Exodus - Chapter 23
Holy Bible

1 : “ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುಷ್ಟರ ಸಹಾಯಕ್ಕಾಗಿ ನ್ಯಾಯವಿರುದ್ಧವಾದ ಸಾಕ್ಷಿಯನ್ನು ನುಡಿಯಬಾರದು.
2 : ಕೆಟ್ಟಕಾರ್ಯವನ್ನು ಮಾಡುವವರು ಬಹುಮಂದಿ ಇದ್ದಾರೆ. ಆದರೂ ನೀವು ಅವರ ಜೊತೆ ಸೇರಬಾರದು. ಬಹು ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳಬಾರದು.
3 : ಅಲ್ಲದೆ ಬಡವನ ಮೇಲಿನ ಕರುಣೆಯಿಂದ ಪಕ್ಷಪಾತದ ತೀರ್ಮಾನವನ್ನು ಮಾಡಬಾರದು.
4 : “ನಿನ್ನ ವೈರಿಯ ಎತ್ತಾಗಲಿ, ಕತ್ತೆಯಾಗಲಿ ತಪ್ಪಿಸಿಕೊಂಡು ತಿರುಗಾಡುವಾಗ ಅದು ನಿನಗೆ ಸಿಕ್ಕಿದರೆ ಅದನ್ನು ಅವನ ಬಳಿಗೆ ಹೊಡೆದುಕೊಂಡು ಹೋಗಿ ಒಪ್ಪಿಸಬೇಕು.
5 : ನಿನ್ನ ಹಗೆಯವನ ಕತ್ತೆ ಹೊರೆಯನ್ನು ತಾಳದೆ ಕೆಳಗೆ ಬಿದ್ದಿರುವುದನ್ನು ಕಂಡರೆ ಅದನ್ನು ಎಬ್ಬಿಸುವುದಕ್ಕೆ ನಿನಗೆ ಮನಸ್ಸಿಲ್ಲದಿದ್ದರೂ ಅವನಿಗೆ ಸಹಾಯಮಾಡಿ ಅದನ್ನು ಎಬ್ಬಿಸಲೇ ಬೇಕು.
6 : “ನಿಮ್ಮಲ್ಲಿರುವ ಬಡವರು ನ್ಯಾಯಕೋರಿ ಬರುವಾಗ ಅವರಿಗೆ ನೀವು ನ್ಯಾಯ ತಪ್ಪಿಸಬಾರದು. ಮೋಸದ ಕಾರ್ಯದಿಂದ ದೂರವಿರಬೇಕು;
7 : ನಿರಪರಾಧಿಯೂ ನೀತಿವಂತನೂ ಆದ ವ್ಯಕ್ತಿಗೆ ಮರಣದಂಡನೆ ವಿಧಿಸಲೇಕೂಡದು; ಅಂಥ ದುಷ್ಕøತ್ಯ ಮಾಡಿದವನಿಗೆ ನಾನು ಶಿಕ್ಷೆ ವಿಧಿಸದೆ ಬಿಡುವುದಿಲ್ಲ.
8 : ಲಂಚವನ್ನು ತೆಗೆದುಕೊಳ್ಳಬಾರದು. ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿಸುತ್ತದೆ; ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ಕೆಡಿಸುತ್ತದೆ.
9 : “ಪರದೇಶೀಯರನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದಿರಲ್ಲವೆ? ಅಂಥವರ ಮನೋವ್ಯಥೆ ನಿಮಗೆ ಗೊತ್ತೇ ಇದೆ.
10 : “ಆರು ವರ್ಷ ನಿಮ್ಮ ಹೊಲಗದ್ದೆಗಳಲ್ಲಿ ಬಿತ್ತನೆಮಾಡಿ ಬೆಳೆತೆಗೆದುಕೊಳ್ಳಿ.
11 : “ಆದರೆ ಏಳನೆಯ ವರ್ಷ ಆ ಭೂಮಿಯನ್ನು ಬೀಳುಮಾಡಿ. ನಿಮ್ಮ ನಾಡಿನ ಬಡವರು ಅದರಲ್ಲಿ ತಾನಾಗಿ ಬೆಳೆಯುವುದನ್ನು ತಿನ್ನಲಿ. ಮಿಕ್ಕದನ್ನು ಕಾಡುಮೃಗಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳಲ್ಲಿ ಹಾಗೂ ಎಣ್ಣೇಮರ ತೋಪುಗಳ ವಿಷಯದಲ್ಲೂ ಅದೇ ರೀತಿಯಾಗಿ ಮಾಡಿ.
12 : “ವಾರದಲ್ಲಿ ನೀವು ಆರು ದಿವಸ ಕೆಲಸ ಮಾಡಿ. ಏಳನೆಯ ದಿವಸ ಯಾವ ಕೆಲಸವನ್ನೂ ಮಾಡದಿರಿ. ಆ ದಿನ ನಿಮ್ಮ ಎತ್ತುಗಳು, ಕತ್ತೆಗಳು, ದಾಸದಾಸಿಯರು ಹಾಗೂ ಪರದೇಶೀಯರು ವಿಶ್ರಮಿಸಿಕೊಳ್ಳಲಿ.
