Ezekiel - Chapter 44
Holy Bible

1 : ತರುವಾಯ ಈ ಪುರುಷನು ನನ್ನನ್ನು ಪವಿತ್ರಾಲಯದ ಪೂರ್ವದಿಕ್ಕಿನ ಹೊರಗಿನ ಹೆಬ್ಬಾಗಿಲಿಗೆ ಪುನಃ ಕರೆದುತಂದನು; ಅದು ಮುಚ್ಚಿತ್ತು.
2 : ಆಗ ಸರ್ವೇಶ್ವರ ನನಗೆ, “ಈ ಬಾಗಿಲು ಮುಚ್ಚಿರಬೇಕು, ಇದನ್ನು ತೆರೆಯಕೂಡದು. ಇದರಿಂದ ಯಾರೂ ಪ್ರವೇಶಿಸದಿರಲಿ; ಇಸ್ರಯೇಲಿನ ದೇವರಾದ ಸರ್ವೇಶ್ವರ ಇದರಿಂದ ಪ್ರವೇಶಿಸಿದ್ದಾರೆ; ಇದು ಮುಚ್ಚೇ ಇರಬೇಕು.
3 : ರಾಜರು ಸರ್ವೇಶ್ವರನ ಸನ್ನಿಧಿಯಲ್ಲಿ ಹವಿರ್ಭೋಜನ ಮಾಡುವುದಕ್ಕೆ ಇಲ್ಲಿ ಕುಳಿತುಕೊಳ್ಳಬಹುದು; ಅವನು ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಬಂದು ಅದೇ ಮಾರ್ಗವಾಗಿ ಹೊರಡಬೇಕು,” ಎಂದು ಹೇಳಿದರು.
4 : ಬಳಿಕ ಆ ಪುರುಷನು ಉತ್ತರ ಹೆಬ್ಬಾಗಿಲ ಮಾರ್ಗವಾಗಿ ನನ್ನನ್ನು ದೇವಸ್ಥಾನದ ಮುಂದುಗಡೆಗೆ ಕರೆದುತಂದನು; ಏನಾಶ್ಚರ್ಯ! ನಾನು ನೋಡುತ್ತಿದ್ದಂತೆ ಸರ್ವೇಶ್ವರನ ತೇಜಸ್ಸು ದೇವಾಲಯವನ್ನು ತುಂಬಿಕೊಂಡಿತ್ತು; ಅದನ್ನು ನೋಡಿ ಅಡ್ಡಬಿದ್ದೆ.
5 : ಆಗ ಸರ್ವೇಶ್ವರ ನನಗೆ ಹೀಗೆ ಹೇಳಿದರು; “ನರಪುತ್ರನೇ, ಸರ್ವೇಶ್ವರನ ಆಲಯದ ಸಕಲ ನಿಯಮ ನಿಷ್ಠೆಗಳ ವಿಷಯವಾಗಿ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು, ಮನದಟ್ಟು ಮಾಡಿಕೋ; ಮತ್ತು ಪವಿತ್ರಾಲಯದ ಗಮನಾ ಗಮನವಿಧಿಗಳನ್ನು ಗಮನಿಸು.
6 : “ಇದಲ್ಲದೆ, ನೀನು ಆ ದ್ರೋಹಿಗಳಿಗೆ ಅಂದರೆ, ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ:
7 : ಇಸ್ರಯೇಲ್ ವಂಶದವರೇ, ನೀವು ನನ್ನ ಆಹಾರವಾದ ರಕ್ತಮೇದಸ್ಸುಗಳನ್ನು ಅರ್ಪಿಸುವಾಗ, ತನುಮನಗಳಲ್ಲಿ ಸುನ್ನತಿಹೀನರಾದ ಮ್ಲೇಚ್ಛರನ್ನು, ನನ್ನ ಪವಿತ್ರಾಲಯದೊಳಗೆ ಬರಮಾಡಿ ನನ್ನ ಮಂದಿರವನ್ನು ಅಶುದ್ಧಗೊಳಿಸಿದ್ದೀರಿ. ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿ ನಿಮ್ಮ ಅಮಿತ ದುರಾಚಾರಗಳ ಲೆಕ್ಕವನ್ನು ಹೆಚ್ಚಿಸಿದ್ದೀರಿ.
