Ezekiel - Chapter 17
Holy Bible

1 : ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ:
2 : ನರಪುತ್ರನೇ, ನೀನು ಇಸ್ರಯೇಲ್ ವಂಶದವರಿಗೆ ಈ ಸಾಮತಿಯನ್ನು ಒಗಟಾಗಿ ಹೇಳು –
3 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅಗಲ ಹಾಗು ಉದ್ದವಾದ ರೆಕ್ಕೆಗಳುಳ್ಳ ವಿವಿಧ ವರ್ಣದ ಗರಿಗಳಿಂದ ಕೂಡಿದ ದೊಡ್ಡ ಹದ್ದೊಂದು ಲೆಬನೋನಿಗೆ ಬಂದು ದೇವದಾರು ಮರದ ಮೇಲ್ತುದಿಯ ರೆಂಬೆಯನ್ನು ಕಿತ್ತಿತು;
4 : ತುಟ್ಟತುದಿಯ ಚಿಗುರುಗಳನ್ನು ಕಚ್ಚಿ ವಾಣಿಜ್ಯ ದೇಶಕ್ಕೆ ತೆಗೆದುಕೊಂಡುಹೋಗಿ ಬಹುಮಂದಿ ವರ್ತಕರಿರುವ ಪಟ್ಟಣದಲ್ಲಿ ಇಟ್ಟು ಬಿಟ್ಟಿತು.
5 : ಆಮೇಲೆ ಅದು ಆ ದೇವದಾರು ಇದ್ದ ದೇಶದ ಒಂದು ಬೀಜವನ್ನು ತೆಗೆದುಕೊಂಡು ಫಲವತ್ತಾದ ನೀರಾವರಿಯ ಭೂಮಿಯಲ್ಲಿ ನೆಟ್ಟು ನೀರವಂಜಿಯ ಹಾಗೆ ಬೆಳೆಸಿತು.
6 : ಅದು ಗುಜ್ಜಾಗಿ ಬೆಳೆದು ದ್ರಾಕ್ಷಾಲತೆಯಾಗಿ ವಿಶಾಲವಾಗಿ ಹರಡಿಕೊಂಡು, ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ, ಅದರ ಕೆಳಗೂ ಬೇರು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು.
7 : “ಆದರೆ ಅಗಲವಾದ ರೆಕ್ಕೆಗಳುಳ್ಳ ಗರಿ ತುಂಬಿದ ಮತ್ತೊಂದು ದೊಡ್ಡ ಹದ್ದು ಇತ್ತು; ಇಗೋ, ಆ ದ್ರಾಕ್ಷಾಲತೆ ತಾನು ನಾಟಿಕೊಂಡಿದ್ದ ಪತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅದರಿಂದ ನೀರನ್ನು ಹಾಯಿಸುತ್ತಿತ್ತು.
8 : ಅದು ಸೊಂಪಾದ ಲತೆಯಾಗಿ ರೆಂಬೆಗಳನ್ನು ಹರಡಿಸಿ, ಫಲಕೊಡುವುದಕ್ಕೆ ಅನುಕೂಲವಾದ ಒಳ್ಳೆಯ ನೀರಾವರಿಯ ನೆಲದಲ್ಲಿ ನಾಟಿಕೊಂಡಿತ್ತು.”
9 : “ಈ ಮಾತನ್ನು ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅದು ಯಾವಾಗಲು ಸಮೃದ್ಧವಾಗಿಯೆ ಇರುವುದೇ? ಅದನ್ನು ನಾಟಿದ ಆ ಹದ್ದು ಅದರ ಬೇರುಗಳನ್ನು ಕಿತ್ತು ಅದರ ಫಲವನ್ನು ಕಡಿದುಬಿಡುವುದು. ಆಗ ಅದು ಒಣಗಿ ಅದರ ಹಸುರೆಲೆಗಳೆಲ್ಲಾ ಬಾಡುವುದಲ್ಲವೆ? ಅದನ್ನು ಬೇರುಸಹಿತ ಕೀಳಲು ಹೆಚ್ಚು ಬಲಬೇಕಾಗಿಲ್ಲ, ಬಹು ಜನರ ಅಗತ್ಯವಿಲ್ಲ.
10 : ನಾಟಿಕೊಂಡಿದ್ದ ಆ ಲತೆ ಸಮೃದ್ಧವಾಗಿಯೇ ಇರುವುದೇ? ಮೂಡಣಗಾಳಿ ಬಡಿಯುವಾಗ ಅದು ಖಂಡಿತವಾಗಿ ಬಾಡುವುದಲ್ಲವೆ? ಬೆಳೆದ ಪಾತಿಯಲ್ಲಿಯೇ ಅದು ಒಣಗಿಹೋಗುವುದಲ್ಲವೆ?” ಸಾಮತಿಯ ಅರ್ಥ
11 : ಸರ್ವೇಶ್ವರ ದಯಪಾಲಿಸಿದ ಇನ್ನೊಂದು ವಾಣಿ:
12 : “ದ್ರೋಹಿವಂಶದ ಈ ಜನರಿಗೆ ಹೀಗೆ ಹೇಳು – ಇದರ ಅರ್ಥ ನಿಮಗೆ ತಿಳಿಯಲಿ; ಇಗೋ, ಬಾಬಿಲೋನಿನ ಅರಸನು ಜೆರುಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದ;
13 : ಮತ್ತು ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಪ್ಪಂದಮಾಡಿ ಅವನಿಂದ ಆಣೆಯಿಡಿಸಿದ.
