Ezekiel - Chapter 22
Holy Bible

1 : ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು –
2 : “ನರಪುತ್ರನೇ, ರಕ್ತಸಿಕ್ತವಾದ ಆ ಪಟ್ಟಣಕ್ಕೆ ನ್ಯಾಯ ತೀರಿಸಲು ಸ್ಥಿರಮನಸ್ಸು ಮಾಡಿರುವೆಯಾ? ಅದರ ದುರಾಚಾರಗಳನ್ನೆಲ್ಲಾ ಅದಕ್ಕೆ ಹೀಗೆ ತಿಳಿಸು –
3 : ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಿನ್ನ ಮಧ್ಯೆ ರಕ್ತ ಸುರಿಸಿ, ದಂಡನೆಯ ಕಾಲವನ್ನು ಹತ್ತಿರಕ್ಕೆ ತಂದುಕೊಂಡ ನಗರಿಯೇ, ನಿನ್ನ ಕೇಡಿಗಾಗಿಯೇ ವಿಗ್ರಹಗಳನ್ನು ಮಾಡಿಕೊಂಡು ನಿನ್ನನ್ನೆ ಹೊಲೆಗೆಡಿಸಿಕೊಂಡ ನಗರಿಯೇ,
4 : ನೀನು ಸುರಿಸಿದ ರಕ್ತದಿಂದ ಅಪರಾಧಿಯಾಗಿರುವೆ; ಮಾಡಿಕೊಂಡ ವಿಗ್ರಹಗಳಿಂದ ಅಶುದ್ಧವಾಗಿರುವೆ. ಹೀಗೆ ನಿನ್ನ ಸಮಯವನ್ನು ಹತ್ತಿರಕ್ಕೆ ತಂದುಕೊಂಡು ದಂಡನೆಯ ಕಾಲಕ್ಕೆ ಬಂದಿರುವೆ. ಆದ ಕಾರಣ ನಿನ್ನನ್ನು ಜನಾಂಗಗಳ ದೂಷಣೆಗೂ ಸಕಲ ದೇಶಗಳ ಹಾಸ್ಯಕ್ಕೂ ಗುರಿಮಾಡಿದ್ದೇನೆ.
5 : ಕುಖ್ಯಾತನಗರವೇ, ಗದ್ದಲಕ್ಕೆ ಪ್ರಸಿದ್ಧವಾದ ಪಟ್ಟಣವೇ, ಹತ್ತಿರದವರೂ ದೂರದವರೂ ನಿನ್ನನ್ನು ಹಾಸ್ಯ ಮಾಡುವರು.
6 : ಇಗೋ, ಇಸ್ರಯೇಲಿನ ಅರಸರು ತಮ್ಮ ತಮ್ಮ ಶಕ್ತ್ಯಾನುಸಾರ ನಿನ್ನಲ್ಲಿ ರಕ್ತ ಸುರಿಸುತ್ತಲೇ ಇದ್ದಾರೆ.
7 : ನಿನ್ನವರು ತಾಯಿತಂದೆಗಳನ್ನು ತುಚ್ಛೀಕರಿಸಿದ್ದಾರೆ, ನಿನ್ನವರು ವಿದೇಶಿಯರನ್ನು ಬಾದಿಸಿದ್ದಾರೆ, ನಿನ್ನವರು ಅನಾಥರನ್ನೂ ವಿಧವೆಯರನ್ನೂ ಹಿಂಸಿಸಿದ್ದಾರೆ.
8 : ನೀನು ನನ್ನ ಪವಿತ್ರ ವಸ್ತುಗಳನ್ನು ಅಲಕ್ಷ್ಯಮಾಡಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿರುವೆ. ಚಾಡಿಕೋರರು ನಿನ್ನಲ್ಲಿ ರಕ್ತ ಹರಿಸಿದ್ದಾರೆ;
9 : ನಿನ್ನವರು ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದಿದ್ದಾರೆ; ನಿನ್ನ ಮಧ್ಯೆ ದುರಾಚಾರಗಳನ್ನು ನಡೆಸಿದ್ದಾರೆ.
10 : ನಿನ್ನವರು ತಮ್ಮ ತಂದೆಯವರಿಗೆ ಮಾನಭಂಗ ಮಾಡಿದ್ದಾರೆ; ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ.
11 : ನಿನ್ನಲ್ಲಿ ಒಬ್ಬನು ನೆರೆಯವನ ಹೆಂಡತಿಯೊಡನೆ ದುರಾಚಾರ ನಡೆಸಿದ್ದಾನೆ; ಇನ್ನೊಬ್ಬನು ಅತ್ಯಾಚಾರಮಾಡಿ ಸೊಸೆಯನ್ನು ಕೆಡಿಸಿದ್ದಾನೆ; ಮತ್ತೊಬ್ಬನು ತನ್ನ ತಂದೆಯ ಮಗಳೇ ಆದ ತಂಗಿಯ ಮಾನಭಂಗ ಮಾಡಿದ್ದಾನೆ.