13 : “ನಾನು ನಿಮಗೆ ವಿಧಿಸಿದ್ದನ್ನೆಲ್ಲ ಜಾಗರೂಕತೆಯಿಂದ ಅನುಸರಿಸಿ ನಡೆಯಿರಿ. ಬೇರೆ ಯಾವ ದೇವರ ಹೆಸರನ್ನು ಸ್ಮರಿಸಬೇಡಿ, ಉಚ್ಚರಿಸಲೂ ಬೇಡಿ.
14 : “ನೀವು ವರ್ಷಕ್ಕೆ ಮೂರು ಸಾರಿ ನನಗೆ ಹಬ್ಬಮಾಡಬೇಕು.
15 : ಹುಳಿಯಿಲ್ಲದ ರೊಟ್ಟಿ ತಿನ್ನುವ ಹಬ್ಬ ಒಂದು. ನಾನು ನಿಮಗೆ ಆಜ್ಞಾಪಿಸಿದಂತೆ ಚೈತ್ರಮಾಸದ ನಿಗದಿಯಾದ ಕಾಲದಲ್ಲಿ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಏಕೆಂದರೆ ಆ ಮಾಸದಲ್ಲೇ ನೀವು ಈಜಿಪ್ಟಿನಿಂದ ಹೊರಟುಬಂದದ್ದು. ನನ್ನ ಸನ್ನಿಧಿಗೆ ಬರುವ ಪ್ರತಿಯೊಬ್ಬನು ಕಾಣಿಕೆಯಿಲ್ಲದೆ ಬರೀ ಕೈಯಲ್ಲಿ ಬರಕೂಡದು
16 : “ಅಲ್ಲದೆ ನೀವು ಬಿತ್ತನೆಮಾಡಿದ ಹೊಲ ಗದ್ದೆಗಳಲ್ಲಿ ಮೊದಲನೆಯ ಫಲ ದೊರೆತಾಗ ಸುಗ್ಗಿಯ ಹಬ್ಬವನ್ನು ಆಚರಿಸಬೇಕು. ವರ್ಷದ ಕೊನೆಯಲ್ಲಿ ಅಂದರೆ, ಹೊಲ ತೋಟಗಳಿಂದ ನೀವು ಬೆಳೆಯನ್ನು ಕೂಡಿಸುವಾಗ, ಒಕ್ಕಣೆಯ (ಫಲ ಸಂಗ್ರಹದ) ಹಬ್ಬವನ್ನು ಆಚರಿಸಬೇಕು
17 : ಹೀಗೆ ವರ್ಷಕ್ಕೆ ಮೂರು ಸಾರಿ ನಿಮ್ಮ ಗಂಡಸರೆಲ್ಲರು ಸರ್ವೇಶ್ವರನೂ ದೇವರೂ ಆದ ನನ್ನ ಸನ್ನಿಧಿಗೆ ಬರಬೇಕು.
18 : “ನನಗೆ ಬಲಿಯನ್ನು ಅರ್ಪಿಸುವಾಗ ಆ ಬಲಿಪ್ರಾಣಿಯ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಹಬ್ಬದಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪ್ರಾಣಿಯ ಕೊಬ್ಬನ್ನು ಮಾರನೆಯ ದಿನದವರೆಗೂ ಇಡಲೇಕೂಡದು.
19 : “ನಿಮ್ಮ ಬೆಳೆಯ ಪ್ರಥಮ ಫಲದಲ್ಲಿ ಅತಿ ಶ್ರೇಷ್ಠವಾದುದ್ದನ್ನು ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಮಂದಿರಕ್ಕೆ ತರಬೇಕು.
20 : “ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೆ ಹಾಗೂ ನಾನು ಗೊತ್ತು ಮಾಡಿರುವ ಸ್ಥಳಕ್ಕೆ ನಿಮ್ಮನ್ನು ಕರೆದುತರುವುದಕ್ಕೆ ಒಬ್ಬ ದೂತನನ್ನು ನಿಮ್ಮ ಮುಂದೆ ಕಳಿಸುತ್ತೇನೆ
21 : ನೀವು ಆತನಲ್ಲಿ ಲಕ್ಷ್ಯವಿಟ್ಟು ಆತನ ಮಾತಿಗೆ ಕಿವಿಗೊಡಬೇಕು. ಆತನಿಗೆ ಅವಿಧೇಯರಾಗಿ ಇರಬಾರದು. ಏಕೆಂದರೆ ಆತ ಬರುವುದು ನನ್ನ ಹೆಸರಿನಲ್ಲಿ. ನೀವು ಅವಿಧೇಯರಾದರೆ ಆತ ನಿಮ್ಮನ್ನು ಕ್ಷಮಿಸಲಾರನು.
22 : ನೀವು ಆತನ ಮಾತನ್ನು ಶ್ರದ್ಧೆಯಿಂದ ಆಲಿಸಿ, ನನ್ನ ಆಶೆಗಳನ್ನೆಲ್ಲ ಪಾಲಿಸಿದರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು.
