Exodus - Chapter 28
Holy Bible

1 : “ನನಗೆ ಯಾಜಕಸೇವೆ ಮಾಡಲು ನೀನು ನಿನ್ನ ಅಣ್ಣ ಆರೋನನನ್ನು ಮತ್ತು ಅವನ ಮಕ್ಕಳಾದ ನಾದಾಬ್, ಅಬೀಹು, ಎಲ್ಲಾಚಾರ್ ಹಾಗು ಈತಾಮಾರ್ ಎಂಬುವರನ್ನು ಇಸ್ರಯೇಲರ ಮಧ್ಯೆಯಿಂದ ನನ್ನ ಬಳಿಗೆ ಕರೆದುಕೊಂಡು ಬಾ.
2 : ನಿನ್ನ ಅಣ್ಣ ಆರೋನನಿಗೆ ತಕ್ಕ ಗೌರವ ಹಾಗು ಶೋಭೆ ತರುವಂಥ ದೀಕ್ಷಾವಸ್ತ್ರಗಳನ್ನು ಮಾಡಿಸು.
3 : ಯಾರಿಗೆ ನಾನು ಕಲಾಕುಶಲತೆಯನ್ನು ಪೂರ್ಣವಾಗಿ ಅನುಗ್ರಹಿಸಿದ್ದೇನೋ ಅಂಥವರೊಡನೆ ಚರ್ಚಿಸಿ ಅವರ ಕೈಯಿಂದ ಆ ವಸ್ತ್ರಗಳನ್ನು ಸಿದ್ಧಪಡಿಸು. ಆರೋನನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕ ಸೇವೆಗೆ ಪ್ರತಿಷ್ಠಿತನಾಗಲಿ.
4 : ತಯಾರಿಸಬೇಕಾದ ವಸ್ತ್ರಗಳು ಇವು - ಎದೆಕವಚ, ಏಫೋದ್‍ಕವಚ, ಮೇಲಂಗಿ, ಕಸೂತಿ ನಿಲುವಂಗಿ, ಗುರುಪೇಟ ಮತ್ತು ನಡುಕಟ್ಟು. ನಿನ್ನ ಅಣ್ಣ ಆರೋನನು ಮತ್ತು ಅವನ ಮಕ್ಕಳು ನನ್ನ ಯಾಜಕರಾಗಿ ಸೇವೆ ಮಾಡುವಂತೆ ಅವರಿಗೆ ಈ ದೀಕ್ಷಾವಸ್ತ್ರಗಳನ್ನು ಮಾಡಿಸು.
5 : ಜನರು ಕಾಣಿಕೆಯಾಗಿ ಕೊಡುವ ಚಿನ್ನವನ್ನು, ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರವನ್ನು ಮತ್ತು ನಾರಿನ ಬಟ್ಟೆಯನ್ನು ಈ ವಸ್ತ್ರಗಳನ್ನು ತಯಾರಿಸಲು ಉಪಯೋಗಿಸು.
6 : “ ‘ಏಫೋದ್’ ಎಂಬ ಕವಚವನ್ನು ಹುರಿನಾರಿನ ಬಟ್ಟೆಯಿಂದ ಮಾಡಿಸು. ಚಿನ್ನದ ದಾರದಿಂದಲೂ ಹಾಗು ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿಗೆಲಸದವರು ಅದನ್ನು ಅಲಂಕರಿಸಲಿ.
7 : ಈ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳಿರಬೇಕು. ಅದಕ್ಕೆ ಎರಡು ಕೊನೆಗಳು ಜೋಡಿಸಲ್ಪಡಬೇಕು.
8 : ಕವಚದ ಮೇಲಿರುವ ಕಸೂತಿ ಕೆಲಸದ ನಡುಕಟ್ಟು ಕವಚದ ಅಂಗವಾಗಿರಬೇಕು. ಅದರಂತೆಯೇ ಹುರಿ ನಾರಿನ ಬಟ್ಟೆಯಿಂದ ಮಾಡಿರಬೇಕು. ಚಿನ್ನದ ದಾರದಿಂದಲೂ ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಅಲಂಕೃತವಾಗಿರಬೇಕು.
9 : ಎರಡು ಗೋಮೆಧಕ ರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸು.
10 : ಒಂದು ರತ್ನದಲ್ಲಿ ಆರು ಹೆಸರುಗಳನ್ನು ಮತ್ತೊಂದು ರತ್ನದಲ್ಲಿ ಮಿಕ್ಕ ಆರು ಹೆಸರುಗಳನ್ನು ಅವರವರ ಜನನದ ಕ್ರಮಾನುಸಾರ ಕೆತ್ತಿಸು.
