Ezekiel - Chapter 39
Holy Bible

1 : “ನರಪುತ್ರನೇ, ನೀನು ಗೋಗನಿಗೆ ವಿರುದ್ಧ ಈ ದೈವೋಕ್ತಿಯನ್ನು ನುಡಿ: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ಒಡೆಯನಾದ ಗೋಗನೇ,
2 : ಇಗೋ, ನಾನು ನಿನಗೆ ವಿರುದ್ಧನಾಗಿ, ನಿನ್ನನ್ನು ತಿರುಗಿಸಿ ಮುನ್ನಡೆಸಿ, ಉತ್ತರದಿಕ್ಕಿನ ಕಟ್ಟಕಡೆಯಿಂದ ಬರಮಾಡಿ, ಇಸ್ರಯೇಲಿನ ಪರ್ವತಗಳ ಮೇಲೆ ನುಗ್ಗಿಸಿ,
3 : ನಿನ್ನ ಎಡಗೈಯಿಂದ ಬಿಲ್ಲನ್ನು ಕಿತ್ತು ಹಾಕಿ, ನಿನ್ನ ಬಲಗೈಯಿಂದ ಬಾಣಗಳನ್ನು ಉದುರಿಸಿಬಿಡುವೆನು.
4 : ನೀನು, ನಿನ್ನ ಸೇನೆ ಹಾಗು ಪರಿವಾರ ಇಸ್ರಯೇಲಿನ ಪರ್ವತಗಳಲ್ಲಿ ಬಿದ್ದುಬಿಡುವಿರಿ; ನಾನು ನಿಮ್ಮನ್ನು ಮಾಂಸಾಹಾರಿಗಳಾದ ಬಗೆ ಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರ ಮಾಡುವೆನು. ನೀವು ಬಯಲಿನಲ್ಲೇ ಬೀಳುವಿರಿ.
5 : ನಾನೇ ಅಪ್ಪಣೆ ಕೊಟ್ಟಿದ್ದೇನೆ. ಇದು ಸರ್ವೇಶ್ವರನಾದ ದೇವರ ನುಡಿ.
6 : ನಾನು ಮಾಗೋಗ್ ದೇಶದ ಮೇಲೂ ಕರಾವಳಿಯ ಸೀಮೆಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೂ ಬೆಂಕಿಯನ್ನು ಕಳುಹಿಸುವೆನು; ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ನಿಶ್ಚಿತ ವಾಗುವುದು.
7 : ನಾನು ನನ್ನ ಪವಿತ್ರನಾಮವನ್ನು ನನ್ನ ಜನರಾದ ಇಸ್ರಯೇಲರ ನಡುವೆ ವ್ಯಕ್ತಗೊಳಿಸುವೆನು, ಅದನ್ನು ಇನ್ನು ಮುಂದೆ ಅಪಕೀರ್ತಿಗೆ ಗುರಿಯಾಗಲುಬಿಡೆನು; ನಾನೇ ಸರ್ವೇಶ್ವರ, ಇಸ್ರಯೇಲಿನ ಪರಮ ಪಾವನಸ್ವಾಮಿ ಎಂದು ಜನಾಂಗಗಳಿಗೆ ಗೊತ್ತಾಗುವುದು.”
8 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಇಗೋ ಬಂದಿತು, ಸಂಭವಿಸಿತು; ನಾನು ಮುಂತಿಳಿಸಿದ ದಿನ ಇದೇ.
9 : ಇಸ್ರಯೇಲಿನ ಪಟ್ಟಣಗಳ ನಿವಾಸಿಗಳು ಬಯಲಿಗೆ ಬಂದು, ಶತ್ರುವಿನ ಆಯುಧಗಳಿಗೆ ಬೆಂಕಿಯಿಕ್ಕಿ ಸುಟ್ಟು ಬಿಡುವರು; ಹೌದು, ಖೇಡ್ಯ, ಗುರಾಣಿ, ಬಿಲ್ಲು, ಬಾಣ, ದೊಣ್ಣೆ, ಈಟಿ ಇವುಗಳನ್ನು ಏಳು ವರ್ಷಗಳ ತನಕ ಸುಡುತ್ತಲೇ ಬರುವರು.
10 : ಕಾಡಿನಿಂದ ಸೌದೆಯನ್ನು ತರಬೇಕಾಗುವುದಿಲ್ಲ, ವನದಲ್ಲಿ ಮರವನ್ನು ಕಡಿಯಬೇಕಾಗುವುದಿಲ್ಲ; ಆಯುಧಗಳನ್ನೇ ಉರಿಸುವರು. ತಮ್ಮನ್ನು ಸೂರೆಮಾಡಿದವರನ್ನು ತಾವು ಸೂರೆಮಾಡುವರು, ತಮ್ಮನ್ನು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆಯುವರು; ಇದು ಸರ್ವೇಶ್ವರನಾದ ದೇವರ ನುಡಿ.
