Exodus - Chapter 4
Holy Bible

1 : ಆಗ ಮೋಶೆ ಉತ್ತರ ನೀಡಿ, “ಆಲಿಸಬೇಕು; ಆ ಜನರು ನನ್ನನ್ನು ನಂಬದೆ ನನ್ನ ಮಾತಿಗೆ ಕಿವಿಗೊಡದೆ ಹೋಗಬಹುದು: ‘ಸರ್ವೇಶ್ವರಸ್ವಾಮಿ ನಿನಗೆ ಕಾಣಿಸಿಕೊಂಡಿದ್ದೇ ಇಲ್ಲ’ ಎಂದು ಹೇಳಬಹುದು” ಎಂದನು.
2 : ಅದಕ್ಕೆ ಸರ್ವೇಶ್ವರ ಅವನನ್ನು, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದರು. ಅವನು, “ಇದು ಕೋಲು” ಎಂದನು.
3 : ಸರ್ವೇಶ್ವರ ಅವನಿಗೆ, “ಅದನ್ನು ನೆಲದಲ್ಲಿ ಬಿಸಾಡು.” ಎಂದರು. ನೆಲದಲ್ಲಿ ಬಿಸಾಡುತ್ತಲೇ ಅದು ಹಾವಾಯಿತು! ಅದನ್ನು ಕಂಡ ಮೋಶೆ ಭಯಪಟ್ಟು ಓಡಿ ಹೋದನು.
4 : ಸರ್ವೇಶ್ವರ ಅವನಿಗೆ, “ಕೈಚಾಚಿ ಅದರ ಬಾಲವನ್ನು ಹಿಡಿ,” ಎಂದರು. ಅಂತೆಯೇ ಹಿಡಿದಾಗ ಅದು ಕೋಲು ಆಯಿತು. ಆಗ ಸರ್ವೇಶ್ವರ ಅವನಿಗೆ,
5 : “ಇದರಿಂದ ಆ ಜನರು ತಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನಿನಗೆ ಕಾಣಿಸಿದ್ದು ನಿಜ ಎಂಬುದನ್ನು ನಂಬುವರು,” ಎಂದು ಹೇಳಿದರು.
6 : ಮತ್ತೆ ಸರ್ವೇಶ್ವರ ಅವನಿಗೆ, “ನಿನ್ನ ಕೈಯನ್ನು ನಿನ್ನ ಉಡಿಗೆಯಲ್ಲಿ ಇಟ್ಟುಕೊ,” ಎಂದರು. ಅಂತೆಯೇ ಉಡಿಗೆಯಲ್ಲಿ ಇಟ್ಟು ಹೊರಗೆ ತೆಗೆದಾಗ ಅವನ ಕೈ ತೊನ್ನುಹತ್ತಿ ಹಿಮದಂತೆ ಬೆಳ್ಳಗಾಗಿ ಇತ್ತು.
7 : ಸರ್ವೇಶ್ವರ ಅವನಿಗೆ, “ನಿನ್ನ ಕೈಯನ್ನು ತಿರುಗಿ ಉಡಿಗೆಯಲ್ಲಿ ಸೇರಿಸು” ಎಂದು ಹೇಳಿದರು. ಹಾಗೆಯೆ ಅವನು ಅದನ್ನು ಉಡಿಗೆಯಲ್ಲಿ ಸೇರಿಸಿದನು. ಬಳಿಕ ತೆಗೆದು ನೋಡಿದಾಗ ಅದು ಉಳಿದ ಮೈಯಂತೆಯೇ ಆಗಿತ್ತು.
8 : ಆಗ ಸರ್ವೇಶ್ವರ ಅವನಿಗೆ, “ಆ ಜನರು ನಿನ್ನನ್ನು ನಂಬದೆ ಮೊದಲನೆಯ ಸೂಚಕಕಾರ್ಯವನ್ನು ಅರ್ಥಮಾಡಿಕೊಳ್ಳದೆ ಹೋದರೂ ಎರಡನೆಯದನ್ನು ಅರ್ಥಮಾಡಿಕೊಂಡು ನಂಬುವರು.
