Exodus - Chapter 30
Holy Bible

1 : “ಸುಗಂಧದ್ರವ್ಯಗಳಿಂದ ಧೂಪ ಹಾಕುವುದಕ್ಕಾಗಿ ಜಾಲೀಮರದ ಒಂದು ವೇದಿಕೆಯನ್ನು ಮಾಡಿಸು.
2 : ಅದು ಒಂದು ಮೊಳ ಉದ್ದ ಹಾಗು ಒಂದು ಮೊಳ ಅಗಲವಾಗಿದ್ದು ಚಚೌಕವಾಗಿರಲಿ. ಅದರ ಎತ್ತರ ಎರಡು ಮೊಳವಿರಲಿ. ಅದರ ಕೊಂಬುಗಳು ಅದರ ಅಂಗಾಂಗವಾಗಿರಲಿ.
3 : ಅದರ ಮೇಲ್ಭಾಗಕ್ಕೂ, ನಾಲ್ಕು ಪಕ್ಕಗಳಿಗೂ ಹಾಗು ಕೊಂಬುಗಳಿಗೂ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಬೇಕು. ಸುತ್ತಲು ಚಿನ್ನದ ತೋರಣಕಟ್ಟಿಸಬೇಕು.
4 : ಅದರ ಕೆಳಗೆ ವೇದಿಕೆಯ ಎರಡು ಪಕ್ಕಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಮೂಲೆಗಳಲ್ಲಿಯೇ ಹಾಕಿಸಬೇಕು. ವೇದಿಕೆಯನ್ನು ಹೊರುವುದಕ್ಕೆ ಗುದಿಗೆಗಳನ್ನು ಅವುಗಳಲ್ಲಿ ಸೇರಿಸಬೇಕು
5 : ಆ ಗುದಿಗೆಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು.
6 : ಆಜ್ಞಾಶಾಸನಗಳಿರುವ ಮಂಜೂಷದ ಮುಂದೆ ಇರುವ ತೆರೆಗೆ ಎದುರಾಗಿ ಅಂದರೆ ಆಜ್ಞಾಶಾಸನಗಳ ಮೇಲಿರುವಂಥ ಹಾಗು ನಾನು ನಿನಗೆ ದರ್ಶನ ಕೊಡುವಂಥ ಕೃಪಾಸನದ ಮುಂದೆ ಅದನ್ನು ಇರಿಸಬೇಕು.
7 : ಆರೋನನು ಪ್ರತಿನಿತ್ಯವು ಬೆಳಿಗ್ಗೆ ದೀಪಗಳನ್ನು ಸರಿಪಡಿಸುವಾಗ ಹಾಗು ಸಂಜೆ ದೀಪಗಳನ್ನು ಹೊತ್ತಿಸುವಾಗ ಆ ವೇದಿಕೆಯ ಮೇಲೆ ಸುಗಂಧದ್ರವ್ಯಗಳಿಂದ ಧೂಪವನ್ನು ಹಾಕಬೇಕು.
8 : ಹೀಗೆ ನಿಮ್ಮಿಂದ ಮತ್ತು ನಿಮ್ಮ ಸಂತತಿಯವರಿಂದ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಎಡೆಬಿಡದೆ ಧೂಪಾರ್ಪಣೆ ಇರಬೇಕು.
9 : ಆ ವೇದಿಕೆಯ ಮೇಲೆ ಬೇರೆ ಯಾವ ಅಪವಿತ್ರ ಧೂಪವನ್ನೂ ಹಾಕಕೂಡದು. ಅದರ ಮೇಲೆ ದಹನಬಲಿಯನ್ನಾಗಲಿ, ಅನ್ನಪಾನದ್ರವ್ಯಗಳನ್ನಾಗಲಿ ಅರ್ಪಿಸಕೂಡದು.
