Exodus - Chapter 32
Holy Bible

1 : ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಯೇಲರು ನೋಡಿ, ಆರೋನನ ಬಳಿಗೆ ಕೂಡಿಬಂದರು. ಅವನಿಗೆ, “ಈಜಿಪ್ಟ್ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆ ಏನಾದನೋ ಗೊತ್ತಿಲ್ಲ. ಆದ್ದರಿಂದ ಏಳು, ನಮ್ಮನ್ನು ಮುನ್ನಡೆಸಿಕೊಂಡು ಹೋಗಲು ನಮಗೊಬ್ಬ ದೇವರನ್ನು ಮಾಡಿಸಿಕೊಡು,” ಎಂದು ಕೇಳಿದರು.
2 : ಅದಕ್ಕೆ ಆರೋನನು, “ನಿಮ್ಮ ಹೆಂಡತಿಯರು, ಗಂಡು ಮಕ್ಕಳು ಹಾಗು ಹೆಣ್ಣುಮಕ್ಕಳು ಹಾಕಿಕೊಂಡಿರುವ ಚಿನ್ನದ ಕಿವಿಯೋಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ,” ಎಂದನು.
3 : ಜನರೆಲ್ಲರು ತಮ್ಮ ತಮ್ಮ ಕಿವಿಯೋಲೆಗಳನ್ನು ಬಿಚ್ಚಿ ಆರೋನನ ಬಳಿಗೆ ತಂದುಕೊಟ್ಟರು.
4 : ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು, ಹೋರಿ ಕರುವಿನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯಿಸಿದನು. ಆಗ ಜನರು, “ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ಇದೇ” ಎಂದು ಹೇಳಿದರು.
5 : ಆರೋನನು ಇದನ್ನು ನೋಡಿ ಆ ಹೋರಿ ಕರುವಿನ ಮುಂದೆ ಒಂದು ಬಲಿಪೀಠವನ್ನು ಕಟ್ಟಿಸಿ, “ನಾಳೆ ಸರ್ವೇಶ್ವರಸ್ವಾಮಿಯ ಗೌರವಾರ್ಥ ಹಬ್ಬವನ್ನು ಆಚರಿಸಬೇಕು,” ಎಂದು ಪ್ರಕಟಿಸಿದನು.
6 : ಅಂತೆಯೇ ಮರುದಿನ ಬೆಳಿಗ್ಗೆ ಜನರು ಎದ್ದು ದಹನಬಲಿಗಳನ್ನೂ ಸಮಾಧಾನಬಲಿಗಳನ್ನೂ ಸಮರ್ಪಿಸಿದರು. ಬಳಿಕ ತಿನ್ನಲೂ ಕುಡಿಯಲೂ ಕುಳಿತುಕೊಂಡರು. ಆಮೇಲೆ ಎದ್ದು ಕುಣಿದಾಡಿದರು.
7 : ಇತ್ತ ಸರ್ವೇಶ್ವರ ಮೋಶೆಗೆ, “ನೀನು ಕೂಡಲೆ ಬೆಟ್ಟದಿಂದ ಇಳಿದುಹೋಗು. ಈಜಿಪ್ಟಿನಿಂದ ನೀನು ಕರೆದುತಂದ ನಿನ್ನ ಜನರು ಕೆಟ್ಟುಹೋದರು.
8 : ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೇ ಲೋಹದ ಹೋರಿಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, ‘ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರು’ ಎಂದು ಹೇಳಿಕೊಳ್ಳುತ್ತಿದ್ದಾರೆ
9 : “ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು.
10 : ಆದಕಾರಣ ನೀನು ನನಗೆ ಅಡ್ಡಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು,” ಎಂದು ಹೇಳಿದರು.
11 : ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: “ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ?
12 : ಈಜಿಪ್ಟಿನವರು ತಮ್ಮ ವಿಷಯದಲ್ಲಿ, ‘ಸರ್ವೇಶ್ವರನು ಕೇಡುಮಾಡಬೇಕೆಂಬ ಉದ್ದೇಶದಿಂದಲೇ ಇಸ್ರಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದದ್ದು; ಅವರನ್ನು ಬೆಟ್ಟಗುಡ್ಡಗಳಲ್ಲಿ ಸಾಯಿಸಿ ಇಳೆಯಲ್ಲಿ ಉಳಿಯದಂತೆ ನಿರ್ಮೂಲಮಾಡಬೇಕೆಂದೇ ಅವರನ್ನು ಕರೆದುಕೊಂಡು ಹೋದದ್ದು ಎಂದು ಆಡಿಕೊಳ್ಳುವುದಕ್ಕೆ ಎಡೆಮಾಡಿಕೊಳ್ಳಬೇಕೆ? ತಾವು ಕೋಪಾಗ್ನಿಯನ್ನು ಬಿಟ್ಟು, ತಮ್ಮ ಪ್ರಜೆಗೆ ಕೇಡುಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ.
13 : ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು’ ಎಂದು ತಾವು ಮಾತುಕೊಡಲಿಲ್ಲವೆ?” ಎಂದನು.
