Ezekiel - Chapter 2
Holy Bible

1 : ಸರ್ವೇಶ್ವರ ನನಗೆ, “ನರಪುತ್ರನೇ, ಎದ್ದು ನಿಲ್ಲು; ನಿನ್ನ ಸಂಗಡ ಮಾತಾಡಬೇಕು,” ಎಂದು ಹೇಳಿದರು.
2 : ಅವರ ಈ ಮಾತನ್ನು ಹೇಳಿದ ಕೂಡಲೆ ದೇವರಾತ್ಮ ನನ್ನೊಳಗೆ ಸೇರಿ ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತಾಡಿದಾತನ ನುಡಿಯನ್ನು ಚೆನ್ನಾಗಿ ಕೇಳಿದೆ.
3 : ಆತ ನನಗೆ ಹೀಗೆ ಹೇಳಿದನು, “ನರಪುತ್ರನೇ, ನನಗೆ ವಿಮುಖರಾಗಿ ದ್ರೋಹಮಾಡಿದ ಜನಾಂಗದವರಾದ ಇಸ್ರಯೇಲರ ಬಳಿಗೆ ನಿನ್ನನ್ನು ಕಳುಹಿಸುವೆನು; ಈ ದಿನದವರೆಗೆ ಅವರೂ ಅವರ ಪಿತೃಗಳೂ ನನ್ನನ್ನು ಪ್ರತಿಭಟಿಸುತ್ತಲೇ ಬಂದಿದ್ದಾರೆ.
4 : ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ ಹಟಗಾರರೂ ಆಗಿದ್ದಾರೆ; ನೀನು ಅವರಿಗೆ, ‘ಸರ್ವೇಶ್ವರನಾದ ದೇವರೇ ಇಂತೆನ್ನುತ್ತಾರೆ,’ ಎಂದು ನುಡಿ.
5 : ಅವರು ದ್ರೋಹಿವಂಶದವರು, ಒಂದು ವೇಳೆ ಕೇಳದೆ ಹೋಗಬಹುದು, ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿ ತಮ್ಮ ಮಧ್ಯೆ ಕಾಣಿಸಿಕೊಂಡಿದ್ದಾನೆಂದು ತಿಳಿದುಕೊಳ್ಳುವರು.
6 : “ನರಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯೆ ಇದ್ದರೂ ಅವರಿಗೆ ಭಯಪಡಬೇಡ, ಅವರ ಗದರಿಕೆಗೆ ಹೆದರದಿರು; ಅವನು ದ್ರೋಹಿ ವಂಶದವರು; ಅವರ ಬಿರುನುಡಿಗೆ ದಿಗಿಲು ಪಡಬೇಡ, ಅವರ ಬಿರುನೋಟಕ್ಕೆ ಬೆಚ್ಚದಿರು.
7 : ಅವರು ಕೇಳಲಿ ಅಥವಾ ಬಿಡಲಿ ನೀನು ನನ್ನ ವಾಕ್ಯವನ್ನು ಅವರಿಗೆ ನುಡಿಯಲೇಬೇಕು. ಅವರು ದ್ರೋಹಿಗಳೇ ಸರಿ.
8 : “ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿತೆರೆದು ತಿಂದು ಬಿಡು,” ಎಂದರು.
9 : ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು; ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು.
10 : ಆ ಸುರುಳಿಯನ್ನು ನನ್ನೆದುರಿನಲ್ಲೆ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು.

Holydivine