8 : ನೀವು ನನ್ನ ಪರಿಶುದ್ಧ ವಸ್ತುಗಳ ಪಾರುಪತ್ಯ ಮಾಡಲಿಲ್ಲ; ಈ ಮ್ಲೇಚ್ಛರನ್ನು ನನ್ನ ಪವಿತ್ರಾಲಯದಲ್ಲಿ ನನ್ನ ವಸ್ತುಗಳ ಮೇಲೆ ಪಾರುಪತ್ಯಗಾರರನ್ನಾಗಿ ನೇಮಿಸಿಕೊಂಡಿರಿ; ನಿಮ್ಮ ಅಪಾರ ದುರಾಚಾರಗಳು ಇನ್ನು ಸಾಕು.
9 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಸ್ರಯೇಲರಲ್ಲಿ ಸೇರಿಕೊಂಡಿರುವ ಮ್ಲೇಚ್ಛರೊಳಗೆ ತನುಮನಗಳಲ್ಲಿ ಸುನ್ನತಿಹೀನನಾದ ಯಾವನೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು.”
10 : “ಇಸ್ರಯೇಲರು ನನ್ನನ್ನು ತೊರೆದಾಗ, ನನ್ನಿಂದಾಗಲಿ ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡು, ನನಗೆ ದೂರವಾಗಿ ಹೋದ ಲೇವಿಯರು ತಮ್ಮ ದೋಷಫಲವನ್ನು ಅನುಭವಿಸುವರು.
11 : ಅವರು ನನ್ನ ಪವಿತ್ರಾಲಯದಲ್ಲಿ ಪರಿಚಾರಕರೂ ಮಂದಿರ ದ್ವಾರಪಾಲಕರೂ ಆಗಿ ಮಂದಿರದಲ್ಲಿ ಸೇವೆಮಾಡಬೇಕು; ಜನರ ಪರವಾಗಿ ದಹನಬಲಿಪಶುವನ್ನೂ ಶಾಂತಸಮಾಧಾನ ಬಲಿಪಶುವನ್ನೂ ವಧಿಸಿ ಅವರಿಗೆ ಸೇವೆಮಾಡಲು ಸಿದ್ಧರಾಗಿರಬೇಕು.
12 : ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆಮಾಡಿ, ಇಸ್ರಯೇಲ್ ವಂಶದವರಿಗೆ ಪಾಪಕಾರಿ ವಿಘ್ನವಾದುದರಿಂದ, ನಾನು ಅವರ ಮೇಲೆ ಕೈಯೆತ್ತಿದ್ದೇನೆ. ಅವರು ತಮ್ಮ ದೋಷಫಲವನ್ನು ಅನುಭವಿಸಿಯೇ ತೀರಬೇಕು; ಇದು ಸರ್ವೇಶ್ವರನಾದ ದೇವರ ನುಡಿ.
13 : ನನಗೆ ಯಾಜಕಸೇವೆ ಮಾಡುವುದಕ್ಕೆ ಅವರು ನನ್ನ ಸನ್ನಿಧಿಗೆ ಬರಕೂಡದು. ನನ್ನ ಅತಿ ಪವಿತ್ರವಾದ ಪರಿಶುದ್ಧ ವಸ್ತುಗಳಲ್ಲಿ ಯಾವುದನ್ನೂ ಸಮೀಪಿಸಬಾರದು. ತಮಗಾದ ಅವಮಾನವನ್ನೂ ತಾವು ನಡೆಸಿದ ದುರಾಚಾರಗಳ ಫಲವನ್ನೂ ಅನುಭವಿಸುವರು.
14 : ದೇವಾಲಯದ ಸಕಲ ಸೇವೆಯಲ್ಲೂ ಅಲ್ಲಿ ನಡೆಯುವ ಸಮಸ್ತ ಕಾರ್ಯಗಳಲ್ಲೂ ಸೇವಕ ವೃತ್ತಿಯನ್ನೇ ಅವರಿಗೆ ಕೊಡುವೆನು.
