Ezekiel - Chapter 27
Holy Bible

1 : ವ್ಯಾಪಾರದ ನಾವೆಯಂತಿದ್ದ ಟೈರ್ ನಗರದ ಶೋಕಗೀತೆ ಸರ್ವೇಶ್ವರಸ್ವಾಮಿ ನನಗೆ ಅನುಗ್ರಹಿಸಿದ ಮತ್ತೊಂದು ವಾಣಿ:
2 : “ನರಪುತ್ರನೇ, ಟೈರ್‍ನಗರ ಕುರಿತ ಶೋಕಗೀತೆಯೊಂದನ್ನು ಹಾಡಿ, ಹೀಗೆಂದು ಹೇಳು:
3 : ಸಮುದ್ರ ದ್ವಾರದಲ್ಲಿ ವಾಸಿಸುವ ನಗರಿಯೇ, ರಾಷ್ಟ್ರಗಳಿಗೂ ಹಲವಾರು ದ್ವೀಪಗಳಿಗೂ ನಡುವೆ ವ್ಯಾಪಾರ ನಡೆಸುವವಳೇ, ಸರ್ವೇಶ್ವರನಾದ ದೇವರು ಹೇಳುವುದನ್ನು ಕೇಳು: “ಟೈರ್ ನಗರಿಯೇ, ‘ನಾನೋರ್ವ ನಾವೆ,’ ‘ಸರ್ವಾಂಗ ಸುಂದರಿ ನಾನಾಗಿರುವೆ,’ ಎಂದು ಕೊಚ್ಚಿಕೊಂಡೆಯಲ್ಲವೆ?
4 : ನಿನ್ನ ನೆಲೆಯಿರುವುದು ಸಮುದ್ರಗಳ ನಡುವೆ ನಿನ್ನ ನಿರ್ಮಿಸಿಹರು ಸರ್ವಾಂಗ ಸುಂದರಿಯಾಗಿಯೇ !
5 : ನಿನ್ನ ಪಕ್ಕಗಳ ಮಾಡಿಹರು ಸೆನೀರಿನ ತುರಾಯಿ ಹಲಗೆಗಳಿಂದ ನಿನ್ನ ಸ್ತಂಭ ರಚಿಸಿಹರು ಲೆಬನೋನಿನ ದೇವದಾರು ಮರಗಳಿಂದ.
6 : ನಿನ್ನ ಹುಟ್ಟುಗಳು ರೂಪಿಸಲಾಗಿವೆ ಬಾಷಾನಿನ ಅಲ್ಲೋನ್ ಮರದಿಂದ ನಿನ್ನ ಮೇಲ್ಮಾಳಿಗೆ ಕಟ್ಟಲಾಗಿದೆ ಕಿತ್ತೀಮ್ ದ್ವೀಪದ ತಿಲಕ ಹಲಗೆಯಿಂದ, ಕೆತ್ತಲಾಗಿದೆ ದಂತದಿಂದ.
7 : ನಿನ್ನ ಹಾಯಿ ನಿನಗೆ ಧ್ವಜವಾಗಲೆಂದೆ ಮಾಡಿಹರು ಈಜಿಪ್ಟಿನ ಕಸೂತಿಯ ನಾರುಮಡಿಯಿಂದ. ನಿನ್ನ ಮೇಲ್ಕಟ್ಟು ಚಿತ್ರಿತವಾಗಿದೆ ಎಲೀಷ ಕರಾವಳಿಯ ಊದಾ ಕಡುಗೆಂಪುಗಳಿಂದ.
8 : ನಿನಗೆ ಹುಟ್ಟು ಹಾಕುವರು ಸಿದೋನಿನವರು, ಅರ್ವಾದಿನವರು. ಟೈರ್ ನಗರಿಯೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.