11 : “ಆ ದಿನದಲ್ಲಿ ನಾನು ಇಸ್ರಯೇಲಿನೊಳಗೆ ಲವಣಸಮುದ್ರದ ಪೂರ್ವದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ಕಣಿವೆಯನ್ನು ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು; ಅಲ್ಲಿ ಪ್ರಯಾಣ ಮಾಡಲು ಆಗುವುದಿಲ್ಲ; ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು; ಅದು ‘ಹಮೋನ್ ಗೋಗ್’ ಕಣಿವೆ ಎನಿಸಿಕೊಳ್ಳುವುದು.
12 : ಇಸ್ರಯೇಲರು ನಾಡನ್ನು ಶುದ್ಧಿಮಾಡುವುದಕ್ಕಾಗಿ ಏಳು ತಿಂಗಳು ಅವರನ್ನು ಹೂಣುತ್ತಲೇ ಇರುವರು.
13 : ಹೌದು, ದೇಶದ ಸಕಲ ಪ್ರಜೆಗಳು ಅವರನ್ನು ಹೂಳಿ ಬಿಡುವರು. ಹೀಗೆ ನನ್ನ ಮಹಿಮೆಯನ್ನು ಪ್ರತ್ಯಕ್ಷಗೊಳಿಸುವಾಗ ನನ್ನ ಜನರಿಗೆ ಗೌರವ ಉಂಟಾಗುವುದು; ಇದು ಸರ್ವೇಶ್ವರನಾದ ದೇವರ ನುಡಿ.
14 : ತರುವಾಯ ಅವರು ನಾಡನ್ನು ಶುದ್ಧಿ ಮಾಡುವುದಕ್ಕೆ ತಕ್ಕವರನ್ನು ಆರಿಸಿ, ‘ನೀವು ನಾಡಿನಲ್ಲಿ ತಿರುಗಾಡುತ್ತಾ ನೆಲದ ಮೇಲೆ ಉಳಿದಿರುವ ಎಲುಬುಗಳನ್ನು ಹೂಣಿಡಿ’ ಎಂದು ನಿಯತವಾಗಿ ನೇಮಿಸುವರು; ಏಳು ತಿಂಗಳು ಕಳೆದ ಕೂಡಲೆ, ಇವರು ಈ ಹುಡುಕುವ ಕೆಲಸದಲ್ಲಿ ತೊಡಗುವರು.
15 : ದಾರಿಗಳಲ್ಲಿ ಯಾವನೇ ಆಗಲಿ ಪ್ರಯಾಣ ಮಾಡುತ್ತಿರುವಾಗ ಮನುಷ್ಯನ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ನಿಲ್ಲಿಸುವನು; ಹೂಣಿಡುವವರು ಗೋಗನ ಸಮೂಹದ ಕಣಿವೆಯಲ್ಲಿ ಅದನ್ನು ಹೂಣುವ ತನಕ ಆ ಗುರುತು ಹಾಗೇ ನಿಂತಿರುವುದು.
16 : (ಇದಲ್ಲದೆ ಒಂದು ಪಟ್ಟಣಕ್ಕೆ ‘ಹಮೋನ್’ ಪುರವೆಂಬ ಹೆಸರಾಗುವುದು.) ಹೀಗೆ ದೇಶವನ್ನು ಶುದ್ಧಿಮಾಡುವರು.”
17 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನರಪುತ್ರನೇ, ಎಲ್ಲ ಬಗೆಯ ಪಕ್ಷಿಗಳಿಗೂ ಸಮಸ್ತ ಭೂಜಂತುಗಳಿಗೂ ಹೀಗೆ ನುಡಿ: ನೀವು ಕೂಡಿಬನ್ನಿ; ನಾನು ಇಸ್ರಯೇಲಿನ ಪರ್ವತಗಳ ಮೇಲೆ ನಿಮಗಾಗಿ ಮಾಡುವ ಮಹಾಯಜ್ಞಕ್ಕೆ ಎಲ್ಲ ಕಡೆಯಿಂದಲೂ ನೆರೆದು ಬಂದು ಮಾಂಸವನ್ನು ತಿಂದು, ರಕ್ತವನ್ನು ಕುಡಿಯಿರಿ.
18 : ಟಗರು, ಕುರಿ, ಹೋತ, ಹೋರಿ, ಅಂತು ಬಾಷಾನಿನ ಕೊಬ್ಬಿದ ಪಶುಗಳು, ಅಂದರೆ ಬಲಿಷ್ಠರು, ಭೂಪತಿಗಳು ಇವರ ಮಾಂಸ ಹಾಗೂ ರಕ್ತ ನಿಮಗೆ ಸಿಕ್ಕುವುವು.
19 : ನಾನು ನಿಮಗಾಗಿ ವಧಿಸಿರುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬಾ ತಿನ್ನುವಿರಿ, ರಕ್ತವನ್ನು ಅಮಲೇರುವಷ್ಟು ಕುಡಿಯುವಿರಿ.