11 : ಮುದ್ರಾ ರತ್ನವನ್ನು ಕೆತ್ತುವಂತೆ, ಈ ಎರಡು ರತ್ನಗಳಲ್ಲಿ ಇಸ್ರಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಿ ಆ ರತ್ನಗಳನ್ನು ಕುಂದಣದಲ್ಲಿ ಕಟ್ಟಿಸಬೇಕು.
12 : ಇಸ್ರಯೇಲರ ಜ್ಞಾಪಕಾರ್ಥವಾಗಿ ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಕವಚದ ಪಟ್ಟಿಗಳಲ್ಲಿ ಬಿಗಿಸಬೇಕು. ಆರೋನನು ಸರ್ವೇಶ್ವರನಾದ ನನ್ನ ಸನ್ನಿಧಿಗೆ ಭುಜಗಳ ಮೇಲೆ ಅವುಗಳನ್ನು ಧರಿಸಿಕೊಂಡು ಬರುವನು.
13 : ಆ ರತ್ನಗಳನ್ನು ಖಚಿಸಿ ಇಡುವುದಕ್ಕೆ ಚಿನ್ನದ ಸರಿಗೆಯನ್ನು ಹೆಣೆದು ಗೂಡುಗಳನ್ನು ಮಾಡಿಸಬೇಕು
14 : ಅಲ್ಲದೇ ಹೆಣಿಗೇ ಕೆಲಸದಿಂದ ಹುರಿಗಳಂತಿರುವ ಎರಡು ಅಪ್ಪಟ ಬಂಗಾರದ ಸರಪಣಿಗಳನ್ನು ಮಾಡಿಸಿ ಆ ರತ್ನಗಳ ಗೂಡುಗಳಿಗೆ ಸಿಕ್ಕಿಸಬೇಕು.
15 : “ದೈವ ನಿರ್ಣಯದ ಚೀಲವುಳ್ಳ ಎದೆ ಫಲಕವನ್ನು ಕಸೂತಿ ಕೆಲಸದಿಂದ ಮಾಡಿಸು. ಅದನ್ನು ಎಫೋದ್ ಕವಚದ ಕೆಲಸದಂತೆಯೇ ಚಿನ್ನದ ದಾರದಿಂದಲೂ, ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಹುರಿನಾರಿನ ಬಟ್ಟೆಯಲ್ಲಿ ಮಾಡಿಸು.
16 : ಅದು ಒಂದು ಗೇಣು ಉದ್ದ, ಒಂದು ಗೇಣು ಅಗಲ ಹಾಗು ಎರಡು ಪದರುಳ್ಳದ್ದಾಗಿ ಚಚೌಕವಾಗಿರಲಿ,
17 : ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ಜವೆಯ ಕಲ್ಲುಗಳಲ್ಲಿ ರತ್ನಗಳನ್ನು ಸೇರಿಸಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಹಾಗು ಸ್ಫಟಿಕಗಳನ್ನು;
18 : ಎರಡನೆಯ ಸಾಲಿನಲ್ಲಿ ಕೆಂಪರಲು ಹಾಗು ನೀಲಿ ಪಚ್ಚೆಗಳನ್ನು;
19 : ಮೂರನೆಯ ಸಾಲಿನಲ್ಲಿ ಸುವರ್ಣ ರತ್ನ, ಗೋಮೇಧಕ ಹಾಗು ಧೂಮ್ರಮಣಿಗಳನ್ನು; ಮತ್ತು
20 : ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಹಾಗು ವೈಡೂರ್ಯಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.
21 : ಇಸ್ರಯೇಲರ ಕುಲಗಳ ಸಂಖ್ಯಾನುಸಾರ ಹನ್ನೆರಡು ರತ್ನಗಳಿರಬೇಕು. ಮುದ್ರಾರತ್ನದಲ್ಲಿ ಕೆತ್ತುವಂತೆ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಿಸಬೇಕು.
22 : ಅದೂ ಅಲ್ಲದೆ ಆ ಎದೆಫಲಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಅಪ್ಪಟ ಬಂಗಾರದ ಸರಪಣಿಗಳನ್ನು ಹೆಣಿಗೇ ಕೆಲಸದಿಂದ ಮಾಡಿಸಿಡಬೇಕು.
23 : ಎರಡು ಚಿನ್ನದ ಉಂಗುರಗಳನ್ನು ಮಾಡಿಸಿ ಪದಕದ ಎರಡು ಮೂಲೆಗಳಿಗೆ ಹಚ್ಚಬೇಕು.
