Exodus - Chapter 22
Holy Bible

1 : “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದುಕೊಂಡು ಕೊಯ್ದರೆ, ಇಲ್ಲವೆ ಮಾರಿದರೆ ಅವನು ಒಂದು ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನು ಒಂದು ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನು ಕೊಡಬೇಕು.
2 : ಕಳ್ಳನು ಕನ್ನ ಕೊರೆಯುತ್ತಿರುವಾಗಲೆ ಕೈಗೆಸಿಕ್ಕಿ ಕೊಲ್ಲಲ್ಪಟ್ಟರೆ ಅದನ್ನು ನರಹತ್ಯೆವೆಂದು ಎಣಿಸಕೂಡದು.
3 : ಸೂರ್ಯೋದಯವಾದ ನಂತರ ಒಬ್ಬನು ಕಳ್ಳನನ್ನು ಹೊಡೆದು ಕೊಂದರೆ ಅದು ನರಹತ್ಯವೇ ಸರಿ. ಕಳ್ಳನು ಕದ್ದದ್ದನ್ನೆಲ್ಲಾ ಪೂರ್ತಿಯಾಗಿ ಕೊಡಬೇಕು. ಅವನಲ್ಲಿ ಕೊಡಲು ಏನೂ ಇಲ್ಲದಿದ್ದರೆ ಮಾಡಿದ ಕಳ್ಳತನಕ್ಕಾಗಿ ಅವನನ್ನು ಗುಲಾಮನನ್ನಾಗಿ ಮಾರಬೇಕು.
4 : ಕಳ್ಳನು ಕದ್ದದ್ದು ಎತ್ತೊ, ಕತ್ತೆಯೋ, ಆಡುಕುರಿಯೋ ಆಗಿದ್ದು, ಅದು ಜೀವದಿಂದಲೇ ಅವನ ಬಳಿ ಸಿಕ್ಕಿದರೆ, ಅವನು ಎರಡರಷ್ಟು ಈಡುಕೊಡಬೇಕು.
5 : “ಒಬ್ಬನು ತನ್ನ ಹೊಲದಲ್ಲಾಗಲಿ, ದ್ರಾಕ್ಷಿ ತೋಟದಲ್ಲಾಗಲಿ ದನಗಳನ್ನು ಮೇಯಿಸಿ ಅವು ಮತ್ತೊಬ್ಬನ ಹೊಲಕ್ಕೆ ಹೋಗಿ ಮೇಯುವಂತೆ ಮಾಡಿದರೆ, ತನ್ನ ಹೊಲದ ಅಥವಾ ದ್ರಾಕ್ಷಿತೋಟದ ಉತ್ತಮ ಫಸಲಿನಿಂದ ಅವನಿಗೆ ಈಡುಕೊಡಬೇಕು.
6 : “ಒಬ್ಬನು ಹೊತ್ತಿಸಿದ ಬೆಂಕಿ ಆಕಸ್ಮಿಕವಾಗಿ ಮುಳ್ಳಿನ ಗಿಡಗಳಿಗೆ ಹತ್ತಿ ಅಲ್ಲಿಂದ ಮತ್ತೊಬ್ಬನ ದವಸದ ರಾಶಿಗಳಾಗಲಿ, ಬೆಳೆಯಾಗಲಿ, ಹೊಲವಾಗಲಿ ಸುಟ್ಟುಹೋದರೆ, ಬೆಂಕಿ ಹೊತ್ತಿಸಿದವನು ಈಡುಕೊಡಬೇಕು.
7 : “ಒಬ್ಬನು ಹಣವನ್ನಾಗಲಿ, ಒಡವೆಗಳನ್ನಾಗಲಿ ಸುರಕ್ಷಿತವಾಗಿಡಲು ಮತ್ತೊಬ್ಬನಿಗೆ ಒಪ್ಪಿಸಿದಾಗ ಅದು ಆ ವ್ಯಕ್ತಿಯ ಮನೆಯಲ್ಲಿ ಕಳುವಾಗಿಹೋದರೆ, ಕಳ್ಳನು ಸಿಕ್ಕಿಕೊಂಡರೆ, ಎರಡರಷ್ಟು ದಂಡಕೊಡಬೇಕು.