15 : “ಆದರೆ ಇಸ್ರಯೇಲರು ನನ್ನನ್ನು ತೊರೆದಾಗ ಲೇವಿಯರೂ ಚಾದೋಕನ ಸಂತಾನದವರೂ ಆದ ಯಾಜಕರು ನನ್ನ ಪವಿತ್ರಾಲಯದ ಪಾರುಪತ್ಯವನ್ನು ನೆರವೇರಿಸಿದರು. ಆದ್ದರಿಂದ ಅವರು ನನ್ನ ಸೇವೆ ಮಾಡಲು ನನ್ನ ಸನ್ನಿಧಿಗೆ ಬರುವರು, ನನಗೆ ರಕ್ತಮೇದಸ್ಸುಗಳನ್ನು ಅರ್ಪಿಸಲು ನನ್ನ ಸಮ್ಮುಖದಲ್ಲಿ ನಿಂತುಕೊಳ್ಳುವರು; ಇದು ಸರ್ವೇಶ್ವರನಾದ ದೇವರ ನುಡಿ.
16 : ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ, ನನ್ನ ಸೇವೆ ಮಾಡುವುದಕ್ಕೆ ನನ್ನ ವೇದಿಕೆಯನ್ನು ಸಮೀಪಿಸಿ, ನನ್ನ ಆಲಯದ ಪಾರುಪತ್ಯವನ್ನು ವಹಿಸುವರು.
17 : ಅವರು ಒಳಗಿನ ಪ್ರಾಕಾರದ ಬಾಗಿಲುಗಳನ್ನು ಪ್ರವೇಶಿಸುವಾಗ ನಾರುಮಡಿಗಳನ್ನು ಧರಿಸಿರಬೇಕು; ಒಳಗಿನ ಪ್ರಾಕಾರದ ಬಾಗಿಲುಗಳಲ್ಲೂ ದೇವಸ್ಥಾನದಲ್ಲೂ ಸೇವೆಮಾಡುತ್ತಿರುವಾಗ, ಯಾವ ಉಣ್ಣೆಯ ಉಡುಪೂ ಅವರ ಮೇಲೆ ಇರಕೂಡದು.
18 : ಅವರು ತಲೆಗೆ ನಾರುಪೇಟವನ್ನು, ಸೊಂಟಕ್ಕೆ ನಾರುಚಡ್ಡಿಯನ್ನು ಹಾಕಿಕೊಂಡಿರಲಿ; ಬೆವರುವ ಯಾವ ಉಡುಪನ್ನೂ ಉಟ್ಟುಕೊಳ್ಳಬಾರದು.
19 : ಅವರು ಹೊರಗಿನ ಪ್ರಾಕಾರಕ್ಕೆ ಅಂದರೆ, ಅಲ್ಲಿನ ಜನರ ಬಳಿಗೆ ಹೊರಡುವಾಗ, ತಮ್ಮ ದೀಕ್ಷಾವಸ್ತ್ರಗಳನ್ನು ಅವರಿಗೆ ತಗಲಿಸಿ ಅವರನ್ನು ಪರಿಶುದ್ಧರಾಗ ಮಾಡದಂತೆ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಲಿ.
20 : “ಅವರು ತಲೆಬೋಳಿಸಬಾರದು; ಕೂದಲನ್ನು ಬೆಳೆಸಬಾರದು, ಕತ್ತರಿಸಿಕೊಂಡಿರಬೇಕು.
21 : ಒಳಗಿನ ಪ್ರಾಕಾರವನ್ನು ಪ್ರವೇಶಿಸುವಾಗ ಯಾವ ಯಾಜಕನೂ ದ್ರಾಕ್ಷಾರಸವನ್ನು ಕುಡಿದಿರಬಾರದು.
