Exodus - Chapter 31
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದರು:
2 : “ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯ ಮಗನೂ ಆದ ಬೆಚಲೇಲನೆಂಬುವವನನ್ನು ಗುರುತಿಸಿ ನಾನು ಆರಿಸಿಕೊಂಡಿದ್ದೇನೆ;
3 : ಮತ್ತು ಅವನಿಗೆ ದೈವಾತ್ಮಶಕ್ತಿಯನ್ನು ಕೊಟ್ಟು, ತಕ್ಕ ಜ್ಞಾನ, ವಿವೇಕ, ವಿವಿಧ ಶಿಲ್ಪಶಾಸ್ತ್ರ ಕುಶಲತೆಯನ್ನು ಅನುಗ್ರಹಿಸಿದ್ದೇನೆ
4 : ಅವನು ಸುಂದರವಾದ, ನಯನವಿರಾದ ಕೆಲಸಗಳನ್ನು ಕಲ್ಪಿಸುವನು; ಚಿನ್ನ, ಬೆಳ್ಳಿ, ತಾಮ್ರಗಳಿಂದ ಅವುಗಳನ್ನು ರೂಪಿಸುವನು;
5 : ರತ್ನಗಳನ್ನು ಕೆತ್ತಿ ಮರದಲ್ಲಿ ವಿಚಿತ್ರವಾದ ಕೆತ್ತನೆಕೆಲಸವನ್ನು ಮಾಡುವನು; ಇವೇ ಮೊದಲಾದ ಸಮಸ್ತ ಶೃಂಗಾರ ಕೆಲಸವನ್ನು ಮಾಡುವನು
6 : ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗ ಒಹೋಲೀಯಾಬನನ್ನು ನೇಮಿಸಿದ್ದೇನೆ. ಇದು ಮಾತ್ರವಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡಲು ಕಲಾ ನಿಪುಣರಿಗೆ ಬೇಕಾದ ಜ್ಞಾನವನ್ನು ಕೊಟ್ಟಿದ್ದೇನೆ.
7 : ದೇವದರ್ಶನದ ಗುಡಾರ, ಆಜ್ಞಾಶಾಸನಗಳಿರುವ ಮಂಜೂಷ, ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲ ಉಪಕರಣಗಳು
8 : ಮೇಜು, ಅದರ ಉಪಕರಣಗಳು, ಚೊಕ್ಕಬಂಗಾರದ ದೀಪವೃಕ್ಷ, ಅದರ ಉಪಕರಣಗಳು,
9 : ಧೂಪವೇದಿಕೆ, ಬಲಿಪೀಠ, ಅದರ ಉಪಕರಣಗಳು,
10 : ನೀರಿನ ತೊಟ್ಟಿ, ಅದರ ಪೀಠ, ಅಲಂಕಾರವಾದ ದೀಕ್ಷಾವಸ್ತ್ರಗಳು, ಅಂದರೆ ಮಹಾಯಾಜಕ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಯಾಜಕವಸ್ತ್ರಗಳು
11 : ಪಟ್ಟಾಭಿಷೇಕ ತೈಲ, ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು.”
12 : ಮೋಶೆ ಮುಖಾಂತರ ಸರ್ವೇಶ್ವರ ಇಸ್ರಯೇಲರಿಗೆ ಇತ್ತ ಆಜ್ಞೆ: “ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ತಪ್ಪದೆ ಆಚರಿಸಬೇಕು. ನಿಮ್ಮನ್ನು ದೇವಜನರನ್ನಾಗಿ ಮಾಡಿರುವ ಸರ್ವೇಶ್ವರನು ನಾನೇ ಎಂದು ನೀವು ತಿಳಿದುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಇರುವ ಗುರುತು.
13 : ಮೋಶೆ ಮುಖಾಂತರ ಸರ್ವೇಶ್ವರ ಇಸ್ರಯೇಲರಿಗೆ ಇತ್ತ ಆಜ್ಞೆ: “ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ತಪ್ಪದೆ ಆಚರಿಸಬೇಕು. ನಿಮ್ಮನ್ನು ದೇವಜನರನ್ನಾಗಿ ಮಾಡಿರುವ ಸರ್ವೇಶ್ವರನು ನಾನೇ ಎಂದು ನೀವು ತಿಳಿದುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಇರುವ ಗುರುತು.
14 : ಆದಕಾರಣ ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಭಾವಿಸಿ ಆಚರಿಸಬೇಕು. ಅದನ್ನು ಅಪವಿತ್ರವೆಂದು ವರ್ತಿಸುವವನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ದುಡಿಯುವವನನ್ನು ತನ್ನ ಕುಲದಿಂದ ತೆಗೆದುಹಾಕಬೇಕು.
15 : ಆರು ದಿನಗಳು ಕೆಲಸ ಮಾಡಬಹುದು. ಏಳನೆಯ ದಿನ ವಿಶ್ರಾಂತಿ ದಿನವಾದ ಸಬ್ಬತ್ ಸರ್ವೇಶ್ವರನಾದ ನನಗೆ ಪರಿಶುದ್ಧ ದಿನ. ಇಂಥ ಸಬ್ಬತ್ ದಿನದಲ್ಲಿ ದುಡಿಯುವವನಿಗೆ ಮರಣ ಶಿಕ್ಷೆಯಾಗಬೇಕು.
16 : ಆದುದರಿಂದ ಇಸ್ರಯೇಲರು ಸಬ್ಬತ್ ದಿನವನ್ನು ಆಚರಿಸಬೇಕು. ಈ ಆಚರಣೆ ಅವರಿಗೂ ಅವರ ಪೀಳಿಗೆಗೂ ಶಾಶ್ವತವಾದ ಒಂದು ನಿಬಂಧನೆ.
17 : ನನಗೂ ಇಸ್ರಯೇಲರಿಗೂ ನಡುವೆ ಇದೊಂದು ಸದಾಕಾಲದ ಗುರುತು. ಆರು ದಿನಗಳಲ್ಲಿ ಸರ್ವೇಶ್ವರನಾದ ನಾನು ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿ ಏಳನೆಯ ದಿನದಲ್ಲಿ ದುಡಿಯದೆ ವಿಶ್ರಮಿಸಿಕೊಂಡೆನಲ್ಲವೆ?”
18 : ಸರ್ವೇಶ್ವರ ಸೀನಾಯಿಬೆಟ್ಟದಲ್ಲಿ ಮೋಶೆಯ ಸಂಗಡ ಮಾತಾಡುವುದನ್ನು ಮುಗಿಸಿದ ಮೇಲೆ ಅವನಿಗೆ ತಮ್ಮ ಕೈಯಿಂದ ಕೆತ್ತಲ್ಪಟ್ಟ ಶಿಲಾಶಾಸನಗಳಾದ ಆ ಎರಡು ಆಜ್ಞಾಶಾಸನಗಳನ್ನು ಕೊಟ್ಟರು.

Holydivine