9 : ನಿನ್ನ ಕಂಡಿಗಳ ಭದ್ರಪಡಿಸಿಹರು, ನಿನ್ನಲ್ಲಿ ಸೇರಿದ್ದ ಗೆಬಲಿನ ಜಾಣರು, ಹಿರಿಯರು. ನಿನಗೆ ಸರಕುಗಳ ತಂದೊಪ್ಪಿಸುತ್ತಿದ್ದರು ಸಕಲ ನಾವೆಗಳು, ಸಕಲನಾವಿಕರು.
10 : “ಪಾರಸಿಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯದ ಭಟರಾಗಿದ್ದರು. ಖೇಡ್ಯ ಶಿರಸ್ತ್ರಾಣಗಳನ್ನು ನಿನ್ನಲ್ಲಿ ನೇತುಹಾಕಿ ನಿನ್ನನ್ನು ಭೂಷಿಸುತ್ತಿದ್ದರು.
11 : ಅರ್ವಾದಿನವರೂ ನಿನ್ನ ಸೈನಿಕರೂ ಸುತ್ತುಮುತ್ತಲು ನಿನ್ನ ತೆನೆಗೋಡೆಗಳಲ್ಲಿ ನಿಂತಿದ್ದರು; ಗಮ್ಮಾದ್ಯರು ನಿನ್ನ ಕೊತ್ತಲಗಳಲ್ಲಿ ಕಾವಲಾಗಿದ್ದರು; ಎಲ್ಲರು ತಮ್ಮ ಖೇಡ್ಯಗಳನ್ನು ಸುತ್ತಮುತ್ತಲು ನಿನ್ನ ಗೋಡೆಗಳಿಗೆ ನೇತುಹಾಕಿ ನಿನ್ನ ಸೌಂದರ್ಯವನ್ನು ಪರಿಪೂರ್ಣ ಗೊಳಿಸಿದ್ದರು.
12 : ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದುದರಿಂದ ತಾರ್ಷೀಷಿನವರು ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.
13 : ಯಾವಾನಿನವರು, ತೂಬಲಿನವರು ಮತ್ತು ಮೆಷೆಕಿನವರು ನಿನ್ನ ಪರವಾಗಿ ವ್ಯಾಪಾರಮಾಡಿ ನರಪ್ರಾಣಿಗಳನ್ನು ಹಾಗು ತಾಮ್ರದ ಪಾತ್ರೆಗಳನ್ನು ನಿನಗೆ ಸರಬರಾಜು ಮಾಡುತ್ತಿದ್ದರು;
14 : ತೋಗರ್ಮ ವಂಶದವರು ಕುದುರೆ, ಜಾತಿಯ ಕುದುರೆ, ಹೇಸರಗತ್ತೆ, ಇವುಗಳನ್ನು ನಿನಗಾಗಿ ತರುತ್ತಿದ್ದರು.
15 : ದೆದಾನಿನವರು ನಿನ್ನ ವರ್ತಕರಾಗಿದ್ದರು; ಬಹು ದ್ವೀಪಗಳ ಉತ್ಪತ್ತಿ ನಿನ್ನ ಕೈಗೆ ಸೇರಿತ್ತು. ಗಜದಂತಗಳನ್ನೂ, ಕರೀಮರವನ್ನೂ ನಿನಗೆ ಕಪ್ಪವಾಗಿ ಸಲ್ಲಿಸುತ್ತಿದ್ದರು.
16 : ಕೈಕೆಲಸದ ವಸ್ತುಗಳು ನಿನಗೆ ಅಪಾರವಾಗಿದ್ದವು; ಆದುದರಿಂದ ಅರಾಮಿನವರೂ ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಲು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಮಡಿ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿಯುತ್ತಿದ್ದರು.