24 : ಆ ಎರಡು ಸರಪಣಿಗಳನ್ನು ಪತಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಸಿಕ್ಕಿಸಬೇಕು.
25 : ಆ ಸರಪಣಿಗಳ ಕೊನೆಗಳನ್ನು ಎಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಜವೆಗಳ ಮುಂಭಾಗಕ್ಕೆ ಸಿಕ್ಕಿಸಬೇಕು.
26 : ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿಸಿ ಆ ಎದೆಫಲಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಡಿಸಬೇಕು.
27 : ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿಸಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಕಸೂತಿ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಬೇಕು.
28 : ಎದೆ ಫಲಕವು ಕಸೂತಿ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆ ಹಾಗು ಕವಚದಿಂದ ಕಳಚಿ ಬೀಳದಂತೆ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿದಾರದಿಂದ ಕಟ್ಟಿಸಬೇಕು.
29 : “ದೈವನಿರ್ಣಯದ ಚೀಲವುಳ್ಳ ಆ ಫಲಕದ ಮೇಲೆ ಇಸ್ರಯೇಲರ ಕುಲಗಳ ಹೆಸರುಗಳು ಬರೆದಿರುವುದರಿಂದ ಆರೋನನು ಅದನ್ನು ತನ್ನ ಎದೆಯಮೇಲೆ ಧರಿಸಿಕೊಂಡು ಪವಿತ್ರಸ್ಥಾನದೊಳಗೆ ಬರುವಾಗಲೆಲ್ಲಾ ಆ ಹೆಸರುಗಳನ್ನು ಸರ್ವೇಶ್ವರನಾದ ನನ್ನ ನೆನಪಿಗೆ ಸತತವಾಗಿ ತರುವನು.
30 : ದೈವನಿರ್ಣಯವನ್ನು ತಿಳಿಸುವ ಊರಿಮ್ ಹಾಗು ತುಮ್ಮಿಮ್ ಎಂಬ ದಾಳಗಳನ್ನು ಆ ಫಲಕದ ಚೀಲದಲ್ಲಿ ಇಡಬೇಕು. ಆರೋನನು ಸರ್ವೇಶ್ವರನಾದ ನನ್ನ ಸನ್ನಿಧಿಗೆ ಬರುವಾಗ ಅವು ಅವನ ಎದೆಯ ಮೇಲೆ ಇರುವುವು. ಇಸ್ರಯೇಲರು ಕೈಗೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಯಾವಾಗಲು ಧರಿಸಿಕೊಂಡಿರುವನು.
31 : “ಪ್ರಧಾನ ಯಾಜಕನು ಎಫೋದ್ ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ಮೇಲಂಗಿಯನ್ನು ನೀಲಿ ಬಣ್ಣದ ಬಟ್ಟೆಯಿಂದ ಮಾಡಿಸು.
32 : ತಲೆದೂರಿಸುವುದಕ್ಕೆ ಇರುವ ಸಂದಿನ ಸುತ್ತಲೂ ನೇಯಿಗೆ ಕಸೂತಿಯನ್ನು ಹಾಕಿಸಬೇಕು.
33 : ಮೇಲಂಗಿಯ ಅಂಚಿನ ಸುತ್ತಲೂ ನೀಲಿ, ಊದ ಹಾಗು ಕಡುಗೆಂಪು ರಕ್ತವರ್ಣಗಳುಳ್ಳ ದಾರದಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನೂ ಅವುಗಳ ನಡುವೆ ಗೆಜ್ಜೆಗಳನ್ನೂ ತಗಲಿಸಬೇಕು.
34 : ಚಿನ್ನದ ಗೆಜ್ಜೆಯೂ ಹಾಗು ದಾಳಿಂಬೆಯಂತಿರುವ ಚೆಂಡು ಒಂದಾದ ಮೇಲೆ ಒಂದು ಆ ಮೇಲಂಗಿಯ ಅಂಚಿನ ಸುತ್ತಲು ಇರಬೇಕು
35 : ಆರೋನನು ಸೇವೆ ಸಲ್ಲಿಸುವ ಸಮಯದಲ್ಲಿ ಅದನ್ನು ಧರಿಸಿಕೊಳ್ಳಬೇಕು. ಅವನು ಪವಿತ್ರಸ್ಥಾನದೊಳಗೆ ಸರ್ವೇಶ್ವರನಾದ ನನ್ನ ಸನ್ನಿಧಿಗೆ ಬರುವಾಗ ಹಾಗು ಹೋಗುವಾಗ ಆ ಗೆಜ್ಜೆಗಳ ಶಬ್ದ ಕೇಳಿಸಬೇಕು. ಇಲ್ಲದಿದ್ದರೆ ಅವನು ಸಾಯುವನು.
