Exodus - Chapter 6
Holy Bible

1 : ಅದಕ್ಕೆ ಸರ್ವೇಶ್ವರಸ್ವಾಮಿ ಮೋಶೆಗೆ, “ನಾನು ಫರೋಹನಿಗೆ ಮಾಡಲು ಹೋಗುವುದನ್ನು ನೀನು ಇಷ್ಟರಲ್ಲೇ ನೋಡುವೆ. ಅವನು ನನ್ನ ಭುಜಬಲವನ್ನು ಕಂಡು ಅವರನ್ನು ಹೋಗಲು ಬಿಡುವನು. ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ನಾಡಿನಿಂದ ಹೊರಡಿಸುವನು,” ಎಂದರು.
2 : ದೇವರು ಮೋಶೆಯ ಸಂಗಡ ಮಾತಾಡಿ ಇಂತೆಂದರು:
3 : “ನಾನು ಸರ್ವೇಶ್ವರ; ಅಬ್ರಹಾಮ, ಇಸಾಕ ಹಾಗು ಯಕೋಬರಿಗೆ ನಾನು ‘ಸರ್ವಶಕ್ತನಾದ ದೇವರು ಎಂಬ ಹೆಸರುಳ್ಳವನಾಗಿ ಕಾಣಿಸಿಕೊಂಡೆನೇ ಹೊರತು ‘ಸರ್ವೇಶ್ವರ’ ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ.
4 : ಅಲ್ಲದೆ ಅವರು ಪ್ರವಾಸಿಗಳಾಗಿ ತಂಗಿದ್ದ ಕಾನಾನ್ ನಾಡನ್ನು ಅವರಿಗೆ ಸ್ವಂತ ನಾಡಾಗಿ ಕೊಡುವೆನೆಂದು ದೃಢ ವಾಗ್ದಾನ ಮಾಡಿದವನು ನಾನೇ.
5 : ಈಜಿಪ್ಟಿನವರು ಗುಲಾಮರನ್ನಾಗಿಸಿಕೊಂಡಿರುವ ಇಸ್ರಯೇಲರ ಗೋಳು ನನಗೆ ಕೇಳಿಸಿದೆ. ನಾನು ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡಿದ್ದೇನೆ.
6 : ಆದುದರಿಂದ ನೀನು ಇಸ್ರಯೇಲರಿಗೆ ನನ್ನ ಪರವಾಗಿ ಹೀಗೆಂದು ಹೇಳು: ‘ನಾನೇ ಸರ್ವೇಶ್ವರ. ಈಜಿಪ್ಟಿನವರು ನಿಮ್ಮ ಮೇಲೆ ಹೊರಿಸಿರುವ ದುಡಿಮೆಯನ್ನು ನೀಗಿಸುವೆನು, ದಾಸತ್ವವನ್ನು ತೊಲಗಿಸುವೆನು. ಅವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವೆನು, ನಿಮ್ಮನ್ನು ಸಂರಕ್ಷಿಸುವೆನು.
7 : ನಾನು ನಿಮ್ಮನ್ನು ನನ್ನ ಪ್ರಜೆಯಾಗಿ ಮಾಡುವೆನು; ನಾನು ನಿಮ್ಮ ದೇವರಾಗಿರುವೆನು. ಈಜಿಪ್ಟಿನವರು ಹೊರಿಸುವ ದುಡಿಮೆಯನ್ನು ನಾನು ನಿಮ್ಮಿಂದ ಬಿಡಿಸಿದಾಗ ಸರ್ವೇಶ್ವರ ಎಂಬ ನಾನೇ ನಿಮ್ಮ ದೇವರೆಂದು ನಿಮಗೆ ತಿಳಿದುಬರುವುದು.
8 : ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಕೊಡುವೆನೆಂದು ಪ್ರಮಾಣಪೂರ್ವಕವಾಗಿ ಹೇಳಿದ ನಾಡಿಗೆ ನಿಮ್ಮನ್ನು ಸೇರಿಸುವೆನು. ಅದನ್ನು ನಿಮಗೆ ಸ್ವಂತ ನಾಡಾಗಿ ಕೊಡುವೆನು. ಸರ್ವೇಶ್ವರನು ನಾನೇ’ ಎಂದು ಅವರಿಗೆ ಹೇಳು,” ಎಂದರು.
9 : ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಆದರೂ ಅವನ ಮಾತಿಗೆ ಕಿವಿಗೊಡಲಿಲ್ಲ. ಏಕೆಂದರೆ ಅವರ ಮನಸ್ಸು ಅಷ್ಟು ಕುಗ್ಗಿ ಹೋಗಿತ್ತು. ಅವರ ದಾಸತ್ವ ಅಷ್ಟು ಕ್ರೂರವಾಗಿತ್ತು.
10 : ಆಗ ಸರ್ವೇಶ್ವರ ಮೋಶೆಯ ಸಂಗಡ ಮಾತನಾಡಿ,
11 : “ನೀನು ಈಜಿಪ್ಟಿನವರ ಅರಸ ಫರೋಹನ ಬಳಿಗೆ ಹೋಗು. ಅವನಿಗೆ, ‘ಇಸ್ರಯೇಲರು ನಿನ್ನ ದೇಶದಿಂದ ಹೊರಟು ಹೋಗುವುದಕ್ಕೆ ಅಪ್ಪಣೆಕೊಡಬೇಕು’ ಎಂದು ಹೇಳು,” ಎಂದರು.