10 : ಆರೋನನು ಮತ್ತು ಅವನ ಸಂತತಿಯವರು ವರ್ಷಕ್ಕೊಮ್ಮೆ ಪಾಪಪರಿಹಾರಕ ಯಜ್ಞಪಶುವಿನ ರಕ್ತವನ್ನು ಆ ವೇದಿಕೆಯ ಕೊಂಬುಗಳಿಗೆ ಹಚ್ಚಿ ಅದರ ವಿಷಯವಾಗಿ ದೋಷಪರಿಹಾರವನ್ನು ಮಾಡಬೇಕು. ಅದು ಸರ್ವೇಶ್ವರನಾದ ನನಗೆ ಪರಮ ಪವಿತ್ರವಾದುದು.”
11 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದು ಹೇಳಿದರು:
12 : “ನೀನು ಇಸ್ರಯೇಲರ ಜನಗಣತಿ ಮಾಡುವಾಗ ಲೆಕ್ಕಿಸಬೇಕಾದ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಕ್ಕೆ ಈಡಾಗಿ ಸರ್ವೇಶ್ವರನಾದ ನನಗೆ ತೆರಿಗೆಯನ್ನು ಕೊಡಬೇಕು. ಆಗ ಅವರಿಗೆ ಯಾವ ವಿಪತ್ತು ಸಂಭವಿಸದು.
13 : ಲೆಕ್ಕಿತರಾದವರಲ್ಲಿ ಪ್ರತಿಯೊಬ್ಬನು ನನಗೆ ಅರ್ಧಶೆಕೆಲ್ ನಾಣ್ಯದ ಮೇರೆಗೆ ತೆರಿಗೆ ಕಟ್ಟಬೇಕು. ದೇವರ ಸೇವೆಗೆ ನೇಮಕವಾದ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಅರ್ಧರ್ಧ ನಾಣ್ಯವನ್ನು ತೆರಿಗೆಯಾಗಿ ಕೊಡಬೇಕು.
14 : ಜನಗಣತಿಯಲ್ಲಿ ಸೇರಿಸಲಾದ ಇಪ್ಪತ್ತು ವರ್ಷದ ಹಾಗು ಅದಕ್ಕೂ ಹೆಚ್ಚು ವಯಸ್ಸಿನವರು ಈ ತೆರಿಗೆಯನ್ನು ನನಗೆ ಕಟ್ಟಬೇಕು.
15 : ಪ್ರಾಣರಕ್ಷಣೆಯ ಈ ತೆರಿಗೆಯನ್ನು ನನಗೆ ಕೊಡುವವರಲ್ಲಿ ಐಶ್ವರ್ಯವಂತರು ಅರ್ಧನಾಣ್ಯಕ್ಕಿಂತ ಹೆಚ್ಚು ಕೊಡಬಾರದು; ಬಡವರು ಕಮ್ಮಿಕೊಡಬಾರದು.
16 : ಪ್ರಾಣರಕ್ಷಣೆಯ ಈ ಹಣವನ್ನು ನೀನು ಇಸ್ರಯೇಲರಿಂದ ಶೇಖರಿಸಿ ದೇವದರ್ಶನದ ಗುಡಾರದ ಸೇವೆಗೆ ಉಪಯೋಗಿಸು. ಇಸ್ರಯೇಲರ ಪ್ರಾಣವನ್ನು ಉಳಿಸಬೇಕೆಂಬುದಾಗಿ ಈ ತೆರಿಗೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಜ್ಞಾಪಕಪಡಿಸುವುದು.”
17 : ಸರ್ವೇಶ್ವರ ಮೋಶೆಗೆ ಮತ್ತೆ ಹೀಗೆಂದರು:
18 : “ಸ್ನಾನಕ್ಕಾಗಿ ಒಂದು ತಾಮ್ರದ ತೊಟ್ಟಿಯನ್ನು ಕಟ್ಟಿಸು. ಅದನ್ನು ಇಡಲು ಒಂದು ತಾಮ್ರದ ಪೀಠವನ್ನು ಮಾಡಿಸು. ದೇವದರ್ಶನದ ಗುಡಾರಕ್ಕೂ ಬಲಿಪೀಠಕ್ಕೂ ನಡುವೆ ಅದನ್ನಿಟ್ಟು ಅದರಲ್ಲಿ ನೀರನ್ನು ತುಂಬಿಸಿಡಬೇಕು.
