Ezekiel - Chapter 20
Holy Bible

1 : ಏಳನೆಯ ವರ್ಷದ ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಇಸ್ರಯೇಲಿನ ಹಿರಿಯರಲ್ಲಿ ಕೆಲವರು ಸರ್ವೇಶ್ವರನನ್ನು ಪ್ರಶ್ನಿಸುವುದಕ್ಕೆ ಬಂದು ನನ್ನ ಮುಂದೆ ಕುಳಿತುಕೊಂಡರು.
2 : ಆಗ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:
3 : ನರಪುತ್ರನೇ, ಇಸ್ರಯೇಲಿನ ಹಿರಿಯರನ್ನು ಸಂಬೋಧಿಸಿ ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ; ಇದು ಸರ್ವೇಶ್ವರನಾದ ದೇವರ ನುಡಿ.
4 : “ನರಪುತ್ರನೇ, ಇವರಿಗೆ ನ್ಯಾಯತೀರಿಸಲು ನೀನೂ ಮನಸ್ಸು ಮಾಡಿರುವೆಯಾ? ಇವರ ಪಿತೃಗಳ ದುರಾಚಾರಗಳನ್ನು ಇವರಿಗೆ ಹೀಗೆ ತಿಳಿಸು –
5 : ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಾನು ಇಸ್ರಯೇಲರನ್ನು ಆರಿಸಿಕೊಂಡ ದಿನದಂದು ಯಕೋಬ ಸಂತಾನದವರಿಗೆ ಮಾತುಕೊಟ್ಟು, ‘ನಾನೇ ನಿಮ್ಮ ದೇವರಾದ ಸರ್ವೇಶ್ವರ’ ಎಂದು ಈಜಿಪ್ಟ್ ದೇಶದಲ್ಲಿ ಪ್ರಮಾಣಪೂರ್ವಕವಾಗಿ ತಿಳಿಯಪಡಿಸಿದೆ.
6 : ನಾನು ಅವರಿಗೆ ‘ನಾಡುಗಳಲ್ಲೆಲ್ಲ ಶ್ರೀಮಂತವಾದ ನಾಡನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿ ಹಾಲೂ ಜೇನೂ ಹರಿಯುವ ಆ ನಾಡಿಗೆ ಸೇರಿಸುವೆನು’ ಎಂದು ಪ್ರಮಾಣಮಾಡಿದೆ;
7 : ‘ನೀವೆಲ್ಲರೂ ನಿಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯ ವಸ್ತುಗಳನ್ನು ಬಿಸಾಡಿಬಿಡಿ; ಈಜಿಪ್ಟ್‍ನ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿ; ನಾನು ನಿಮ್ಮ ದೇವರಾದ ಸರ್ವೇಶ್ವರ’ ಎಂದು ಅವರನ್ನು ಎಚ್ಚರಿಸಿದೆ.
8 : ಅವರಾದರೋ ನನ್ನ ಮಾತನ್ನು ಲೆಕ್ಕಿಸದೆ ನನ್ನ ವಿರುದ್ಧ ದಂಗೆಯೆದ್ದರು; ತಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯ ವಸ್ತುಗಳನ್ನು ಯಾರೂ ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತ್ಯಜಿಸಲಿಲ್ಲ. ಆಗ ನಾನು ಈಜಿಪ್ಟ್ ದೇಶದಲ್ಲಿ ಇವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು ಎಂದುಕೊಂಡೆ.
9 : ಆದರೂ, ‘ನಿಮ್ಮನ್ನು ಈಜಿಪ್ಟ್‍ನಿಂದ ಪಾರುಮಾಡುವೆನು,’ ಎಂಬುದಾಗಿ ಜನಾಂಗಗಳ ಮುಂದೆಯೇ ನನ್ನನ್ನು ಇವರಿಗೆ ಪ್ರಕಟಿಸಿಕೊಂಡೆನಲ್ಲಾ ಎಂದು ಯೋಚಿಸಿ ಅವರ ಸುತ್ತಮುತ್ತಲಿನ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗದಂತೆ ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ.
10 : “ಆದರೂ ನಾನು ಅವರನ್ನು ಈಜಿಪ್ಟ್‍ನಿಂದ ಬಿಡಿಸಿ ಮರುಭೂಮಿಗೆ ಕರೆದುತಂದೆ.
11 : ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅವರಿಗೆ ತಿಳಿಸಿಕೊಟ್ಟೆ.
