನಿನ್ನನ್ನು ಮೂಡಣದವರ ವಶವಾಗುವಂತೆ ಮಾಡುವೆನು; ಅವರು ನಿನ್ನಲ್ಲಿ ತಮ್ಮ ಗುಡಾರಗಳನ್ನು ಹಾಕಿ ಪಾಳೆಯ ಮಾಡಿಕೊಳ್ಳುವರು; ನಿನ್ನ ಹಣ್ಣನ್ನು ತಿನ್ನುವರು; ನಿನ್ನ ಹಾಲನ್ನು ಕುಡಿಯುವರು,
5 : ನಾನು ರಬ್ಬಾಪಟ್ಟಣವನ್ನು ಒಂಟೆಗಳಿಗೆ ಲಾಯವನ್ನಾಗಿ ಹಾಗೂ ಅಮ್ಮೋನ್ ಸೀಮೆಯನ್ನು ಹಿಂಡುಗಳಿಗೆ ರೊಪ್ಪವನ್ನಾಗಿ ಮಾಡುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
6 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಚಪ್ಪಾಳೆ ಹೊಡೆದು, ಕಾಲಿನಿಂದ ನೆಲವನ್ನು ಒದೆದು, ಇಸ್ರಯೇಲ್ ನಾಡನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ಅದಕ್ಕೆ ಬಂದ ಗತಿಗೆ ಹಿಗ್ಗಿಕೊಂಡೆ.
7 : ಆದುದರಿಂದ ಇಗೋ, ನಾನು ನಿನ್ನ ಮೇಲೆ ಕೈಯೆತ್ತಿ ಸುಲಿಗೆಗಾಗಿ ನಿನ್ನನ್ನು ಮ್ಲೇಚ್ಛರಿಗೆ ವಶಪಡಿಸುವೆನು. ಜನಾಂಗಗಳಿಂದ ಕಿತ್ತು, ದೇಶಗಳಿಂದ ನಿನ್ನ ಹೆಸರನ್ನು ಅಳಿಸಿ ನಿನ್ನನ್ನು ಹಾಳುಮಾಡುವೆನು; ಆಗ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು” ಮೋವಾಬ್ ವಿರುದ್ಧ ದೈವೋಕ್ತಿ
8 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: - “ಆಹಾ, ಯೆಹೂದವಂಶ ಎಲ್ಲಾ ಜನಾಂಗಗಳ ಹಾಗೆಯೇ ಇದೆ, ವಿಶೇಷವೇನು ಎಂದು ಮೋವಾಬ ಹಾಗೂ ಸೇಯೀರ ಹೇಳಿಕೊಂಡರು.
9 : ಆದುದರಿಂದ ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು, ಅಂದರೆ ಬೇತ್‍ಯೆಷೀಮೋತ್, ಬಾಳ್‍ಮೆಯೋನ, ಕಿರ್ಯಾಥಯಿಮ್ ಎಂಬ ಪಟ್ಟಣಗಳು, ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು
10 : ಆ ಸೀಮೆಯನ್ನಲ್ಲದೆ, ಅಮ್ಮೋನನ್ನೂ ಮೂಡಣದವರಿಗೆ ಬಾಧ್ಯವಾಗಿ ಕೊಟ್ಟು, ಅಮ್ಮೋನ್ಯರು ಜನಾಂಗಗಳೊಳಗೆ ನಿರ್ನಾಮವಾಗಬೇಕೆಂಬ ನನ್ನ ಸಂಕಲ್ಪವನ್ನು ನೆರವೇರಿಸುವೆನು;
11 : ಮೋವಾಬ್ಯರಿಗೂ ದಂಡನೆಗಳನ್ನು ವಿಧಿಸದೆ ಬಿಡೆನು. ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.” ಎದೋಮ್ ವಿರುದ್ಧ ದೈವೋಕ್ತಿ
12 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ:-“ಎದೋಮ್ ಯೆಹೂದವಂಶಕ್ಕೆ ಪ್ರತೀಕಾರಮಾಡಿದೆ; ಮುಯ್ಯಿಗೆ ಮುಯ್ಯಿ ತೀರಿಸಿ ಮಹಾಪರಾಧವನ್ನು ನಡೆಸಿದೆ;
13 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾನು ಎದೋಮಿನ ಮೇಲೆ ಕೈಯೆತ್ತಿ, ಅದರೊಳಗಿಂದ ಜನರನ್ನೂ ಪಶುಗಳನ್ನೂ ನಿರ್ಮೂಲಪಡಿಸಿ, ತೇಮೊನಿನಿಂದ ದೆದಾನಿನವರೆಗೂ ಅದನ್ನು ಹಾಳುಮಾಡಿ, ಪ್ರಜೆಗಳನ್ನು ಖಡ್ಗಕ್ಕೆ ಸಿಕ್ಕಿಸುವೆನು.
14 : ನಾನು ಎದೋಮಿಗೆ ನನ್ನ ಜನರಾದ ಇಸ್ರಯೇಲರ ಕೈಯಿಂದ ಮುಯ್ಯಿತೀರಿಸುವೆನು; ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು; ನನ್ನ ಪ್ರತೀಕಾರವು ಎದೋಮಿನ ಅನುಭವಕ್ಕೆ ಬರುವುದು; ಇದು ಸರ್ವೇಶ್ವರನಾದ ದೇವರ ನುಡಿ.”
15 : ಪಿಲಿಷ್ಟಿಯರ ವಿರುದ್ಧ ದೈವೋಕ್ತಿ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಫಿಲಿಷ್ಟಿಯರು ಜುದೇಯಕ್ಕೆ ಪ್ರತೀಕಾರ ಮಾಡಿದ್ದಾರೆ; ಹೌದು, ಮುಯ್ಯಿಗೆ ಮುಯ್ಯಿ ತೀರಿಸುತ್ತಾ, ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ದೀರ್ಘದ್ವೇಷದಿಂದ ಹಾಳುಮಾಡಿದ್ದಾರೆ;
16 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಇಗೋ, ನಾನು ಫಿಲಿಷ್ಟಿಯರ ಮೇಲೆ ಕೈಯೆತ್ತುವೆನು; ಕೆರೇತಿಯರನ್ನು ಕತ್ತರಿಸಿಬಿಟ್ಟು, ಸಮುದ್ರತೀರದಲ್ಲಿನ ಜನಶೇಷವನ್ನು ನಿಶ್ಯೇಷಮಾಡುವೆನು;
17 : ಅವರೆಲ್ಲರನ್ನು ಬಹಳವಾಗಿ ಖಂಡಿಸಿ ಮುಯ್ಯಿಗೆ ಮುಯ್ಯಿ ತೀರಿಸುವೆನು; ಹೀಗೆ ಪ್ರತೀಕಾರಮಾಡುವೆನು, ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”

Holydivine