Ezekiel - Chapter 11
Holy Bible

1 : ಆಮೇಲೆ ದೇವರಾತ್ಮ ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಸರ್ವೇಶ್ವರನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು. ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು. ಅವರ ಮಧ್ಯೆ ಅಜ್ಜೂರನ ಮಗ ಯಾಜನ್ಯ, ಬೆನಾಯನ ಮಗ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.
2 : ಅಲ್ಲಿ ದೇವರು ನನಗೆ, “ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ;
3 : ಇವರು, ‘ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಒಂದು ಹಂಡೆ, ನಾವು ಅದರಲ್ಲಿನ ಮಾಂಸ’ ಎಂದು ಹೇಳುತ್ತಾರೆ.
4 : ಆದಕಾರಣ, ನರಪುತ್ರನೇ, ನೀನು ಇವರ ವಿಷಯವಾಗಿ ಶಾಪ ಹಾಕು, ತಪ್ಪದೆ ಹಾಕು,” ಎಂದು ಆಜ್ಞಾಪಿಸಿದರು
5 : ಆಗ ಸರ್ವೇಶ್ವರನ ಆತ್ಮ ನನ್ನಲ್ಲಿ ಆವೇಶ ಉಂಟುಮಾಡಿತು. ಹೀಗೆ ಸಾರಬೇಕೆಂದು ಅಪ್ಪಣೆ ಆಯಿತು: ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲ್ ವಂಶದವರೇ, ನೀವು ಹೀಗೆ ಮಾತಾಡುತ್ತಿದ್ದೀರಿ, ಸರಿ; ನಿಮ್ಮ ಮನಸ್ಸಿನಲ್ಲಿ ಹುಟ್ಟಿರುವ ಆಲೋಚನೆಗಳು ನನಗೆ ಗೊತ್ತೇ ಇವೆ.
6 : ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
7 : “ಆದಕಾರಣ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನಿಮ್ಮ ದೋಷದಿಂದ ಹತರಾಗಿ ಪಟ್ಟಣದಲ್ಲಿ ಬಿದ್ದಿರುವ ನಿಮ್ಮವರ ಶವಗಳೇ ಹಂಡೆಯಲ್ಲಿನ ಮಾಂಸ, ಈ ಪಟ್ಟಣವೇ ಹಂಡೆ, ನಿಮ್ಮನ್ನಾದರೋ ನಾನು ಪಟ್ಟಣದೊಳಗಿಂದ ಕಿತ್ತುಹಾಕಿವೆನು.
8 : ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.
9 : ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು.
10 : ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಯೇಲಿನ ಮೇರೆಯಲ್ಲೆ ನಿಮಗೆ ದಂಡನೆಯನ್ನು ವಿಧಿಸುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
11 : ಈ ಪಟ್ಟಣ ನಿಮಗೆ ಹಂಡೆಯಾಗುವುದಿಲ್ಲ; ನೀವು ಅದರಲ್ಲಿ ಮಾಂಸವಾಗುವುದಿಲ್ಲ; ಇಸ್ರಯೇಲಿನ ಮೇರೆಯಲ್ಲೆ ನಿಮಗೆ ದಂಡನೆಯನ್ನು ವಿಧಿಸುವೆನು.
12 : ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಗೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.”
13 : ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ. “ಅಯ್ಯೋ, ಸರ್ವೇಶ್ವರನಾದ ದೇವರೇ, ಇಸ್ರಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವಿರೋ?” ಎಂದು ಮೊರೆಯಿಟ್ಟೆ.
14 : ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಣಿ ಇದು:
15 : “ನರಪುತ್ರನೇ, ನಿನ್ನ ಸಹೋದರರಿಗೆ, ನಿನ್ನ ಅಣ್ಣ ತಮ್ಮಂದಿರಿಗೆ, ನಿನ್ನ ನೆಂಟರಿಷ್ಟರಿಗೆ, ಅಂತು ಇಸ್ರಯೇಲ್ ವಂಶದ ಎಲ್ಲರಿಗೆ, ಜೆರುಸಲೇಮಿನಲ್ಲೇ ಉಳಿದಿರುವವರು, ‘ಸರ್ವೇಶ್ವರನ ಬಳಿಯಿಂದ ದೂರವಾಗಿ ತೊಲಗಿರಿ, ಈ ನಾಡು ನಮಗೇ ಸೊತ್ತಾಗಿ ಸಿಕ್ಕಿದೆ,’ ಎಂದು ಹೇಳಿ ಹೀನೈಸುತ್ತಿದ್ದಾರಲ್ಲವೆ?
16 : “ಆದಕಾರಣ ನೀನು ಹೀಗೆ ಸಾರು; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನಾನು ಅವರನ್ನು ದೂರ ಗಡೀಪಾರುಮಾಡಿ, ಅನ್ಯದೇಶದ ಜನಾಂಗಗಳಲ್ಲಿ ಚದರಿಸಿದ್ದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಕೊಂಚಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.
17 : “ಆಮೇಲೆ ಅವರನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು. ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಯೇಲ್ ನಾಡನ್ನು ಅವರಿಗೆ ದಯಪಾಲಿಸುವೆನು.
18 : ಅವರು ಅಲ್ಲಿಗೆ ಸೇರಿ ಎಲ್ಲ ಅಸಹ್ಯ ವಸ್ತುಗಳನ್ನೂ ಸಮಸ್ತ ಅನಿಷ್ಟ ವಿಗ್ರಹಗಳನ್ನೂ ತೆಗೆದುಹಾಕುವರು.
19 : ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸುವಂತೆ ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ, ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು;
20 : ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
21 : ಆದರೆ ಯಾರ ಮನಸ್ಸು ತಮ್ಮ ಅಸಹ್ಯ ವಸ್ತುಗಳನ್ನೂ ಅನಿಷ್ಟ ವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು, ಇದು ಸರ್ವೇಶ್ವರನಾದ ದೇವರ ನುಡಿ.”
22 : ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು. ಇಸ್ರಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲಸಿತ್ತು.
23 : ಆಗ ಸರ್ವೇಶ್ವರನ ತೇಜಸ್ಸು ಪಟ್ಟಣದ ಮಧ್ಯದಿಂದ ಏರಿ, ಪಟ್ಟಣಕ್ಕೆ ಪೂರ್ವದಲ್ಲಿರುವ ಗುಡ್ಡದ ಮೇಲೆ ನಿಂತಿತು.
24 : ಆ ಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಬಾಬಿಲೋನಿಯ ದೇಶದಲ್ಲಿ ಸೆರೆಯಾಗಿದ್ದವರ ಬಳಿಗೆ ಒಯ್ದು ತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.
25 : ಸರ್ವೇಶ್ವರ ತೋರಿಸಿದ ಎಲ್ಲವುಗಳನ್ನು ಕೂಡಲೆ ಸೆರೆಯವರಿಗೆ ತಿಳಿಸಿದೆ.

Holydivine