Exodus - Chapter 38
Holy Bible

1 : ಅವನು ಬಲಿಪೀಠವನ್ನು ಜಾಲೀಮರದಿಂದ ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಚಚೌಕವಾಗಿತ್ತು; ಅದರ ಎತ್ತರ ಮೂರು ಮೊಳ ಆಗಿತ್ತು.
2 : ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿದನು; ಅವು ಬಲಿಪೀಠದ ಅಂಗಾಂಗಳಾಗಿದ್ದವು. ಆ ಪೀಠಕ್ಕೆ ತಾಮ್ರದ ತಗಡುಗಳನ್ನು ಹೊದಿಸಿದನು.
3 : ಪೀಠದ ಉಪಕರಣಗಳನ್ನೆಲ್ಲಾ ಅಂದರೆ ಅದರ ಬಟ್ಟಲುಗಳು, ಸಲಿಕೆಗಳು, ಬೋಗುಣಿಗಳು, ಮುಳ್ಳುಗಳು, ಅಗ್ಗಿಷ್ಟಿಕೆಗಳು ಇವುಗಳನ್ನೆಲ್ಲಾ ತಾಮ್ರದಿಂದ ಮಾಡಿದನು.
4 : ಪೀಠದ ಹೆಣಿಗೇಕೆಲಸದಿಂದ ತಾಮ್ರದ ಜಾಳಿಗೆಯನ್ನು ಮಾಡಿದನು. ಅದು ಪೀಠದ ಸುತ್ತಲಿರುವ ಕಟ್ಟೆಯ ಕೆಳಗೆ ಪೀಠದ ಬುಡದಿಂದ ನಡುವಿನ ತನಕ ಇರುವಂತೆ ಹಾಕಿದನು.
5 : ಪೀಠವನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ಆ ತಾಮ್ರದ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯ್ಸಿದನು.
6 : ಪೀಠವನ್ನು ಹೊರುವ ಗದ್ದಿಗೆಗಳನ್ನು ಜಾಲೀಮರದಿಂದ ಮಾಡಿ ತಾಮ್ರದ ತಗಡುಗಳನ್ನು ಹೊದಿಸಿ
7 : ಅದರ ಎರಡು ಪಕ್ಕಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. ಆ ಪೀಠವನ್ನು ಹಲಗೆಗಳಿಂದ ಪೆಟ್ಟಿಗೆಯಂತೆ ಮಾಡಿದನು.
8 : ದೇವದರ್ಶನದ ಗುಡಾರದ ಬಾಗಿಲಲ್ಲಿ ಸೇವೆ ಮಾಡುತ್ತಿದ್ದ ಮಹಿಳೆಯರು ಕೊಟ್ಟ ತಾಮ್ರದ ದರ್ಪಣಗಳಿಂದ ನೀರಿನ ತೊಟ್ಟಿಯನ್ನೂ ಅದರ ಪೀಠವನ್ನೂ ಮಾಡಿದನು.
9 : ಗುಡಾರಕ್ಕೆ ಅಂಗಳವನ್ನೂ ಮಾಡಿದನು. ಆ ಅಂಗಳದ ದಕ್ಷಿಣದ ಕಡೆಯಲ್ಲಿ ಇದ್ದ ತೆರೆಗಳನ್ನು ಹುರಿನಾರಿನ ಬಟ್ಟೆಯಿಂದ ಮಾಡಲಾಗಿತ್ತು. ಅವು ನೂರು ಮೊಳ ಉದ್ದವಾಗಿದ್ದವು.
10 : ಆ ಕಡೆಯಲ್ಲಿ ಇಪ್ಪತ್ತು ಕಂಬಗಳೂ ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು.
11 : ಉತ್ತರ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ತೆರೆಗಳೂ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು.
12 : ಪಶ್ಚಿಮ ಕಡೆಯಲ್ಲಿ ಐವತ್ತು ಮೊಳ ಉದ್ದವಾದ ತೆರೆಗಳೂ ಹತ್ತು ಕಂಬಗಳೂ ಹತ್ತು ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳು ಬೆಳ್ಳಿಯವು.
13 : ಪೂರ್ವದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಾಗಿತ್ತು.
14 : ಅಲ್ಲಿ ಬಾಗಿಲಿನ ಎರಡು ಕಡೆಗಳಲ್ಲಿಯೂ ಹದಿನೈದು ಮೊಳ ಉದ್ದವಾದ ತೆರೆಗಳೂ
15 : ಅವುಗಳಿಗೆ ಮೂರು ಮೂರು ಕಂಬಗಳೂ ಮೂರುಮೂರು ಗದ್ದಿಗೇಕಲ್ಲುಗಳೂ ಇದ್ದವು.
16 : ಅಂಗಳದ ಸುತ್ತಲಿರುವ ತೆರೆಗಳೆಲ್ಲಾ ಹುರಿನಾರಿನ ಬಟ್ಟೆಯಿಂದಲೇ ಮಾಡಲಾಗಿತ್ತು.
17 : ಕಂಬಗಳ ಗದ್ದಿಗೇಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಮಾಡಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು.
18 : ಅಂಗಳದ ಬಾಗಿಲಲ್ಲಿದ್ದ ಪರದೆಯು ಹುರಿನಾರಿನ ಬಟ್ಟೆಯಿಂದಲೂ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದವರ ಕೈಯಿಂದ ಮಾಡಲ್ಪಟ್ಟಿತು. ಅದರ ಉದ್ದ ಇಪ್ಪತ್ತು ಮೊಳವಾಗಿತ್ತು; ಅದರ ಅಗಲ ಅಂಗಳದ ಮಿಕ್ಕ ತೆರೆಗಳಂತೆ ಐದು ಮೊಳ.