8 : ಕಳ್ಳನು ಸಿಕ್ಕದೆ ಹೋದರೆ ಆ ಮನೆಯ ಯಜಮಾನ ತಾನೇ ಆ ಒಡವೆಗಳನ್ನು ಕದ್ದನೋ ಇಲ್ಲವೋ ಎಂಬುದನ್ನು ನಿಶ್ಚಯಿಸುವುದಕ್ಕಾಗಿ ದೇವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
9 : “ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದು ವಿಷಯದಲ್ಲೂ, ಅದು ಎತ್ತು, ಕತ್ತೆ, ಕುರಿ ಅಥವಾ ಬಟ್ಟೆ ವಿಷಯವಾದರೂ ಸರಿಯೇ, ಕಳೆದುಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ ಸರಿಯೇ, ಇಬ್ಬರೂ ಅದು ತಮ್ಮದೆಂದು ಹೇಳುವಾಗ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುತ್ತಾರೋ ಅವನು ಆ ಮತ್ತೊಬ್ಬನಿಗೆ ಎರಡರಷ್ಟು ಕೊಡಬೇಕು.
10 : “ಒಬ್ಬನು ಮತ್ತೊಬ್ಬನ ಕತ್ತೆಯನ್ನಾಗಲಿ, ಎತ್ತನ್ನಾಗಲಿ, ಕುರಿಯನ್ನಾಗಲಿ, ಬೇರೆ ಯಾವ ಪ್ರಾಣಿಯನ್ನೇ ಆಗಲಿ ತನ್ನ ಬಳಿಯಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಒಪ್ಪಿಕೊಂಡ ಮೇಲೆ ಅದು ಸತ್ತರೆ, ಗಾಯಗೊಂಡರೆ, ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ
11 : ಆ ವ್ಯಕ್ತಿ ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸಮಾಡಲಿಲ್ಲ ಎಂಬುದನ್ನು ದೃಢಪಡಿಸಲು ಸರ್ವೇಶ್ವರನ ಮೇಲೆ ಪ್ರಮಾಣಮಾಡಬೇಕು. ಪ್ರಾಣಿಯ ಒಡೆಯನು ಆ ಪ್ರಮಾಣವಾಕ್ಯವನ್ನು ನಂಬಬೇಕು. ಪ್ರಮಾಣ ಮಾಡುವವನು ಈಡುಕೊಡಬೇಕಾದ ಅಗತ್ಯವಿರುವುದಿಲ್ಲ.
12 : ಆದರೆ ಪ್ರಾಣಿಯು ಕಳವಾದರೆ ಆ ವ್ಯಕ್ತಿ ಅದರ ಒಡೆಯನಿಗೆ ಈಡುಕೊಡಬೇಕು.
13 : ಕಾಡುಮೃಗ ಅದನ್ನು ಕೊಂದಿದ್ದರೆ ಅದರ ಅವಶೇಷವನ್ನು ಆಧಾರವಾಗಿ ತೋರಿಸಲಿ. ಕಾಡುಮೃಗದಿಂದ ಕೊಂದುದಕ್ಕೆ ಈಡುಕೊಡಬೇಕಾದ ಅವಶ್ಯಕತೆ ಇಲ್ಲ.
14 : “ಒಬ್ಬನು ಮತ್ತೊಬ್ಬನಿಂದ ಪಶುಪ್ರಾಣಿಯನ್ನು ಕೊಂಚಕಾಲಕ್ಕೆ ಎರವಲಾಗಿ ತೆಗೆದುಕೊಂಡಿರುವಾಗ ಆ ಪ್ರಾಣಿಯ ಒಡೆಯನು ಹತ್ತಿರವಿಲ್ಲದ ಸಮಯದಲ್ಲಿ ಗಾಯಗೊಂಡರೆ ಅಥವಾ ಸತ್ತುಹೋದರೆ ಸಾಲ ತೆಗೆದುಕೊಂಡವನು ಈಡುಕೊಡಬೇಕು.
15 : ಒಡೆಯನು ಅದರ ಹತ್ತಿರದಲ್ಲೇ ಇದ್ದರೆ ಅವನಿಗೆ ಈಡುಕೊಡಬೇಕಾದ ಅವಶ್ಯಕತೆ ಇಲ್ಲ. ಅದನ್ನು ಬಾಡಿಗೆಗೆ ತೆಗೆದುಕೊಂಡಿದ್ದರೆ ಅದಕ್ಕೆ ಉಂಟಾದ ನಷ್ಟವು ಬಾಡಿಗೆಯ ಲೆಕ್ಕಕ್ಕೆ ಎಣಿಕೆಯಾಗಿರಬೇಕು.