14 : ಅವನ ರಾಜ್ಯ ಏಳಿಗೆಗೆ ಬಾರದೆ ಗುಜ್ಜಾಗಿದ್ದು ಒಪ್ಪಂದಕ್ಕೆ ಬದ್ಧವಾಗಿರುವುದರಿಂದಲೇ ಅದು ನಿಲ್ಲದೆಂದು ಆ ದೇಶದ ಬಲಿಷ್ಠರನ್ನು ಗಡೀಪಾರು ಮಾಡಿದ.
15 : ಆದರೆ ಅವನು ಬಾಬಿಲೋನಿನ ಅರಸನ ವಿರುದ್ಧ ದಂಗೆಯೆದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಈಜಿಪ್ಟಿಗೆ ರಾಯಭಾರಿಗಳನ್ನು ಕಳುಹಿಸಿದ. ಆದರೂ ಇವನು ಗೆಲ್ಲುವನೇ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೇ? ಒಪ್ಪಂದವನ್ನು ಮೀರಿದವನು ತಪ್ಪಿಸಿಕೊಂಡಾನೇ?
16 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ಇವನು ಯಾವನಿಂದ ಅರಸನಾಗಿ ನೇಮಕಗೊಂಡನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾವನ ಒಪ್ಪಂದವನ್ನು ಮೀರಿದನೋ, ಆ ಅರಸನ ಬಳಿಯಲ್ಲೆ, ಅಂದರೆ ಬಾಬಿಲೋನೆಂಬ ಅವನ ವಾಸಸ್ಥಾನದಲ್ಲೆ, ಇವನು ಸಾಯುವುದು ಖಂಡಿತ.
17 : ಫರೋಹನೂ ಅವನ ಮಹಾಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹುಜರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನು ಹಾಕಿ, ಬುರುಜುಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗದು.
18 : ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಪ್ಪಂದವನ್ನೂ ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಭಾಷೆಮಾಡಿ ಪ್ರಯೋಜನವೇನು? ಅದನ್ನೆಲ್ಲಾ ಮುರಿದುಬಿಟ್ಟನಲ್ಲವೇ? ಇವನು ನನ್ನಿಂದ ಪಾರಾಗನು.
19 : “ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನನಗೆ ಮಾಡಿದ ಪ್ರಮಾಣವನ್ನು ಅವನು ತಿರಸ್ಕರಿಸಿ ನನ್ನ ಒಡಂಬಡಿಕೆಯನ್ನು ಮೀರಿದ ದೋಷವನ್ನು ಅವನ ತಲೆಯ ಮೇಲೆ ಹೊರಿಸುವೆನು.
20 : ನಾನು ಅವನಿಗೆ ನನ್ನ ಬಲೆಯೊಡ್ಡುವೆನು; ನಾನು ಹಾಕಿದ ಉರುಳಿನಲ್ಲಿ ಸಿಕ್ಕಿಬೀಳುವನು. ಅವನನ್ನು ಬಾಬಿಲೋನಿಗೆ ತಂದು, ಅಲ್ಲೇ ಅವನೊಂದಿಗೆ ವಾದಿಸಿ, ಅವನು ನನಗೆ ಮಾಡಿದ ಅಪರಾಧವನ್ನು ಅವನ ಮೇಲೆ ಹೊರಿಸುವೆನು.
21 : ಅವನ ಸೇನೆಗಳೆಲ್ಲಾ ಚದರಿ ಓಡಿಹೋಗಿ, ಕತ್ತಿಯ ಬಾಯಿಗೆ ತುತ್ತಾಗುವುವು; ಉಳಿದವರನ್ನು ಎಲ್ಲ ಕಡೆಯ ಗಾಳಿಗೆ ತೂರಿಬಿಡುವೆನು; ಈ ಮಾತನ್ನು ಆಡಿದವನು ಸರ್ವೇಶ್ವರನಾದ ನಾನೇ ಎಂದು ನಿಮಗೆ ಗೊತ್ತಾಗುವುದು.”
22 : ಸರ್ವೇಶ್ವರನಾದ ದೇವರ ವಾಣಿಯಿದು: ನಾನೇ ನೆಡುವೆನು ರೆಂಬೆಯೊಂದನು ಎತ್ತರದ ದೇವದಾರು ಮರದ ಮೇಲಿಂದ ತಂದು ತುಂಟ ತುದಿಯ ಚಿಗುರುಗಳಲೊಂದನ್ನು ತಂದು ಅತಿ ಕೋಮಲವಾದುದನು ಚಿವುಟಿ ತಂದು, ನೆಡುವೆನದನು ಉನ್ನತೋನ್ನತವಾದ ಪರ್ವತದಲ್ಲಿ.
23 : ಹೌದು, ನೆಡುವೆನು ಇಸ್ರಯೇಲಿನಾ ಪರ್ವತಾಗ್ರದಲ್ಲಿ. ಆಗುವುದದು ಸೊಂಪಾದ ದೇವದಾರು ಮರ, ರೆಂಬೆಗಳನದು ಹರಡಿಕೊಂಡು ಕೊಡುವುದು ಫಲ. ಸಕಲವಿಧ ಪಕ್ಷಿಗಳು ವಾಸಿಸುವುವು ಅದರಲ್ಲಿ.
24 : ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲಿ. ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು ತಗ್ಗಾದುದನು ಎತ್ತರಪಡಿಸುವವನು ಹಸುರಾದುದನು ಒಣಗಿಸುವವನು ಒಣಗಿದುದನ್ನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು. ಇದ ನುಡಿದವ ನಾನು, ನುಡಿದದನು ನಡೆಸುವವ ನಾನು.”

Holydivine