19 : ಆರೋನನು ಮತ್ತು ಅವನ ಮಕ್ಕಳು ಅದರಿಂದ ಕೈ ಕಾಲುಗಳನ್ನು ತೊಳೆದುಕೊಳ್ಳಬೇಕು.
20 : ಅವರು ದೇವದರ್ಶನದ ಗುಡಾರಕ್ಕೆ ಹೋಗುವಾಗಲೆಲ್ಲಾ ಆ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ಹೋಗಬೇಕು. ತೊಳೆಯದೆ ಹೋದರೆ ಸಾಯುವರು. ಹಾಗೆಯೇ ಅವರು ದೇವರ ಸೇವೆಗೈಯುವವರಾಗಿ ಸರ್ವೇಶ್ವರನಾದ ನನಗೆ ದಹನಬಲಿಯರ್ಪಿಸಲು ಬಲಿಪೀಠದ ಬಳಿಗೆ ಬರುವಾಗಲೂ ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು.
21 : ತೊಳೆದುಕೊಳ್ಳದೆ ಬಂದರೆ ಸಾಯುವರು. ಇದು ಅವನಿಗೂ ಅವನ ಸಂತತಿಯವರಿಗೂ ಶಾಶ್ವತವಾದ ನಿಯಮ.”
22 : ಇದೂ ಅಲ್ಲದೆ ಸರ್ವೇಶ್ವರ ಮೋಶೆಗೆ ಇಂತೆಂದರು:
23 : “ಸುಗಂಧ ದ್ರವ್ಯಗಳಲ್ಲಿ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಆರು ಕಿಲೋಗ್ರಾಂ ಅಚ್ಚರಕ್ತಬೋಳ, ಮೂರು ಕಿಲೋ ಗ್ರಾಂ ಶ್ರೇಷ್ಠವಾದ ಲವಂಗಚಕ್ಕೆ, ಮೂರು ಕಿಲೋ ಗ್ರಾಂ ಸುಗಂಧವಾದ ಬಜೆ ಹಾಗು ಆರು ಕಿಲೋ ಗ್ರಾಂ ದಾಲ್ಚಿಸ್ನಿಯನ್ನು ತೆಗೆದುಕೊಳ್ಳಬೇಕು
24 : ಅದಕ್ಕೆ ನಾಲ್ಕು ಲೀಟರು ಓಲಿವ್ ಎಣ್ಣೆಯನ್ನು ಕೂಡಿಸಬೇಕು
25 : ಬುಕ್ಕಿಟ್ಟುಗಾರರ ಪದ್ಧತಿಯ ಮೇರೆಗೆ ಇವುಗಳನ್ನು ಮಿಶ್ರಮಾಡಿ ದೇವರ ಸೇವೆಗಾಗಿ ಅಭಿಷೇಕತೈಲವನ್ನು ತಯಾರಿಸಬೇಕು.
26 : ಅದರಿಂದ ದೇವದರ್ಶನದ ಗುಡಾರ, ಆಜ್ಞಾಶಾಸನಗಳ ಮಂಜೂಷ, ಮೇಜು, ಮೇಜಿನ ಉಪಕರಣಗಳು,
27 : ದೀಪವೃಕ್ಷ, ದೀಪವೃಕ್ಷದ ಉಪಕರಣಗಳು, ಧೂಪವೇದಿಕೆ,
28 : ಬಲಿಪೀಠ, ಬಲಿಪೀಠದ ಉಪಕರಣಗಳು, ನೀರಿನ ತೊಟ್ಟಿ ಹಾಗು ಅದರ ಪೀಠ ಇವುಗಳನ್ನೆಲ್ಲ ಅಭಿಷೇಕಿಸಬೇಕು.
29 : ಅವು ಅತಿ ಪರಿಶುದ್ಧವಾಗುವಂತೆ ಪ್ರತಿಷ್ಠಿಸಬೇಕು. ಅವುಗಳಿಗೆ ಸೋಂಕಿದೆಲ್ಲವು ಪರಿಶುದ್ಧವಾಗಿರುವುದು.