12 : ಇದಲ್ಲದೆ, ತಮ್ಮನ್ನು ದೇವಜನರನ್ನಾಗಿ ಮಾಡಿರುವ ಸರ್ವೇಶ್ವರ ನಾನೇ ಎಂದು ಅವರು ತಿಳಿದುಕೊಳ್ಳುವಂತೆ ನನಗೂ ಅವರಿಗೂ ಸಂಕೇತವಾದ ಸಬ್ಬತ್ ದಿನಗಳನ್ನು ಅವರಿಗೆ ನೇಮಿಸಿದೆ.
13 : ಆದರೆ ಇಸ್ರಯೇಲ್ ವಂಶದವರು ಮರುಭೂಮಿಯಲ್ಲಿ ನನ್ನ ವಿರುದ್ಧ ದಂಗೆಯೆದ್ದರು. ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ಧಿಕ್ಕರಿಸಿದರು. ಮುಖ್ಯವಾಗಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿದರು. ಆಗ ನಾನು ‘ಮರುಭೂಮಿಯಲ್ಲಿರುವ ಇವರ ಮೇಲೆ ನನ್ನ ರೋಷಾಗ್ನಿಯನ್ನು ಹರಿಸಿ ಇವರನ್ನು ಧ್ವಂಸ ಮಾಡುವೆನು’ ಎಂದುಕೊಂಡೆ.
14 : ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ ಆ ಜನಾಂಗಗಲ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ.
15 : ಆಮೇಲೆ, ‘ನಾಡುಗಳಲ್ಲೆಲ್ಲಾ ಶ್ರೇಷ್ಠವಾದ ನಾಡಿಗೆ, ಹಾಲೂ ಜೇನೂ ಹರಿಯುವ ಆ ವಾಗ್ದತ್ತನಾಡಿಗೆ ನಿಮ್ಮನ್ನು ಸೇರಿಸೆನು’ ಎಂದು ಮರುಭೂಮಿಯಲ್ಲಿ ಅವರಿಗೆ ಪ್ರಮಾಣಮಾಡಿ ಹೇಳಿದೆ.
16 : ಏಕೆಂದರೆ, ಅವರ ಹೃದಯ ವಿಗ್ರಹಗಳಲ್ಲಿ ಆಸಕ್ತವಾಗಿ, ನನ್ನ ಆಜ್ಞಾವಿಧಿಗಳನ್ನು ಅವರು ಅನುಸರಿಸದೆ ಧಿಕ್ಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿದರು.
17 : “ಆದರೂ ನಾನು ಅವರನ್ನು ನಾಶ ಮಾಡಲಿಲ್ಲ; ನನ್ನ ಕಟಾಕ್ಷವು ಅವರನ್ನು ಉಳಿಸಿತು; ನಾನು ಅವರನ್ನು ಮರುಭೂಮಿಯಲ್ಲಿ ನಿರ್ಮೂಲಮಾಡಲಿಲ್ಲ.
18 : ಆಮೇಲೆ ನಾನು ಅವರ ಸಂತಾನದವರಿಗೆ – ‘ನೀವು ನಿಮ್ಮ ಪಿತೃಗಳ ಕಟ್ಟಳೆಗಳನ್ನು ಅನುಸರಿಸದೆ ಅವರ ವಿಧಿಗಳನ್ನು ಕೈಗೊಳ್ಳದೆ ಅವರ ವಿಗ್ರಹಗಳಿಂದ ನಿಮ್ಮನ್ನು ಕೈಗೊಳ್ಳದೆ ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಮಾಡಿಕೊಳ್ಳಬೇಡಿ;
19 : ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ನನ್ನ ಆಜ್ಞೆಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಗೊಂಡು ನಡೆಯಿರಿ.
20 : ನಾನು ನೇಮಿಸಿದ ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿರಿ; ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನೀವು ತಿಳಿದುಕೊಳ್ಳುವಂತೆ ಅವು ನಿಮಗೂ ನನಗೂ ಗುರುತಾಗಿರುವುವು’ ಎಂದು ಹೇಳಿದೆ.
21 : “ಆದರೆ ಆ ಸಂತಾನದವರು ನನ್ನನ್ನು ಪ್ರತಿಭಟಿಸಿದರು; ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ; ಕೈಗೊಂಡವರಿಗೆ ಜೀವಾಧಾರವಾದ ನನ್ನ ವಿಧಿಗಳನ್ನು ಅನುಸರಿಸಿ ನಡೆಯಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರ ಮಾಡಿದರು. ಆದುದರಿಂದ ನಾನು ‘ಮರುಭೂಮಿಯಲ್ಲೇ ಇವರ ಮೇಲೆ ನನ್ನ ರೋಷಾಗ್ನಿಯನ್ನು ಹರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು’ ಎಂದುಕೊಂಡೆ.