9 : ಈ ಎರಡು ಸೂಚಕ ಕಾರ್ಯಗಳನ್ನೂ ಅವರು ಮನಸ್ಸಿಗೆ ತಂದುಕೊಳ್ಳದೆ ಹಾಗು ನಿನ್ನ ಮಾತನ್ನು ನಂಬದೆ ಹೋದರೆ ನೀನು ನೈಲ್ ನದಿಯಿಂದ ನೀರನ್ನು ತೆಗೆದುಕೊಂಡು ಒಣನೆಲದ ಮೇಲೆ ಸುರಿ. ಆಗ ನೆಲದಲ್ಲಿ ಸುರಿದ ನೀರು ರಕ್ತವಾಗುವುದು,” ಎಂದು ಹೇಳಿದರು.
10 : ಆದರೆ ಮೋಶೆ ಸರ್ವೇಶ್ವರನಿಗೆ, “ಸ್ವಾಮಿ ನಾನು ವಾಕ್ಚಾತುರ್ಯ ಇಲ್ಲದವನು; ಮೊದಲಿನಿಂದಲೂ ಹಾಗು ತಾವು ನಿಮ್ಮ ದಾಸನ ಸಂಗಡ ಮಾತಾಡಿದ ಮೇಲೆಯೂ ಹಾಗೆಯೇ ಇದ್ದೇನೆ. ನನ್ನ ಮಾತು ತೊದಲು, ನನ್ನ ನಾಲಿಗೆ ಮಂದ,” ಎಂದನು.
11 : ಅದಕ್ಕೆ ಸರ್ವೇಶ್ವರ, “ಮನುಷ್ಯರಿಗೆ ಬಾಯಿಕೊಟ್ಟವರು ಯಾರು? ಒಬ್ಬನನ್ನು ಮೂಕನಾಗಿ, ಮತ್ತೊಬ್ಬನನ್ನು ಕಿವುಡನಾಗಿ, ಇನ್ನೊಬ್ಬನನ್ನು ಕಣ್ಣುಳ್ಳವನಾಗಿ, ಮಗದೊಬ್ಬನನ್ನು ಕಣ್ಣಿಲ್ಲದವನಾಗಿ ಇಡುವವರು ಯಾರು? ಸರ್ವೇಶ್ವರನಾಗಿರುವ ನಾನೇ ಅಲ್ಲವೆ?
12 : ಆದುದರಿಂದ ಈಗಲೇ ಹೊರಡು; ನಿನ್ನ ಬಾಯಲ್ಲಿ ನಾನೇ ಇರುವೆನು; ನೀನು ಮತಾಡಬೇಕಾದುದನ್ನು ನಿನಗೆ ಕಲಿಸಿಕೊಡುವೆನು,” ಎಂದು ಹೇಳಿದರು
13 : ಅದಕ್ಕೆ ಮೋಶೆ, “ಸ್ವಾವಿೂ, ಈ ಕಾರ್ಯಕ್ಕೆ ತಾವು ಬೇರೊಬ್ಬನನ್ನು ನೇಮಿಸಬೇಕು,” ಎನ್ನಲು, ಸರ್ವೇಶ್ವರ ಅವನ ಮೇಲೆ ಸಿಟ್ಟುಗೊಂಡರು.
14 : ಅವನಿಗೆ, “ಲೇವಿಯನಾದ ಆರೋನನು ನಿನಗೆ ಅಣ್ಣನಲ್ಲವೆ? ಅವನು ಚೆನ್ನಾಗಿ ಮಾತಾಡಬಲ್ಲನೆಂದು ನನಗೆ ಗೊತ್ತಿದೆ. ಇಗೋ, ಅವನೇ ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ನಿನ್ನನ್ನು ಕಂಡು ಆನಂದಿಸಲಿದ್ದಾನೆ.
