Exodus - Chapter 7
Holy Bible

1 : ಆಗ ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದರು, “ನೋಡು, ನಾನು ನಿನ್ನನ್ನು ಫರೋಹನ ಮುಂದೆ ದೇವರ ಪ್ರತಿನಿಧಿಯನ್ನಾಗಿ ನೇಮಿಸಿದ್ದೇನೆ. ನಿನ್ನ ಅಣ್ಣ ಆರೋನನು ನಿನ್ನ ಪರವಾಗಿ ವಾದಿಸುವನು.
2 : ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ನೀನು ಹೇಳಬೇಕು. ಇಸ್ರಯೇಲರು ಈ ದೇಶದಿಂದ ಹೊರಟು ಹೋಗುವುದಕ್ಕೆ ಅಪ್ಪಣೆಕೊಡಬೇಕೆಂದು ನಿನ್ನ ಅಣ್ಣ ಆರೋನನೇ ಫರೋಹನ ಮುಂದೆ ಮಾತಾಡಬೇಕು.
3 : ಆದರೂ ನಾನು ಫರೋಹನ ಹೃದಯವನ್ನು ಕಲ್ಲಾಗಿಸಿ ಈಜಿಪ್ಟ್ ದೇಶದಲ್ಲಿ ಅನೇಕ ಸೂಚಕ ಕಾರ್ಯಗಳನ್ನೂ ಪವಾಡಗಳನ್ನೂ ನಡೆಸಿ ನನ್ನ ಶಕ್ತಿಯನ್ನು ತೋರಿಸುವೆನು.
4 : ಫರೋಹನು ನಿನ್ನ ಮಾತನ್ನು ಕೇಳುವುದಿಲ್ಲ. ಆಗ ನಾನು ಈಜಿಪ್ಟ್ ದೇಶದವರನ್ನು ಬಾಧಿಸಿ ಅವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವೆನು. ನನ್ನ ಜನರಾದ ಇಸ್ರಯೇಲರ ಗೋತ್ರಗಳನ್ನೆಲ್ಲ ಈಜಿಪ್ಟ್ ದೇಶದಿಂದ ಹೊರತರುವೆನು.
5 : ನಾನು ಈಜಿಪ್ಟಿನವರಿಗೆ ವಿರುದ್ಧ ಕೈಯೆತ್ತಿ ಅವರ ಮಧ್ಯೆಯಿಂದ ಇಸ್ರಯೇಲರನ್ನು ಹೊರತಂದಾಗ ನಾನು ಸರ್ವೇಶ್ವರನೆಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು.
6 : ಸರ್ವೇಶ್ವರಸ್ವಾಮಿಯ ಆಜ್ಞೆಯಂತೆಯೇ ಮೋಶೆ ಮತ್ತು ಆರೋನರು ಮಾಡಿದರು.
7 : ಫರೋಹನೊಡನೆ ಮಾತುಕತೆ ನಡೆಸಿದಾಗ ಮೋಶೆಗೆ ಎಂಬತ್ತು, ಆರೋನನಿಗೆ ಎಂಬತ್ತಮೂರು ವರ್ಷ ವಯಸ್ಸಾಗಿತ್ತು.
8 : ಮೋಶೆ ಮತ್ತು ಆರೋನರ ಸಂಗಡ ಸರ್ವೇಶ್ವರ ಮಾತಾಡಿ,
9 : “ಫರೋಹನು ನಿಮಗೆ, ‘ನಾನು ನಿಮ್ಮ ಮಾತನ್ನು ನಂಬಬೇಕಾದರೆ ಮಹತ್ಕಾರ್ಯವೊಂದನ್ನು ನನ್ನ ಮುಂದೆ ಮಾಡಿ,’ ಎಂದು ಹೇಳಿದರೆ ಮೋಶೆ ಆರೋನನಿಗೆ, ‘ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದ ಮೇಲೆ ಬಿಸಾಡು’ ಎಂದು ಹೇಳಲಿ. ಅದು ಸರ್ಪವಾಗುವುದು,” ಎಂದು ಹೇಳಿದರು.