22 : ಆದರೂ ನಾನು ಯಾವ ಜನಾಂಗಗಳ ಮುಂದೆ ಅವರನ್ನು ಬಿಡುಗಡೆ ಮಾಡಿದೆನೋ, ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡು, ಕೈಯನ್ನು ಹಿಂದಕ್ಕೆ ತೆಗೆದುಕೊಂಡೆ.
23 : ಆಮೇಲೆ ಅವರು ನನ್ನ ಆಜ್ಞೆಗಳನ್ನು ಕೈಗೊಳ್ಳದೆ, ನನ್ನ ವಿಧಿಗಳನ್ನು ನಿರಾಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿ ತಮ್ಮ ಪಿತೃಗಳ ವಿಗ್ರಹಗಳಲ್ಲೇ ಆಸಕ್ತರಾದರು.
24 : ಆದ್ದರಿಂದ ನಾನು ‘ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ದೇಶ ದೇಶಗಳಿಗೆ ತೂರಿಬಿಡುವೆನು’ ಎಂದು ಮರುಭೂಮಿಯಲ್ಲಿ ಪ್ರಮಾಣಮಾಡಿ ಹೇಳಿದೆ.
25 : “ಇದಲ್ಲದೆ, ‘ನಾನೇ ಸರ್ವೇಶ್ವರ’ ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ಆಜ್ಞೆಗಳನ್ನೂ ಜೀವಾಧಾರವಲ್ಲದ ವಿಧಿಗಳನ್ನೂ ನೇಮಿಸಿದೆ.
26 : ಅವರು ತಮ್ಮ ಚೊಚ್ಚಲುಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು.
27 : “ಹೀಗಿರಲು, ನರಪುತ್ರನೇ, ಇಸ್ರಯೇಲ್ ವಂಶದವರಿಗೆ ಈ ಮಾತನ್ನು ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿಮ್ಮ ಪಿತೃಗಳು ಪುನಃ ದ್ರೋಹಮಾಡಿ ನನ್ನನ್ನು ದೂಷಿಸಿದ್ದಾರೆ.
28 : ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನ ಮಾಡಿದ ನಾಡಿಗೆ ಅವರನ್ನು ಸೇರಿಸಿದ ಮೇಲೆ, ಅವರು ಎತ್ತರವಾದ ಎಲ್ಲ ಗುಡ್ಡಗಳನ್ನೂ ಸೊಂಪಾಗಿ ಬೆಳೆದಿರುವ ಎಲ್ಲ ಮರಗಳನ್ನೂ ನೋಡಿ, ಅಲ್ಲಿ ಯಜ್ಞಪಶುಗಳನ್ನು ವಧಿಸಿ, ನನ್ನನ್ನು ರೇಗಿಸುವ ನೈವೇದ್ಯವನ್ನರ್ಪಿಸಿ, ಸುಗಂಧ ಹೋಮಮಾಡಿ, ಪಾನದ್ರವ್ಯವನ್ನು ಸುರಿದು, ಬಲಿ ಒಪ್ಪಿಸುತ್ತಿದ್ದರು.
29 : ನೀವು ಹೋಗುವ ‘ಬಾ – ಮಾ’ ಎಂಬ ಪೂಜಾಸ್ಥಳ ಎಂಥ ಸ್ಥಳ? (ಇಂದಿನವರೆಗೂ ಇಂಥಾ ಪೂಜಾಸ್ಥಳಗಳಿಗೆ ಬಾಮಾ ಎಂದೇ ಹೆಸರು).
30 : “ಇಸ್ರಯೇಲ್ ವಂಶದವರಿಗೆ ಹೀಗೆ ಹೇಳು:- ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಿಮ್ಮ ಪಿತೃಗಳಂತೆ ನಿಮ್ಮನ್ನು ನೀವೇ ಅಪವಿತ್ರ ಮಾಡಿಕೊಳ್ಳುತ್ತೀರೋ? ಅವರು ಪೂಜಿಸುತ್ತಿದ್ದ ಅಸಹ್ಯ ವಸ್ತುಗಳನ್ನು ನೀವೂ ಪೂಜಿಸಿ ದೇವದ್ರೋಹ ಮಾಡುತ್ತೀರೋ?