15 : ನೀನು ಅವನ ಸಂಗಡ ಮಾತಾಡಿ ಹೇಳಬೇಕಾದ ವಿಷಯಗಳನ್ನು ತಿಳಿಸು. ನಾನು ನಿನಗೂ ಅವನಿಗೂ ಹೇಗೆ ಮಾತಾಡಬೇಕೆಂದು ತಿಳಿಸಿ ನೀವು ಮಾಡಬೇಕಾದುದನ್ನು ಕಲಿಸುವೆನು.
16 : ನಿನ್ನ ಪರವಾಗಿ ಅವನೇ ಆ ಜನರ ಸಂಗಡ ಮಾತಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತೆ ಇರುವೆ.
17 : ಈ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗು. ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವೆ,” ಎಂದರು.
18 : ಇದಾದ ಮೇಲೆ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂದಿರುಗಿ ಬಂದು, “ನಾನು ಈಜಿಪ್ಟ್ ದೇಶದಲ್ಲಿರುವ ಸ್ವಜನರ ಬಳಿಗೆ ಮರಳಿ ಹೋಗಿ ಅವರು ಜೀವದಿಂದ ಇದ್ದಾರೋ ಇಲ್ಲವೋ ನೋಡುವುದಕ್ಕೆ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದನು. ಇತ್ರೋನನು “ಸುಖವಾಗಿ ಹೋಗಿ ಬಾ,” ಎಂದನು.
19 : ಮಿದ್ಯಾನ್ ನಾಡಿನಲ್ಲಿ ಸರ್ವೇಶ್ವರ ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಮರಳಿ ಹೋಗು. ನಿನ್ನನ್ನು ಕೊಲ್ಲಬೇಕೆಂದಿದ್ದವರೆಲ್ಲರು ಸತ್ತುಹೋದರು,” ಎಂದು ತಿಳಿಸಿದರು.
20 : ಆದ್ದರಿಂದ ಮೋಶೆ ತನ್ನ ಮಡದಿ ಮಕ್ಕಳನ್ನು ಹೇಸರಕತ್ತೆಯ ಮೇಲೆ ಏರಿಸಿಕೊಂಡು ಈಜಿಪ್ಟಿಗೆ ಹೊರಟು ಹೋದನು. ದೇವದಂಡ ಅವನ ಕೈಯಲ್ಲಿತ್ತು.
21 : ಸರ್ವೇಶ್ವರ ಮೋಶೆಗೆ ಮತ್ತೆ ಇಂತೆಂದರು: “ನೀನು ಈಜಿಪ್ಟಿಗೆ ಮರಳಿದಾಗ ನಾನು ನಿನಗೆ ತೋರಿಸಿಕೊಟ್ಟ ಸೂಚಕಕಾರ್ಯಗಳನ್ನೆಲ್ಲಾ ಫರೋಹರಾಜನ ಮುಂದೆ ಮಾಡಿ ತೋರಿಸು. ಆದರೆ ನಾನು ಅವನ ಹೃದಯವನ್ನು ಕಲ್ಲಾಗಿಸುವೆನು. ಅವನು ಇಸ್ರಯೇಲರನ್ನು ಹೋಗಗೊಡಿಸುವುದಿಲ್ಲ.
22 : ಆಗ ನೀನು ಅವನಿಗೆ ತಿಳಿಸಬೇಕಾದುದು, ‘ಸರ್ವೇಶ್ವರನು ಹೇಳುವುದನ್ನು ಕೇಳು: ಇಸ್ರಯೇಲ್ ಜನತೆ ನನಗೆ ಮಗನಂತೆ, ಜ್ಯೇಷ್ಠಪುತ್ರನಂತಿದೆ.
