Exodus - Chapter 40
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ:
2 : “ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ನೀನು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸು.
3 : ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ತೆರೆಯಿಂದ ಮರೆಮಾಡು.
4 : ಆಮೇಲೆ ಮೇಜನ್ನು ತರಿಸಿ ಅದರ ಮೇಲಿಡಬೇಕಾದುದನ್ನು ಸರಿಯಾಗಿ ಇಡು. ದೀಪ ವೃಕ್ಷವನ್ನು ತರಿಸಿ ಅದರ ಹಣತೆಗಳನ್ನು ಸರಿಯಾಗಿಡು.
5 : ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಕೆಯನ್ನು ಇಟ್ಟು, ಗುಡಾರದ ಬಾಗಿಲಲ್ಲಿ ಪರದೆಯನ್ನು ಕಟ್ಟು.
6 : ದೇವದರ್ಶನದ ಗುಡಾರದ ಬಾಗಿಲಿನ ಮುಂದುಗಡೆಯಲ್ಲಿ ಬಲಿಪೀಠವನ್ನು ಇಡು.
7 : ದೇವದರ್ಶನದ ಗುಡಾರಕ್ಕೂ ಬಲಿಪೀಠಕ್ಕೂ ನಡುವೆ ನೀರು ತೊಟ್ಟಿಯನ್ನಿಟ್ಟು ಅದರಲ್ಲಿ ನೀರನ್ನು ತುಂಬಿಸು.
8 : ಅಂಗಳದ ಸುತ್ತಲೂ ಆವರಣವನ್ನು ನಿಲ್ಲಿಸಿ ಅಂಗಳದ ಬಾಗಿಲಿಗೆ ಪರದೆಯನ್ನು ತೂಗುಬಿಡು.
9 : “ಬಳಿಕ ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರಲ್ಲಿ ಇರುವುದೆಲ್ಲವನ್ನೂ ಅದರ ಎಲ್ಲ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಾಪಿಸು. ಅಂದಿನಿಂದ ಅದು ಪರಿಶುದ್ಧ ಆಗಿರುವುದು.
10 : ಬಲಿಪೀಠವನ್ನೂ ಅದರ ಉಪಕರಣಗಳನ್ನೂ ಅಭಿಷೇಕಿಸಿ ಬಲಿಪೀಠವನ್ನು ಪ್ರತಿಷ್ಠಾಪಿಸು. ಅದು ಪರಮ ಪವಿತ್ರವಾಗಿರಬೇಕು.
11 : ನೀರುತೊಟ್ಟಿಯನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಾಪಿಸು.
12 : “ಅದಲ್ಲದೆ ಆರೋನನನ್ನು ಮತ್ತು ಅವನ ಮಕ್ಕಳನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿ ಅವರನ್ನು ಸ್ನಾನಮಾಡಿಸು.
13 : ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಆ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಾಪಿಸು.
14 : ಅನಂತರ ಅವನ ಮಕ್ಕಳನ್ನು ಬರಮಾಡು.
15 : ಅವರಿಗೆ ಅಂಗಿಗಳನ್ನು ತೊಡಿಸಿ ಅವರು ನನಗೋಸ್ಕರ ಯಾಜಕರಾಗುವುದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನು ಕೂಡ ಅಭಿಷೇಕಿಸು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವುದು,” ಎಂದು ಹೇಳಿದರು.
16 : ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.
17 : ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರವನ್ನು ಎತ್ತಿ ನಿಲ್ಲಿಸಿದನು.
18 : ಅವನು ಗುಡಾರವನ್ನು ಎತ್ತಿಸಿ ಅದರ ಗದ್ದಿಗೇಕಲ್ಲುಗಳನ್ನು ಹಾಕಿ ಚೌಕಟ್ಟುಗಳನ್ನು ನಿಲ್ಲಿಸಿ ಅಗುಳಿಗಳನ್ನು ಕೊಟ್ಟು ಕಂಬಗಳನ್ನು ನಿಲ್ಲಿಸಿದನು.
19 : ಗುಡಾರದ ಮೇಲೆ ಡೇರೆಯ ಬಟ್ಟೆಯನ್ನು ಹಾಸಿ ಆ ಡೇರೆಗೆ ಮೇಲು ಹೊದಿಕೆಯನ್ನು ಹಾಕಿದನು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಅದೆಲ್ಲವನ್ನು ಮಾಡಿದನು.
20 : ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಗದ್ದಿಗೆಗಳನ್ನು ಕೊಟ್ಟು ಅದರ ಮೇಲೆ ಕೃಪಾಸನವನ್ನಿಟ್ಟು
21 : ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ತೆರೆಯನ್ನು ಇರಿಸಿ, ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು.