31 : ನೀವು ಬಲಿಯರ್ಪಿಸುತ್ತಾ, ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧಮಾಡಿಕೊಂಡಿರಿ. ಹೀಗಿರುವಾಗ ಇಸ್ರಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೇ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸೆನು; ಇದು ಸರ್ವೇಶ್ವರನಾದ ದೇವರ ನುಡಿ.
32 : ‘ನಾವು ಜನಾಂಗಗಳಂತೆ, ಅನ್ಯದೇಶಗಳವರಂತೆ ಮರ, ಕಲ್ಲುಗಳ ವಿಗ್ರಹಗಳನ್ನು ಪೂಜಿಸುವೆವು’ ಎಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವಯೋಚನೆ ಎಷ್ಟು ಮಾತ್ರವೂ ನೆರವೇರದು.
33 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ, ನಿಮ್ಮ ಮೇಲೆ ದೊರೆತನ ಮಾಡುವೆನು;
34 : ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಹರಿಸುತ್ತಾ, ನಿಮ್ಮನ್ನು ಜನಾಂಗಗಳಿಂದ ಬಿಡುಗಡೆಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಒಂದುಗೂಡಿಸಿ,
35 : ಜನಾಂಗಗಳ ಮಧ್ಯೆ ಮರುಭೂಮಿಗೆ ಕರೆತಂದು ಅಲ್ಲೇ ಮುಖಾಮುಖಿಯಾಗಿ ನಿಮ್ಮೊಂದಿಗೆ ವಾದಿಸುವೆನು.
36 : ನಾನು ಈಜಿಪ್ಟಿನ ಮರುಭೂಮಿಯಲ್ಲಿ ನಿಮ್ಮ ಪಿತೃಗಳ ಸಂಗಡ ವಾದಿಸಿದಂತೆ ನಿಮ್ಮ ಸಂಗಡವೂ ವಾದಿಸುವೆನು; ಇದು ಸರ್ವೇಶ್ವರನಾದ ದೇವರ ನುಡಿ.
37 : “ನಾನು ನಿಮ್ಮನ್ನು ಲೆಕ್ಕಿಸುವಂತೆ, ಕೋಲಿನ ಕೆಳಗೆ ಹೋಗುವಂತೆಮಾಡಿ, ಒಡಂಬಡಿಕೆಯ ಕಟ್ಟಿನಿಂದ ಬಂಧಿಸುವೆನು,
38 : ನನಗೆ ವಿಮುಖರಾದ ದ್ರೋಹಿಗಳನ್ನು ನಿಮ್ಮಿಂದ ದೂರಕ್ಕೆ ಗುಡಿಸಿಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಬಿಡುಗಡೆ ಮಾಡಿದರೂ ಅವರು ಇಸ್ರಯೇಲ್ ನಾಡಿಗೆ ಸೇರುವುದೇ ಇಲ್ಲ; ಆಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
39 : “ಇಸ್ರಯೇಲ್ ವಂಶದವರೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಹೋಗಿರಿ, ನಿಮ್ಮ ವಿಗ್ರಹಗಳನ್ನು ಪೂಜಿಸಿರಿ; ಮುಂದಕ್ಕಾದರು ನನ್ನ ಮಾತನ್ನು ಕೇಳಿಯೇ ಕೇಳುವಿರಿ; ಇನ್ನು ಮೇಲಾದರು ನನ್ನ ಪರಿಶುದ್ಧ ನಾಮವನ್ನು ನಿಮ್ಮ ಬಲಿಗಳಿಂದ ಹಾಗೂ ವಿಗ್ರಹಗಳಿಂದ ನೀವು ಅಪಕೀರ್ತಿಗೆ ಒಳಪಡಿಸಲಾರಿರಿ.
40 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾಡಿನಲ್ಲಿ ಇಸ್ರಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧ ಬೆಟ್ಟದಲ್ಲೇ, ಇಸ್ರಯೇಲಿನ ಪರ್ವತಾಗ್ರದಲ್ಲೇ, ನನ್ನನ್ನು ಪೂಜಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ ಉತ್ತಮ ನೈವೇದ್ಯಗಳನ್ನೂ ಮೀಸಲಾದುದೆಲ್ಲವನ್ನೂ ಅಂಗೀಕರಿಸುವೆನು.