23 : ನನ್ನನ್ನು ಆರಾಧಿಸಲು ನಿನ್ನ ದೇಶದಿಂದ ಹೊರಡುವುದಕ್ಕೆ ಅವನಿಗೆ ಅಪ್ಪಣೆಕೊಡು.’ ಇದಕ್ಕೆ ನೀನು ಒಪ್ಪದೆಹೋದರೆ ನಾನು ನಿನ್ನ ಜ್ಯೇಷ್ಠಪುತ್ರನನ್ನು ಕೊಲ್ಲುವೆನು.”
24 : ಈಜಿಪ್ಟಿಗೆ ಹೋಗುವ ದಾರಿಯಲ್ಲಿದ್ದ ಛತ್ರವೊಂದರಲ್ಲಿ ಸರ್ವೇಶ್ವರ ಅವನೆದುರಿಗೆ ಬಂದು ಅವನ ಪ್ರಾಣತೆಗೆಯಬೇಕೆಂದಿದ್ದರು.
25 : ಆಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿ ಮಾಡಿ ಮೋಶೆಗೆ, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗ” ಎಂದು ಹೇಳಿ
26 : ಕತ್ತರಿಸಿದ ಮುಂದೊಗಲನ್ನು ಅವನ ಪಾದಗಳಿಗೆ ಮುಟ್ಟಿಸಿದಳು. ಆಗ ಸರ್ವೇಶ್ವರ ಅವನನ್ನು ಉಳಿಸಿದರು. ಆಕೆ ಸುನ್ನತಿಯ ನಿಮಿತ್ತವೇ “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗ,” ಎಂದು ಹೇಳಿದ್ದು.
27 : ಇದಲ್ಲದೆ ಸರ್ವೇಶ್ವರ ಆರೋನನಿಗೆ, “ನೀನು ಮೋಶೆಯನ್ನು ಎದುರುಗೊಳ್ಳಲು ಮರುಭೂಮಿಗೆ ತೆರಳು,” ಎಂದರು. ಅಂತೆಯೇ ಆರೋನನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಎದುರುಗೊಂಡು ಮುದ್ದಿಟ್ಟನು.
28 : ಆಗ ಮೋಶೆ, ಸರ್ವೇಶ್ವರಸ್ವಾಮಿ ತನ್ನನ್ನು ಕಳಿಸುವಾಗ ಯಾವ ಮಾತುಗಳನ್ನು ಹೇಳಿದರೋ ಏನೇನು ಸೂಚಕಕಾರ್ಯಗಳು ಮಾಡಬೇಕೆಂದು ಆಜ್ಞಾಪಿಸಿದರೋ ಅವುಗಳನ್ನೆಲ್ಲ ಆರೋನನಿಗೆ ತಿಳಿಸಿದನು.
29 : ತರುವಾಯ ಅವರಿಬ್ಬರು ಹೋಗಿ ಇಸ್ರಯೇಲರ ಹಿರಿಯರನ್ನೆಲ್ಲ ಕೂಡಿಸಿದರು.
30 : ಮೋಶೆಗೆ ಸರ್ವೇಶ್ವರ ಹೇಳಿದ ಮಾತುಗಳನ್ನೆಲ್ಲ ಆರೋನನು ಆ ಜನರಿಗೆ ತಿಳಿಸಿದನು. ಮೋಶೆ ಅವರ ಮುಂದೆ ಆ ಸೂಚಕಕಾರ್ಯಗಳನ್ನು ಮಾಡಿದನು. ಜನರು ನಂಬಿದರು.
31 : ಸರ್ವೇಶ್ವರಸ್ವಾಮಿ ತಮ್ಮನ್ನು ಭೇಟಿಮಾಡಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡಿದ್ದಾರೆಂದು ತಿಳಿದ ಆ ಇಸ್ರಯೇಲರು ತಲೆಬಾಗಿ ಆರಾಧಿಸಿದರು.

Holydivine