36 : “ಚೊಕ್ಕ ಬಂಗಾರದ ಪಟ್ಟಿಯೊಂದನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರ ಮೇಲೆ ‘ಸರ್ವೇಶ್ವರನಿಗೆ ವಿೂಸಲು’ ಎಂಬ ಲಿಪಿಯನ್ನು ಕೆತ್ತಿಸಬೇಕು.
37 : ಅದನ್ನು ಪೇಟಕ್ಕೆ ಬಿಗಿಯುವುದಕ್ಕಾಗಿ ನೀಲಿದಾರವನ್ನು ಅದಕ್ಕೆ ಕಟ್ಟಿಸಬೇಕು. ಅದು ಪೇಟದ ಮುಂಭಾಗದಲ್ಲಿ ಇರಬೇಕು.
38 : ಇಸ್ರಯೇಲರನ್ನು ಪರಿಶುದ್ಧಗೊಳಿಸುವ ಪವಿತ್ರ ವಸ್ತುಗಳಲ್ಲಿ ಹಾಗು ಅವರು ಕಾಣಿಕೆಯಾಗಿ ಸಮರ್ಪಿಸುವ ಸಮಸ್ತವಸ್ತುಗಳಲ್ಲಿ ದೋಷವೇನಾದರು ಇದ್ದರೆ ಆರೋನನು ಆ ಪಟ್ಟಿಯನ್ನು ತಲೆಯ ಮೇಲೆಧರಿಸಿ ಆ ದೋಷವನ್ನು ತಾನೇವಹಿಸಿಕೊಳ್ಳುತ್ತಾನೆ. ಆದ್ದರಿಂದ ಅವರು ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಅಂಗೀಕೃತರಾಗುತ್ತಾರೆ.
39 : “ಆರೋನನು ಧರಿಸಬೇಕಾದ ನಿಲುವಂಗಿಯನ್ನು ನಯವಾದ ನಾರಿನಿಂದ ನೇಯಿಸು. ಅವನ ಪೇಟವನ್ನೂ ಅಂತೆಯೇ ನಯವಾದ ನಾರಿನಿಂದ ಮಾಡಿಸು. ಅವನ ನಡುಕಟ್ಟು ಕಸೂತಿ ಕೆಲಸದಿಂದ ಅಲಂಕಾರವಾಗಿರಬೇಕು.
40 : “ಆರೋನನ ಮಕ್ಕಳಿಗೆ ತಕ್ಕ ಗೌರವ ಹಾಗು ಶೋಭೆ ಸಿಗುವಂತೆ ನಿಲುವಂಗಿಗಳನ್ನೂ ನಡುಕಟ್ಟುಗಳನ್ನೂ ಹಾಗು ಪೇಟಗಳನ್ನೂ ಮಾಡಿಸು
41 : ಈ ಬಗೆಯ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಉದ್ಯೋಗಕ್ಕೆ ಸೇರಿಸಿ ಪ್ರತಿಷ್ಠಿಸು. ಆಗ ಅವರು ನನಗೆ ಯಾಜಕರಾಗಿರುವರು
42 : ಅದೂ ಅಲ್ಲದೆ ಅವರ ಗುಪ್ತಾಂಗ ಕಾಣಿಸದಂತೆ ಸೊಂಟದಿಂದ ತೊಡೆಯ ತನಕ ನಾರಿನ ಚಡ್ಡಿಗಳನ್ನು ಮಾಡಿಸು.
43 : ಆರೋನನು ಮತ್ತು ಅವನ ಮಕ್ಕಳು ದೇವದರ್ಶನದ ಗುಡಾರದೊಳಗೆ ಬರುವಾಗ ಹಾಗು ಪವಿತ್ರ ಸ್ಥಾನದಲ್ಲಿ ಸೇವೆ ಮಾಡಲು ಬಲಿಪೀಠದ ಹತ್ತಿರಕ್ಕೆ ಬರುವಾಗ ಇವುಗಳನ್ನು ಹಾಕಿಕೊಂಡಿರಲಿ. ಇಲ್ಲವಾದರೆ ಅವರು ಆ ಅಪರಾಧದ ನಿಮಿತ್ತ ಸಾಯುವರು. ಆರೋನನಿಗೂ ಅವನ ವಂಶಸ್ಥರಿಗೂ ಇದು ಶಾಶ್ವತವಾದ ನಿಯಮ.

Holydivine