22 : ಅದಲ್ಲದೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ದೇವದರ್ಶನದ ಗುಡಾರದೊಳಗೆ ಉತ್ತರ ಕಡೆಯಲ್ಲಿ ತೆರೆಯ ಹೊರಗಡೆ ಮೇಜನ್ನು ಇಟ್ಟು
23 : ಅದರ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲಿ ರೊಟ್ಟಿಗಳನ್ನು ಕ್ರಮವಾಗಿ ಇರಿಸಿದನು.
24 : ಸರ್ವೇಶ್ವರ ಆಜ್ಞಾಪಿಸಿದಂತೆಯೇ ಅವನು ದೀಪವೃಕ್ಷವನ್ನು ದೇವದರ್ಶನದ ಗುಡಾರದೊಳಗೆ ಮೇಜಿನ ಎದುರಾಗಿ ಗುಡಾರದ ದಕ್ಷಿಣ ಕಡೆಯಲ್ಲಿ ಇಟ್ಟು
25 : ಅದರ ಹಣತೆಗಳನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಕ್ರಮವಾಗಿ ಇರಿಸಿದನು.
26 : ಸರ್ವೇಶ್ವರ ಆಜ್ಞಾಪಿಸಿದಂತೆ ಚಿನ್ನದ ಧೂಪವೇದಿಕೆಯನ್ನು ದೇವದರ್ಶನದ ಗುಡಾರದಲ್ಲಿ ತೆರೆಯ ಮುಂದೆ ಇಟ್ಟು
27 : ಅದರ ಮೇಲೆ ಪರಿಮಳದ್ರವ್ಯಗಳ ಧೂಪವನ್ನು ಹಾಕಿದನು;
28 : ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿದನು.
29 : ಸರ್ವೇಶ್ವರ ಆಜ್ಞಾಪಿಸಿದಂತೆಯೇ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಬಲಿಪೀಠವನ್ನಿಟ್ಟು ಅದರ ಮೇಲೆ ದಹನಬಲಿಯನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು.
30 : ಸರ್ವೇಶ್ವರ ಆಜ್ಞಾಪಿಸಿದಂತೆ ಮೋಶೆ ದೇವದರ್ಶನದ ಗುಡಾರಕ್ಕೂ ಬಲಿಪೀಠಕ್ಕೂ ನಡುವೆ ನೀರಿನ ತೊಟ್ಟಿಯನ್ನು ಇರಿಸಿ ಅದರಲ್ಲಿ ನೀರು ತುಂಬಿಸಿದನು.
31 : ಅದರಲ್ಲಿ ಮೋಶೆಯೂ
32 : ಆರೋನನೂ ಅವನ ಮಕ್ಕಳೂ ದೇವದರ್ಶನದ ಗುಡಾರದೊಳಗೆ ಹೋಗುವಾಗಲೂ ಬಲಿಪೀಠದ ಸೇವೆಗೆ ಬಂದಾಗಲೂ ಕೈಕಾಲುಗಳನ್ನು ತೊಳೆದುಕೊಳ್ಳುವರು.
33 : ಗುಡಾರ ಹಾಗು ಬಲಿಪೀಠದ ಸುತ್ತಲು ಆವರಣವನ್ನು ಎತ್ತಿ ನಿಲ್ಲಿಸಿ ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿದನು. ಹೀಗೆ ಮೋಶೆ ಆ ಕೆಲಸವನ್ನೆಲ್ಲಾ ಮುಗಿಸಿದನು.
34 : ಆಗ ಮೇಘವೊಂದು ದೇವದರ್ಶನದ ಗುಡಾರವನ್ನು ಮುಚ್ಚಿತು; ಸರ್ವೇಶ್ವರನ ತೇಜಸ್ಸು ಗುಡಾರವನ್ನು ತುಂಬಿತ್ತು.
35 : ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿ ಇದ್ದುದರಿಂದಲೂ ಸರ್ವೇಶ್ವರನ ತೇಜಸ್ಸು ಗುಡಾರದೊಳಗೆ ತುಂಬಿದ್ದುದರಿಂದಲೂ ಮೋಶೆ ಗುಡಾರದಲ್ಲಿ ಹೋಗಲಾರದೆ ಇದ್ದನು.
36 : ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಯೇಲರು ಮುಂದಕ್ಕೆ ಪ್ರಯಾಣಮಾಡುತ್ತಿದ್ದರು;
37 : ಆ ಮೇಘವು ಬಿಡದೆ ಇರುವಾಗ ಅದು ಬಿಡುವ ತನಕ ಪ್ರಯಾಣ ಮಾಡದೆ ಇರುತ್ತಿದ್ದರು.
38 : ಇಸ್ರಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣ ಮುಂದೆ ಹಗಲು ಹೊತ್ತಿನಲ್ಲಿ ಸರ್ವೇಶ್ವರನ ಮೇಘವು ಗುಡಾರದ ಮೇಲೆ ಇತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.

Holydivine