23 : ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು ಹಿವ್ವಿಯರು ಹಾಗೂ ಯೆಬೂಸಿಯರು ಇರುವ ನಾಡಿಗೆ ನಿಮ್ಮನ್ನು ಸೇರಿಸುವನು. ಅವರನ್ನಾದರೋ ನಾನು ನಿರ್ಮೂಲಮಾಡುವೆನು.
24 : ಅವರ ದೇವತೆಗಳನ್ನು ನೀವು ನಮಸ್ಕರಿಸಬಾರದು, ಪೂಜಿಸಬಾರದು ಮಾತ್ರವಲ್ಲ, ಅವರ ಆಚರಣೆಗಳನ್ನು ಅನುಸರಿಸಲೇಬಾರದು. ಆ ಜನಗಳನ್ನು ನಿರ್ಮೂಲಮಾಡಿ ವಿಗ್ರಹಸ್ತಂಭಗಳನ್ನು ನಾಶ ಮಾಡಬೇಕು.
25 : ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನೊಬ್ಬನನ್ನೇ ಆರಾಧಿಸಬೇಕು. ಆಗ ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವೆನು, ನಿಮ್ಮೊಳಗೆ ಯಾವ ವ್ಯಾಧಿಯೂ ಇರದಂತೆ ಮಾಡುವೆನು.
26 : ನಿಮ್ಮ ನಾಡಿನಲ್ಲಿ ಗರ್ಭಸ್ರಾವವಾಗಲಿ ಬಂಜೆತನವಾಗಲಿ ಇರುವುದಿಲ್ಲ. ನಿಮಗೆ ಪೂರ್ಣವಾದ ಆಯುಸ್ಸನ್ನು ಕೊಡುವೆನು.
27 : “ನೀವು ಹೋಗುವ ಎಲ್ಲ ಕಡೆಯಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿ ಕಳವಳವನ್ನು ಉಂಟುಮಾಡಿ, ನಿಮ್ಮನ್ನು ವಿರೋಧಿಸುವವರು ಓಡಿಹೋಗುವಂತೆ ಮಾಡುವೆನು.
28 : ನಿಮಗೆ ಮುಂಚಿತವಾಗಿ ಕಣಜದ ಹುಳುಗಳನ್ನು ಕಳಿಸುವೆನು. ಅವು, ಆ ಹಿವ್ವಿಯರು, ಕಾನಾನ್ಯರು ಹಾಗೂ ಹಿತ್ತಿಯರು ನಿಮ್ಮ ಮುಂದೆ ನಿಲ್ಲದಂತೆ ಓಡಿಸಿಬಿಡುವುವು
29 : ಆದರೆ ನಾನು ಒಂದೇ ವರ್ಷದೊಳಗೆ ಅವರೆಲ್ಲರನ್ನು ಅಲ್ಲಿಂದ ಹೊರಡಿಸುವುದಿಲ್ಲ. ಏಕೆಂದರೆ ಆ ನಾಡಿನಲ್ಲಿ ಜನರು ಕಡಿಮೆಯಾಗುವುದರಿಂದ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಗೆ ಕಾರಣವಾಗಬಹುದು.
30 : ನೀವು ಅಭಿವೃದ್ಧಿಯಾಗಿ ನಾಡಿನಲ್ಲೆಲ್ಲಾ ತುಂಬಿಕೊಳ್ಳುವ ತನಕ ಅವರನ್ನು ಸ್ವಲ್ಪಸ್ವಲ್ಪವಾಗಿ ಹೊರಡಿಸುತ್ತಿರುವೆನು.
31 : ಕೆಂಪು ಸಮುದ್ರದಿಂದ ಫಿಲಿಷ್ಟಿಯರ ದೇಶದ ಬಳಿಯಿರುವ ಸಮುದ್ರದವರೆಗೂ ಮತ್ತು ಈ ಮರುಭೂಮಿಯಿಂದ ಯೂಫ್ರೆಟಿಸ್ ಮಹಾ ನದಿಯವರೆಗೂ ಇರುವ ನಾಡನ್ನು ಎಲ್ಲಾ ನಿಮಗೆ ನೇಮಿಸಿ ಅದರಲ್ಲಿರುವ ನಿವಾಸಿಗಳನ್ನು ನಿಮಗೆ ಅಧೀನಪಡಿಸುವೆನು.
32 : ನೀವು ಅವರೊಡನೆಯಾಗಲಿ, ಅವರ ದೇವತೆಗಳೊಡನೆ ಆಗಲಿ ಯಾವ ವಿಧವಾದ ಒಪ್ಪಂದವನ್ನೂ ಮಾಡಿಕೊಳ್ಳಬಾರದು
33 : ಅವರು ನಿಮ್ಮ ನಾಡಿನಲ್ಲಿ ವಾಸವಾಗಿರಬಾರದು. ವಾಸವಾಗಿದ್ದರೆ ನನಗೆ ವಿರೋಧವಾಗಿ ನಿಮ್ಮಲ್ಲಿ ದ್ರೋಹಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವತೆಗಳನ್ನು ಪೂಜಿಸಿದರೆ ಆ ಪೂಜೆಯೆ ನಿಮಗೆ ಉರುಲಾಗುವುದು.”

Holydivine