Ezekiel - Chapter 45
Holy Bible

1 : ನೀವು ನಾಡನ್ನು ಸೊತ್ತುಸೊತ್ತಾಗಿ ಹಂಚುವಾಗ ಒಂದು ಭಾಗವನ್ನು ಮೀಸಲಾಗಿ ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸಮರ್ಪಿಸಬೇಕು: ಅದರ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹತ್ತು ಕಿಲೋಮೀಟರ್; ಆ ಪ್ರಾಂತ್ಯವೆಲ್ಲಾ ಸುತ್ತುಮುತ್ತಲು ಪರಿಶುದ್ಧವಾಗಿ ಇರಬೇಕು.
2 : ಇದರಲ್ಲಿ 250 ಮೀಟರ್ ಉದ್ದದ, 250 ಮೀಟರ್ ಅಗಲದ ಚಚ್ಚೌಕವಾದ ಸ್ಥಳವು ಪವಿತ್ರಾಲಯಕ್ಕೆ ನಿವೇಶನವಾಗಿರುವುದು: ಅದರ ಸುತ್ತ ಇಪ್ಪತ್ತೈದು ಮೀಟರ್ ಅಗಲ ಉಳದ ಭೂಮಿ ಇರುವುದು.
3 : ಮೊದಲು ಅಳೆದ ಕ್ಷೇತ್ರದಲ್ಲಿ ಹನ್ನೆರಡುವರೆ ಕಿಲೋಮೀಟರ್ ಉದ್ದದ ಐದು ಕಿಲೋಮೀಟರ್ ಅಗಲದ ಒಂದು ಭಾಗವನ್ನು ಅಳೆ; ಇದರಲ್ಲಿ ಅತಿಪರಿಶುದ್ಧವಾದ ಪವಿತ್ರಾಲಯ ಇರಬೇಕು.
4 : ಇದು ನಾಡಿನಲ್ಲೇ ಪರಿಶುದ್ಧ ಭಾಗ; ಇದು ಪವಿತ್ರಾಲಯದ ಅರ್ಚಕರೂ ಸರ್ವೇಶ್ವರನ ಸನ್ನಿಧಿಸೇವಕರೂ ಆದ ಯಾಜಕರಿಗೆ ಸಲ್ಲತಕ್ಕದ್ದು; ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿ ಹಾಗು ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿ ಇರುವುದು.
5 : ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಐದು ಕಿಲೋಮೀಟರ್ ಅಗಲದ ಕ್ಷೇತ್ರವು ಅವರಿಗೆ ಸೊತ್ತಾಗುವುದು.
6 : ನೀವು ಸಮರ್ಪಿಸುವ ಪರಿಶುದ್ಧ ಭಾಗದ ಅಕ್ಕಪಕ್ಕದಲ್ಲಿ ಎರಡುವರೆ ಕಿಲೋಮೀಟರ್ ಅಗಲದ, ಹನ್ನೆರಡುವರೆ ಕಿಲೋಮೀಟರ್ ಉದ್ದದ ಕ್ಷೇತ್ರವನ್ನು ರಾಜಧಾನಿಗೆ ಒಳಪಟ್ಟ ಭೂಮಿಯನ್ನಾಗಿ ನೇಮಿಸಬೇಕು; ಅದರಲ್ಲಿ ಇಸ್ರಯೇಲ್ ವಂಶದವರಿಗೆಲ್ಲಾ ಹಕ್ಕಿರುವುದು.
7 : ರಾಜನ ಸೊತ್ತು ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಗೂ ಉಭಯ ಪಾಶ್ರ್ವಗಳಲ್ಲಿರುವುದು; ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಯ ಪಶ್ಚಿಮದಲ್ಲಿ ಅದು ಪಶ್ಚಿಮ ಕಡೆಗೆ ಹರಡುವುದು. ಪೂರ್ವದಲ್ಲಿ ಪೂರ್ವದ ಕಡೆಗೆ ಹರಡುವುದು. ಅದರ ಉದ್ದ ಪಶ್ಚಿಮದಿಂದ ಪೂರ್ವಕ್ಕೆ ಒಂದು ಕುಲದ ಸೊತ್ತಿನ ಉದ್ದಕ್ಕೆ ಸರಿಸಮಾನ ವಾಗಿರುವುದು.