14 : ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.
15 : ಮೋಶೆ ಆಜ್ಞಾಶಾಸನಗಳಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದುಬಂದನು. ಆ ಹಲಗೆಗಳ ಎರಡು ಪಕ್ಕಗಳಲ್ಲೂ ಅಕ್ಷರಗಳು ಬರೆದಿದ್ದವು. ಇಕ್ಕಡೆಗಳಲ್ಲೂ ಬರಹವಿತ್ತು.
16 : ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದವು. ಅವುಗಳಲ್ಲಿ ಬರೆದದ್ದು ದೇವರು ಕೆತ್ತಿದ್ದ ಅಕ್ಷರಗಳೇ ಆಗಿದ್ದವು.
17 : ಇತ್ತ ಇಸ್ರಯೇಲರು ಕೇಕೆ ಹಾಕುತ್ತಾ ಕೂಗಾಡುತ್ತಿದ್ದುದನ್ನು ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಕಾಳಗದ ಧ್ವನಿ ಕೇಳಿಸುತ್ತಿದೆ,” ಎಂದು ಹೇಳಿದನು.
18 : ಅದಕ್ಕೆ ಮೋಶೆ: “ನನಗೆ ಕೇಳಿಸುವುದು ವಿಜಯಗೀತೆಯಲ್ಲ ಅದು ಅಪಜಯದ ಶೋಕಗೀತೆಯೂ ಅಲ್ಲ ಕೇಳಿಸುತ್ತಿದೆ ನನಗೆ ಸಂಗೀತಶ್ಲೋಕ”
19 : ಮೋಶೆ ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಜನರ ಕುಣಿದಾಟವನ್ನೂ ಕಂಡಾಗ ಕಡುಕೋಪಗೊಂಡನು. ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ಬುಡಕ್ಕೆ ಬಿಸಾಡಿ ಒಡೆದುಹಾಕಿಬಿಟ್ಟನು.
20 : ಜನರು ಮಾಡಿಸಿಕೊಂಡಿದ್ದ ಆ ಹೋರಿಕರುವನ್ನು ತೆಗೆದು ಬೆಂಕಿಯಿಂದ ಸುಟ್ಟು, ಅರೆದು, ಪುಡಿಪುಡಿ ಮಾಡಿ, ನೀರಿನಲ್ಲಿ ಕಲಸಿ, ಇಸ್ರಯೇಲರಿಗೆ ಆ ನೀರನ್ನು ಕುಡಿಸಿದನು.
21 : ಅಲ್ಲದೆ, ಆರೋನನನ್ನು ಉದ್ದೇಶಿಸಿ, “ನೀನು ಈ ಜನರಿಂದ ಮಹಾಪಾಪವನ್ನು ಮಾಡಿಸಿರುವೆ. ಹೀಗೆ ಮಾಡಿಸಲು ಇವರು ನಿನಗೇನು ಮಾಡಿದರು,” ಎಂದು ವಿಚಾರಿಸಿದನು. ಅದಕ್ಕೆ ಆರೋನನು,
22 : “ಒಡೆಯಾ, ಕೋಪಗೊಳ್ಳಬೇಡಿ. ಈ ಜನರು ಎಂಥ ಹಟಮಾರಿಗಳೆಂದು ನೀವೇ ಬಲ್ಲಿರಿ.
23 : ಅವರು ನನ್ನ ಬಳಿಗೆ ಬಂದು, ‘ನಮ್ಮನ್ನು ಮುನ್ನಡೆಸಿಕೊಂಡು ಹೋಗಲು ನಮಗೊಬ್ಬ ದೇವರನ್ನು ಮಾಡಿಸಿಕೊಡು. ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆ ಏನಾದನೋ ಗೊತ್ತಿಲ್ಲ’, ಎಂದರು.
24 : ಅದಕ್ಕೆ ನಾನು, ‘ಯಾರಲ್ಲಿ ಚಿನ್ನದ ಒಡವೆ ಇದೆಯೋ ಅವರೆಲ್ಲರು ಅದನ್ನು ತೆಗೆದು ನನಗೆ ಕೊಡಬೇಕು,’ ಎಂದೆ, ಅವರು ಹಾಗೆಯೇ ಕೊಟ್ಟರು. ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರು ಹೊರಗೆ ಬಂತು,” ಎಂದನು.
25 : ಇಸ್ರಯೇಲರು ಅಂಕೆವಿೂರಿ ಇಷ್ಟಬಂದಂತೆ ನಡೆದುಕೊಳ್ಳಲು ಆರೋನನು ಬಿಟ್ಟುಬಿಟ್ಟಿದ್ದನು. ಈ ಕಾರಣ ಅವರು ವಿರೋಧಿಗಳ ಅಪಹಾಸ್ಯಕ್ಕೆ ಗುರಿಯಾಗಿದ್ದರು.