20 : ನಾನು ಸಿದ್ಧಪಡಿಸುವ ಆ ಔತಣದಲ್ಲಿ ಕುದುರೆ, ರಾಹುತ ಶೂರ, ಸಕಲವಿಧವಾದ ಯುದ್ಧವೀರರನ್ನು ಯಥೇಚ್ಛವಾಗಿ ಭಕ್ಷಿಸುವಿರಿ; ಇದು ಸರ್ವೇಶ್ವರನಾದ ದೇವರ ನುಡಿ.”
21 : “ಹೀಗೆ ನಾನು ಜನಾಂಗಗಳ ನಡುವೆ ನನ್ನ ಮಹಿಮೆಯನ್ನು ಸ್ಥಾಪಿಸುವೆನು. ಆಗ ಆ ಸೈನಿಕರ ಮೇಲೆ ಕೈಮಾಡಿ ನ್ಯಾಯದಂಡನೆ ನಡೆಸಿದವನು ನಾನೇ ಎಂದು ಆ ಜನಾಂಗಗಳಿಗೆಲ್ಲಾ ಗೋಚರವಾಗುವುದು,
22 : ಇಸ್ರಯೇಲ್ ವಂಶದವರು, ನಾನೇ ತಮ್ಮ ದೇವರಾದ ಸರ್ವೇಶ್ವರನೆಂದು ಅಂದಿನಿಂದ ಯಾವಾಗಲು ತಿಳಿದುಕೊಳ್ಳುವರು.
23 : ಇದಲ್ಲದೆ, ಇಸ್ರಯೇಲರು ತಮ್ಮ ಅಧರ್ಮದ ನಿಮಿತ್ತವೇ ಸೆರೆಯಾಗಿ ಹೋದರೆಂದು ಮತ್ತು ಅವರು ನನಗೆ ದ್ರೋಹ ಮಾಡಿದ್ದರಿಂದಲೆ ನಾನು ಅವರಿಗೆ ವಿಮುಖನಾಗಿ ಅವರೆಲ್ಲರು ಖಡ್ಗಹತರಾಗುವಂತೆ ಅವರನ್ನು ಶತ್ರುವಶ ಮಾಡಿದೆನೆಂದು ಜನಾಂಗಗಳಿಗೆ ಗೊತ್ತಾಗುವುದು;
24 : ಅವರ ಅಶುದ್ಧತನಕ್ಕೂ ದುರಾಚಾರಗಳಿಗೂ ತಕ್ಕಂತೆ ನಾನು ಅವರನ್ನು ದಂಡಿಸಿ ಅವರಿಗೆ ವಿಮುಖನಾದೆನು.”
25 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನನ್ನ ಪವಿತ್ರನಾಮಕ್ಕೆ ಇನ್ನು ಅಪಕೀರ್ತಿಬಾರದಂತೆ ನಾನು ಈಗ ಆಗ್ರಹವುಳ್ಳವನ್ನಾಗಿ ಯಕೋಬ್ಯರ ದುರವಸ್ಥೆಯನ್ನು ತಪ್ಪಿಸಿ ಇಸ್ರಯೇಲ್ ವಂಶದವರಿಗೆಲ್ಲ ಕೃಪೆತೋರುವೆನು.
26 : ನಾನು ನನ್ನ ಜನರನ್ನು ಅನ್ಯ ಜನಾಂಗಗಳ ವಶದಿಂದ ತಪ್ಪಿಸಿ ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ, ಬಹು ಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು
27 : ಅನಂತರ ಅವರು ಸ್ವದೇಶದಲ್ಲಿ ಯಾರ ಭಯವೂ ಇಲ್ಲದೆ ನೆಮ್ಮದಿಯಿಂದ ವಾಸಿಸುತ್ತಿರುವಾಗ ತಾವು ನನಗೆ ಮಾಡಿದ ಎಲ್ಲ ದ್ರೋಹಿಗಳ ಹೊರೆಯನ್ನು ಹೊರುತ್ತಾ ನಾಚಿಕೆಪಡುವರು.
28 : ನಾನು ಅವರನ್ನು ಜನಾಂಗಗಳೊಳಗೆ ಸೆರೆಹೋಗುವಂತೆ ಮಾಡಿ, ಆಮೇಲೆ ಒಟ್ಟುಗೂಡಿಸಿ, ಸ್ವದೇಶಕ್ಕೆ ತಂದದ್ದರಿಂದ ನಾನೇ ತಮ್ಮ ದೇವರಾದ ಸರ್ವೇಶ್ವರ ಎಂದು ದೃಢಮಾಡಿಕೊಳ್ಳುವರು. ಅವರಲ್ಲಿ ಯಾರನ್ನೂ ಸೆರೆಯಲ್ಲಿ ಬಿಟ್ಟುಬಿಡೆನು;
29 : ಇನ್ನೆಂದಿಗೂ ಅವರಿಗೆ ವಿಮುಖನಾಗೆನು; ಇಸ್ರಯೇಲ್ ವಂಶದ ಮೇಲೆ ನನ್ನ ಆತ್ಮವನ್ನು ಸುರಿಸಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.”

Holydivine