8 : ಅದು ಅವನಿಗೆ ಇಸ್ರಯೇಲಿನಲ್ಲಿ ಭೂಸೊತ್ತಾಗುವುದು; ಇನ್ನು ಮೇಲೆ ರಾಜರುಗಳು ನನ್ನ ಪ್ರಜೆಗಳನ್ನು ಹಿಂಸಿಸರು; ನಾಡಿನ ಭೂಮಿಯನ್ನು ಇಸ್ರಯೇಲರಿಗೆ ಕುಲ ಕುಲಕ್ಕೂ ಹಂಚುವರು.
9 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಇಸ್ರಯೇಲಿನ ರಾಜರುಗಳೇ, ಇನ್ನು ಸಾಕು, ಸಾಕು; ಕೊಳ್ಳೆಯನ್ನೂ ಹಿಂಸಾಚಾರವನ್ನೂ ತ್ಯಜಿಸಿ ನೀತಿನ್ಯಾಯಗಳನ್ನು ನಡೆಸಿರಿ; ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿ; ಇದು ಸರ್ವೇಶ್ವರನಾದ ದೇವರ ನುಡಿ.
10 : ನಿಮ್ಮ ತಕ್ಕಡಿಯೂ ಧಾನ್ಯದ ಅಳತೆಯೂ ರಸದ್ರವ್ಯದ ಅಳತೆಯೂ ನ್ಯಾಯವಾಗಿಯೇ ಇರಬೇಕು.
11 : ಏಫಾ ಎಂಬ ಧಾನ್ಯದ ಅಳತೆ ಮತ್ತು ಬತ್ ಎಂಬ ರಸದ್ರವ್ಯದ ಅಳತೆ ಒಂದೇ ಪ್ರಮಾಣವಾಗಿರತಕ್ಕದ್ದು; ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಏಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಎರಡೂ ಹೋಮೆರ್ ಅಳತೆಗೆ ಸಂಬಂಧವಾಗಿರಬೇಕು.
12 : ಒಂದು ಶೇಕೆಲ್ ಇಪ್ಪತ್ತು ಗೇರಾ ತೂಕವಾಗಿರಬೇಕು; ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು, ತೂಕದ್ದಾಗಿರಲಿ.
13 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನೀವು ನಿಮ್ಮ ದೋಷಪರಿಹಾರಕ್ಕಾಗಿ ಧಾನ್ಯನೈವೇದ್ಯವನ್ನೂ ದಹನಬಲಿಯನ್ನೂ ಸಮಾಧಾನಬಲಿಯನ್ನೂ ಮಾಡುವುದಕ್ಕಾಗಿ ಸಮರ್ಪಿಸತಕ್ಕದೇನೆಂದರೆ: ಒಂದು ಹೋಮೆರ್ ಅಳತೆಯ ಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು;
14 : ;ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗ ಎಷ್ಟೆಂದರೆ, ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟೆಂದರೆ ಒಂದು ಕೋರ್ ಅಂದರೆ, ಹತ್ತು ಬತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬತ್ ಅಳತೆಯ ಹತ್ತನೆಯ ಒಂದು ಪಾಲು; (ಹತ್ತು ಬತ್ ಅಂದರೆ ಒಂದು ಹೋಮೆರ್):
15 : ಇನ್ನೂರು ಕುರಿಗಳಲ್ಲಿ ಇಸ್ರಯೇಲಿನ ನೀರಾವರಿಯ ಹುಲ್ಲುಗಾವಲಿನ ಒಂದು ಕುರಿ;
16 : ಇವುಗಳನ್ನು ದೇಶದ ಸಕಲ ಜನರು ಇಸ್ರಯೇಲಿನ ರಾಜನಿಗೆ ಒಪ್ಪಿಸತಕ್ಕದ್ದು.