12 : “ನಿನ್ನವರು ರಕ್ತ ಸುರಿಸುವುದಕ್ಕೆ ಲಂಚ ಪಡೆದಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ, ಸುಲಿಗೆಮಾಡಿ, ನನ್ನನ್ನು ಮರೆತೇ ಬಿಟ್ಟಿದ್ದಾರೆ; ಇದು ಸರ್ವೇಶ್ವರನಾದ ದೇವರ ನುಡಿ.
13 : “ಇಗೋ, ನೀನು ದೋಚಿಕೊಂಡ ಲಾಭವನ್ನೂ ನೀನು ಸುರಿದ ರಕ್ತವನ್ನೂ ನೋಡಿ ಕೈ ಎತ್ತಿದ್ದೇನೆ.
14 : ನಾನು ನಿನ್ನನ್ನು ದಂಡಿಸುವ ಕಾಲದಲ್ಲಿ ಮನಸ್ಸನ್ನು ಗಟ್ಟಿಮಾಡಿಕೊಂಡಿರುವೆಯಾ? ಕೈಗಳನ್ನು ಬಲಪಡಿಸಿ ಕೊಂಡಿರುವೆಯಾ? ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ. ಅಂತೆಯೇ ನಡೆಸುತ್ತೇನೆ.
15 : ನಾನು ನಿನ್ನನ್ನು ಜನಾಂಗಗಳಲ್ಲಿ ಚದರಿಸಿ, ದೇಶ ವಿದೇಶಗಳಿಗೆ ತೂರಿಬಿಟ್ಟು, ನಿನ್ನ ಹೊಲಸನ್ನು ನಿನ್ನೊಳಗಿಂದ ತೆಗೆದುಹಾಕುವೆನು.
16 : ಜನಾಂಗಗಳ ದೃಷ್ಟಿಯಲ್ಲಿ ನಿನ್ನಷ್ಟಕ್ಕೆ ನೀನೇ ಅಪಕೀರ್ತಿಗೆ ಗುರಿಯಾಗುವೆ; ನಾನೇ ಸರ್ವೇಶ್ವರ ಎಂದು ಆಗ ನಿನಗೆ ಗೊತ್ತಾಗುವುದು.” ದೇವರ ಕುಲುಮೆ
17 : ಆಮೇಲೆ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು – “
18 : ನರಪುತ್ರನೇ, ಇಸ್ರಯೇಲ್ ವಂಶವೆಂಬ ಲೋಹವು ನನ್ನ ದೃಷ್ಟಿಯಲ್ಲಿ ಕಲ್ಮಷವಾಗಿದೆ; ಅದೆಲ್ಲಾ ಕುಲುಮೆಯಲ್ಲಿನ ತಾಮ್ರ, ತವರ, ಕಬ್ಬಿಣ, ಸೀಸ; ಅದು ಕುಂದುಲೋಹ.
19 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀವೆಲ್ಲರು ಕಲ್ಮಷವಾಗಿರುವುದರಿಂದ ಇಗೋ, ನಿಮ್ಮನ್ನು ಜೆರುಸಲೇಮಿನ ಒಳಕ್ಕೆ ಸೇರಿಸುವೆನು. 20ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವುಗಳನ್ನು ಕುಲುಮೆಯೊಳಗೆ ಹಾಕಿ ಊದಿ, ಉರಿಹತ್ತಿಸಿ, ಕರಗಿಸುವಂತೆ ನಾನು ನಿಮ್ಮನ್ನು ನನ್ನ ಉಗ್ರ ಕೋಪಾಗ್ನಿಯಲ್ಲಿ ಇಟ್ಟು ಕರಗಿಸುವೆನು.
20 : ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವುಗಳನ್ನು ಕುಲುಮೆಯೊಳಗೆ ಹಾಕಿ ಊದಿ, ಉರಿಹತ್ತಿಸಿ, ಕರಗಿಸುವಂತೆ ನಾನು ನಿಮ್ಮನ್ನು ನನ್ನ ಉಗ್ರ ಕೋಪಾಗ್ನಿಯಲ್ಲಿ ಇಟ್ಟು ಕರಗಿಸುವೆನು.
21 : ಹೌದು, ನಾನು ನಿಮ್ಮನ್ನು ನನ್ನ ರೋಷಾಗ್ನಿಯಲ್ಲಿ ಹಾಕಿ ಊದಲು ನೀವು ಅದರೊಳಗೆ ಕರಗಿಹೋಗುವಿರಿ.