10 : ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋದರು. ಸರ್ವೇಶ್ವರ ತಮಗೆ ಹೇಳಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಬಿಸಾಡಿದಾಗ ಅದು ಸರ್ಪ ಆಯಿತು.
11 : ಫರೋಹನು ಈಜಿಪ್ಟ್ ದೇಶದ ವಿದ್ವಾಂಸರನ್ನೂ ಮಂತ್ರಗಾರರನ್ನೂ ಕರೆಸಿದನು. ಆ ಮಾಟಗಾರರು ತಮ್ಮ ಮಂತ್ರ ತಂತ್ರಗಳಿಂದ ಅದೇ ರೀತಿಯಾಗಿ ಮಾಡಿದರು.
12 : ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಬಿಸಾಡಿದರು. ಅವೂ ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
13 : ಸರ್ವೇಶ್ವರ ಈ ಮೊದಲೇ ಹೇಳಿದ್ದಂತೆ ಫರೋಹನ ಹೃದಯ ಕಲ್ಲಾಯಿತು. ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.
14 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದರು: “ಫರೋಹನ ಹೃದಯ ಮೊಂಡಾಗಿದೆ. ಜನರು ಹೋಗಲು ಅಪ್ಪಣೆ ಕೊಡುವುದಿಲ್ಲವೆನ್ನುತ್ತಾನೆ.
15 : ಬೆಳಿಗ್ಗೆ ನೀನು ಫರೋಹನ ಬಳಿಗೆ ಹೋಗು. ಆಗ ಅವನು ನದಿಗೆ ಹೋಗುತ್ತಿರುತ್ತಾನೆ. ಅವನನ್ನು ಭೇಟಿಯಾಗಲು ನೈಲ್ ನದಿ ತೀರದಲ್ಲೆ ನಿಂತುಕೊಂಡಿರು. ಸರ್ಪವಾಗಿ ಮಾರ್ಪಟ್ಟ ಆ ಕೋಲು ನಿನ್ನ ಕೈಯಲ್ಲಿರಲಿ.
16 : ಅವನಿಗೆ ‘ಹಿಬ್ರಿಯರ ದೇವರಾದ ಸರ್ವೇಶ್ವರ ನನ್ನನ್ನು ನಿನ್ನ ಬಳಿಗೆ ಕಳಿಸಿದ್ದಾರೆ. ಅವರು ನಿನಗೆ ಹೇಳುವ ಮಾತಿದು: ಮರುಭೂಮಿಯಲ್ಲಿ ನನ್ನನ್ನು ಆರಾಧಿಸಲು ನನ್ನ ಜನರಿಗೆ ಅಪ್ಪಣೆ ಕೊಡಬೇಕೆಂದು ನಿನಗೆ ಆಜ್ಞಾಪಿಸಿದೆ. ಆದರೆ ನೀನು ಈವರೆಗೂ ಅದನ್ನು ಲಕ್ಷ್ಯಕ್ಕೆ ತಂದುಕೊಂಡಿಲ್ಲ.
17 : ಆದುದರಿಂದ ಸರ್ವೇಶ್ವರನಾದ ನಾನು ಮತ್ತೆ ಹೇಳುತ್ತೇನೆ - ನೀನು ನನ್ನನ್ನು ಸರ್ವೇಶ್ವರನೆಂದು ತಿಳಿದುಕೊಳ್ಳುವಂತೆ ನನ್ನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡಿಸುವೆನು; ಆಗ ಅದು ರಕ್ತವಾಗುವುದು.