17 : ಯೆಹೂದ್ಯರೂ, ಇಸ್ರಯೇಲ್ ನಾಡಿನವರೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ, ಗೋಧಿ, ಕಡೆಯ ವರ್ತಕರಾಗಿ ಮಿನ್ನೀಥಿನ, ಗೋಧಿ, ‘ಪನ್ನಗ್’, ಜೇನು, ಎಣ್ಣೆ, ಸುಗಂಧತೈಲ, ಈ ಸಾಮಗ್ರಿಗಳನ್ನು ನಿನಗೆ ಸೇರಿಸುತ್ತಿದ್ದರು.
18 : ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ ಅಪರಿಮಿತವಾದ ಬಗೆ ಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರ ಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನು ಹಾಗೂ ಚಾಹರಿನ ಉಣ್ಣೆಯನ್ನು ನಿನ್ನಲ್ಲಿ ತುಂಬಿಸುತ್ತಿದ್ದರು.
19 : “ವೆದಾನಿನವರೂ, ಯಾವಾನಿನವರೂ ಉಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸುತ್ತಿದ್ದರು. ಉಕ್ಕು, ಬಜೆ, ಲವಂಗ, ಚಕ್ಕೆಗಳು ನಿನಗೆ ಆಮದಾಗುತ್ತಿದ್ದವು.
20 : ದೇದಾನಿನವರು ಹಲ್ಲಣಕ್ಕೆ ಸರಿಯಾದ ಒಳ್ಳೆಯ ಜಮಖಾನೆಗಳನ್ನು ನಿನಗೆ ತರುತ್ತಿದ್ದ ವ್ಯಾಪಾರಿಗಳಾಗಿದ್ದರು.
21 : “ಅರಾಬ್ಯರೂ, ಕೇದಾರಿನ ಪ್ರಮುಖರೂ ನಿನ್ನ ಕೈಕೆಳಗಣ ವರ್ತಕರು: ಕುರಿ, ಟಗರು, ಹೋತಗಳನ್ನು ನಿನಗಾಗಿ ಸಾಗಿಸಿಕೊಂಡು ಬರುತ್ತಿದ್ದರು.
22 : ಶೆಬದವರೂ ರಗ್ಮದವರೂ ನಿನ್ನ ಕಡೆಯ ವರ್ತಕರಾಗಿ ಕನಕ, ಮುಖ್ಯ ಮುಖ್ಯ ಸುಗಂಧ ದ್ರವ್ಯ, ಸಮಸ್ತ ಅಮೂಲ್ಯರತ್ನ, ಈ ವಸ್ತುಗಳನ್ನು ನಿನಗಾಗಿ ತರುತ್ತಿದ್ದರು.
23 : ಹಾರಾನ್ ಕನ್ನೆ, ಏದೆನ್ ಸ್ಥಳಗಳವರು ಹಾಗೂ ಶೆಬ, ಅಸ್ಸೀರಿಯಾ, ಕಿಲ್ಮದ್ ಪ್ರಾಂತ್ಯಗಳ ವರ್ತಕರು,
24 : ನಿನ್ನ ವ್ಯಾಪಾರಿಗಳಾಗಿ ಉತ್ತಮಾಂಬರ ಕಸೂತಿಯ ಊದ ನಿಲುವಂಗಿ ಮೊದಲಾದ ಮಾಲುಗಳನ್ನೂ ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸಿದ್ದರು.
25 : ನಿನಗೆ ಬೇಕಾದ ದಿನಸುಗಳನು ತಂದವು ತಾರ್ಷೀಷಿನ ಹಡಗುಗಳು ಸಾಲುಸಾಲಾಗಿ ನೀನು ಭರ್ತಿಯಾಗಿ, ಸಮುದ್ರದ ಮಧ್ಯೆಯಿದ್ದೆ ಬಹು ಭಾರವಾಗಿ.
26 : ಹುಟ್ಟುಹಾಕುವವರು ನಿನ್ನ ಸಿಕ್ಕಿಸಿಹರು ಮಹಾತರಂಗಗಳಿಗೆ ಸಾಗರಮಧ್ಯೆ ಒಡೆದು ಚೂರಾಗಿರುವೆ ಸಿಕ್ಕಿ ಮೂಡಣಗಾಳಿಗೆ.