26 : ಹೀಗೆ ಅವರು ಕ್ರಮವಿಲ್ಲದೆ ಸ್ವೇಚ್ಛಾಚಾರದಿಂದ ನಡೆದುಕೊಳ್ಳುವುದನ್ನು ಮೋಶೆ ನೋಡಿ, ಪಾಳೆಯದ ಹೊರಬಾಗಿಲಲ್ಲಿ ನಿಂತುಕೊಂಡು, “ಸರ್ವೇಶ್ವರನ ಪರವಾಗಿರುವವರೆಲ್ಲರು ನನ್ನ ಬಳಿಗೆ ಬರಬೇಕು,” ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರು ಅವನ ಬಳಿಗೆ ಕೂಡಿ ಬಂದರು.
27 : ಮೋಶೆ ಅವರಿಗೆ, “ಇಸ್ರಯೇಲರ ದೇವರಾದ ಸರ್ವೇಶ್ವರನ ಅಪ್ಪಣೆ ಇದು: ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದ ನಡುವೆ ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿನವರೆಗೆ ಹೋಗುತ್ತಾ ಬರುತ್ತಾ ಅಣ್ಣ-ತಮ್ಮ, ಗೆಳೆಯ-ನೆರೆಯವ ಎಂದು ಲಕ್ಷಿಸದೆ ಈ ಜನರನ್ನು ಸಂಹರಿಸಬೇಕು,” ಎಂದು ಹೇಳಿದನು.
29 : ಲೇವಿಯ ಕುಲದವರು ಮೋಶೆಯ ಆಜ್ಞೆಯ ಮೇರೆಗೆ ಮಾಡಿದರು. ಆ ದಿನ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಹತರಾದರು.
29 : ಮೋಶೆ ಆ ಲೇವಿಯರಿಗೆ, “ಈ ದಿನ ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನಿಮ್ಮನ್ನೇ ಸರ್ವೇಶ್ವರನ ಸೇವೆಗೆ ಪ್ರತಿಷ್ಠಾಪಿಸಿಕೊಂಡಿದ್ದೀರಿ. ಆದ್ದರಿಂದ ಅವರು ಈ ದಿನ ನಿಮ್ಮನ್ನು ಆಶೀರ್ವದಿಸಿರುವರು,” ಎಂದು ಹೇಳಿದನು.
30 : ಮರುದಿನ ಮೋಶೆ ಜನರಿಗೆ, “ನೀವು ಮಹಾಪಾಪವನ್ನು ಮಾಡಿದಿರಿ. ಆದರೂ ನಾನು ಬೆಟ್ಟಹತ್ತಿ ಸರ್ವೇಶ್ವರನ ಸನ್ನಿಧಿಗೆ ಹೋಗುವೆನು, ಬಹುಶಃ ನೀವು ಮಾಡಿದ ಪಾಪಕೃತ್ಯಕ್ಕೆ ಕ್ಷಮಾಪಣೆ ನನ್ನ ಮುಖಾಂತರ ದೊರಕೀತು,” ಎಂದು ಹೇಳಿದನು.
31 : ಅಂತೆಯೇ ಮೋಶೆ ಸರ್ವೇಶ್ವರನ ಬಳಿಗೆ ಮರಳಿ ಬಂದು, “ಅಕಟಕಟಾ, ಚಿನ್ನದಿಂದ ದೇವರನ್ನು ಮಾಡಿಕೊಂಡು ಈ ಜನರು ಮಹಾಪಾಪವನ್ನು ಕಟ್ಟಿಕೊಂಡಿದ್ದಾರೆ! ಆದರೂ ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಿಬಿಡಿ.
32 : ಇಲ್ಲವಾದರೆ ನೀವು ಬರೆದಿರುವ (ಜೀವಿತರ) ಪಟ್ಟಿಯಿಂದ ನನ್ನ ಹೆಸರನ್ನು ಅಳಿಸಿಬಿಡಿಯೆಂದು ಕೇಳಿಕೊಳ್ಳುತ್ತೇನೆ,” ಎಂದು ಪ್ರಾರ್ಥಿಸಿದನು.
33 : ಅದಕ್ಕೆ ಸರ್ವೇಶ್ವರ, “ಯಾರ್ಯಾರು ನನ್ನ ಮಾತನ್ನು ವಿೂರಿ ಪಾಪಮಾಡಿದರೋ ಅವರ ಹೆಸರುಗಳನ್ನೇ ನನ್ನಲ್ಲಿರುವ ಪಟ್ಟಿಯಿಂದ ಅಳಿಸಿ ಬಿಡುತ್ತೇನೆ.
34 : ನೀನಾದರೋ ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ನಾಡಿಗೆ ಈ ಜನರನ್ನು ನಡೆಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆ ನಡೆಯುವನು. ಆದರೂ ನಾನು ಅವರನ್ನು ದಂಡಿಸುವ ದಿನದಂದು ಅವರ ಪಾಪಕ್ಕೆ ತಕ್ಕಂತೆ ದಂಡಿಸುವೆನು.”
35 : ಇಸ್ರಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿದ್ದರಿಂದ ಸರ್ವೇಶ್ವರ ಅವರನ್ನು ದಂಡಿಸಿದರು.

Holydivine