Ezekiel - Chapter 19
Holy Bible

1 : “ಇಸ್ರಯೇಲ್ ಅರಸರನ್ನು ಕುರಿತ ಈ ಶೋಕ ಗೀತೆಯನ್ನು ಹಾಡು:
2 : ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನು, ಯುವ ಸಿಂಹಗಳ ನಡುವೆ ಪವಡಿಸಿ.
3 : ಯುವ ಸಿಂಹವಾಯಿತು ಆಕೆ ಬೆಳೆಸಿದಾ ಮರಿಯೊಂದು, ನರಭಕ್ಷಕ ಆಗಲಾರಂಭಿಸಿತದು ಬೇಟೆಯನು ಕಲಿತು.
4 : ಇದ ಕೇಳಿದ ರಾಷ್ಟ್ರಗಳು ಹಿಡಿದವದನ್ನು ಗುಂಡಿತೋಡಿ, ಈಜಿಪ್ಟ್ ದೇಶಕೊಯ್ದವು ಅದಕ್ಕೆ ಬಿಗಿದು ಸರಪಣಿ.
5 : ತನ್ನ ನಂಬಿಕೆ ನಿರೀಕ್ಷೆ ಹಾಳಾಯಿತೆಂದುಕೊಂಡಾ ಸಿಂಹಿಣಿ, ಪ್ರಾಯಕ್ಕೆ ತಂದಳು ತನ್ನ ಮರಿಗಳಲ್ಲಿ ಇನ್ನೊಂದನ್ನು ಸಾಕಿ.
6 : ಇದು ಕೂಡ ಯುವಸಿಂಹವಾಯಿತು ಇತರ ಸಿಂಹಗಳ ನಡುವೆ ತಿರುಗಾಡಿತು. ಬೇಟೆಯಾಡುವುದನು ಕಲಿತು ತಾನೂ ನರಭಕ್ಷಕನಾಗಲಾರಂಭಿಸಿತು.
7 : ನೆಲಸಮ ಮಾಡಿತು ಪಟ್ಟಣಗಳನೆ ನಾಶ ಮಾಡಿತು ಕೋಟೆಕೊತ್ತಲುಗಳನೆ ನಾಡಿಗೆ ನಾಡೇ ನಡುಗಿತು ಅದರ ಗರ್ಜನೆಗೆ.
8 : ಆಗ ಬಂದವು ಸುತ್ತಲಿನ ರಾಷ್ಟ್ರಗಳು ಒಟ್ಟುಗೂಡಿ, ಸಿಕ್ಕಿಸಿದವು ಅದನ್ನು ಬಲೆಯೊಡ್ಡಿ, ಗುಂಡಿತೋಡಿ.
9 : ಒಯ್ದವು ಅದನ್ನು ಬಾಬಿಲೋನಿನ ಅರಸನ ಬಳಿಗೆ ಬಿಗಿದು ಸರಪಣಿ, ಹಾಕಿ ಪಂಜರದೊಳಗೆ. ಅದರ ಗರ್ಜನೆ ಇಸ್ರಯೇಲಿನ ಗಿರಿಗಳಿಗೆ ಕೇಳಿಸದಂತೆ, ಸೇರಿಸಿಬಿಟ್ಟವು ಅದನ್ನು ಸುಭದ್ರ ಕೋಟೆಯೊಳಗೆ.
10 : ನಿನ್ನ ಹೆತ್ತ ತಾಯಿ ದ್ರಾಕ್ಷಾಲತೆಯಂತೆ ನೀರಾವರಿಯಲಿ ನಾಟಿದ್ದಾ ಲತೆಯಂತೆ ಬೆಳೆದಿತ್ತದು ಫಲವತ್ತಾಗಿ, ಹುಲುಸಾಗಿ, ಅತಿ ತಂಪಾಗಿಯೆ.
11 : ಅದರಲ್ಲಿದ್ದವು ರಾಜದಂಡ ಯೋಗ್ಯವಾದ ಗಟ್ಟಿ ಕೊಂಬೆಗಳು ಮಿಕ್ಕ ರೆಂಬೆಗಳಿಗಿಂತ ಅಧಿಕವಾಗಿತ್ತವುಗಳ ಎತ್ತರವು ಹಲವಾರು ರೆಂಬೆಗಳ ಮಧ್ಯೆ ಉದ್ದುದ್ದವಾಗಿ ಕಾಣಿಸಿದವು.
12 : ಕಿತ್ತು ಬಿಸಾಡಿದರು ಕ್ರೋಧಿಗಳು ಆ ಲತೆಯನು ಬಾಡಿಸಿತು ಅದರ ಫಲವನು ಮೂಡಣಗಾಳಿಯು ಮುದುರಿ ಒಣಗಿ ಹೋದುವು ಅದರ ಗಟ್ಟಿ ಕೊಂಬೆಗಳು.
13 : ದಹಿಸಿಬಿಟ್ಟಿತು ಅವುಗಳನು ಅಗ್ನಿ ಜ್ವಾಲೆಯು, ಈಗದು ನಾಟಿಕೊಂಡಿದೆ ನೀರಿಲ್ಲದ ಬೆಂಗಾಡಿನೊಳು.
14 : ಅದರ ಕಾಂಡದಿಂದ ಹೊರಟ ಬೆಂಕಿಯು ದಹಿಸಿಬಿಟ್ಟಿದೆ ಅದರ ಫಲಗಳನು ಎಂದೇ ಇನ್ನು ಉಳಿದಿಲ್ಲ ಅದರೊಳು ರಾಜದಂಡಕೆ ಯೋಗ್ಯವಾದ ಗಟ್ಟಿ ಕೊಂಬೆಯು.” ಇದೊಂದು ಶೋಕ ಗೀತೆ; ರೂಢಿಯಲ್ಲಿ ಇರುವ ಜಾನಪದ ಗೀತೆ.

Holydivine