22 : ಬೆಳ್ಳಿ ಕುಲುಮೆಯೊಳಗೆ ಕರಗುವಂತೆ ನೀವು ನನ್ನ ರೋಷಾಗ್ನಿಯಲ್ಲಿ ಕರಗಿ ಬಿಡುವಿರಿ; ನಿಮ್ಮ ಮೇಲೆ ರೋಷಾಗ್ನಿಯನ್ನು ಸುರಿಸಿದ ನಾನು ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.”
23 : ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು – “ನರಪುತ್ರನೇ,
24 : ಆ ನಾಡಿಗೆ ಹೀಗೆ ಹೇಳು – ದೇವರ ಕೋಪದ ಈ ದಿನದಲ್ಲಿ ನೀನು ಶುದ್ಧಿಯಾಗದ ದೇಶ, ಮಳೆಯಿಲ್ಲದ ದೇಶ.
25 : ಆ ನಾಡಿನೊಳಗೆ ಪ್ರವಾದಿಗಳು ಒಳಸಂಚು ಮಾಡಿಕೊಂಡಿದ್ದಾರೆ, ಬೇಟೆಯನ್ನು ಸೀಳುತ್ತಾ ಗರ್ಜಿಸುವ ಸಿಂಹದಂತಿದ್ದಾರೆ. ನರಪ್ರಾಣಿಗಳನ್ನು ನುಂಗಿದ್ದಾರೆ, ಆಸ್ತಿಯನ್ನೂ ಅಮೂಲ್ಯ ವಸ್ತುಗಳನ್ನೂ ದೋಚಿಕೊಂಡಿದ್ದಾರೆ; ದೇಶದಲ್ಲಿ ಬಹು ಮಂದಿಯನ್ನು ವಿಧವೆಯರನ್ನಾಗಿ ಮಾಡಿದ್ದಾರೆ.
26 : ಅಲ್ಲಿನ ಯಾಜಕರು ನನ್ನ ವಿಧಿಗಳನ್ನು ಉಲ್ಲಂಘಿಸಿದ್ದಾರೆ, ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಗೊಳಿಸಿದ್ದಾರೆ; ಮೀಸಲಾದುದಕ್ಕೂ ಮೀಸಲಲ್ಲದ್ದಕ್ಕೂ ಭೇದವೆಣಿಸಲಿಲ್ಲ. ಶುದ್ಧಾ ಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಕಡೆಗಣಿಸಿದ್ದಾರೆ. ಇದರಿಂದ ನಾನು ಅವರ ಮಧ್ಯೆ ಅಪಕೀರ್ತಿಗೆ ಗುರಿಯಾಗಿದ್ದೇನೆ.
27 : ಅಲ್ಲಿನ ಪ್ರಮುಖರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ಕಬಳಿಸುವ, ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.
28 : ಅಲ್ಲಿನ ಪ್ರವಾದಿಗಳು ಇವರಿಗಾಗಿ ಮಿಥ್ಯ ದರ್ಶನವನ್ನು ಕಂಡು, ಸುಳ್ಳು ಕಣಿಯನ್ನು ಹೇಳಿ, ಸರ್ವೇಶ್ವರ ಮಾತಾಡದಿದ್ದರೂ ‘ಸರ್ವೇಶ್ವರ ದೇವರು ಇಂತೆನ್ನುತ್ತಾರೆ’ ಎಂದು ನುಡಿಯುತ್ತಾ ಮೇಲೆ ಮೇಲೆ ಸುಣ್ಣ ಬಳಿದಿದ್ದಾರೆ.
29 : ಜನ ಸಾಮಾನ್ಯರೂ ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿದ್ದಾರೆ, ವಿದೇಶಿಗಳನ್ನು ಅನ್ಯಾಯವಾಗಿ ನಸುಕಿ ಬಿಟ್ಟಿದ್ದಾರೆ.
30 : ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶ ರಕ್ಷಣೆಗಾಗಿ, ಪೌಳಿಯ ಒಡಕಿನಲ್ಲಿ ನಿಲ್ಲುವುದಕ್ಕೂ ಗೋಡೆಯನ್ನು ಗಟ್ಟಿ ಮಾಡುವುದಕ್ಕೂ ತಕ್ಕವನನ್ನು ನಾನು ಹುಡುಕಿದರೂ ಯಾರೂ ಸಿಕ್ಕಲಿಲ್ಲ.
31 : ಆದ ಕಾರಣ, ನಾನು ನನ್ನ ಕೋಪವನ್ನು ಅವರ ಮೇಲೆ ಸುರಿಸಿ, ನನ್ನ ರೋಷಾಗ್ನಿಯಿಂದ ಅವರನ್ನು ಧ್ವಂಸಮಾಡಿ, ಅವರ ದುರ್ನಡತೆಯ ಹೊಣೆಯನ್ನು ಅವರ ಮೇಲೆ ಹೊರಿಸಿದ್ದೇನೆ. ಇದು ಸರ್ವೇಶ್ವರನಾದ ದೇವರ ನುಡಿ.”

Holydivine