16 : “ನಿಶ್ಚಿತಾರ್ಥವಾಗದ ಹೆಣ್ಣನ್ನು ಒಬ್ಬನು ಮರುಳುಗೊಳಿಸಿ ಅವಳನ್ನು ಕೂಡಿದರೆ ಅವಳಿಗಾಗಿ ತೆರವನ್ನು ಕೊಟ್ಟು ಅವಳನ್ನು ಮದುವೆಮಾಡಿಕೊಳ್ಳಬೇಕು
17 : ಅವಳ ತಂದೆ ಅವಳನ್ನು ಅವನಿಗೆ ಕೊಡಲು ಒಪ್ಪದೆಹೋದರೆ ಆ ವ್ಯಕ್ತಿ ತಕ್ಕ ತೆರವನ್ನು ಹೇಗೂ ಕೊಡಬೇಕು.
18 : “ಮಾಟಗಾರ್ತಿಯನ್ನು ಬದುಕಲು ಬಿಡಬಾರದು.
19 : “ಪ್ರಾಣಿಪಶು ಸಂಗಮಾಡಿದವನಿಗೆ ಮರಣದಂಡನೆಯಾಗಬೇಕು.
20 : “ಸರ್ವೇಶ್ವರನಾದವನಿಗೆ ಹೊರತಾಗಿ ಬೇರೊಬ್ಬ ದೇವರಿಗೆ ಬಲಿ ಕೊಡುವವನು ನಾಶಕ್ಕೆ ಅರ್ಹನು.
21 : “ಪರದೇಶೀಯನಿಗೆ ಅನ್ಯಾಯಮಾಡಬಾರದು, ಅವನನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದಿರ ಅಲ್ಲವೆ?
22 : ವಿಧವೆಯರನ್ನಾಗಲಿ, ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು.
23 : ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು. ಆ ಮೊರೆಗೆ ನಾನು ಕಿವಿಗೊಡದೆ ಇರೆನೆಂಬುದು ನಿಮಗೆ ತಿಳಿದಿರಲಿ.
24 : ನಾನು ಕೋಪಗೊಂಡು ನಿಮ್ಮನ್ನು ಶತ್ರುಗಳ ಕೈಯಿಂದ ಸಂಹಾರಮಾಡಿಸುವೆನು. ನಿಮ್ಮ ಹೆಂಡತಿಯರು ವಿಧವೆಗಳಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
25 : “ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಸಾಲಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು.
26 : “ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆಕೊಡು.
27 : ಏಕೆಂದರೆ ಅವನಿಗಿರುವ ಹೊದಿಕೆ ಅದೊಂದೇ; ಅದನ್ನೇ ಮೈಗೆ ಸುತ್ತಿಕೊಳ್ಳಬೇಕು; ಬೇರೆ ಯಾವುದನ್ನು ಹೊದ್ದುಕೊಂಡು ಮಲಗಾನು? ಅವನು ನನಗೆ ಮೊರೆ ಇಟ್ಟರೆ ಕಿವಿಗೊಡುವೆನು. ಏಕೆಂದರೆ ನಾನು ದಯಾಮಯನು !
28 : “ದೇವರನ್ನು ದೂಷಿಸಬಾರದು; ನಿಮ್ಮ ಜನನಾಯಕನನ್ನು ಶಪಿಸಬಾರದು.
29 : “ನಿಮ್ಮ ಕಣದಿಂದ ಹಾಗು ಅಲೆಯಿಂದ ನನಗೆ ಸಲ್ಲಿಸತಕ್ಕದ್ದನ್ನು ಸಮರ್ಪಿಸಲು ತಡಮಾಡಬಾರದು.
30 : “ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಸಮರ್ಪಿಸಬೇಕು. ಅಂತೆಯೇ ನಿಮ್ಮ ದನ ಕುರಿಗಳ ಚೊಚ್ಚಲು ಮರಿಗಳನ್ನು ನನಗೆ ಸಮರ್ಪಿಸಬೇಕು. ಏಳು ದಿವಸ ಆ ಮರಿ ತಾಯಿಯ ಹತ್ತಿರ ಇರಲಿ. ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.
31 : “ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಆದ್ದರಿಂದ ಕಾಡುಮೃಗ ಕೊಂದದ್ದನ್ನು ತಿನ್ನಬಾರದು; ಅದನ್ನು ನಾಯಿಗಳಿಗೆ ಬಿಡಬೇಕು.

Holydivine