41 : ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡುಗಡೆಮಾಡಿ, ನೀವು ಚದರಿ ಹೋಗಿರುವ ದೇಶಗಳಿಂದ ತಂದು ಸೇರಿಸುವಾಗ, ನಿಮ್ಮ ಸುಗಂಧ ಹೋಮವನ್ನು ಆಘ್ರಾಣಿಸಿ, ನಿಮಗೆ ಪ್ರಸನ್ನನಾಗುವೆನು; ಸಕಲ ಜನಾಂಗಗಳೆದುರಿಗೆ, ನಿಮ್ಮ ರಕ್ಷಣೆಯ ಮೂಲಕ, ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
42 : ನಾನು ಪ್ರಮಾಣಮಾಡಿ ನಿಮ್ಮ ಪಿತೃಗಳಿಗೆ ಯಾವ ನಾಡನ್ನು ಕೊಟ್ಟೆನೋ ಆ ಇಸ್ರಾಯೇಲ್ ನಾಡಿಗೆ ನಿಮ್ಮನ್ನು ಬರಮಾಡುವಾಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
43 : ನಿಮ್ಮನ್ನು ಅಪವಿತ್ರಗೊಳಿಸಿರುವ ನಿಮ್ಮ ನಡತೆಯನ್ನೂ ನಿಮ್ಮ ಎಲ್ಲಾ ಕಾರ್ಯಗಳನ್ನೂ ಅಲ್ಲಿ ನೆನಪಿಗೆ ತಂದುಕೊಂಡು, ನೀವು ನಡೆಸಿರುವ ಸಕಲ ದುಷ್ಕøತ್ಯಗಳ ನಿಮಿತ್ತ, ನಿಮ್ಮನ್ನು ನೋಡಿ ನೀವೇ ಅಸಹ್ಯಪಡುವಿರಿ.
44 : ಇಸ್ರಯೇಲ್ ವಂಶದವರೇ, ನಿಮ್ಮ ದುರ್ನಡತೆಗೂ ದುಷ್ಕøತ್ಯಗಳಿಗೂ ತಕ್ಕ ಹಾಗೆ ನಾನು ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಸರ್ವೇಶ್ವರ ಎಂದು ನಿಮಗೆ ತಿಳಿಯುವುದು; ಇದು ಸರ್ವೇಶ್ವರನಾದ ದೇವರ ನುಡಿ.” ಕಾಳ್ಗಿಚ್ಚಿನ ಸಾಮತಿ
45 : ಆಮೇಲೆ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು –
46 : “ನರಪುತ್ರನೇ ನೀನು ದಕ್ಷಿಣಾಭಿಮುಖನಾಗಿ, ಆ ಕಡೆಗೆ ಮಾತಾಡುತ್ತಾ ದಕ್ಷಿಣ ಸೀಮೆಯ ವನವನ್ನು ಉದ್ದೇಶಿಸಿ ಪ್ರಸ್ತಾಪವನ್ನೆತ್ತಿ,
47 : ಆ ವನಕ್ಕೆ ಹೀಗೆ ಪ್ರವಾದಿಸು: ‘ಸರ್ವೇಶ್ವರನ ಮಾತನ್ನು ಕೇಳು: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು. ಅದು ನಿನ್ನಲ್ಲಿನ ಎಲ್ಲಾ ಹಸಿರು ಮರಗಳನ್ನೂ ಒಣ ಮರಗಳನ್ನೂ ಕಬಳಿಸಿ ಬಿಡುವುದು; ಧಗಧಗಿಸುವ ಜ್ವಾಲೆ ಆರದೆ, ತೆಂಕಲಿಂದ ಬಡಗಲವರೆಗೆ ಎಲ್ಲರ ಮುಖಗಳನ್ನು ಕುಂದಿಸುವುದು.
48 : ಅದನ್ನು ಹೊತ್ತಿಸಿದವನು ಸರ್ವೇಶ್ವರನಾದ ನಾನೇ ಎಂದು ಸಕಲ ನರಪ್ರಾಣಿಗಳಿಗೆ ಆಗ ಗೋಚರವಾಗುವುದು; ಅದು ಆರಿಹೋಗದು’.
49 : ಆಗ ನಾನು – ‘ಅಯ್ಯೋ, ಸರ್ವೇಶ್ವರನಾದ ದೇವರೇ, ‘ಅವನು ಒಗಟುಗಾರನಲ್ಲವೆ?’ ಎಂದು ಈ ಜನರು ನನ್ನ ಬಗ್ಗೆ ಆಡಿಕೊಳ್ಳುತ್ತಾರೆ” ಎಂದು ಅರಿಕೆಮಾಡಿದೆನು.

Holydivine