18 : ನದಿಯಲ್ಲಿರುವ ವಿೂನುಗಳು ಸಾಯುವುವು. ನದಿಯು ಹೊಲಸಾಗಿ ನಾರುವುದು. ಅದರಲ್ಲಿ ನೀರನ್ನು ಕುಡಿಯಲು ಈಜಿಪ್ಟಿನವರಿಗೆ ಹೇಸಿಗೆಯಾಗುವುದು’.”
19 : ಸರ್ವೇಶ್ವರ ಮತ್ತೆ ಮೋಶೆಗೆ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಈಜಿಪ್ಟ್ ದೇಶದಲ್ಲಿರುವ ಹೊಳೆ, ಕಾಲುವೆ, ಕೆರೆ, ಕೊಳ ಮೊದಲಾದ ನೀರಿರುವ ಎಲ್ಲ ಸ್ಥಳಗಳ ಮೇಲೆ ಅದನ್ನು ಚಾಚು’ ಎಂದು ಹೇಳು. ಅವನು ಚಾಚುವಾಗ ಆ ನೀರೆಲ್ಲ ರಕ್ತವಾಗುವುದು. ಈಜಿಪ್ಟ್ ದೇಶದಲ್ಲೆಲ್ಲೂ ಮರದ ತೊಟ್ಟಿಗಳಲ್ಲೂ ಕಲ್ಲಿನ ಬಾನೆಗಳಲ್ಲೂ ಕೂಡ ರಕ್ತ ತುಂಬಿರುವುದು.”
20 : ಮೋಶೆ ಮತ್ತು ಆರೋನರು ಸರ್ವೇಶ್ವರಸ್ವಾಮಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಫರೋಹನ ಹಾಗು ಅವನ ಪರಿವಾರದ ಮುಂದೆ ಆರೋನನು ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಹೊಡೆದನು. ಅದೆಲ್ಲ ರಕ್ತಮಯ ಆಯಿತು.
21 : ಅದರಲ್ಲಿದ್ದ ವಿೂನುಗಳು ಸತ್ತು ಹೋದವು. ನದಿ ಹೊಲಸಾಗಿ ನಾರುತ್ತಿತ್ತು. ಈಜಿಪ್ಟಿನವರು ಅದರ ನೀರನ್ನು ಕುಡಿಯಲಾರದೆ ಹೋದರು. ಈಜಿಪ್ಟ್ ದೇಶವೆಲ್ಲಾ ರಕ್ತಮಯ ಆಯಿತು.
22 : ಆದರೆ ಈಜಿಪ್ಟ್ ದೇಶದ ಮಾಟಗಾರರು ಕೂಡ ತಮ್ಮ ಮಂತ್ರ ತಂತ್ರಗಳಿಂದ ಅದೇ ರೀತಿ ಮಾಡಿದರು. ಆದ್ದರಿಂದ ಫರೋಹನ ಹೃದಯ ಕಠಿಣವಾಯಿತು. ಸರ್ವೇಶ್ವರ ಈ ಮೊದಲೇ ತಿಳಿಸಿದ್ದಂತೆ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆ ಹೋದನು.
23 : ಈ ಸೂಚಕಕಾರ್ಯವನ್ನು ಕೂಡ ಗಣನೆಗೆ ತೆಗೆದುಕೊಳ್ಳದೆ ಫರೋಹನು ತನ್ನ ಅರಮನೆಗೆ ಹಿಂದಿರುಗಿದನು.
24 : ಈಜಿಪ್ಟಿನವರೆಲ್ಲರು ಆ ನದಿಯ ನೀರನ್ನು ಕುಡಿಯಲಾಗದೆ, ಕುಡಿಯುವ ನೀರಿಗಾಗಿ ಅದರ ಸುತ್ತಲು ಅಗೆದರು
25 : ಸರ್ವೇಶ್ವರ ನೈಲ್ ನದಿಯನ್ನು ಹೊಡೆದ ಮೇಲೆ ಏಳು ದಿನಗಳು ಕಳೆದವು.

Holydivine