30 : ಅಲ್ಲದೆ ಆರೋನನು ಅವನ ಮಕ್ಕಳೂ ನನಗೆ ಯಾಜಕರು ಆಗುವಂತೆ ಅವರನ್ನೂ ಅಭಿಷೇಕಿಸಿ ಪ್ರತಿಷ್ಠಿಸಬೇಕು.
31 : ನೀನು ಇಸ್ರಯೇಲರಿಗೆ, ‘ನೀವು ಮತ್ತು ನಿಮ್ಮ ಸಂತತಿಯವರು ಈ ತೈಲವನ್ನು ನನ್ನ ಸೇವೆಗೆ ನೇಮಕವಾದ ಅಭಿಷೇಕತೈಲ ಎಂದು ತಿಳಿದುಕೊಳ್ಳಬೇಕು.
32 : ಮೈಗೆ ಹಚ್ಚಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಬಾರದು. ಈ ವಿಧಾನವನ್ನು ಅನುಸರಿಸಿ ಬೇರೆ ಕಾರ್ಯಕ್ಕಾಗಿ ತೈಲವನ್ನು ತಯಾರಿಸಲೇಕೂಡದು. ಇದು ದೇವರ ವಸ್ತು. ಇದು ವಿೂಸಲೆಂದು ನೀವು ತಿಳಿದುಕೊಳ್ಳಬೇಕು
33 : ಇದರಂತೆ ತೈಲವನ್ನು ಮಾಡುವವನು ಹಾಗು ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನು ತನ್ನ ಕುಲದಿಂದ ಬಹಿಷ್ಕøತನಾಗಬೇಕು.
34 : ಸರ್ವೇಶ್ವರ ಮೋಶೆಗೆ ಮತ್ತೆ ಆಜ್ಞಾಪಿಸಿದ್ದೇನೆಂದರೆ: “ನೀನು ಹಾಲುಮಡ್ಡಿ, ಗುಗ್ಗುಲ ಹಾಗು ಗಂಧದಚೆಕ್ಕೆ ಎಂಬ ಪರಿಮಳ ದ್ರವ್ಯಗಳನ್ನು ಮತ್ತು ಸ್ವಚ್ಛವಾದ ಧೂಪವನ್ನು ಸಮಭಾಗವಾಗಿ ತೆಗೆದುಕೊಂಡು ಸುವಾಸನೆಯುಳ್ಳ ಬುಕ್ಕಿಟ್ಟಾಗಿರುವಂತೆ
35 : ಪರಿಮಳ ದ್ರವ್ಯಕಾರರು ಮಾಡುವಂತೆ ಕಲಸಿ, ಉಪ್ಪುಹಾಕಿ, ದೇವರ ಸೇವೆಗೆ ಸ್ವಚ್ಛವಾದ ಧೂಪದ್ರವ್ಯವನ್ನು ಮಾಡಿಸಬೇಕು.
36 : ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನ ಗುಡಾರದೊಳಗೆ ಆಜ್ಞಾಶಾಸನಗಳಿರುವ ಮಂಜೂಷದ ಎದುರಾಗಿ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿ ಇಡಬೇಕು.
37 : ನೀವು ಆ ಧೂಪದ್ರವ್ಯದ ವಿಧಾನದ ಮೇರೆಗೆ ನಿಮ್ಮ ಸ್ವಂತ ಉಪಯೋಗಕ್ಕೋಸ್ಕರ ಧೂಪದ್ರವ್ಯವನ್ನು ಮಾಡಿಸಲೇಬಾರದು. ಅದು ಸರ್ವೇಶ್ವರನಾದ ನನ್ನ ಸೇವೆಗೆ ಮಾತ್ರ ಉಪಯೋಗಿಸಬೇಕಾದ, ವಿೂಸಲಾದ ಪದಾರ್ಥವೆಂದು ಭಾವಿಸಬೇಕು.
38 : ಕೇವಲ ಸುವಾಸನೆಗಾಗಿ ಅಂಥದ್ದನ್ನು ಮಾಡಿಕೊಳ್ಳುವವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”

Holydivine