19 : ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ತಾಮ್ರದ ಗದ್ದಿಗೇಕಲ್ಲುಗಳು ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೋದಿಗೆಗಳಿಗೆ ಹೊದಿಸಲ್ಪಟ್ಟ ತಗಡುಗಳೂ ಬೆಳ್ಳಿಯವು.
20 : ಗುಡಾರದ ಗೂಟಗಳೂ ಅಂಗಳದ ಗೂಟಗಳೂ ಎಲ್ಲಾ ತಾಮ್ರದವುಗಳು.
21 : ದೇವದರ್ಶನದ ಗುಡಾರವನ್ನು ನಿರ್ಮಿಸಿದಾಗ ಉಪಯೋಗಿಸಿದ ಲೋಹಗಳ ಲೆಕ್ಕ ಮತ್ತು ಮೋಶೆಯ ಆಜ್ಞೆಯ ಮೇರೆಗೆ ಮಹಾಯಾಜಕನಾದ ಆರೋನನ ಮಗ ಈತಾಮಾರನು ಲೇವಿಯರ ಕೈಯಿಂದ ಮಾಡಿಸಿದ ಪಟ್ಟಿ:
22 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದವನು ಯೆಹೂದ ಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿದ್ದ ಬೆಚಲೇಲನು.
23 : ಅವನ ಜೊತೆಯಲ್ಲಿ ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನು ಸೇರಿದ್ದನು. ಇವನು ಶಿಲ್ಪಕಲೆ ಬಲ್ಲವನು. ಕಲಾತ್ಮಕ ಕೆಲಸವನ್ನು ನಿಯೋಜಿಸುವವನು ಮತ್ತು ನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ನೂಲಿನಿಂದ ಕಸೂತಿ ಕೆಲಸಮಾಡುವವನು.
24 : ದೇವಮಂದಿರದ ವಿವಿಧ ಕೆಲಸದಲ್ಲಿ ಉಪಯೋಗಿಸಿದ ಕಾಣಿಕೆಯ ಬಂಗಾರದ ತೂಕ, ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಸುಮಾರು ಒಂದು ಸಾವಿರ ಕಿಲೋಗ್ರಾಂ ಇತ್ತು.
25 : ಬೆಳ್ಳಿಯ ತೂಕ ಸುಮಾರು 3,430 ಕಿಲೋಗ್ರಾಂ ಇತ್ತು. ಇದು ಜನಗಣತಿಯಲ್ಲಿ ಸೇರಿಸಲಾಗಿದ್ದ ಇಪ್ಪತ್ತು ವರ್ಷದವರು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರು ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಕೊಟ್ಟ ಮೊತ್ತ.
26 : ಆರು ಲಕ್ಷ, ಮೂರು ಸಾವಿರದ ಐನೂರ ಐವತ್ತು ಮಂದಿಯನ್ನು ಜನಗಣತಿಯಲ್ಲಿ ಹೀಗೆ ಸೇರಿಸಲಾಗಿತ್ತು.
27 : ಈ ಬೆಳ್ಳಿಯಲ್ಲಿ 3,400 ಕಿಲೋ ಗ್ರಾಂನ್ನು ದೇವ ಮಂದಿರದ ನೂರು ಗದ್ದಿಗೇ ಕಲ್ಲುಗಳನ್ನು ಹಾಗು ತೆರೆಯ ಕಂಬಗಳ ಗದ್ದಿಗೇ ಕಲ್ಲುಗಳನ್ನು ಎರಕಹೊಯ್ಯಲು ಉಪಯೋಗಿಸಲಾಗಿತ್ತು. ಒಂದೊಂದು ಗದ್ದಿಗೆಗೆ 34 ಕಿಲೋ ಗ್ರಾಂನ್ನು ಉಪಯೋಗಿಸಲಾಗಿತ್ತು.
28 : ಮಿಕ್ಕ 34 ಕಿಲೋ ಗ್ರಾಂನಿಂದ ಕಂಬಗಳಿಗೆ ಕೊಂಡಿಗಳನ್ನು ಹಾಗು ಕಟ್ಟುಗಳನ್ನು ಮಾಡಿ ಅವುಗಳ ಬೋದಿಗೆಗಳಿಗೆ ತಗಡುಗಳನ್ನು ಹೊದಿಸಿದ್ದರು.
29 : ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಮೊತ್ತ 2,425 ಕಿಲೋಗ್ರಾಂ.
30 : ಇದರಿಂದ ದೇವದರ್ಶನದ ಗುಡಾರದ ಬಾಗಿಲಿಗೆ ಗದ್ದಿಗೇಕಲ್ಲುಗಳನ್ನು, ತಾಮ್ರದ ಬಲಿಪೀಠವನ್ನು, ಅದರ ತಾಮ್ರದ ಜಾಳಿಗೆಯನ್ನು, ಬಲಿಪೀಠದ ಎಲ್ಲ ಉಪಕರಣಗಳನ್ನು
31 : ಅಂಗಳದ ಸುತ್ತಲಿನ ಗದ್ದಿಗೇಕಲ್ಲುಗಳನ್ನು ಗುಡಾರದ ಮತ್ತು ಅಂಗಳದ ಎಲ್ಲಾ ಗೂಟಗಳನ್ನು ಮಾಡಿದನು.

Holydivine