12 : ಅದಕ್ಕೆ ಮೋಶೆ ಸರ್ವೇಶ್ವರನ ಸನ್ನಿಧಿಯಲ್ಲಿ, “ಆಲಿಸಬೇಕು, ಇಸ್ರಯೇಲರೇ ನನ್ನ ಮಾತನ್ನು ಕೇಳಲಿಲ್ಲ; ಇನ್ನು ಫರೋಹನು ಕಿವಿಗೊಟ್ಟಾನೆ? ನನಗಾದರೋ ಚುರುಕಾದ ನಾಲಿಗೆಯಿಲ್ಲ,” ಎಂದನು.
13 : ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಯೇಲರ ಬಳಿಗೂ ಅರಸ ಫರೋಹನ ಬಳಿಗೂ ಕಳಿಸಿದರು.
14 : ಅವರ ಗೋತ್ರಗಳ ಮೂಲಪುರುಷರು ಇವರು: ಇಸ್ರಯೇಲನ ಜ್ಯೇಷ್ಠ ಪುತ್ರನಾದ ರೂಬೇನನಿಗೆ ಹನೋಕ್, ಫಲ್ಲು, ಹೆಚ್ರೋನ್ ಮತ್ತು ಕರ್ಮಿ ಎಂಬವರು ಮಕ್ಕಳು. ಇವರೇ ರೂಬೇನನಿಂದ ಉಂಟಾದ ಗೋತ್ರಗಳಿಗೆ ಮೂಲ ಪುರುಷರು.
15 : ಸಿಮೆಯೋನನಿಗೆ ಯೆಮೂಯೇಲ್, ಯಾವಿೂನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಮಹಿಳೆಯಿಂದ ಹುಟ್ಟಿದ ಸೌಲ ಎಂಬವರು ಮಕ್ಕಳು. ಇವರೇ ಸಿಮೆಯೋನನಿಂದ ಉಂಟಾದ ಗೋತ್ರಗಳಿಗೆ ಮೂಲಪುರುಷರು.
16 : ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಇವರು - ಗೇರ್ಷೋನ್, ಕೆಹಾತ್ ಮತ್ತು ಮೆರಾರೀ. ಲೇವಿ ನೂರಮೂವತ್ತೇಳು ವರ್ಷ ಬದುಕಿದ್ದನು.
17 : ಗೋತ್ರಗಳನ್ನು ಸ್ಥಾಪಿಸಿದ ಗೇರ್ಷೋನನ ಮಕ್ಕಳು ಲಿಬ್ನೀ ಮತ್ತು ಶಿವ್ಮಿೂ ಎಂಬವರು.
18 : ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್, ಕೆಹಾತನು ನೂರಮೂವತ್ತುಮೂರು ವರ್ಷ ಬದುಕಿದ್ದನು.
19 : ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ.
20 : ಅಮ್ರಾಮನು ತನ್ನ ಸೋದರತ್ತೆಯಾದ ಯೋಕಬೆದಳನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಆರೋನನನ್ನು ಮತ್ತು ಮೋಶೆಯನ್ನು ಹೆತ್ತಳು. ಅಮ್ರಾಮನು ನೂರ ಮೂವತ್ತೇಳು ವರ್ಷ ಬದುಕಿದ್ದನು.
21 : ಇಚ್ಹಾರನ ಮಕ್ಕಳು - ಕೋರಹ, ನೆಫೆಗ್ ಮತ್ತು ಜಿಕ್ರೀ.
22 : ಉಜ್ಜೀಯೇಲನ ಮಕ್ಕಳು - ವಿೂಷಾಯೇಲ್, ಎಲ್ಚಾಫಾನ್, ಸಿತ್ರೀ.
23 : ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ತಂಗಿಯೂ ಆದ ಎಲೀಶೇಬಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರು ಹುಟ್ಟಿದರು.
24 : ಕೋರಹನ ಮಕ್ಕಳು - ಅಸ್ಸೀರ್, ಎಲ್ಕಾನಾ ಮತ್ತು ಅಬಿಯಾಸಾಫ್. ಇವರೇ ಕೋರಹೀಯರ ಗೋತ್ರ ಸ್ಥಾಪಕರು
25 : ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಫಿನೇಹಾಸನನ್ನು ಹೆತ್ತಳು. ಅವರವರ ಗೋತ್ರದ ಮೇರೆಗೆ ಇವರೇ ಲೇವಿಯರ ಪೂರ್ವಿಕರು.
26 : ತಮ್ಮ ತಮ್ಮ ಗೋತ್ರದ ಪ್ರಕಾರ ಇಸ್ರಯೇಲ್ ಜನರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬರುವುದಕ್ಕೆ ಸರ್ವೇಶ್ವರನಿಂದ ಆಜ್ಞೆಹೊಂದಿದ ಆರೋನ್ ಮತ್ತು ಮೋಶೆ ಇವರೇ.
27 : ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡುವುದಕ್ಕಾಗಿ ಈಜಿಪ್ಟಿನ ಅರಸ ಫರೋಹನ ಸಂಗಡ ಮಾತಾಡಿದಂಥ ಮೋಶೆ ಮತ್ತು ಆರೋನರು ಇವರೇ.
28 : ಸರ್ವೇಶ್ವರಸ್ವಾಮಿ ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತಾಡಿ,
29 : “ನಾನು ಸರ್ವೇಶ್ವರ; ನಾನು ನಿನಗೆ ಹೇಳುವುದನ್ನೆಲ್ಲ ನೀನು ಈಜಿಪ್ಟಿನ ಅರಸ ಫರೋಹನ ಸನ್ನಿಧಿಯಲ್ಲಿ ಹೇಳಬೇಕು,” ಎಂದರು.
30 : ಅದಕ್ಕೆ ಮೋಶೆ “ಸ್ವಾವಿೂ, ನಾನು ಮಾತಾಡುವುದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು.

Holydivine