27 : ವಿನಾಶದಿನದೊಳು ಮುಳುಗಿಹೋಗುವುವು ಸಮುದ್ರದೊಳು ನಿನ್ನ ಆಸ್ತಿ, ನಿನ್ನ ದಿನಸು, ನಿನ್ನ ಸರಕುಗಳು ನಿನ್ನ ನಾವಿಕರು, ಅಂಬಿಗರು, ಕಂಡಿ ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ಸೈನಿಕರೆಲ್ಲರು, ನಿನ್ನ ಸಿಬ್ಬಂದಿಯೆಲ್ಲವು
28 : ನಡುಗುವುವು ಸಮೀಪದ ಪ್ರದೇಶಗಳು ಆ ನಾವಿಕರ ಕೂಗಾಟಕೆ.
29 : ದುಃಖದಿಂದರಚುವರು ಹುಟ್ಟುಹಾಕುವವರು, ಅಂಬಿಗರು, ನಾವಿಕರೆಲ್ಲರು;
30 : ತಮ್ಮ ತಮ್ಮ ಹಡಗುಗಳಿಂದಿಳಿದು, ನೆಲದ ಮೇಲೆ ನಿಂತು. ತಲೆಗೆ ದೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿಕೊಂಡು,
31 : ತಲೆಬೋಳಿಸಿಕೊಂಡು, ಗೋಣಿತಟ್ಟನು ಸುತ್ತಿಕೊಂಡು, ದುಃಖಿಸಿ ಗೋಳಾಡುವರು, ಅಳುವರು ನಿನಗಾಗಿ ನಿಟ್ಟುಸಿರಿಟ್ಟು;
32 : ರೋಧಿಸುವರು, ಪ್ರಲಾಪಿಸುವರು, ಹಾಡುವರು ಶೋಕಗೀತೆಯನ್ನು; ಕಡಲ ನಡುವೆ ಬಿಕೋ ಎನ್ನುವ ಟೈರನ್ನು ಏತಕೆ ಹೋಲಿಸೋಣ? ಎಂದು.
33 : ಅಪಾರ ಐಶ್ವರ್ಯದಿಂದ, ವಾಣಿಜ್ಯ ದಿನಸುಗಳಿಂದ ನೀನು ತುಂಬಿಸಿದೆ ಬಹುರಾಷ್ಟ್ರಗಳನು, ಸಮೃದ್ಧಿಗೊಳಿಸಿದೆ ಭೂರಾಜರನು. ಈಗಾಗಿವೆ ಸಮುದ್ರದ ಪಾಲು ಆ ಸರಕು ಸಾಮಗ್ರಿಗಳೆಲ್ಲವು.
34 : ಮುಳುಗಿಹೋದರು ಅಗಾಧ ಜಲದೊಳು ಸರಕುಸಮೇತ ನಿನ್ನ ಸೇರಿದ್ದ ಜನರು; ಹಾಳಾದೆ ನೀನು ಸಮುದ್ರ ಸಾಗರದೊಳು.
35 : ನಿನ್ನೀ ಗತಿಗೆ ಬೆರಗಾಗಿಹರು ಕರಾವಳಿಯ ಸರ್ವನಿವಾಸಿಗಳು, ರೋಮಾಂಚಿತರಾಗಿಹರು ಮೊಗಗೆಟ್ಟು ರಾಜರಾಜರುಗಳು;
36 ನಿನ್ನ ನೋಡಿ ಸಿಳ್ಳುಹಾಕುವರು ರಾಷ್ಟ್ರಗಳ ವರ್ತಕರು. ನಾಶವಾದೆ ನೀನು ಪೂರ್ತಿಯಾಗಿ, ಇಲ್ಲವಾದೆ ಇನ್ನೆಂದಿಗು.”

Holydivine