22 : ಯಾಜಕರು ವಿಧವೆಯನ್ನಾಗಲಿ ಗಂಡನಿಂದ ಬಿಡಲಾದವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಯೇಲ್ ವಂಶದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆಮಾಡಿಕೊಳ್ಳಲಿ.
23 : “ಮೀಸಲಾಗಿದದ್ದಕ್ಕೂ ಮೀಸಲಲ್ಲದ್ದಕ್ಕೂ ಇರುವ ಭೇದವನ್ನು ನನ್ನ ಜನರಿಗೆ ತೋರಿಸಿ, ಶುದ್ಧಾಶುದ್ಧ ವಿವೇಚನೆಯನ್ನು ಅವರಿಗೆ ಬೋಧಿಸಲಿ.
24 : ವ್ಯಾಜ್ಯವಾಗುವಾಗ ಅದನ್ನು ತೀರಿಸಲು ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಗೊಂಡು ನನ್ನ ಸಬ್ಬತ್‍ಗಳನ್ನು ಜನರು ಆಚರಿಸುವಂತೆ ನೋಡಿಕೊಳ್ಳಲಿ.
25 : “ಸತ್ತವರ ಹೆಣವನ್ನು ಸಮೀಪಿಸಿ ತಮ್ಮನ್ನೇ ಅಶುದ್ಧಮಾಡಿಕೊಳ್ಳಬಾರದು; ಆದರೆ ಸತ್ತ ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗಾಗಿ ಒಬ್ಬನು ತನ್ನನ್ನೇ ಅಶುದ್ಧ ಮಾಡಿಕೊಳ್ಳಬಹುದು.
26 : ಅಂಥವನನ್ನು ಶುದ್ಧನಾದ ಮೇಲೂ, ಏಳು ದಿವಸ ಪ್ರತ್ಯೇಕಿಸಬೇಕು.
27 : ಅವನು ಸೇವೆ ಮಾಡಲು ಪವಿತ್ರಾಲಯವನ್ನು ಪ್ರವೇಶಿಸಿ ಒಳಗಿನ ಪ್ರಾಕಾರಕ್ಕೆ ಬರುವ ದಿನದಲ್ಲಿ ತನ್ನ ದೋಷಪರಿಹಾರಕ್ಕಾಗಿ ಬಲಿಯನ್ನು ಅರ್ಪಿಸಬೇಕು; ಇದು ಸರ್ವೇಶ್ವರನಾದ ದೇವರ ನುಡಿ.
28 : “ಯಾಜಕರಿಗೆ ಇರುವ ಒಂದು ಸೊತ್ತು ಎಂದರೆ ನಾನೇ. ಇಸ್ರಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು, ನಾನೇ ಅವರಿಗೆ ಆಸ್ತಿ.
29 : ಅವರು ಧಾನ್ಯ ನೈವೇದ್ಯವನ್ನೂ ದೋಷಪರಿಹಾರಕ ಬಲಿದ್ರವ್ಯವನ್ನೂ ಪ್ರಾಯಶ್ಚಿತ್ತ ಬಲಿದ್ರವ್ಯವನ್ನೂ ಅನುಭವಿಸಲಿ. ಸರ್ವೇಶ್ವರನದಾಗಿಯೇ ಇರಲೆಂದು ಇಸ್ರಯೇಲರು ಹರಕೆ ಮಾಡಿಕೊಡುವುದೆಲ್ಲವೂ ಅವರಿಗೆ ಸಲ್ಲಬೇಕು.
30 : ಎಲ್ಲ ಪ್ರಥಮಫಲಗಳಲ್ಲಿ ಉತ್ಕøಷ್ಟವಾದದ್ದು ಹಾಗು ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸುವ ಎಲ್ಲ ಪದಾರ್ಥಗಳು ಅವರದಾಗಬೇಕು. ನಿಮ್ಮ ಮನೆ ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು.
31 : ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲಾದ ಪಕ್ಷಿಯನ್ನಾಗಲಿ, ಪ್ರಾಣಿಯನ್ನಾಗಲಿ ತಿನ್ನಬಾರದು.”

Holydivine