17 : ಉತ್ಸವಗಳಲ್ಲೂ ಅಮಾವಾಸ್ಯೆಗಳಲ್ಲೂ ಸಬ್ಬತ್ತುಗಳಲ್ಲೂ ಇಸ್ರಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲೂ ದಹನಬಲಿ ಪ್ರಾಣಿ, ಧಾನ್ಯನೈವೇದ್ಯ, ಪಾನನೈವೇದ್ಯ, ಇವುಗಳನ್ನು ಒದಗಿಸುವುದು ರಾಜನ ಕರ್ತವ್ಯ; ಇಸ್ರಯೇಲ್ ವಂಶದ ದೋಷನಿವಾರಣೆಗಾಗಿ ಅವನು ದೋಷಪರಿಹಾರಕ ಬಲಿಪ್ರಾಣಿ, ಧಾನ್ಯ ನೈವೇದ್ಯ, ದಹನಬಲಿಪ್ರಾಣಿ, ಶಾಂತಿಸಮಾಧಾನ ಬಲಿಪ್ರಾಣಿ ಇವುಗಳನ್ನು ಒಪ್ಪಿಸತಕ್ಕದ್ದು.”
18 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಕಳಂಕರಹಿತವಾದ ಹೋರಿಯನ್ನು ಆರಿಸಿ ಅದರಿಂದ ಪವಿತ್ರಾಲಯವನ್ನು ಶುದ್ಧೀಕರಿಸಬೇಕು.
19 : ಆಗ ಯಾಜಕನು ಆ ದೋಷಪರಿಹಾರಕ ಬಲಿಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ ಬಲಿಪೀಠದ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಣ ಪ್ರಾಕಾರದ ಹೆಬ್ಬಾಗಿಲ ನಿಲವುಕಂಬಗಳಿಗೂ ಹಚ್ಚಬೇಕು.
20 : ಅದೇ ಮೇರೆಗೆ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಬಲಿದಾನಮಾಡಿ ಯಾರಾದರೂ ಆಕಸ್ಮಾತ್ತಾಗಿ ಮಾಡಿದ ತಪ್ಪಿನಿಂದಾಗಲಿ, ಬುದ್ಧಿಹೀನರ ಅವಿವೇಕದಿಂದಾಗಲಿ, ದೇವಾಲಯಕ್ಕೆ ಸಂಭವಿಸಿದ ದೋಷವನ್ನೆಲ್ಲಾ ಪರಿಹರಿಸಬೇಕು
21 : “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಏಳು ದಿವಸದ ಪಾಸ್ಕಹಬ್ಬವನ್ನು ಆಚರಿಸತೊಡಗಬೇಕು; ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು.
22 : ಆ ದಿನದಲ್ಲಿ ರಾಜನು ತನ್ನ ನಿಮಿತ್ತ ಹಾಗು ನಾಡಿನ ಜನರೆಲ್ಲರ ನಿಮಿತ್ತ ದೋಷಪರಿಹಾರಕಬಲಿಗಾಗಿ ಒಂದು ಹೋರಿಯನ್ನು ಒಪ್ಪಿಸಲಿ.
23 : ಹಬ್ಬದ ಏಳು ದಿನಗಳಲ್ಲಿಯೂ ಸರ್ವೇಶ್ವರನಿಗೆ ಸಮರ್ಪಿಸತಕ್ಕ ದಹನಬಲಿಗಾಗಿ ಅವನು ಏಳು ದಿನಗಳವರೆಗೆ ದಿನವೊಂದಕ್ಕೆ ಕಳಂಕರಹಿತವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಒದಗಿಸಲಿ, ಮತ್ತು ದೋಷ ಪರಿಹಾರಕಬಲಿಗಾಗಿ ದಿನವಹಿ ಒಂದು ಹೋತವನ್ನು ಕೊಡಲಿ.
24 : ಇದಲ್ಲದೆ ಒಂದೊಂದು ಹೋರಿಯ ಮತ್ತು ಟಗರಿನ ಸಂಗಡ ಮೂವತ್ತು ಮೂವತ್ತು ಸೇರು ಗೋದಿಹಿಟ್ಟನ್ನೂ ಆರಾರು ಸೇರು ಎಣ್ಣೆಯನ್ನೂ ಧಾನ್ಯ ನೈವೇದ್ಯಕ್ಕಾಗಿ ಒಪ್ಪಿಸಬೇಕು.
25 : “ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿವಸಗಳಲ್ಲಿಯೂ ಅವನು ದೋಷಪರಿಹಾರಕ ಬಲಿಪ್ರಾಣಿ, ದಹನಬಲಿಪ್ರಾಣಿ, ಧಾನ್ಯನೈವೇದ್ಯ ಎಣ್ಣೆ, ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು.”

Holydivine